Updated News From Kaup

ಕಾಪು : ಎ.ಐ.ಸಿ.ಸಿ ದೆಹಲಿ ಅಲ್ಪಸಂಖ್ಯಾತ ಘಟಕದಿಂದ ಫಾರೂಕ್ ಚಂದ್ರನಗರರಿಗೆ ಸನ್ಮಾನ

Posted On: 04-01-2024 06:29PM

ಕಾಪು : ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಸ್ತುವಾರಿಯವರಾದ ಜೀನಲ್ ಗಾಲರಿಂದ ಯೂತ್ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರರನ್ನು ಸನ್ಮಾನಿಸಿದರು.

ಸನ್ಮಾನಿಸಿ ಮಾತನಾಡಿದ ಅವರು ಫಾರೂಕ್ ಚಂದ್ರನಗರ ಯೂತ್ ಐಕಾನ್ ಪ್ರಶಸ್ತಿ ಪಡೆದು ಯುವಕರಿಗೆ ರಾಜಕೀಯ ಹಾಗೂ ಸಾಮಾಜಿಕವಾಗಿ ರೋಲ್ ಮಾಡೆಲ್ ಆಗಿದ್ದಾರೆ ಮುಂದಕ್ಕೂ ಇವರಿಂದ ಸಮಾಜಕ್ಕೆ ಇನ್ನಷ್ಟು ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಹಸನ್ ಶೇಕ್ ಮಣಿಪುರ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಕೆ.ಪಿ.ಸಿ.ಸಿ ವಕ್ತಾರರಾದ ಇರ್ಷಾದ್ ಅಹ್ಮದ್ ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ - ಸಾಮೂಹಿಕ ಶ್ರೀ ಶನಿಪೂಜೆ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

Posted On: 03-01-2024 09:42PM

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ ಇದರ 27 ನೇ ವಾರ್ಷಿಕೋತ್ಸವ 19 ನೇವರ್ಷದ ಸಾಮೂಹಿಕ ಶ್ರೀ ಶನಿ ಪೂಜೆ, ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಜನವರಿ 6, ಶನಿವಾರದಂದು ಸೂಡ ಕುಂಬ್ಳೆ ಪರಾರಿ ಕೀರ್ತಿಶೇಷ ಹರಿಣಾಕ್ಷ ಹೆಗ್ಡೆ ಸಾಂಸ್ಕೃತಿಕ ವೇದಿಕೆಯಲ್ಲಿ ಜರಗಲಿದೆ.

ಎಳ್ಳುಗಂಟು ದೀಪೋತ್ಸವವು ಶನಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ರಾತ್ರಿ 7 ಗಂಟೆಗೆ ಅನ್ನಪ್ರಸಾದ, ಬಳಿಕ ಧಾರ್ಮಿಕ ಸಭೆ. ನಂತರ ಶಾರದಾ ಆಟ್ಸ್೯ ಕಲಾವಿದರು (ರಿ.) ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜನವರಿ ‌4 : ಉಡುಪಿ ಜಿಲ್ಲಾ ಕುಲಾಲ ಸಂಘಟನೆ ರಚನೆಯ ಪೂರ್ವಭಾವಿ ಸಭೆ

Posted On: 03-01-2024 08:57PM

ಉಡುಪಿ : ಜಿಲ್ಲಾ ಕುಲಾಲ ಸಂಘಟನೆಗಳ ಒಕ್ಕೂಟ ರಚನೆಯ ಪೂರ್ವ ಸಿದ್ದತೆ ಸಭೆ ಹಾಗೂ ಉಡುಪಿ ಶ್ರೀ ಕೃಷ್ಣ ಮಠದ ಈ ಬಾರಿಯ ಪುತ್ತಿಗೆ ಪರ್ಯಾಯದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚಿಸುವುದಕ್ಕೆ ಜನವರಿ 4 ರಂದು ಸಂಜೆ 4 ಗಂಟೆಗೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೆಲ್ನಲ್ಲಿ ಸಭೆ ಕರೆಯಲಾಗಿದೆ.

ಉಡುಪಿ ಜಿಲ್ಲೆಯ ಎಲ್ಲಾ ಕುಲಾಲ ಸಂಘಟನೆಗಳ ಸಂಸ್ಥೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜೊತೆಗೆ ಹಿರಿಯ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆ ಯಶಸ್ವಿಗೊಳಿಸಿ ಎಂದು ಕುಲಾಲ ಸಮುದಾಯದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : 92 ಹೇರೂರು ಫ್ರೆಂಡ್ಸ್ ಕ್ಲಬ್ ಪ್ರಥಮ ವಾರ್ಷಿಕೋತ್ಸವ ; ಸನ್ಮಾನ ‌

Posted On: 03-01-2024 08:50PM

ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಫ್ರೆಂಡ್ಸ್ ಕ್ಲಬ್ ಇದರ ಪ್ರಥಮ ವಾರ್ಷಿಕೋತ್ಸವ ಸೋಮವಾರ ಹೇರೂರು ಭಜನಾ ಮಂದಿರದ ಸಾರ್ವಜನಿಕ ರಂಗ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸ್ಥಳೀಯ ಸಂಘಟಿತ ಯುವಶಕ್ತಿಯನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಸಾಂಘಿಕಶಕ್ತಿ ಜಾಗೃತವಾಗಿ ಸ್ಥಳೀಯ ಅನೇಕ ಸಮಸ್ಯೆಗಳಿಗೆ ಪರಿಹಾರ, ಊರಿನ ಅಭಿವೃದ್ಧಿ, ಪ್ರತಿಭಾ ವಿಕಸನ, ಸಮರ್ಥ ನಾಯಕತ್ವ ಬೆಳೆಯುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ರಕ್ತದಾನ, ಬಡ ಕುಟುಂಬಕ್ಕೆ ಸೂರು ಒದಗಿಸಿರುವುದು ಈ ಸಂಘಟನೆಯ ಸೇವಾ ಮನೋಭಾವನೆಗೆ ಉತ್ತಮ ನಿರ್ದಶನವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸ್ಥಳೀಯ ಸಮಾಜ ಸೇವಕ ಮಾಧವ ಆಚಾರ್ಯ ಮಾತನಾಡಿ ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಸಾಮಾನ್ಯ. ಅದನ್ನು ಮೀರಿ ಮುನ್ನಡೆಯುವ ದೃಢ ಸಂಕಲ್ಪ ಬೇಕು. ಸಮಾಜ ಸೇವೆ ದೇವರ ಸೇವೆಯಾಗಿದ್ದು, ಹಿರಿಯರ ಆದರ್ಶ, ಧಾರ್ಮಿಕ ಚಿಂತನೆಗಳಿಗೆ ಒತ್ತು ನೀಡಿ ಮುನ್ನಡೆಯುವಂತೆ ಯುವ ಸಮೂಹಕ್ಕೆ ಕರೆಯಿತ್ತರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕಿ ಅನುಪಮಾ ಜೋಗಿ ಮಾತನಾಡಿ ಹುಟ್ಟೂರ ವೇದಿಕೆಯಲ್ಲಿ ಮಾತನಾಡುವ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿ, ದೇಶದ ಭವಿಷ್ಯ ಯುವ ಶಕ್ತಿಯ ಬುನಾದಿಯ ಮೇಲೆ ನಿಂತಿದೆ. ವ್ಯಕ್ತಿಯ ಉನ್ನತಿಗೆ, ಮಾನವೀಯ ಮಲ್ಯಾಧಾರಿತ ಪ್ರಾಥಮಿಕ ಶಿಕ್ಷಣವೇ ಮೂಲವಾಗಿದ್ದು, ಅಂತಹ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ತಮ್ಮ ಜೀವದ ಹಂಗು ತೊರೆದು, ಆಕಸ್ಮಿಕ ಘಟನೆಗಳು ಯಾ ತುರ್ತು ಸಂದರ್ಭದಲ್ಲಿ ಸ್ಥಳೀಯರ ಪೋನ್ ಕರೆಗೆ ತಕ್ಷಣ ಸ್ಪಂದಿಸಿ ಉತ್ತಮ, ಮಾದರಿ ಸೇವೆಯನ್ನು ನೀಡಿ, ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ಗ್ರಾಮಸ್ಥರ ಪ್ರೀತಿ ವಿಶ್ವಾಸವನ್ನು ಗಳಿಸಿ ಜನಾನುರಾಗಿರುವ ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಸುನಿಲ್ ಶೆಟ್ಟಿ, ವಸಂತ ಕೊಟ್ಯಾನ್‌ರವರಿಗೆ "ಹೊಸ ವರ್ಷದ ಗೌರವ" ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಜೋಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಂಟಕಲ್ಲು ಮಾಧವ ಕಾಮತ್, ಶ್ರೀಗುರು ರಾಘವೇಂದ್ರ ಭಜನಾ ಮಂಡಳಿ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಯಶಸ್ವಿ ಉದ್ಯಮಿ ಡೇನಿಸ್ ಮತಾಯಸ್, ಕಲಾ ವೈಕರಿ ಅಭಿನಯ ಸಾಮ್ರಾಟ್ ಪ್ರಭಾಕರ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಗಣಪತಿ ಆಚಾರ್ಯ ಹೇರೂರು ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿವಿಧ ಸ್ಫರ್ಧಾವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ರವಿ ದೇವಾಡಿಗ ವಿಜೇತರನ್ನು ಪರಿಚಯಿಸಿದರು. ಫ್ರ‍್ರೆಂಡ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದೀಪಕ್ ಕೊಟ್ಯಾನ್, ಕಾರ್ಯದರ್ಶಿ ಸುಮಿತ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಹೇರೂರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ದೀಕ್ಷಾ ವರದಿ ವಾಚಿಸಿದರು. ವಿಜಯ್ ಧೀರಜ್, ದಿವ್ಯಜ್ಯೋತಿ ನಿರೂಪಿಸಿದರು. ಕು.ಅಶ್ಮಿತಾ ವಂದಿಸಿದರು. ನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾ ಚಾವಡಿ (ರಿ.) ಅಂಬಲಪಾಡಿ ಉಡುಪಿ ಇವರಿಂದ ತುಳು ಹಾಸ್ಯ ನಾಟಕ "ಮೋಕೆದ ಮದಿಮಾಲ್" ಪ್ರದರ್ಶನಗೊಂಡಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ : ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಯುಕ್ತ ಶೌರ್ಯ ದಿನಾಚರಣೆ

Posted On: 03-01-2024 08:31PM

ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಇದರ ನೇತೃತ್ವದಲ್ಲಿ ಸೋಮವಾರ ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಯುಕ್ತ ಶೌರ್ಯ ದಿನಾಚರಣೆ ಪಡುಬಿದ್ರಿಯಲ್ಲಿ ನಡೆಯಿತು.

ಈ ಸಂಧರ್ಭ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅಶೋಕ್ ಕೊಂಚಾಡಿಯವರು ದೇಶದಲ್ಲಿ ಕೇಂದ್ರ ಸರ್ಕಾರ ಏಕರೂಪ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಮೂಲಕ ದಲಿತರು, ಶೋಷಿತರ ಮೀಸಲಾತಿಯನ್ನು ದುರ್ಬಲಗೊಳಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಅಲ್ಲದೇ ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಗೊಳಿಸಿ ಇಡೀ ದೇಶದಲ್ಲಿ ಪೇಶ್ವೆಗಳ ಮಾದರಿಯ ಆಡಳಿತವನ್ನು ಪ್ರಾರಂಭಿಸಿ ದಲಿತರನ್ನು ಮತ್ತೆ ಶೋಷಣೆಗೆ ಒಳಪಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್ ಮಾತನಾಡಿ ಸರ್ಕಾರದ ಮಂತ್ರಿಗಳು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ ಒಂದುವೇಳೆ ಸಂವಿಧಾನ ಬದಲಿಸಲು ಕೈ ಹಾಕಿದ್ದಲ್ಲಿ ಮತ್ತೊಂದು ಕೊರೆಗಾಂವ್ ಯುದ್ಧಕ್ಕೆ ತಯಾರಾಗಿ ಎಂದು ಎಚ್ಚರಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಭಿರ್ತಿ ಮಾತಾಡಿ ಕೊರೆಗಾಂವ್ ವಿಜಯೋತ್ಸವ ಭಾರತದ ಮೂಲ ನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ ಇದನ್ನು ಪ್ರತೀ ವರ್ಷ ದಲಿತರು ವಿಜೃಂಭಣೆಯಿಂದ ಆಚರಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪುರ್, ಭಾಸ್ಕರ್ ಮಾಸ್ಟರ್, ಶ್ರೀಧರ್ ಉಡುಪಿ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್, ಸುರೇಶ್ ಪಾದೆಬೆಟ್ಟು, ಸುಕೇಶ್, ಆಶಾ, ಸುರೇಶ್ ಎರ್ಮಾಳ್, ರಮೇಶ್, ರವೀಂದ್ರ ಬಂಟಕಲ್, ನಾಗೇಶ್ ಉರ್ವ, ಶಿವಾನಂದ್ ಕಲ್ಲಟ್ಟೆ, ಹರಿಶ್ಚಂದ್ರ, ಉಷಾ, ನಯನ ಮುಂತಾದವರು ಉಪಸ್ಥಿತಿಯಿದ್ದರು. ಪಡುಬಿದ್ರಿ ಸಂಚಾಲಕ ಕೀರ್ತಿಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೋಶಾಧಿಕಾರಿ ವಿಠ್ಠಲ್ ಮಾಸ್ಟರ್ ವಂದಿಸಿದರು.

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳ ಗರಿ

Posted On: 03-01-2024 12:03PM

ಕಾಪು : ಬೆಳ್ಳಿ ಹಬ್ಬದ ಅದ್ಭುತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಜೆಸಿಐ ಶಂಕರಪುರ ಜಾಸ್ಮಿನ್ ಗೆ ಬೆಂಗಳೂರಿನ ಹಿಲ್ ಟನ್ ಹೋಟೆಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.

ಜೆಸಿಐ ಇಂಡಿಯಾ ವಿಜೇತ ಪ್ರಶಸ್ತಿಯ ಔಟ್ ಸ್ಟ್ಯಾಂಡಿಂಗ್ ಪಬ್ಲಿಕ್ ರಿಲೇಷನ್ಸ್ ಕಾರ್ಯಕ್ರಮ, ಜೆಸಿಐ ಇಂಡಿಯಾದ ಔಟ್ ಸ್ಟ್ಯಾಂಡಿಂಗ್ ಸ್ಥಳೀಯ ಸಮುದಾಯದ ಪ್ರಭಾವ ಕಾರ್ಯಕ್ರಮಗಳಿಗೆ ಪ್ರಶಸ್ತಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ ಎಫ್ ಎಸ್ MK ಕಾರ್ತಿಕೇಯನ್ ವಿಶೇಷ ಪ್ರಶಸ್ತಿಯನ್ನು ಜೆಸಿಐ ಶಂಕರಪುರ ಜಾಸ್ಮಿನ್ ನ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿಗೆ ಹಸ್ತಾಂತರಿಸಲಾಯಿತು.

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಸದಸ್ಯರಿಂದ ರಸ್ತೆ ದುರಸ್ತಿ ಕಾರ್ಯ

Posted On: 03-01-2024 11:47AM

ಪಡುಬಿದ್ರಿ : ಸದಾ ಜನಪರ ಕಾಳಜಿಯ ಕಾರ್ಯಗಳನ್ನು ಮಾಡುತ್ತಿರುವ ಪಡುಬಿದ್ರಿಯ ಕರಾವಳಿ ಸ್ಟಾರ್ಸ್ ನಡಿಪಟ್ನ ತಂಡವು ಎರಡು ಸ್ಥಳಗಳಲ್ಲಿ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಪಡುಬಿದ್ರಿ ಬೀಚ್ ರಸ್ತೆಯ ತಿರುವಿನಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ ಗುಂಡಿ ಮತ್ತು ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಹೋಗುವ ರಸ್ತೆಯ ಗುಂಡಿಯನ್ನು ಮುಚ್ಚಲಾಯಿತು.

ಈ ಕಾರ್ಯದಲ್ಲಿ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು

ಕಾಪು : ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಶ್ರದ್ಧಾಂಜಲಿ ಸಭೆ

Posted On: 02-01-2024 06:30PM

ಕಾಪು : ಎಲ್ಲಾ ಕ್ಷೇತ್ರದಲ್ಲಿ ಛಾಪನ್ನು ಒತ್ತಿದ ಮಹನೀಯ ವ್ಯಕ್ತಿ ಲೀಲಾಧರ ಶೆಟ್ಟಿ. ಯಾವುದೇ ಅಹಂ ಭಾವವಿರದೆ ಎಲ್ಲರಲ್ಲೂ ಒಂದಾಗುವ ವ್ಯಕ್ತಿ. ಸಮಾಜಸೇವೆ ಎಲ್ಲರೂ ಮಾಡುತ್ತಾರೆ ನನ್ನ ಬಗ್ಗೆ ಯೋಚಿಸದೆ ಗಂಧದ ಕೊರಡಿನಂತೆ ತನ್ನನ್ನು ತಾನು ತೀಡಿ ಸರ್ವರಿಗೂ ಒಳಿತಾಗಲಿ ಎಂಬ ಮನಸ್ಥಿತಿಯ ವ್ಯಕ್ತಿ. ಲೀಲಾಧರ ಶೆಟ್ಟಿ ಮತ್ತು ವಸುಂಧರ ದಂಪತಿಗಳಿಗೆ ಚಿರಶಾಂತಿ ಸಿಗಲಿ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಹೇಳಿದರು. ಅವರು ಕಾಪು ತಾಲೂಕಿನ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಲೀಲಾಧರ ಶೆಟ್ಟಿ ದಂಪತಿಯ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಧಾರ್ಮಿಕ ಚಿಂತಕ ಜನಾರ್ಧನ ಕೊಡವೂರು ಮಾತನಾಡಿ ಸ್ವಂತದ ಬಗ್ಗೆ ಯೋಚನೆ ಮಾಡದ ಲೀಲಾಧರ ಶೆಟ್ಟಿ ಮಾಡಿದ ಕಾರ್ಯಗಳು ಅಜರಾಮರ ಅಂತಹ ಸೇವಕರು ಹುಟ್ಟಬೇಕು. ಧಾರ್ಮಿಕತೆ, ಸಂಸ್ಕೃತಿಯ ಬಗ್ಗೆ ಯೋಚಿಸುವ ವ್ಯಕ್ತಿ ಅವರಾಗಿದ್ದರು ಎಂದರು.

ಈ ಸಂದರ್ಭ ರಾಧಾಕೃಷ್ಣ ಮೆಂಡನ್, ವಿಜಯ್ ಕುಮಾರ್ ಕೊಡವೂರು, ರಂಜಿತ್ ಶೆಟ್ಟಿ, ಅರುಣ್ ಕ‌ಮಾರ್ ಬಿ.ಕೆ., ನಡಿಕೆರೆ ರತ್ನಾಕರ‌ ಶೆಟ್ಟಿ, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ನಿರ್ಮಲ್ ಕುಮಾರ್ ಹೆಗ್ಡೆ , ಮೋಹನ್ ಬಂಗೇರ ಕಾಪು, ರಘುರಾಮ ಶೆಟ್ಟಿ ಕೊಪ್ಪಲಂಗಡಿ, ದಿವಾಕರ ಶೆಟ್ಟಿ ಮಲ್ಲಾರು ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ : ಶಿವಾಯ ಫೌಂಡೇಶನ್ ಮುಂಬೈ ವತಿಯಿಂದ ಕುಟುಂಬವೊಂದಕ್ಕೆ ದಿನಸಿ ಸಾಮಾಗ್ರಿ, ವಿಧವಾ ವೇತನದ ಚೆಕ್ ಹಸ್ತಾಂತರ

Posted On: 02-01-2024 02:38PM

ಮುಲ್ಕಿ : ಶಿವಾಯ ಫೌಂಡೇಶನ್ (ರಿ) ಮುಂಬೈ ಇವರ ವತಿಯಿಂದ ಇಂದು ಮುಲ್ಕಿ ಕಾರ್ನಾಡು ಅಮೃತಮಾಯಿ ನಗರ ನಿವಾಸಿ ಗೀತಾರವರ ಕುಟುಂಬಕ್ಕೆ ದಿನಬಳಕೆಯ ದಿನಸಿ ಸಾಮಾಗ್ರಿ ಹಾಗೂ ವಿಧವಾ ವೇತನದ ಚೆಕ್ ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ನ ಸದಸ್ಯರಾದ ರವಿ ಶೆಟ್ಟಿ (ಶಾರದೆ) ಪಡುಬಿದ್ರಿ, ರಮಣಿ ಐಸ್ ಕ್ರೀಮ್ ಪಾರ್ಲರ್ ಮಾಲಿಕರಾದ ಜಗನ್ನಾಥ್ ಶೆಟ್ಟಿ ಪಡುಬಿದ್ರಿ, ಸುಧಾಕರ್ ಕೆ ಪಡುಬಿದ್ರಿ ಉಪಸ್ಥಿತರಿದ್ದರು.

ಆರೋಗ್ಯಯುತ ಜೀವನಕ್ಕೆ ಹೊಸ ವರುಷ ದಾರಿಯಾಗಲಿ

Posted On: 02-01-2024 11:21AM

ನೂತನ ವಷ೯ 2024 ಬಂದಿದೆ. ಈ ವಷ೯ ನಮ್ಮ ಬದುಕಿನಲ್ಲಿ ಮತ್ತಷ್ಟು ಭರವಸೆಯ ಸಾಧನೆಗಳು ಹೊರಬರಲಿ ಎಂಬ ಆಶಯದೊಂದಿಗೆ ಈ ವಷ೯ ನಮ್ಮ ಆರೋಗ್ಯ ದ ವಷ೯ವಾಗಲಿ ಆರೋಗ್ಯವಿದ್ದರೆ ವರ್ಷವೆಲ್ಲ ಹೊಸತನದಿಂದಲೇ ಕೂಡಿರುತ್ತದೆ. ಆರೋಗ್ಯ ಪಾಲನೆಗೆ ಕೆಲವು ಸೂತ್ರಗಳನ್ನಾದರೂ ಕಟ್ಟುನಿಟ್ಟಾಗಿ ಪಾಲಿಸಲು ಈ ಹೊಸವರ್ಷ ನಮಗೆ ನೆಪವಾಗಲಿ. ಒಂದೆಡೆ ಈ ವರ್ಷ ಸುಸೂತ್ರವಾಗಿ ಉರುಳಿದ ಸಂತಸವಿದ್ದರೆ ಮತ್ತೊಂದೆಡೆ ಮುಂದಿನ 20 24 ನೇ ವರ್ಷದ ಬಗ್ಗೆ ಕಾತರ, ಕನಸುಗಳ ನಿರೀಕ್ಷೆಯಿದೆ. ಈ ಹಿಂದಿನ ಎರಡು ವರ್ಷಗಳು ಹೇಗಿದ್ದವು ಎಂಬುದು ಜಗತ್ತಿಗೇ ಗೊತ್ತಿದೆ. ಕೊರೊನಾ ಈ ಅಮೂಲ್ಯ ವರ್ಷಗಳನ್ನು ಬಹುಮಟ್ಟಿಗೆ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿತ್ತು. ಆರಂಭದಲ್ಲಿ ಕೊರೊನಾ ತನ್ನ ಗತ್ತು ತೋರಿಸಿದರೂ ಹೆಚ್ಚು ಕಾಡಲಿಲ್ಲವೆನ್ನಬಹುದು. ಏಕೆಂದರೆ ಪ್ರಾರಂಭದಲ್ಲಿ ಕೊರೊನಾ ಪ್ರಕರಣ ಕಂಡರೂ ಅವೆಲ್ಲ ಸೌಮ್ಯ ಸ್ವರೂಪದ್ದಾಗಿತ್ತು. ಲಸಿಕಾ ಅಭಿಯಾನ, ದೇಹದಲ್ಲಿ ಪ್ರತಿರೋಧಕ ಕಾಯಗಳ ಉತ್ಪತ್ತಿಯಿಂದಾಗಿ ರೋಗ ಬಹುತೇಕ ಅಳಿವಿನ ಅಂಚಿಗೆ ಬಂದು ನಿಂತಿದೆ.

ಹಾಗೆಂದು ಮೈಮರೆಯುವ ಹಾಗಿಲ್ಲ. ಜಗತ್ತಿನ ಇನ್ನೂ ಅನೇಕ ಕಡೆ ಕೊರೊನಾ ಹೊಸ ಪ್ರಭೇದಗಳು ಕಾಣಿಸಿಕೊಳ್ಳುತ್ತಿವೆ. ಇಂದಿನ ಜೆಟ್ ಯುಗದಲ್ಲಿ ಇವುಗಳ ಹರಡುವಿಕೆಯೂ ವೇಗವಾಗಿಯೇ ಇರುತ್ತದೆ. ನಮ್ಮನ್ನು ಕಾಡಿದ ಕೊರೊನಾ ಜೀವನದ ಕೆಲವು ಪಾಠಗಳನ್ನು ಕಲಿಸಿದೆ. ಈ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷವನ್ನು ಹರುಷದಿಂದಲೇ ಸ್ವಾಗತಿಸೋಣ. ನಾವೆಲ್ಲರೂ ಆರೋಗ್ಯವಂತರಾಗಿರಲು ಬಯಸುತ್ತೇವೆ. ಅದಕ್ಕನುಗುಣವಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಕೆಲವು ಗುರಿಗಳನ್ನು ಇಟ್ಟುಕೊಳ್ಳುವ ಸಂಕಲ್ಪ ಮಾಡೋಣ.. ಶುಚಿತ್ವ ಪಾಲನೆ ಮಾಡೋಣ : ಕೊರೊನಾ ಕಲಿಸಿದ ಮೊದಲ ಪಾಠವೇ ವೈಯಕ್ತಿಕ ಶುಚಿತ್ವ ವನ್ನು ಕಾಪಾಡಿಕೊಳ್ಳುವುದು ನಾವು ವೈಯಕ್ತಿಕವಾಗಿ ಇತರರೊಂದಿಗೆ ಹೇಗೆ ಬೆರೆಯುತ್ತೇವೆ ಎನ್ನುವುದರ ಮೇಲೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಅವಲಂಬಿಸಿವೆ. ಪರರ ವಸ್ತುಗಳನ್ನು ಬಳಸದೇ ಇರುವುದು, ಊಟ-ಪಾನೀಯಗಳ ಬಳಕೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದರಿಂದ ಕೊರೊನಾ ಅಷ್ಟೆ ಅಲ್ಲ, ಮುಂದೆ ಬರಬಹುದಾದ ಇನ್ನಿತರ ಸಾಂಕ್ರಾಮಿಕ ರೋಗಗಳಿಂದಲೂ ದೂರವಿರಬಹುದು.

ವ್ಯಾಯಾಮ ಯೋಗ ಜೀವನದ ಭಾಗವಾಗಲಿ ಗೆಳೆಯರೇ : ನಿಯಮಿತ ವ್ಯಾಯಾಮಕ್ಕೂ ಮತ್ತು ಆರೋಗ್ಯಕ್ಕೂ ಅವಿನಾಭಾವ ಸಂಬಂಧ. ವ್ಯಾಯಾಮವು ದೇಹದ ಮಾಂಸಖಂಡಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ವ್ಯಾಯಾಮದಿಂದ ಹೃದಯ ಮತ್ತು ಶ್ವಾಸಕೋಶದ ಕ್ಷಮತೆ ಹೆಚ್ಚುತ್ತದೆ. ಕರೋನಾಪೀಡಿತ ಅನೇಕ ರೋಗಿಗಳು ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಮರಳಿ ಪಡೆಯಲು ಲಘು ವ್ಯಾಯಾಮಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಕೆಲವು ಆಧುನಿಕ ಜಿಮ್‌ ಗಳು ಕೇವಲ ಮಾಂಸಖಂಡಗಳ ಬಲವರ್ಧನೆ ಮತ್ತು ಸೌಂದರ್ಯಕ್ಕೆ ಒತ್ತು ಕೊಡುತ್ತವೆ. ಇದರಿಂದನೈಜಸೌಂದರ್ಯ ಅನಾವರಣಗೊಳ್ಳುವುದು ಅನುಮಾನ. ಬರಿ ಬಾಹ್ಯಸೌಂದರ್ಯದ ಆಮಿಷಕ್ಕೆ ಬಲಿಯಾಗದೆ ನೈಸರ್ಗಿಕವಾಗಿ ದೇಹದಾರ್ಢ್ಯವನ್ನು ಹೆಚ್ಚಿಸುವ ವಿಧಾನಗಳಿಗೆ ಹೊಂದಿಕೊಳ್ಳುವುದೇ ಉತ್ತಮ. ಯೋಗ, ಪ್ರಾಣಾಯಾಮ, ಈಜುಗಳಂಥವು ಸ್ವಾಭಾವಿಕವಾಗಿಯೇ ನಮ್ಮ ದೇಹವನ್ನು ಹುರಿಗೊಳಿಸುತ್ತವೆ. ಮುಂಜಾನೆಯ ತಂಗಾಳಿಯಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಿರಿ. ಆಗ ಪ್ರಕೃತಿಯ ಮಡಿಲಲ್ಲಿ ಹುದುಗಿರುವ ನಿಷ್ಕಲ್ಮಶ ಪ್ರೀತಿ ಅರಿವಿಗೆ ಬರುತ್ತದೆ. ಸಮತೋಲಿತ ಆಹಾರ : ಉತ್ತಮ ಆರೋಗ್ಯಕ್ಕೆ ವ್ಯಾಯಾಮದಷ್ಟೆ ಆಹಾರವೂ ಮುಖ್ಯ. ಪೌಷ್ಟಿಕಾಂಶಗಳುಳ್ಳ ಸಮತೋಲಿತ ಆಹಾರದಿಂದ ದೇಹದ ರಾಸಾಯನಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಅಷ್ಟೇ ಅಲ್ಲ; ಮಾಂಸಖಂಡಗಳ ಬಲವರ್ಧನೆ ಮತ್ತು ಪ್ರತಿರೋಧ ಕಾಯಗಳ ಮತ್ತು ಕಿಣ್ವಗಳ ಉತ್ಪತ್ತಿಗೂ ಸಹಾಯ ಮಾಡುತ್ತವೆ. ಆದರೆ ಪೌಷ್ಟಿಕಾಂಶಗಳ ನೆಪದಲ್ಲಿ ಕೆಲವು ಪೌಡರ್, ಲೇಹ್ಯಗಳ ಸೇವನೆ ಬಗ್ಗೆ ಎಚ್ಚರದಿಂದಿರಿ. ಫಾಸ್ಟ್ ಫುಡ್ ಮತ್ತು ಜಂಕ್ಫುಡ್‌ಗಳಿಂದ ದೂರವಿರಿ. ಇದು ಆಹಾರದ ಸೇವನೆಯ ಮೇಲೆದುಷ್ಪರಿಣಾಮ ಬೀರುತ್ತದೆ. ಅಲ್ಲದೆ ವೈದ್ಯರ ಅಭಿಪ್ರಾಯದಂತೆ ಬಹಳಷ್ಟು ಕಾಯಿಲೆಗಳು ಇದರಿಂದ ಬರುತ್ತದೆ.

ಕುಟುಂಬದೊಂದಿಗೆ ಬೆರೆಯೋಣ : ಕುಟುಂಬದ ಜೊತೆ, ಸ್ನೇಹಿತರ ಜೊತೆ ಸಮಯವನ್ನು ಕಳೆಯುವುದು. ಪ್ರೀತಿಪಾತ್ರರೊಂದಿಗೆ ಒಂದಾಗಿ ಬೆರೆಯುವ ಕ್ಷಣಗಳಿಂದ ದೇಹದಲ್ಲಿ ಸಂತೋಷಸೂಚಕ ರಸವಾಹಿಗಳು ಹೆಚ್ಚು ಸ್ರವಿಸುತ್ತವೆ ಇದರಿಂದ ನಮ್ಮ ಆರೋಗ್ಯ ಮೇಲೆ ಕೂಡ ಪರಿಣಾಮ ಬೀರುತ್ತವೆ. ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ದಾರಿ : ಪ್ರತಿ ವರ್ಷವೂ ಹೊಸ ಹವ್ಯಾಸಗಳನ್ನು ರೂಢಿಗೊಳಿಸಿಕೊಳ್ಳುವುದು ಒಳ್ಳೆಯದು. ಅದು ಪ್ರವಾಸ ಆಗಿರಬಹುದು; ಆಟ ಆಗಿರಬಹುದು ಅಥವಾ ಪುಸ್ತಕಗಳ ಓದು, ಕಲೆಯಲ್ಲಿ ಆಸಕ್ತಿಯಂಥ ಹವ್ಯಾಸಗಳು ಆಗಿರಬಹುದು. ಇಂದಿನ ಯುಗದಲ್ಲಿ ಜಿಮ್ ಮತ್ತು ಸಂಸ್ಕರಿಸಿದ ಆಹಾರಕ್ಕೆ ದಾಸರಾಗಿದ್ದೇವೆ. ನಮ್ಮ ಜೀವನಶೈಲಿ ಯಾಂತ್ರಿಕವಾದಷ್ಟು ರೋಗಗಳಿಗೆ ತುತ್ತಾಗುತ್ತೇವೆ. ಹಿತ-ಮಿತವಾದ ಪ್ರಕೃತಿದತ್ತ ಆಹಾರ, ಸರಳ–ಒತ್ತಡರಹಿತ ಜೀವನಶೈಲಿ ಮತ್ತು ದೇಹ- ಮನಸ್ಸುಗಳಿಗೆ ಮುದ ನೀಡುವ ಹವ್ಯಾಸಗಳಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಪ್ರೊಟೀನ್ ಪೌಡರ್, ಸಂಸ್ಕರಿಸಿದ ಆಹಾರ ಪದಾರ್ಥಗಳು, ದಿಢೀರ್‌ ತೂಕವನ್ನು ಕಳೆದುಕೊಳ್ಳಲು ಪ್ರಚೋದಿಸುವ ಆಫರ್‌ಗಳುಮತ್ತು ಆಧುನಿಕತೆಯ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರಗಳಿಂದ ದೂರವಿರೋಣ. ಈ ಆರೋಗ್ಯಸೂತ್ರಗಳು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರನ್ನಾಗಿಸುತ್ತವೆ. ಇದು ಬದುಕು ಒಡ್ಡುವ ಸವಾಲುಗಳನ್ನು ಎದುರಿಸುವ ತಾಕತ್ತನ್ನೂ ನೀಡುವುದು ನಿಸ್ಸಂಶಯ, ಒಟ್ಟಾಗಿ ಹೊಸ ವಷ೯ ಕ್ಯಾಲಂಡರ್ ಬದಲಾವಣೆಗೆ ಮಾತ್ರ ಸೀಮಿತ ವಾಗದಿರಲಿ ಅದರೊಂದಿಗೆ ಒಂದಿಷ್ಟು ಹೊಸ ಅಲೋಚನೆಗಳು, ಸಾಧನೆಗಳು ಮತ್ತು ಉತ್ತಮವಾದ ಜೀವನ ನಮ್ಮದಾಗಲಿ ಉದಾಸೀನತೆ, ಋಣಾತ್ಮಕ ಚಿಂತನೆ ದೂರವಾಗಲಿ' ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಕಸಾಪ ಉಡುಪಿ