Updated News From Kaup

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ - ಶ್ರೀ ಕ್ಷೇತ್ರ ಪೆಲತ್ತೂರು ಭೇಟಿ

Posted On: 14-07-2024 05:44PM

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಿಣೆ 31 ದಿನದ ಸಂದಶ೯ನ ಶ್ರೀ ಕ್ಷೇತ್ರ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜೂನ್ 14 ಆದಿತ್ಯವಾರ ದಂದು ನಡೆಯಿತು.

ಈ ಸಂದಭ೯ದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀವ೯ಚನ ನೀಡಿ, ಹಿಂದೂ ಧಮ೯ದ ರಕ್ಷಣೆಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಮತಾಂತರ ಮುಂತಾದ ವ್ಯಾಧಿ ನಮ್ಮ ಸಮಾಜದಿಂದ ದೂರವಾಗಬೇಕು. ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಯೋಧರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಈ ಕಾಯ೯ ನಡೆಯುತ್ತಿರುವುದಾಗಿ ಹೇಳಿದರು.

ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ರಮೇಶ್ ನಾಯಕ್ ರವರು ಗುರೂಜಿಯವರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಗುರೂಜಿಯವರು ಬಿಲ್ವಪತ್ರ ಗಿಡ ಮತ್ತು ಮನವಿ ಪತ್ರವನ್ನು ಆಡಳಿತ ಮಂಡಳಿಯ ಸದಸ್ಯರಿಗೆ ನೀಡಿದರು.

ನೀರೆ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಪ್ರಭು, ಪುರೋಹಿತ ರಮೇಶ್ ಭಟ್, ಪೆಲತ್ತೂರು ಫ್ರೆಂಡ್ಸ್ ಕ್ಲಬ್ ಸದಸ್ಯರು, ಜಿ.ಪಂ ಮಾಜಿ ಸದಸ್ಯೆ ಗೀತಾಂಜಲಿ ಸುವಣ೯, ಸತೀಶ್ ದೇವಾಡಿಗ, ರಾಘವೇಂದ್ರ ಪ್ರಭು ಕವಾ೯ಲು, ನಿಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ : ನಿಟ್ಟೂರಿನ ದುಗ್ಗಣ್ಣಬೆಟ್ಟು ಮಾರ್ಗದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ

Posted On: 14-07-2024 05:37PM

ಉಡುಪಿ : ಒಳಚರಂಡಿ ವ್ಯವಸ್ಥೆ ಇದ್ದರೂ ಅದನ್ನು ಸಮಪರ್ಕವಾಗಿ ನಿರ್ವಹಿಸದ ಕಾರಣ ವಾಸನೆಯಿಂದ ಕುಳಿತುಕೊಳ್ಳಲಾಗದ ಸ್ಥಿತಿ ಉಡುಪಿಯ ನಿಟ್ಟೂರಿನ ದುಗ್ಗಣ್ಣ ಬೆಟ್ಟು ಮಾರ್ಗದ ಸ್ಥಳೀಯರಿಗೆ ಉಂಟಾಗಿದೆ.

ಒಳಚರಂಡಿಯ ನೀರು ನಿರಂತರವಾಗಿ ಹರಿಯುತ್ತಿದ್ದು ಇದು ವಾಸನೆಯ ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹತ್ತಿರದ ಬಾವಿಯ ನೀರು ಹಾಳಾಗುವ ಸಾಧ್ಯತೆಗಳಿವೆ. ಇಲ್ಲಿಯ ರಸ್ತೆ ಕೂಡಾ ಸರಿಯಾಗಿಲ್ಲ.

ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ‌ ನೀಡಿದರೂ ಈ ವರೆಗೆ ಯಾವುದೇ ಅಧಿಕಾರಿ ವರ್ಗ ನೋಡಲು ಬಂದಿಲ್ಲ. ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಗೂ ಮನವಿ ನೀಡಲಾಗಿದೆ ‌ಎನ್ನುತ್ತಾರೆ ಸ್ಥಳೀಯರು.

ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಆಯ್ಕೆ

Posted On: 13-07-2024 06:27PM

ಪಡುಬಿದ್ರಿ : ತೆಂಕ ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಭರತ್ ಶೆಟ್ಟಿಗಾರ್ ಮರು ಆಯ್ಕೆಯಾಗಿದ್ದಾರೆ.

ತೆಂಕ ಎರ್ಮಾಳು ಅಳ್ವೆಕೋಡಿ ಬಬ್ಬುಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು ಮೂವತ್ತೈದು ಮಂದಿ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿ ಜನಾನುರಾಗಿಯಾಗಿದೆ.

ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕೋಶಾಧಿಕಾರಿಯಾಗಿ ಲಿಯಾಕತ್ ಆಲಿ ಹಾಗೂ ಜತೆ ಕಾರ್ಯದರ್ಶಿಯಾಗಿ ನದೀಮ್ ಎರ್ಮಾಳ್ ಮರು ಆಯ್ಕೆಯಾಗಿದ್ದಾರೆ.

ಪಡುಬಿದ್ರಿ : ಮಗಳ ಖಾಸಗಿ ವಿಡಿಯೋ ಹರಿಬಿಟ್ಟ ತಂದೆ ಪತ್ನಿಯಿಂದ ದೂರು ದಾಖಲು

Posted On: 13-07-2024 06:20PM

ಪಡುಬಿದ್ರಿ : ಸ್ವಂತ ಮಗಳ ಖಾಸಗಿ ವೀಡಿಯೋಗಳನ್ನು ತಂದೆಯೋರ್ವ ವಾಟ್ಸಾಪ್ ಗ್ರೂಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ಪತಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಆರೋಪಿ ಸಮಾಜ ಸೇವಕ ಆಸೀಫ್‌ ಆಪತ್ಭಾಂದವನ ಮಗಳು ತೀರ್ಥಹಳ್ಳಿಯ ತೌಸಿಫ್ ಎಂಬ ಸಂಬಂಧಿ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಇಷ್ಟವಾಗದ ಆರೋಪಿ ತೌಸಿಫ್ ನನ್ನು ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದ. ಅವರು ತೌಸಿಫ್ ಮತ್ತು ಅವರ ಮಗಳ ಫೋನ್ ಅನ್ನು ಕಸಿದುಕೊಂಡಿದ್ದು ಅದರ ಎಲ್ಲಾ ವೀಡಿಯೊಗಳನ್ನು ಆತನ ಮೊಬೈಲ್ಗೆ ವರ್ಗಾಯಿಸಿ ಸಾಮಾಜಿಕಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಇದಕ್ಕೆ ಪತ್ನಿ ಆಕ್ಷೇಪ ವ್ಯಕ್ತಪಡಿಸಿದಾಗ ಆರೋಪಿ ಆಕೆಯ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಉಡುಪಿಯ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಆಸೀಫ್‌ ಆಪತ್ಭಾಂದವ ಮಗಳು ಫಿನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಕೆಯನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿರ್ವ ರೋಟರಿಯಿಂದ ಕಳತ್ತೂರು ಪಿ ಕೆ ಎಸ್ ಪ್ರೌಢ ಶಾಲೆಯ ಶಿಕ್ಷಕರಿಗೆ ಗೌರವಾರ್ಪಣೆ

Posted On: 12-07-2024 08:00PM

ಕಾಪು : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ ಕಳತ್ತೂರು ಪಿ ಕೆ ಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮತ್ತು ಅಧ್ಯಾಪಕ ವೃಂದದವರಿಗೆ ಶಿರ್ವ ರೋಟರಿ ಕ್ಲಬ್ ವತಿಯಿಂದ ಗೌರವಾರ್ಪಣೆಯು ಶುಕ್ರವಾರ ನಡೆಯಿತು.

ಪಡುಬಿದ್ರಿ : ಎಸ್ ಬಿ ವಿ ಪಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Posted On: 12-07-2024 07:56PM

ಪಡುಬಿದ್ರಿ : ಪರಿಸರದ ಶುದ್ಧತೆ ಮತ್ತು ಉತ್ತಮ ಆರೋಗ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆಯಿತು.

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿನಯಾ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಡೆಂಗ್ಯೂ , ಮಲೇರಿಯಾ , ಚಿಕನ್ ಗುನ್ಯಾ , ಇಲಿ ಜ್ವರ ಮೊದಲಾದ ರೋಗಗಳು ಮಳೆಗಾಲದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಮನೆಯ ಸುತ್ತ ಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ, ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ರೋಗದ ಲಕ್ಷಣಗಳು ಕಂಡು ಬಂದರೆ, ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲೆಯ ಅಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಅವರು ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಎಲ್ಲ ಬಗೆಯ ಆರೋಗ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬದ ಸದಸ್ಯರಿಗೂ, ಪರಿಸರದ ಜನರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಅಶೋಕ ಕೆ., ಆಶಾ ಕಾರ್ಯಕರ್ತೆ ರಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶಿಲ್ಪಾ ಕೆ.ಆರ್. ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲೆಯ ಶಿಕ್ಷಕಿ ಕುಮಾರಿ ಪ್ರತೀಕ್ಷಾ ವಂದಿಸಿದರು. ಉಭಯ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜುಲೈ 14 : ಹೆಜಮಾಡಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

Posted On: 12-07-2024 03:31PM

ಹೆಜಮಾಡಿ : ದ್ವಿತೀಯ ಬಾರಿಗೆ ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಯಾದ ಐವನ್ ಡಿಸೋಜರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಜುಲೈ 14, ಆದಿತ್ಯವಾರ ಸಂಜೆ 4 ಗಂಟೆಗೆ ಹೆಜಮಾಡಿ ನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಹೆಜಮಾಡಿ ಹಾಗು ಆಸುಪಾಸಿನ ಗ್ರಾಮಗಳ ಸಾರ್ವಜನಿಕರು ಹಾಗು ಸಂಘ ಸಂಸ್ಥೆಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಪು ವಿಧಾನ ಸಭಾ ಕ್ಷೇತ್ರ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಇನ್ನಿತರರು ಭಾಗವಹಿಸಲಿದ್ದಾರೆಂದು ಸಾರ್ವಜನಿಕ ಅಭಿನಂದನಾ ಸಮಿತಿ ಅಧ್ಯಕ್ಷ ಗುಲಾಂ ಅಹಮ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ರಸ್ಸೆಲ್ ಮಾರ್ಟಿಸ್ CA ಪರೀಕ್ಷೆಯಲ್ಲಿ ಉತ್ತೀರ್ಣ

Posted On: 12-07-2024 03:21PM

ಕಾಪು : ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಅಂತಿಮ CA ಪರೀಕ್ಷೆಯಲ್ಲಿ ರಸ್ಸೆಲ್ ಮಾರ್ಟಿಸ್ ಉತ್ತೀರ್ಣರಾಗಿರುತ್ತಾರೆ. ಇವರು ಮುಂಬೈ ವಿಶ್ವವಿದ್ಯಾಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಭಾಗದಲ್ಲಿ ಪದವಿ ಪಡೆದಿರುತ್ತಾರೆ.

ಇವರು ಕಾಪು ತಾಲ್ಲೂಕಿನ ಕಟಪಾಡಿಯ ಅಚ್ಚಡದ ರೊನಾಲ್ಡ್ ಮಾರ್ಟಿಸ್ ಹಾಗೂ ಹಾರಿಯೆಟ್ ಮಾರ್ಟಿಸ್ ರವರ ಸುಪುತ್ರ.

ಕಾಪು ಮಾರಿಯಮ್ಮನ ದರುಶನ ಪಡೆದ ಕೇಂದ್ರ ಸರಕಾರದ ಅಧಿಕಾರಿಗಳು

Posted On: 12-07-2024 03:09PM

ಕಾಪು : ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳಾದ ಹಿರಿಯ ಲೆಕ್ಕಾಧಿಕಾರಿ ರಾಜೇಶ್ ಕುಮಾರ್, ಆಡಿಟ್ ಕನ್ಸಲ್ಟೆಂಟ್ ಆರ್ . ಕೆ . ಖುರನ ಇವರು ಶುಕ್ರವಾರ ಬೆಳಿಗ್ಗೆ ಕಾಪು ಮಾರಿಯಮ್ಮನ ದರುಶನ ಪಡೆದರು.

ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ನಂತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾಮಗಾರಿಯನ್ನು ವೀಕ್ಷಿಸಿದ ಅಧಿಕಾರಿಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕಾಪು, ಸಹಾಯಕ ನಿರ್ದೇಶಕರು ಬ್ರಹ್ಮಾವರ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಉಡುಪಿ ಜಿಲ್ಲಾ ನರೇಗಾ ಸಿಬ್ಬಂದಿ, ಆರ್ಥಿಕ ಸಮಿತಿಯ ಸಿದ್ಧಿ ಧಾತ್ರಿ ತಂಡದ ಸಂಚಾಲಕ ಶ್ರೀಧರ ಕಾಂಚನ್ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.

ಬಾಳೆಬೈಲು ಹಿರಿಯ ಪ್ರಾಥಮಿಕ ಶಾಲಾ ವಿವೇಕ ಕೊಠಡಿ ಉದ್ಘಾಟನೆ

Posted On: 12-07-2024 03:04PM

ಕಾಪು : 13.90 ಲಕ್ಷ ರೂಪಾಯಿ ಅನುದಾನದ ಬಾಳೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಿವೇಕ ಶಾಲಾ ಕೊಠಡಿಯನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ ಶೆಟ್ಟಿ, ಉಪಾಧ್ಯಕ್ಷರಾದ ದೇವು ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಶೋಭಾ, ಸಚಿನ್ ಪೂಜಾರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಸುಮತಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಪ್ರಕಾಶ್, ಬ್ರಹ್ಮಾವರ ವಲಯದ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ದೂಪದಕಟ್ಟೆ ಸಿ.ಆರ್.ಪಿ ಶಾಂತಾ, ಪೆರ್ಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಸೆರ್ವೇಗಾರ್, ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿಯಾನಂದ ಹೆಗಡೆ, ಹಾಗೂ ಗುತ್ತಿಗೆದಾರರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಸಹ ಶಿಕ್ಷಕರು ಉಪಸ್ಥಿತರಿದ್ದರು.