Updated News From Kaup
ಡಿಸೆಂಬರ್ 9, 10 : ಪಡುಬಿದ್ರಿಯಲ್ಲಿ ಕೃಷಿ ಮೇಳ
Posted On: 07-12-2023 11:42AM
ಪಡುಬಿದ್ರಿ : ಇಲ್ಲಿನ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಡಿಸೆಂಬರ್ 9 ಮತ್ತು 10 ರಂದು ಬೆಳಿಗ್ಗೆ 8ರಿಂದ ರಾತ್ರಿ 8 ರವರೆಗೆ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಮೇಳ ಜರಗಲಿದೆ ಎಂದು ಕೃಷಿ ಮೇಳದ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು. ಅವರು ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಗುರುವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃಷಿ ಮೇಳದ ಉದ್ಘಾಟನೆಯನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದು, ಜೈನ ಮಠ ಮೂಡಬಿದಿರೆಯ ಭಾರತ ಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಎರಡು ದಿನಗಳ ಕಾಲ ಕೃಷಿ ಸಂಬಂಧಿ ಗೋಷ್ಠಿಗಳ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ಪಡುಬಿದ್ರಿ ಆಸುಪಾಸಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಯಕ್ಷಗಾನ, ನಾಟ್ಯ ವೈಭವ, ವಿಟ್ಲ ಶ್ರೀ ವಿಠಲ ನಾಯ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಜನಪದ ನೃತ್ಯ ವೈಭವ, ಭರತನಾಟ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮಗಳು ಕೃಷಿ ಮೇಳಕ್ಕೆ ಮೆರುಗು ನೀಡಲಿದೆ.
ಆದಿತ್ಯವಾರ ಸಂಜೆ ಸಮಾರೋಪ ಸಮಾರಂಭದೊಂದಿಗೆ ಕೃಷಿ ಮೇಳ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 10,000ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸುಮಾರು 80ಕ್ಕೂ ಮಿಕ್ಕಿ ಕೃಷಿ ಸಂಬಂಧಿ ಮಳಿಗೆಗಳು ವಿಶೇಷ ಉತ್ಸಾಹದಿಂದ ಬಂದು ಭಾಗವಹಿಸಲು ನೋಂದಣಿ ಮಾಡಿಕೊಂಡಿರುತ್ತಾರೆ. ಈ ಸಮಾರಂಭದಲ್ಲಿ ಅನೇಕ ಕೃಷಿ ಸಾಧಕರನ್ನು ಕೃಷಿ ಋಷಿ ಸಂಮ್ಮಾನ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಕೃಷಿ ಮೇಳದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಪ್ರಸಾದ್ ಎಲ್ಲದಡಿ, ಜಗದಭಿರಾಮ, ನವೀನ್ ಚಂದ್ರ ಶೆಟ್ಟಿ, ಶರಾವತಿ, ನೀತಾ ಗುರುರಾಜ್, ನಯನಭಿರಾಮ, ದಿನಕರ ರಾವ್, ಶೇಖರ ರಾವ್, ಜನಾರ್ಧನ ರಾವ್, ಅಶೋಕ್ ಪೂಜಾರಿ, ರವಿ ಶೆಟ್ಟಿ, ಸತೀಶ್ ರಾವ್, ಅಮರಭಿರಾಮ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ : ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ
Posted On: 07-12-2023 09:42AM
ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಶಾಖೆ ವತಿಯಿಂದ ನಡೆದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಗ್ರಾಮಶಾಖೆ ಸಂಚಾಲಕರಾದ ಕೀರ್ತಿಕುಮಾರ್ ಅವರು ಮಾತಾಡಿ ದಲಿತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಬೇಕು ಎಂದು ಹೇಳಿದರು. ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯೋದಿಲ್ಲ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರನ್ನು ಶೂದ್ರತ್ವದಿಂದ ಹೊರತರಲು ದೇಶದ ದಲಿತರನ್ನು ಎಚ್ಚರಿಸುವ ಉದ್ದೇಶದಿಂದ ಭಾರತದಲ್ಲಿ ಹುಟ್ಟಿದ ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕರಿಸುವುದರ ಮೂಲಕ ದಲಿತರಿಗೆ ಬುದ್ಧರ ಧಮ್ಮವನ್ನು ಪರಿಚಯಿಸಿದ್ದಾರೆ. ಲಕ್ಷಾಂತರ ಅನುಯಾಯಿಗಳೊಂದಿಗೆ ಧಮ್ಮ ದೀಕ್ಷೆಯನ್ನು ಪಡೆದುಕೊಂಡರು. ಬಾಬಾ ಸಾಹೇಬರಂತೆ ನಾವೂ ಬೌದ್ಧರಾಗಿ ನಮ್ಮಲ್ಲಿನ ಬದಲಾವಣೆಯನ್ನು ಕಂಡುಕೊಳ್ಳಬೇಕು ಎಂದರು.
ಶಿವಾನಂದ್ ಪಡುಬಿದ್ರಿ ಅವರು ಮಾತಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದ ಕಷ್ಟದ ದಿನಗಳಲ್ಲೂ ಹೋರಾಟ ಮಾಡಿ ನಮಗೆಲ್ಲ ಸ್ವತಂತ್ರವಾಗಿ ಬದುಕುವ ಹಾಗೆ ಈ ದೇಶಕ್ಕೆ ಸಂವಿಧಾನದಾನ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಈ ಸಂಧರ್ಭ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಕಲ್ಲಟ್ಟೆ , ಕಾರ್ಯದರ್ಶಿ ಸುರೇಶ್ ಎರ್ಮಾಳ್, ಉಷಾ, ನಯನ, ಹರಿಶ್ಚಂದ್ರ, ವಿಠ್ಠಲ್ ನಂದಿಕೂರ್, ಸುಕೇಶ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ವಿಠ್ಠಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಹೊಸ ಮಾರಿಗುಡಿ ಜೀರ್ಣೋದ್ಧಾರದ ಅಂಗವಾಗಿ ಬಡಾ (ಉಚ್ಚಿಲ) ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ
Posted On: 06-12-2023 07:12PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯದಂತೆ ಸೋಮವಾರ ಬಡಾ (ಉಚ್ಚಿಲ) ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.
ಪ್ರಾರ್ಥನೆಯೊಂದಿಗೆ ಒಂಬತ್ತು ಜನ ಮಹಿಳೆಯರಾದ ರಂಜಿತಾ ಗೋವಿಂದರಾಜ್ ಭಟ್, ಇಂದಿರಾ ಶೆಟ್ಟಿ, ರೇಣುಕಾ, ಮೋಹಿನಿ ಮಾಧವ, ಮಮತಾ, ಜಯಂತಿ, ಸುಲೋಚನಾ, ಸುನಿತಾ ಮತ್ತು ಮೋಹಿನಿ ರಮೇಶ್ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಜೀರ್ಣೋದ್ಧಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ದೇವಳ ನಿರ್ಮಾಣದ ಜೊತೆಗಿರುವ ಯೋಜನೆಗಳು, ಶಿಲಾಸೇವೆಯ ಮಹತ್ವ ಹಾಗೂ ಇತರ ವಿಷಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಮಾತನಾಡಿ ಗ್ರಾಮದ ಪ್ರತೀ ಮನೆಯಿಂದಲೂ ಕನಿಷ್ಠ ಒಂಬತ್ತು ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕು ಎಂದು ವಿನಂತಿಸಿದರು ಮತ್ತು ಗ್ರಾಮ ಸಮಿತಿಯ ದ್ಯೇಯೋದ್ದೇಶಗಳನ್ನು ತಿಳಿಸಿದರು.
ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ ಇವರ ಉಪಸ್ಥಿತಿಯಲ್ಲಿ ಗ್ರಾಮ ಸಮಿತಿಯನ್ನು ರಚನೆ ಮಾಡಿ ಬಡಾ (ಉಚ್ಚಿಲ) ಗ್ರಾಮದ 9 ಜನ ಪುರುಷರ 1 ತಂಡ ಮುಖ್ಯ ಸಂಚಾಲಕರಾಗಿ ಚಂದ್ರಶೇಖರ್ ಶೆಟ್ಟಿ ಮತ್ತು 9 ಜನ ಮಹಿಳೆಯರ 2 ತಂಡ ಮುಖ್ಯ ಸಂಚಾಲಕರಾಗಿ ಇಂದಿರಾ ಶೆಟ್ಟಿ, ಶಶಿಕಲಾ ನವೀನ್ ರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರದ ಬಗ್ಗೆ ಗ್ರಾಮದ ಪ್ರತಿ ಮನೆ ಮನೆಗೂ ಸುದ್ದಿ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಮತ್ತು ಸ್ಟಿಕ್ಕರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಮಾಜಿ ಸದಸ್ಯರಾದ ವಸಂತ ದೇವಾಡಿಗ, ಮಾಜಿ ಉಪಾಧ್ಯಕ್ಷರಾದ ಶಕುಂತಲಾ ಮತ್ತು ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು. ವಕೀಲರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು.
ಪಡು ಕುತ್ಯಾರು : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಚತುರ್ಥ ವಾರ್ಷಿಕ ಮಹಾಸಭೆ
Posted On: 05-12-2023 11:48AM
ಪಡುಕುತ್ಯಾರು : ಇಲ್ಲಿನ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಚತುರ್ಥ ವಾರ್ಷಿಕ ಮಹಾಸಭೆಯು ಆದಿತ್ಯವಾರ ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಶ್ರೀ ದುರ್ಗಾ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿಕಾರ್ಯನಿರ್ವಹಿಸುತ್ತಿದ್ದು, ಸಂಘವು ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಸನ್ಮಾನ, ಪ್ರೋತ್ಸಾಹ ಧನ, ಬಹುಮಾನ ವಿತರಣೆ : ಮುಖ್ಯ ಅತಿಥಿ ಜನಾರ್ಧನ ಆಚಾರ್ಯ, ಹಿರಿಯ ಸದಸ್ಯರಾದ ರಾಮಚಂದ್ರ ಆಚಾರ್ಯ, ಯೋಗೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರು, ಮೊಕ್ತೇಸರರಾದ ಪ್ರಕಾಶ್ ಎಸ್ ಆಚಾರ್ಯ ಮತ್ತು ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷರಾದ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ, ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯಕುಮಾರ್, ಶಶಿರಾಜ ಪಿ ಆಚಾರ್ಯ, ಹೇಮಾವತಿ ಪಿ ಆಚಾರ್ಯ, ಪ್ರಸನ್ನ ಎಸ್ ಆಚಾರ್ಯ, ಸುರೇಂದ್ರ ಎ ಆಚಾರ್ಯ ಉಪಸ್ಥಿತರಿದ್ದರು.
ಸುರೇಶ್ ಆರ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು. ಕೋಶಾಧಿಕಾರಿಯಾದ ಗಂಗಾಧರ ಎಸ್ ಆಚಾರ್ಯರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಎಚ್ ಆಚಾರ್ಯ ಉಪಾಧ್ಯಕ್ಷರಾದ ಸದಾಶಿವ ಎ ಆಚಾರ್ಯ ಮಾತನಾಡಿದರು. ಲತಾ ಪ್ರಸಾದ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ಜಿ ಆಚಾರ್ಯ ವಂದಿಸಿದರು.
ಉದ್ಯಾವರ : ಭಾತೃತ್ವ ಮತ್ತು ಐಕ್ಯತೆಯ ಭಾನುವಾರ ಆಚರಣೆ
Posted On: 04-12-2023 06:15PM
ಉದ್ಯಾವರ : 150ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಾರ್ಷಿಕ ಮಹೋತ್ಸವವು ಡಿಸೆಂಬರ್ ಐದು ಮತ್ತು ಆರರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಡಿಸೆಂಬರ್ 3 ರಂದು ಭಾತೃತ್ವ ಮತ್ತು ಐಕ್ಯತೆಯ ಭಾನುವಾರವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಧಾನ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ವo. ಫಾ. ಡಾ. ರಾಜೇಶ್ ರೊಜಾರಿಯೋ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿ, ಭಕ್ತರಿಗೆ 'ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ' ಎಂಬ ಸಂದೇಶವನ್ನು ನೀಡಿದರು. ಈ ಸಂದೇಶದಲ್ಲಿ 'ಕ್ರಿಸ್ತರು ಮನುಷ್ಯ ಜನ್ಮ ತಾಳಿ ಭೂಲೋಕಕ್ಕೆ ಬಂದು ಮನುಷ್ಯತ್ವ ಕಾಪಾಡಿಕೊಂಡು ದೇವರ ಪ್ರತಿಬಿಂಬವಾಗಿ ಜೀವಿಸಿದರು. ಅವರಂತೆಯೇ ನಾವು ಕೂಡ ದೇವರ ಪ್ರತಿಬಿಂಬವಾಗಿ ಬಾಳಿ ತೋರಿಸಬೇಕು. ಇದೇ ನಾವು ಕ್ರಿಸ್ತನಿಗೆ ಕೊಡುವ ಅತ್ಯುನ್ನತ ಕೊಡುಗೆ' ಎಂದರು.
ಪವಿತ್ರ ಬಲಿಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆಯನ್ನು ಪ್ರಧಾನ ಧರ್ಮ ಗುರುಗಳು ನೆರವೇರಿಸಿದರು. ವಿಶೇಷ ಅಲಂಕೃತ ವಾಹನದಲ್ಲಿ ಪರಮ ಪ್ರಸಾದದ ಭವ್ಯ ಮತ್ತು ಭಕ್ತಿಪೂರ್ವಕ ಮೆರವಣಿಗೆ ನಡೆಯಿತು.
'ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ' ಎಂಬ ಸಂದೇಶದೊಂದಿಗೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ದೇವಾಲಯದ ಪ್ರಧಾನ ಧರ್ಮಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮ ಗುರುಗಳಾದ ವo. ಲಿಯೋ ಪ್ರವೀಣ್ ಡಿಸೋಜ, ಧರ್ಮಭಗಿನಿಯರು ಮತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದರು.
ಶಂಕರಪುರ :ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಧ್ವಜ ಸ್ಥಾಪನೆ
Posted On: 03-12-2023 10:29PM
ಶಂಕರಪುರ : ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣದ ಭೂಮಿಯಲ್ಲಿ ರವಿವಾರ 54 ಸಾಧು-ಸಂತರಿಂದ ದೀಪ ಬೆಳಗಿಸಿ, ಭಗವಧ್ವಜ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಿ ಚಾಲನೆಯನ್ನು ನೀಡಲಾಯಿತು.
ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ಭಾರ್ಗವ ಮುನಿಗಳು ಸಾಧು ಸಂತರು ತಪಸ್ಸನ್ನುಗೈದಂತಹ ಪುಣ್ಯಕ್ಷೇತ್ರ ಇದಾಗಿದೆ. ಸಾಧು ಸಂತರು ಅನಾಥರಾಗಬಾರದು ಎಂಬ ಯೋಚನೆಯೊಂದಿಗೆ ಸಂತ ಆಶ್ರಯಧಾಮ ನಿರ್ಮಾಣದ ಯೋಜನೆಯೊಂದಿಗೆ ಭೂಮಿಯು ಅಭಿವೃದ್ಧಿಗೊಳ್ಳಲಿದ್ದು, ಗುರುಕುಲವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠದ ಶ್ರೀ ಪ್ರವೀಣ್ರಾಜ್ ಮಚ್ಚೇಂದ್ರನಾಥ ಬಾಬಾ ಸಹಿತ ದೇಶದ ನಾನಾ ರಾಜ್ಯಗಳ ಸಾಧು ಸಂತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಟ್ರಸ್ಟಿ ವಿಶ್ವನಾಥ ಸುವರ್ಣ, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಮಾರ್ಗದರ್ಶಕರಾದ ಗೀತಾಂಜಲಿ ಎಂ. ಸುವರ್ಣ, ಕೋಟ ಆನಂದ ಸಿ. ಕುಂದರ್, ವಿ.ಹಿಂ.ಪ. ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಮತ್ತು ಸ್ಥಳದಾನಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಡಿಸೆಂಬರ್ 3 : ಶ್ರೀ ಸಿರಿ ಕುಮಾರ ದೈವಳ ಕಂಬಳ
Posted On: 02-12-2023 02:35PM
ಉಡುಪಿ : ಶ್ರೀ ಸಿರಿಕುಮಾರ ದೈವಸ್ಥಾನ ಕಂಬಳ ಮನೆ, ಕಂಬಳಕಟ್ಟ-ಕೊಡವೂರು ಇಲ್ಲಿಯ ಶ್ರೀ ಸಿರಿ ಕುಮಾರ ದೈವಳ ಕಂಬಳವು ಡಿಸೆಂಬರ್ 3, ರವಿವಾರ ಕಂಬಳಕಟ್ಟ ಇಲ್ಲಿ ಜರಗಲಿದೆ.
ಸಂಜೆ 3 ಗಂಟೆಗೆ ಸಿರಿ ಕುಮಾರ ದರ್ಶನ ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ : ಕ್ರಿಯೇಟಿವ್ ಆವಿರ್ಭವ-2023 ಕಾಲೇಜು ವಾರ್ಷಿಕೋತ್ಸವ
Posted On: 02-12-2023 01:44PM
ಕಾರ್ಕಳ : ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ “ವಸುಧೈವ ಕುಟುಂಬಕಂ” ಎಂಬ ಕಲ್ಪನೆಯಲ್ಲಿ ಮೂಡಿಬಂದಿತು. ಸಮಾರಂಭದಲ್ಲಿ ಮಿಲಾಗ್ರಿಸ್ ಚರ್ಚ್ನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಉನ್ನತವಾದ ಯಶಸ್ಸು ಕೀರ್ತಿ ಲಭಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆಗಳಿಗೆ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲಿ ಎಂದು ಆಶಿಸಿದರು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಂಶುಪಾಲರಾದ ಸ್ಟಾನಿ ಲೋಬೋ ವಾರ್ಷಿಕ ವರದಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರ ಜೋಯೆಲ್ ಸ್ವಾಗತಿಸಿದರು. ಸೋನಾಲ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಶಿಲ್ಪಾ ಕ್ರಾಸ್ತಾ ವಂದಿಸಿದರು.
ಯು.ಎ.ಇ ದುಬೈನಲ್ಲಿ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆ
Posted On: 02-12-2023 11:03AM
ಕಾಪು : ಕಳತ್ತೂರು ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ ಇದರ ಮಾಲಕರು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರಾದ ಯುವ ನಾಯಕ, ಉದ್ಯಮಿಯಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಯು.ಎ.ಇ ದುಬೈನಲ್ಲಿ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ಎಲ್ಲಾ ಜಾತಿಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು ಗ್ರಾಮ ಮಟ್ಟದ ಜನರಿಗೆ ತನ್ನಿಂದ ಆಗುವ ಸಹಾಯ ಮಾಡುತ್ತ ಕುಡಿಯುವ ನೀರು, ರಸ್ತೆ ನಿರ್ಮಾಣ, ಕೊರೋನದಂತ ಮಹಾಮಾರಿ ಬಂದಾಗ ಸಂತ್ರಸ್ತರಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾಗಿ ಅದರ ಮುಖಾಂತರ ಸುಮಾರು 6000 ಕ್ಕೂ ಮಿಕ್ಕಿ ಮನೆಗೆ ಅಕ್ಕಿ ಪಡಿತರ ಕಿಟ್ ನೀಡಿದ್ದು ,ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆಯವರ ಸಹಕಾರದಿಂದ ಹಲವಾರು ಮೆಡಿಕಲ್ ಕ್ಯಾಂಪ್, ಬ್ಲಡ್ ಕ್ಯಾಂಪ್, ವಿದ್ಯಾರ್ಥಿವೇತನದಂತ ನೂರಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಸುಲಭ ರೀತಿಯಲ್ಲಿ ಸಿಗಲು ಹಲವಾರು ಮಾಹಿತಿ ಕಾರ್ಯಕ್ರಮ ಮಾಡಿರುತ್ತಾರೆ.
ಹತ್ತಾರು ಸಾಮಾಜಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಏಷ್ಯಾ ಫೇಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಜನಸೇವಾ ಸದ್ಭಾವನ್ ಪುರಸ್ಕಾರ್ ಅವಾರ್ಡ್ ಗೋವಾ, ಕೈರಲಿ ಪ್ರಕಾಶನ ಕೊಡಲ್ಪಟ್ಟ ಸಮಾಜ ರತ್ನ ಕೇರಳ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಸಾಧಕ ರತ್ನ ಪ್ರಶಸ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ವತಿಯಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪಡೆದು ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಅಭಿನಂದನೆ ಪಡೆದಿರುತ್ತಾರೆ.
ಇದೀಗ ಡಿಸೆಂಬರ್ 10 ದುಬೈ ಅಲ್ ಖುಷಿಸ್ ಉಡ್ಲಮ್ ಪಾರ್ಕ್ ದುಬೈ ಶಾಲಾ ಸಭಾಂಗಣದಲ್ಲಿ ನಡೆಯುವ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ದೇಶ ಹಾಗೂ ವಿದೇಶದ ಗಣ್ಯತಿಗಣ್ಯರ ಸಮ್ಮುಖದಲ್ಲಿ 2023 ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಯೂತ್ ಐಕಾನ್ ಪಡೆಯಲಿದ್ದಾರೆಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ದುಬೈ ಘಟಕದ ಅಧ್ಯಕ್ಷರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಕಾರ್ಯದರ್ಶಿ ಅಮರದೀಪ ಕಲ್ಲುರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವ
Posted On: 01-12-2023 08:38PM
ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವವು ಆನೆಗುಂದಿ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶುಕ್ರವಾರ ಜರಗಿತು.
ಈ ಸಂದರ್ಭ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಶ್ರೀದೇವಿಯ ಮಹಾಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ನಡೆಯಿತು.
ಮುಕ್ತೇಶ್ವರ ಪ್ರಕಾಶ ಎಸ್ ಆಚಾರ್ಯ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ, ನಾಗೇಶ್ ಆರ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಕಾಪು ಜಯರಾಮ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ, ಪದಾಧಿಕಾರಿಗಳು ಉಪಸ್ಥಿತರಿದ್ದರು.