Updated News From Kaup
ಮತಿಭ್ರಮಣೆಯಾದವರಂತೆ ಹೇಳಿಕೆ ನೀಡುತ್ತಿರುವ ಶಾಸಕ ಭರತ್ ಶೆಟ್ಟಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ : ವಿನಯ್ ಕುಮಾರ್ ಸೊರಕೆ

Posted On: 09-07-2024 06:40PM
ಕಾಪು : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಬಿ. ಜೆ.ಪಿಯವರ ಹಿಂಸಾಪ್ರವೃತ್ತಿಯ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿರುವುದು ಹಿಂಸೆ ಮತ್ತು ಕೋಮುದ್ವೇಷವನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿ. ಜೆ.ಪಿ ಗರಿಗೆ ಬರ ಸಿಡಿಲು ಬಡಿದಂತಾಗಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತಕ್ಕೆ ಪ್ರಜ್ಞಾವಂತ ಮತದಾರರು ಕಡಿವಾಣ ಹಾಕುವ ಮೂಲಕ ಸಂವಿಧಾನದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುತ್ತಿದ್ದವರ ಮೇಲೆ ಎರಗಿದ ಸಂವಿಧಾನವೆಂಬ ಸಿಡಿಲಿನ ಆಘಾತಕ್ಕೆ ಬಿ. ಜೆ.ಪಿ ತತ್ತರಿಸಿ ಹೋಗಿದೆ.
ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಗೌರವಯುತ ವಿಪಕ್ಷ ನಾಯಕನ ಸ್ಥಾನಮಾನವನ್ನು ಅಲಂಕರಿಸಿರುವ ರಾಹುಲ್ ಗಾಂಧಿಗೆ ಸಂಸತ್ತಿನ ಒಳಗೆ ನುಗ್ಗಿ ಕೆನ್ನೆ ಬಾರಿಸಬೇಕೆಂದು ಹೇಳಿಕೆ ನೀಡುವ ಮೂಲಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಪುರಾವೆ ದೊರೆತಂತಾಗಿದೆ. ಒಬ್ಬ ವೈದ್ಯನೆಂದು ಹೇಳಿಕೊಂಡು ಅವಿದ್ಯಾವಂತನತೆ ವರ್ತಿಸುತ್ತಿರುವ ಮತ್ತು ಹೇಳಿಕೆ ನೀಡುತ್ತಿರುವ ಭರತ್ ಶೆಟ್ಟಿಗೆ ಮತಿಭ್ರಮಣೆ ಯಾಗಿದ್ದು ತುರ್ತಾಗಿ ಸೂಕ್ತ ಮನೋಚಿಕಿತ್ಸೆಯ ಅಗತ್ಯವಿರುವಂತೆ ಕಾಣುತ್ತಿದೆ.
ಅಹಿಂಸೆ, ಸಹಿಷ್ಣುತೆ ಮತ್ತು ಸಮತೆಯ ಮೂಲ ನಿಲುವನ್ನು ಹೊಂದಿರುವ ಹಿಂದೂ ಅಸ್ಮಿತೆಯನ್ನು ಪ್ರಖರವಾಗಿ ಸಂಸತ್ತಿನಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿಯ ವಿರುದ್ಧ ಬಿ. ಜೆ. ಪಿಗರು ಹತಾಶರಾಗಿ, ಹಲ್ಲೆ ನಡೆಸಲು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ತೀರಾ ಖಂಡನೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು. ಶಾಸಕ ಭರತ್ ಶೆಟ್ಟಿಯವರು ತಮ್ಮ ಬಾಲಿಶ ವರ್ತನೆ ಮತ್ತು ನೀಡುವಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ತಾನು ಶಾಸಕನಾಗಿರಲು ಯೋಗ್ಯನಲ್ಲವೆಂದು ರುಜುವಾತು ಪಡಿಸಿದ್ದಾರೆ.
ಇದೇ ರೀತಿಯ ಬೇಜವಾಬ್ದಾರಿ ಹೇಳಿಕೆ ಮತ್ತು ಹಿಂಸಾಪ್ರವೃತ್ತಿಯ ವರ್ತನೆಯನ್ನು ಮುಂದುವರಿಸಿದರೆ, ಭರತ್ ಶೆಟ್ಟಿಯವರಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸದಾ ಸನ್ನದ್ಧರಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದಾರೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ಲೈನ್ ಫಾಲೋವಿಂಗ್ ರೋಬೋಟ್ ತಾಂತ್ರಿಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
Posted On: 09-07-2024 04:31PM
ಶಿರ್ವ : ಮಂಗಳೂರಿನ ಕಾಮೆಡ್‌ಕೇರ್ಸ್ ಇನ್ನೋವೇಶನ್ ಹಬ್ ಇವರು ಜುಲೈ 7 ರಂದು ಆಯೋಜಿಸಿದ್ದ "Tech-X 2024" ತಾಂತ್ರಿಕ ಸ್ಪರ್ಧೆಯಲ್ಲಿ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪವನ್ ಗೋಂಡ್, ವಿಶ್ವಾಸ್ ಭಟ್, ರಂಜನ್ ಪೂಜಾರಿ, ವಿಜೇತಾ, ಗಣಕಯಂತ್ರ ವಿಭಾಗ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಶ್ರೀ ಹರ್ಷ ಗುನಗಾ ಇವರು “ಲೈನ್ ಫಾಲೋವಿಂಗ್ ರೋಬೋಟ್" ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
ರೋಟರಿ ಕ್ಲಬ್ ಶಂಕರಪುರ - ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈo ಮಾಹಿತಿ ; ರಸ್ತೆ ಸುರಕ್ಷತೆಯ ಕರಪತ್ರ ಬಿಡುಗಡೆ

Posted On: 09-07-2024 03:38PM
ಶಿರ್ವ : ರೋಟರಿ ಕ್ಲಬ್ ಶಂಕರಪುರದ ವತಿಯಿಂದ ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈo ಬಗ್ಗೆ ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅಡಿಗ ಇವರು ಮಾಹಿತಿ ನೀಡಿ, ರಸ್ತೆ ಸುರಕ್ಷತೆಯ ಕರಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಂಜುನಾಥ ಅಡಿಗ ಅವರನ್ನು ರೋಟರಿ ವತಿಯಿಂದ ಅಭಿನಂದನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ. ಮಾಲಿನಿ ಶೆಟ್ಟಿ, ಸಹಾಯಕ ಗವರ್ನರ್ ಆದ ರೋ. ಅನಿಲ್ ಡೆಸಾ, ಡಿಸ್ಟ್ರಿಕ್ ಪ್ರಾಜೆಕ್ಟ್ ಡೈರೆಕ್ಟರ್ ರೋ. ಕ್ಲಿಫರ್ಡ್ ಡಿ ಮೇಲ್ಲೋ, ಕ್ಲಬ್ ಕಾರ್ಯದರ್ಶಿ ರೋ. ಅನಿಲ್ದಾ ನೋರೋನ್ನಾ, ಯು ನಂದನ್ ಕುಮಾರ್, ಅಂಟನಿ ಡೆಸಾ, ನವೀನ್ ಅಮೀನ್, ಫ್ಲಾವಿಯ ಮೆನೇಜಸ್, ಸಿಲ್ವಿಯಾ ಕಾಸ್ಟಲಿನೋ, ದಿವ್ಯಾ ಕಾಸ್ಟಲಿನೋ,ರೋಟರಿ ಸದಸ್ಯರುಗಳು ಉಪಸ್ಥಿತರಿದ್ದರು.
ಕಾಪು : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಕಾಪು ಹೊಸ ಮಾರಿಗುಡಿ ಭೇಟಿ

Posted On: 09-07-2024 02:00PM
ಕಾಪು : ಪುರುಷರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಿಲ್ಲರ್ ಅವರ ಅಮೂಲ್ಯ ಕ್ಯಾಚ್ ಹಿಡಿದು ಟೀಂ ಇಂಡಿಯಾಕ್ಕೆ ಜಯ ತಂದು ಕೊಟ್ಟ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಮಂಗಳವಾರ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಾಪುದ ಅಮ್ಮ' (ಕಾಪುವಿನ ತಾಯಿ) ಎಂದು ತುಳುವಿನಲ್ಲಿ ಹೇಳಿದರು. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆಯ ನನಗೆ ಬಂದಿಲ್ಲ ಆಟದಲ್ಲಿ ಉತ್ತಮ ಪ್ರದರ್ಶನದ ಬಗ್ಗೆ ಗಮನಹರಿಸಿದ್ದೇನೆ. ದೇಶಕ್ಕೆ ಕಪ್ ತಂದುಕೊಡುವ ಸಂದರ್ಭವನ್ನು ದೇವರು ಸೃಷ್ಟಿ ಮಾಡಿದ್ದಾನೆ. ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ಕಾಪು ಮಾರಿಯಮ್ಮನ ದರುಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ ಎಂದರು.
ಈ ಸಂದರ್ಭ ದೇವಳದ ತಂತ್ರಿವರ್ಯರಾದ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಹಾಗೂ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯರವರು ಪ್ರಾರ್ಥಿಸಿ ಸೂರ್ಯಕುಮಾರ್ ದಂಪತಿಗೆ ಅನುಗ್ರಹ ಪ್ರಸಾದ ನೀಡಿದರು. ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರನಿಗೆ ಸೂಕ್ತ ಭದ್ರತೆ ಒದಗಿಸಲು ಮಾರಿಗುಡಿ ಸುತ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಕುಮಾರ್ ಜೊತೆ ಅಭಿಮಾನಿಗಳು ಅಟೋಗ್ರಾಫ್, ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರು, ದೇವಳದ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ.ರವಿಕಿರಣ್, ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಮನೋಹರ್ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಅರುಣ್ ಶೆಟ್ಟಿ ಪಾದೂರು ಮತ್ತಿತರರು ಉಪಸ್ಥಿತರಿದ್ದರು.
ನಾಳೆ (ಜು.9) ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿವರೆಗಿನ ಮಕ್ಕಳಿಗೆ ರಜೆ ಘೋಷಣೆ

Posted On: 08-07-2024 08:39PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 9ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ರಜೆಯನ್ನು ಘೋಷಿಸಿದೆ.
ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ : ಕಟಾ, ಕುಮಿಟೆ ವಿಭಾಗದಲ್ಲಿ ಹರ್ಷಿತಾ ಇನ್ನಂಜೆ ಪ್ರಥಮ ಸ್ಥಾನ

Posted On: 08-07-2024 06:44PM
ಕಾಪು : ಗದಗದಲ್ಲಿ ಜುಲೈ 7 ರಂದು ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬಾಲಕಿಯರ ಬ್ಲಾಕ್ ಬೆಲ್ಟ್ ಅಂಡರ್ 21 ಕಟಾ ವಿಭಾಗದಲ್ಲಿ ಹಾಗೂ ಬ್ಲಾಕ್ ಬೆಲ್ಟ್ +65KG ಕುಮಿಟೆ ವಿಭಾಗದಲ್ಲಿ ಹರ್ಷಿತಾ ಇನ್ನಂಜೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಉದ್ಯಾವರ : ಆಟೋ, ಟೆಂಪೋ ಮಾಲಕ ಆತ್ಮಹತ್ಯೆ

Posted On: 08-07-2024 06:24PM
ಉದ್ಯಾವರ : ವೈಯುಕ್ತಿಕ ಕಾರಣಗಳಿಂದ ಮನನೊಂದು ಉದ್ಯಾವರ ಬೋಳಾರ್ ಗುಡ್ಡೆಯ ಆಟೋ ಟೆಂಪೋ ಚಾಲಕ / ಮಾಲಕ ಮಹೇಶ್ ಪಾಲನ್ (35) ಉದ್ಯಾವರ ಹಿಂದೂ ರುದ್ರ ಭೂಮಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮದಾಸ್ ಪಾಲನ್ ಪುತ್ರನಾಗಿರುವ ಮಹೇಶ್ (ಮಾಹಿ), ಇಂದು ಬೆಳಿಗ್ಗೆ ಮೂರನೇ ತರಗತಿಯಲ್ಲಿ ಇರುವ ಪುತ್ರಿಯನ್ನು ಶಾಲೆಗೆ ಬಿಟ್ಟು ಬಂದಿದ್ದು, ಬಳಿಕ ಮನೆ ಸಮೀಪದಲ್ಲಿರುವ ಕಟ್ಟಿಗೆ ತುಂಬಿರುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹೇಶ್ ಉದ್ಯಾವರ ಗುಡ್ಡೆಯಂಗಡಿಯಲ್ಲಿ ಟೆಂಪೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಬಿಲ್ಲವ ಮಹಾಜನ ಸಂಘ, ಉದ್ಯಾವರ ಯುವಕ ಮಂಡಲ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತ ಮಹೇಶ್ ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, ಪುತ್ರಿ ಸಹಿತ ಬಂದು ಬಳಗದವರನ್ನು ಅಗಲಿದ್ದಾರೆ.
ಜುಲೈ 9 (ನಾಳೆ) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 08-07-2024 06:20PM
ಉಡುಪಿ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜು.9ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳವಾರ ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ನೀಡಲಾಗಿಲ್ಲ.
ಕಳತ್ತೂರು : ಕೆ, ಕೆ ಬಾಯ್ಸ್ ಆಶ್ರಯದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಸಂಪನ್ನ

Posted On: 08-07-2024 08:29AM
ಕಳತ್ತೂರು : ಇಲ್ಲಿನ ಕೆ. ಕೆ ಬಾಯ್ಸ್ ಅಶ್ರಯದಲ್ಲಿ ಕುಕ್ಕುಂಜ ಹಾಗೂ ಕಳತ್ತೂರು ಗ್ರಾಮಸ್ಥರಿಗೆ ಆಯೋಜನೆ ಮಾಡಿದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ, ಹಿರಿಯರಾದ ರವೀಂದ್ರ ಶೆಟ್ಟಿ, ಪ್ರಮುಖರಾದ ರಾಜೇಶ್ ಕುಲಾಲ್, ಉದಯ ಕುಲಾಲ್, ಪ್ರದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಸಹಕಾರವಿತ್ತ ಎಲ್ಲರಿಗೂ ಕೆ. ಕೆ ಬಾಯ್ಸ್ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿರುವರು.
ಪಡುಬೆಳ್ಳೆ ನಾರಾಯಣಗುರು ಶಾಲೆಯ ಇಂಟರ‍್ಯಾಕ್ಟ್ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ; ಕೃಷಿ ಮಾಹಿತಿ

Posted On: 08-07-2024 06:38AM
ಶಿರ್ವ : ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಇಂಟರ‍್ಯಾಕ್ಟ್ ವಿದ್ಯಾರ್ಥಿಗಳು ಪಡುಬೆಳ್ಳೆಯ ಸಡಂಬೈಲು ಪ್ರಗತಿಪರ ಕೃಷಿಕ ರಘುರಾಮ ನಾಯಕ್ ತೊಟ್ಟಿಲು ಮನೆಯ ದೊಡ್ಡ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಬೇಸಾಯಗಾರರ ಕೃಷಿ ದಿನಚರಿಯ ಬಗ್ಗೆ ಪ್ರತ್ಯಕ್ಷ ಅನುಭವ ಪಡೆದು ಕೊಂಡರು.
ವಿದ್ಯಾರ್ಥಿಗಳ ಬರುವಿಕೆಗಾಗಿಯೇ ದೊಡ್ಡ ಗದ್ದೆಯನ್ನು ಉಳುಮೆ ಮಾಡಿ ಸಿದ್ಧಗೊಳಿಸಿದ್ದು, ನಾಟಿ ಮಾಡುವ ಪೂರ್ವದಲ್ಲಿ ಬೇಸಾಯಗಾರನ ದಿನಚರಿ, ಉಳುಮೆಯ ವಿಧಾನ, ಭತ್ತದ ತಳಿಯ ಬಗ್ಗೆ ಮಾಹಿತಿ ನೀಡಿ, ನಾಟಿ ಮಾಡುವ ವಿಧಾನದ ಬಗ್ಗೆ ರಘುರಾಮ ನಾಯಕ್ ವಿವರಿಸಿದರು.
ಮಳೆಯಲ್ಲಿಯೇ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ಹೊಸ ಅನುಭವವನ್ನು ಪಡೆದುಕೊಂಡರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರಿನುಷಾ, ಇಂಟರ‍್ಯಾಕ್ಟ್ ಕೋರ್ಡಿನೇಟರ್ ವೀಣಾ ಆಚಾರ್ಯ, ಸಹ ಶಿಕ್ಷಕಿಯರಾದ ರೂಪಾ, ದೀಕ್ಷಾ, ಶಾಹಿಸ್ತಾ, ವೀಣಾ ನಾಯಕ್, ವಾಹನ ಚಾಲಕ ಮಂಜುನಾಥ್ ಪೂಜಾರಿ ವಿದ್ಯಾರ್ಥಿಗಳೊಂದಿಗೆ ಸಾಥ್ ನೀಡಿದರು. ಇಂಟರ‍್ಯಾಕ್ಟ್ ಅಧ್ಯಕ್ಷೆ ಭವಿಷ್ಯಾ, ಕಾರ್ಯದರ್ಶಿ ಡೇವಿಡ್ ತರಂಗ್ ಸಹಿತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿಶೇಷ ಅನುಭವವನ್ನು ಸವಿದರು.