Updated News From Kaup

ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆ

Posted On: 12-06-2025 04:01PM

ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ದೇಶದಾದ್ಯಂತ ಪಕ್ಷ ಸಂಘಟನಾ ಪರ್ವ ನಡೆಯುತ್ತಿದ್ದು ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತ ದಲ್ಲಿ ಉಳಿದಿರುವ 10 ಜಿಲ್ಲೆಗಳ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ.

ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕುತ್ಯಾರ್ ನವೀನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಪರ್ವ 2024-25 ರಾಜ್ಯ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ : 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆ

Posted On: 12-06-2025 03:55PM

ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪುವಿನಲ್ಲಿ 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯು ಜರಗಿತು. ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ ಇವರು ಅಧ್ಯಕ್ಷತೆ ವಹಿಸಿದ್ದರು.

ಹೊಸದಾಗಿ ನೇಮಕಗೊಂಡ ಸದಸ್ಯರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಲಾಯಿತು. ಆಸ್ಪತ್ರೆಯ ವಿವಿಧ ಕಾರ್ಯಕ್ರಮಗಳು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರುವ ಬಗ್ಗೆ ರೂಪರೇಷೆಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಡಳಿತ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ, ಸ್ಥಳೀಯ ಪ್ರತಿನಿಧಿಗಳಾದ ಹರೀಶ್ ನಾಯಕ್ ಕಾಪು, ಹಮೀದ್ ಯೂಸುಬ್, ಆಸಿಫ್, ಕಾರ್ತಿಕ್, ಯೋಗೇಶ್, ಆಶಾ ಶಂಕರ್, ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ, ವೈದ್ಯಾಧಿಕಾರಿ ಡಾ.ಧೃತಿ ಆಳ್ವ, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸಿಸ್ಟರ್ ಚಂದ್ರಕಲಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶಿರ್ವ : ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ ಕಾರ್ಯಕ್ರಮ

Posted On: 12-06-2025 02:37PM

ಶಿರ್ವ : ಅಪ್ರಾಪ್ತ ವಯಸ್ಸಿನ ಮಕ್ಕಳು ಹೆಚ್ಚಾಗಿ ಮಾದಕ ದ್ರವ್ಯ ಸೇವನೆ ಸಹಿತ ವಿವಿಧ ಅಪರಾಧ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯ ಇದೆ. ತನಗೂ ಇನ್ನೊಬ್ಬರಿಗೂ ಅನುಕೂಲವಾಗುವಂತಹ ಶಿಕ್ಷಣ ಮನೆಯಿಂದಲೇ ಆಗಬೇಕು. ಸೈಬರ್ ಕ್ರೈಮ್, ಮೊಬೈಲ್ ಮೂಲಕ ಆಮಿಷಕ್ಕೆ ಒಳಗಾಗುವ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕ್ರೈಮ್ ಸಹಿತ ಅಪರಾಧಗಳ ನಿಯಂತ್ರಣಕ್ಕೆ ಪೋಲಿಸರೊಂದಿಗೆ ಸಾರ್ವಜನಿಕರ ಸಕಾಲಿಕ ಸ್ಪಂದನ ಅಗತ್ಯ ಎಂದು ಶಿರ್ವ ಪೋಲಿಸ್ ಠಾಣಾಧಿಕಾರಿ ಮಂಜುನಾಥ್ ಮರಬದ ಹೇಳಿದರು. ಅವರು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವಠಾರದಲ್ಲಿ ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇದರ ಆಶ್ರಯದಲ್ಲಿ ಆರಕ್ಷಕ ಠಾಣೆ ಶಿರ್ವ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಅಟೋರಿಕ್ಷಾ ಚಾಲಕರ ಮಾಲಕರ ಸಂಘ ಬಂಟಕಲ್ಲು, ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಸಹಕಾರದಲ್ಲಿ ಏರ್ಪಡಿಸಿದ "ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್‌ಗಳ ಬಗ್ಗೆ ಎಚ್ಚರ ವಹಿಸುವುದು, ಪ್ರಚೋದನಕಾರಿ ಮೆಸೆಜ್‌ಗಳನ್ನು ಲೈಕ್, ಫಾರ್‌ವರ್ಡ್ ಮಾಡುವುದೂ ಅಪರಾಧವಾಗಿದೆ ಎಂದರು.

ಎಎಸ್‌ಐ ಶ್ರೀಧರ್ ಮತ್ತು ಮಹಿಳಾ ಪೋಲಿಸ್ ಗೀತಾ, ಮಹಿಳಾ ದೌರ್ಜನ್ಯ ಹಾಗೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾನೂನು, ಅಪ್ರಾಪ್ತರಿಂದ ವಾಹನ ಚಾಲನೆ ಅಪರಾಧಗಳ ಬಗ್ಗೆ ಮಾಹಿತಿ, ತಡೆಗಟ್ಟುವಿಕೆ, ಪೋಲಿಸ್ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಬಂಟಕಲ್ಲು ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಉದ್ಘಾಟಿಸಿದರು.

ಈ ಸಂದರ್ಭ ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಗ್ರಾ.ಪಂ.ಸದಸ್ಯ ಸತೀಶ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಹೆಡ್ ಕಾನ್ಟೇಬಲ್ ಮಂಜುನಾಥ ಅಡಿಗ, ಬಂಟಕಲ್ಲು ಬೀಟ್ ಪೋಲಿಸ್ ಶಿವಾನಂದ, ಮಂಜುನಾಥ್, ನಾಗರಿಕರು ಉಪಸ್ಥಿತರಿದ್ದರು.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜೂ.13 -14 : ಮಥುರಾದಲ್ಲಿ ನಡೆಯಲಿರುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ

Posted On: 11-06-2025 11:07AM

ಕಾಪು : ಉತ್ತರ ಪ್ರದೇಶ ಮಥುರಾದ ಶ್ರೀಧಾಮ ವೃಂದಾವನದಲ್ಲಿ ಜೂನ್ 13 ಮತ್ತು 14 ರಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಟಪಾಡಿಯ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಶ್ರೀ ಕೃಷ್ಣ ಜನ್ಮ ಭೂಮಿ ಮತ್ತು ಕಾಶಿ ಮುಕ್ತಿ ಹಾಗೂ ಯಾತ್ರಾ ಸ್ಥಳಗಳು ಮತ್ತು ಭವಿಷ್ಯದ ಏಳಿಗೆಗಳಿಗೆ ಭೌತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿ, ಪಂಗಡದ ಅನಾನುಭವಿ ಸನ್ಯಾಸಿಗಳ ತರಬೇತಿಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಶಿರ್ವ ರೋಟರಿ : ಕೃತಜ್ಞತಾ ಸಮರ್ಪಣೆ, ಅಭಿನಂದನೆ, ಕುಟುಂಬ ಸಮ್ಮಿಲನ ಕಾರ್ಯಕ್ರಮ

Posted On: 08-06-2025 04:05PM

ಶಿರ್ವ : 55 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿಯ 2024 -25ನೇ ಸೇವಾ ವರ್ಷದ ಕೃತಜ್ಞತಾ ಸಮರ್ಪಣೆ, ಅಭಿನಂದನೆ ಹಾಗೂ ಕುಟುಂಬ ಸಮ್ಮಿಲನದ ಕಾರ್ಯಕ್ರಮ ಶಿರ್ವ ರೋಟರಿ ಸಭಾ ಭವನ ಬಂಟಕಲ್ಲು ಇಲ್ಲಿ ಜರಗಿತು.

ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ವಲಯ 5ರ ನೇತೃತ್ವ ವಹಿಸಿದ ಸಹಾಯಕ ಗವರ್ನರ್ ಅನಿಲ್ ಡೇಸಾ ಶಂಕರಪುರ, ವಲಯ ಸೇನಾನಿ ಮೆಲ್ವಿನ್ ಡಿಸೋಜ ಶಿರ್ವ ಹಾಗೂ ವಲಯ ತರಬೇತುದಾರ ಶೈಲೇಂದ್ರ ರಾವ್ ಕಾರ್ಕಳ ಇವರನ್ನು ಶಿರ್ವ ರೋಟರಿ ವತಿಯಿಂದ ವಲಯದ ಮಾಜಿ ಸಹಾಯ ಗವರ್ನರ್‌ಗಳಾದ ಬಿ.ಪುಂಡಲೀಕ ಮರಾಠೆ ಮತ್ತು ಡಾ.ಅರುಣ್‌ಕುಮಾರ್ ಹೆಗ್ಡೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅಶ್ವಿನಿ ಅಮಿತ್ ಅರಾನ್ಹಾ, ಹಿರಿಯರಾದ ಹೆರಾಲ್ಡ್ ಕುಟಿನ್ಹೊ, ಮಾಜಿ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವೇದಿಕೆಯಲ್ಲಿದ್ದರು. 2025-26ರ ನಿಯೋಜಿತ ಅಧ್ಯಕ್ಷ ವಿಲಿಯಮ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು.

ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ ; ಮಳೆ ನೀರು ಕೊಯ್ಲು ಉದ್ಘಾಟನೆ

Posted On: 08-06-2025 03:45PM

ಉಡುಪಿ : ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಭೂಮಿಯ ಅಂತರ್ಜಲ ಮರುಪೂರಣ, ಪರಿಸರ ಸ್ನೇಹಿ ಸರಳ ತಂತ್ರಜ್ಞಾನದ ವಿಶಿಷ್ಟ ಯೋಜನೆಯಾದ ಮಳೆ ನೀರು ಕೊಯ್ಲು ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ ವೇದಿಕೆಯ ವಠಾರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ್ಪೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಅರ್ಥಪೂರ್ಣ ಯೋಜನೆ ಯಶಸ್ಸಾಗಲಿ. ಗ್ರಾಮದ ಜನತೆಗೆ ಮಾದರಿಯಾಗಲಿ ಎಂದರು.

ಅತಿಥಿಗಳಾದ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೊಚ್, ಉಪ್ಪೂರು ವ್ಯ.ಸೇ.ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಉಪ್ಪೂರು ಸರಕಾರಿ ಪ್ರೌಢ ಶಾಲೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ ಮೊಗವೀರ ಮಾತನಾಡಿದರು.

ವೇದಿಕೆ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು. ಅಧ್ಯಕ್ಷರಾದ ಸಂದೀಪ್ ಶೆಟ್ಟಿ ವಂದಿಸಿದರು. ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಂದೀಪ್ ಕುಮಾರ್ ಮಂಜ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ

Posted On: 08-06-2025 03:21PM

ಕಾಪು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ಮಂಜ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.) ಇದರ ಅಧ್ಯಕ್ಷರಾದ ಸಂದೀಪ್ ಕುಮಾರ್ ಮಂಜ ಇವರನ್ನು ಬ್ರಾಹ್ಮಣ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.) ರಾಜ್ಯ ಉಪಾಧ್ಯಕ್ಷರನ್ನಾಗಿ ಅಧ್ಯಕ್ಷರಾದ ಎಸ್ ರಘುನಾಥ್ ಇವರು ಆಯ್ಕೆ ಮಾಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲ್ಲಾರು-ಮಜೂರು : ನಿವೃತ್ತ ತಹಸೀಲ್ದಾರ್ ಪಿ ಬಾಬು ರವರಿಗೆ ಬಿ.ಜೆ.ಎಂ ಮಸ್ಜಿದ್ ಕಮಿಟಿಯಿಂದ ಸನ್ಮಾನ

Posted On: 08-06-2025 03:18PM

ಕಾಪು : ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಮಸ್ಜಿದ್ ಆಡಳಿತ ಕಚೇರಿಗೆ ನಿವೃತ್ತ ತಹಶೀಲ್ದಾರ್ ಪಿ ಬಾಬು ಭೇಟಿ ನೀಡಿದರು.

ಈ ಸಂದರ್ಭ ಮಸ್ಜಿದ್ ಕಮಿಟಿ ವತಿಯಿಂದ ಮಸ್ಜಿದ್ ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಅವರು, ಪಿ ಬಾಬು ರವರು ತಹಸೀಲ್ದಾರ್ ಆಗಿ ಉತ್ತಮ ಕೆಲಸ ಮಾಡಿ ಜನ ಸಾಮಾನ್ಯರ ಮೆಚ್ಚುಗೆ ಪಡೆದವರು. ನಮ್ಮ ಊರಿನವರು ಎಂಬ ಹೆಗ್ಗಳಿಕೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ರಝಕ್ ಕೊಪ್ಪಲ್ ತೋಟ, ರಝಕ್ ಮಲ್ಲಾರು, ಇಮ್ರಾನ್ ಮಜೂರು ರಝಕ್ ಕೊಪ್ಪ, ಶಂಶು ರಝಕ್ ಕರಂದಾಡಿ, ಉಮ್ಮರ್ ಗಾರ್ಡನ್ ಸಿಟಿ, ರಝಕ್ ಕೊಪ್ಪ ,ಅಬ್ದುಲ್ ರೆಹಮಾನ್, ರಜಬ್ ಕರಂದಾಡಿ, ಹಸನಬ್ಬ ಗುಡ್ಡೆಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ ಸಿ.ಎ.ಸೊಸೈಟಿಯ ಹೆಜಮಾಡಿ ಶಾಖಾ ಕಟ್ಟಡದಲ್ಲಿ ನೂತನ ಸಭಾಂಗಣ ಉದ್ಘಾಟನೆ

Posted On: 08-06-2025 03:11PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಹೆಜಮಾಡಿ ಶಾಖಾ ಕಟ್ಟಡದಲ್ಲಿರುವ 'ಎಚ್. ನಾರಾಯಣ' ನೂತನ ಸಭಾಂಗಣವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಗಣ್ಯರು ಭಾನುವಾರ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಹಕಾರಿ ರಂಗದ ತತ್ವದಂತೆ ಕಾರ್ಯನಿರ್ವಹಿಸುತ್ತಿರುವ ಪಡುಬಿದ್ರಿ ಸಿ.ಎ.ಸೊಸೈಟಿ ಕಾರ್ಯ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ. ಸರಕಾರಿ ಬ್ಯಾಂಕುಗಳಿಗಿಂತ ಸಹಕಾರಿ ಸೊಸೈಟಿಗಳಿಂದ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ ಎಂದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ವಿದ್ಯೆ, ಆರೋಗ್ಯ, ಸಾಮಾಜಿಕ ಒಳಿತನ್ನು ಮಾಡುವ ದೃಷ್ಟಿಯಲ್ಲಿ ನಮ್ಮ ಜವಾಬ್ದಾರಿ ಎಂಬಂತೆ ಪಡುಬಿದ್ರಿ ಸಿ.ಎ. ಸೊಸೈಟಿ ಜನಸೇವೆ ಮಾಡುತ್ತಿದೆ ಎಂದರು.

ಸನ್ಮಾನ : ದೈನಿಕ ಠೇವಣಿ ಸಂಗ್ರಹಕಾರರಾಗಿರುವ ವಿಠ್ಠಲ ದೇವಾಡಿಗ ಮತ್ತು ಗೋಪಾಲ ದೇವಾಡಿಗ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ರ‌್ಯಾಂಕ್ ಪಡೆದ ಭೂಮಿಕಾ ಎಚ್.ಪುತ್ರನ್, ಸೊಸೈಟಿ ವ್ಯಾಪ್ತಿಯ ಶೇ. 95 ಕ್ಕಿಂತ ಅಧಿಕ ಅಂಕ ಗಳಿಸಿದ ರಿಷಿಕಾ ಕಿಶೋರ್, ಪ್ರಣವ್ ಪೂಜಾರಿ, ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು ಗೌರವಿಸಲಾಯಿತು. ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ನಿವೃತ್ತ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಭಟ್, ಶಕುಂತಳಾರವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕ ಬಿ. ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಲ್ಲಿ, ಹೆಜಮಾಡಿ ಅಲ್-ಅಝರ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಶೇಖಬ್ಬ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಹೆಜಮಾಡಿ ಗ್ರಾ.ಪಂ.ಅಧ್ಯಕ್ಷೆ ರೇಶ್ಮಾ ಮೆಂಡನ್, ಹೆಜಮಾಡಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್ ಸುವರ್ಣ, ಪಡುಬಿದ್ರಿ ಸಿ.ಎ ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭ ಎಚ್ ಪುತ್ರನ್, ಪ್ರಭಾರ ಶಾಖಾ ವ್ಯವಸ್ಥಾಪಕಿ ಕೀರ್ತಿ, ಸೊಸೈಟಿ ನಿರ್ದೇಶಕರುಗಳು ಉಪಸ್ಥಿತರಿದ್ದರು. ವೈ.ಸುಧೀರ್ ಕುಮಾರ್ ಸ್ವಾಗತಿಸಿ, ವೀಕ್ಷಿತ ನಿರೂಪಿಸಿ, ಗುರುರಾಜ್ ಪೂಜಾರಿ ವಂದಿಸಿದರು.

ಕಾಪು : ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ

Posted On: 07-06-2025 01:31PM

ಕಾಪು : ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತಿದ್ದು ಮಾದಕ ದ್ರವ್ಯ ವಿರುದ್ಧದ ಅಭಿಯಾನಗಳು ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ತಿಳಿಸಿದರು. ಅವರು ಸಿರಾಜುಲ್ ಹುದಾ ಮದರಸ ಮಜೂರು -ಮಲ್ಲಾರು ಇದರ ವಿದ್ಯಾರ್ಥಿಗಳು ಸುನ್ನಿ ಬಾಲ ಸಂಘ ಇದರ ಅಧೀನದಲ್ಲಿ ನಡೆಸಿದ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ಮಜೂರ- ಮಲ್ಲಾರು ದಫ್ ಸಮಿತಿ ಯಂಗ್ಮೆನ್ಸ್ ಸಮಿತಿ, ಸ್ವಲಾತ್ ಸಮಿತಿ ಉತ್ತಮ ಕೆಲಸ ಮಾಡಿ ಜನ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಮಾತ್ ಕತಿಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದುರುಗಳು ಜಮಅತ್ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.