Updated News From Kaup
ಕಾಪು : ಮುಟ್ಲಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Posted On: 15-08-2025 01:08PM
ಕಾಪು : ಮುಟ್ಲಪಾಡಿ ಹಳೆ ವಿದ್ಯಾರ್ಥಿಗಳು, ಅಂಗನವಾಡಿ ಕೇಂದ್ರ ಮುಟ್ಲಪಾಡಿ ಹಾಗೂ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕಡಂಬು ಮಟ್ಟಾರ್ ಆಶ್ರಯದಲ್ಲಿ ಮುಟ್ಲಪಾಡಿ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಹಿರಿಯರಾದ ಸುಶೀಲ ಪೂಜಾರ್ತಿ, ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮಂಜುನಾಥ್ ಆಚಾರ್ಯ, ಅಂಗನವಾಡಿ ಶಿಕ್ಷಕಿ ನಿಶ್ಮಾ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಟ್ಲಪಾಡಿ ಶಾಲೆಯ ಹಳೆವಿದ್ಯಾರ್ಥಿಗಳು, ಶಾಲೆಯ ಮಕ್ಕಳು, ವಿಶ್ವಕರ್ಮ ಸಮಾಜ ಸೇವಾ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.
ಶಿರ್ವ : ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ - 79 ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2025 01:01PM
ಶಿರ್ವ : ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ ಇದರ ಆಶ್ರಯದಲ್ಲಿ ನಡೆದ 79 ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ ಇದರ ಗೌರವಾಧ್ಯಕ್ಷರಾದ ಮಾಧವ ಕಾಮತ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾಮ ಪಂಚಾಯತ್ ಗ್ರಾಮಾಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ನಾಗರಿಕ ಸೇವಾ ಸಮಿತಿ ಬಂಟಕಲ್ ಇದರ ಅಧ್ಯಕ್ಷರಾದ ಕೆ ಆರ್ ಪಾಟ್ಕರ್, ಬಂಟಕಲ್ ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಉಪಸ್ಥಿತರಿದ್ದರು.
ಉಮೇಶ್ ಪ್ರಭು ಸ್ವಾಗತಿಸಿದರು. ದಿವಾಕರ್ ಶೆಟ್ಟಿ ವಂದಿಸಿದರು. ಗೋಪಾಲ್ ದೇವಾಡಿಗ ನಿರೂಪಿಸಿದರು.
ಕಾಪು ತಾಲೂಕು ಆಡಳಿತದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2025 12:49PM
ಕಾಪು : ಸ್ವಾತಂತ್ರ್ಯ ದಿನವು ಮಳೆ ಚಳಿ ಬಿಸಿಲನ್ನು ಲೆಕ್ಕಿಸದೆ ಸ್ವಾತಂತ್ರ್ಯದ ಗುರಿಯನ್ನು ಇರಿಸಿ ನಮ್ಮನೆಲ್ಲ ಸ್ವತಂತ್ರರನ್ನಾಗಿಸಿ ಆತ್ಮಾರ್ಪಣೆ ಮಾಡಿದ ಹೋರಾಟಗಾರರನ್ನು ನೆನಪಿಸುವ ದಿನ. ಸ್ವಾತಂತ್ರ್ಯವೆಂದರೆ ಬೆಚ್ಚನೆಯ ಅನುಭೂತಿ. ಭಾರತ ಆತ್ಮನಿರ್ಭರದೊಂದಿಗೆ ಸ್ವಾವಲಂಬನೆಯತ್ತ ಸಾಗುತ್ತಿದೆ. ಭಾರತ ಜಗದ್ಗುರುವಾಗಲಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಕಾಪು ತಾಲೂಕು ಆಡಳಿತದ ವತಿಯಿಂದ ಜರಗಿದ 79ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗಣ್ಯರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಮಾತನಾಡಿ, ಭಾರತ ಬೆಳಕಿನ ಕಣಜವಾಗಿದೆ. ಸುವರ್ಣ ದಿನ ಸ್ವಾತಂತ್ರ್ಯ ದಿನವಾಗಿದೆ. ವೈಚಾರಿಕ ವೈಜ್ಞಾನಿಕ ಭಾರತವಾಗಬೇಕಿದೆ. ಮೌಲ್ಯಗಳನ್ನು ಇರಿಸಿ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಇಂದಿಗೂ ಮಹಿಳೆಯರು ಆತಂಕದಲ್ಲಿದ್ದು ನಿರ್ಭೀತಿಯಿಂದ ಇರಬೇಕಾಗಿದೆ. ಭಾರತದ ಅಖಂಡತೆ ತೋರಿಸಲು ನಾವೆಲ್ಲರೂ ಪಣತೊಡೋಣ ಎಂದು ಹೇಳಿದರು.

ಸನ್ಮಾನ : ದೈವ ಪಾಡ್ದನ ಹಾಡುಗಾರ್ತಿ ಲಿಂಗು ಪಾಣಾರ, ಸಮಾಜ ಸೇವಕ ಗೋಪಾಲ ಪೂಜಾರಿ, ಪಾಕ ಶಾಸ್ತ್ರಜ್ಞ ಗುರುರಾಜ್ ರಾವ್, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವಿನ್ನಿ ಗೋನ್ಸವಾಲ್ ರನ್ನು ಸನ್ಮಾನಿಸಲಾಯಿತು. ಕಾಪು ತಾಲೂಕಿನ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಯಿಂದ ಹಕ್ಕುಪತ್ರಗಳ ವಿತರಣೆಯನ್ನು ಕಾಪು ಶಾಸಕರು ವಿತರಿಸಿದರು.
ಪೋಲಿಸ್, ಸೇವಾದಳ, ಸ್ಕೌಟ್ಸ್ ಗೈಡ್, ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಮಾಜಿ ಶಾಸಕ ಲಾಲಾಜಿಆರ್. ಮಂಡನ್, ಕಾಪು ಪುಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಕಾಪು ತಾಲೂಕು ಸಿಇಒ ಜೇಮ್ಸ್ ಡಿಸಿಲ್ವ, ಕಾಪು ಪುರಸಭಾಧಿಕಾರಿ ನಾಗರಾಜ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಗಾಂವ್ಕಂರ್, ಕ.ಸಾ.ಪ.ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಸಮಾಜ ಸೇವಕ ಗೋಪಾಲ ಪೂಜಾರಿ, ಪುರಸಭಾ ಸದಸ್ಯರು, ಕಾಪು ತಾಲೂಕಿನ ವಿವಿಧ ಠಾಣೆಗಳ ಠಾಣಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಯುವಜನ ಮತ್ತು ಕ್ರೀಡಾ ಇಲಾಖೆಯ ತಾಲೂಕು ಅಧಿಕಾರಿ ರಿತೇಶ್ ಕುಮಾರ್ ಸ್ವಾಗತಿಸಿದರು. ಪಿ.ಡಿ.ಒ ಶ್ರೀನಿವಾಸ ವಂದಿಸಿದರು.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಆಟಿಡೊಂಜಿ ದಿನ

Posted On: 14-08-2025 03:02PM
ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಕುಟುಂಬ ಸದಸ್ಯರೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮವು ಟೌನ್ ಹಾಲ್ ಉಡುಪಿಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಈಜುಪಟು, ಲಯನ್ಸ್ ಕ್ಲಬ್ ಅಂಬಲಪಾಡಿಯ ಸಕ್ರಿಯ ಸದಸ್ಯ ಲಯನ್ ಗಂಗಾಧರ್ ಜಿ. ಆಟಿದ ಮಹತ್ವದ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರತಿಯೊಬ್ಬ ಸದಸ್ಯರಿಗೂ ಗಿಡ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನ ಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಕ್ಯಾಬಿನೆಟ್ ಸದಸ್ಯರಾದ ಲ. ಜೋನ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷರಾದ ಲ. ರೋನಾಲ್ಡ್ ರೆಬೆಲ್ಲೋ, ಸ್ಥಾಪಕ ಅಧ್ಯಕ್ಷರಾದ ಲ. ಹೆನ್ರಿ ಡಿಸೋಜಾ, ಕಾರ್ಯದರ್ಶಿ ಲ. ಎಡ್ವಿನ್ ಲುವಿಸ್, ಕೋಶಾಧಿಕಾರಿ ಲ. ಆಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.
ಅಧ್ಯಕ್ಷ ಲ. ಜೆರಾಲ್ಡ್ ಪಿರೇರ ಸ್ವಾಗತಿಸಿದರು. ಲ. ಉಮೇಶ್ ವಂದಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಪಡುಬಿದ್ರಿ ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ : ನೂತನ ಕಾರ್ಯಕಾರಿ ಸಮಿತಿ ಆಯ್ಕೆ

Posted On: 14-08-2025 02:55PM
ಪಡುಬಿದ್ರಿ : ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಬ್ರಹ್ಮಸ್ಥಾನ ರಸ್ತೆ ಪಡುಬಿದ್ರಿ ಇದರ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗೆ 35 ಸದಸ್ಯರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಶಶಿಕಾಂತ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಕೋಟ್ಯಾನ್ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಬಿ ದಯಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಯತೀಶ್ ದೇವಾಡಿಗ, ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕೆ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ರವೀಂದ್ರ ಸಾಲ್ಯಾನ್ ಆಯ್ಕೆಯಾದರು.
ನೂತನ ಅಧ್ಯಕ್ಷರಾದ ಶಶಿಕಾಂತ ಪಡುಬಿದ್ರಿ ಇವರು ಮುಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳಿಗೆ ಸರ್ವರ ಸಹಕಾರವನ್ನು ಬಯಸಿದರು. ದೈವಸ್ಥಾನದ ಅರ್ಚಕರಾದ ಸುರೇಶ್ ಪಡುಬಿದ್ರಿ, ಗುರಿಕಾರರಾದ ವಾಮನ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರವಿರಾಜ್ ಕೋಟ್ಯಾನ್ ಸ್ವಾಗತಿಸಿ, ಗತ ಸಭೆಯ ವರದಿ ವಾಚಿಸಿದರು. ಜೊತೆ ಕೋಶಾಧಿಕಾರಿ ರವೀಂದ್ರ ಸಾಲ್ಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ನಿಖಿಲ್ ಪೂಜಾರಿ ವಂದಿಸಿದರು.
ಆ.15 : ಪಿ.ವಿ.ಆಚಾರ್ಯ ಜನ್ಮಶತಾಬ್ದ ಆಚರಣೆ

Posted On: 14-08-2025 02:07PM
ಪಡುಬಿದ್ರಿ : ಶಿಕ್ಷಕ - ಶಿಕ್ಷಣ ಸಂಸ್ಥೆ ಹಾಗೂ ದೇವಾಲಯ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ಸ್ಥಾಪಿಸಿದ ಪಡುಬಿದ್ರಿಯ ವೆಂಕಟ್ರಮಣಾಚಾರ್ಯ ಅವರ ಜನ್ಮ ಶತಾಬ್ದ ಕಾರ್ಯಕ್ರಮವು ಆ.15 ರಂದು ಪೂರ್ವಾಹ್ಮ 11 ಗಂಟೆಗೆ ಪಡುಬಿದ್ರಿಯ ಗಣಪತಿ ಪ್ರೌಢ ಶಾಲೆಯ ವಿಬುಧೇಶ ತೀರ್ಥ ಸಭಾಭವನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ "ಆಚಾರ್ಯಂ ಪ್ರಣಮಾಮಃ" ಸ್ಮರಣೆಯ ಸಂಪುಟವು ಅನಾವರಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶತಮಾನೋತ್ಸವದ ಸಂಭ್ರಮದಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ.ಶಾಲೆ.

Posted On: 11-08-2025 06:16PM
ಶಿರ್ವ : ಊರಿಗೊಂದು ದೇವಾಲಯ ಮತ್ತು ವಿದ್ಯಾಲಯ ಮನುಷ್ಯನ ಬದುಕಿನ ಸಂಸ್ಕಾರ ಕೇಂದ್ರಗಳಾಗಿವೆ. ಜನ್ಮ ನೀಡಿದ ತಾಯಿ ತಂದೆಯ ಋಣ, ಬಾಲ್ಯದ ಶಿಕ್ಷಣ ನೀಡಿದ ಶಾಲೆ ಹಾಗೂ ಗುರುಗಳ ಋಣ ಇದೆ. ನಮ್ಮ ಬದುಕನ್ನು ರೂಪಿಸಲು ಸ್ವಾತಂತ್ರ್ಯ ಹಾಗೂ ಭದ್ರ ಬುನಾದಿ ಹಾಕಿದ ಜ್ಞಾನದೇಗುಲವೇ ಪ್ರಾಥಮಿಕ ಶಾಲೆ, ಈ ವಿದ್ಯಾಲಯದ ಶತಮಾನೋತ್ಸವದ ಹೊಸ್ತಿಲ್ಲಿ ಋಣ ಮುಕ್ತರಾಗಲು ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಹಳೆವಿದ್ಯಾರ್ಥಿಗಳೇ ಶಾಲೆಯ ಆಸ್ತಿ, ಶಾಲಾ ಶತಮಾನೋತ್ಸವವು ಹಬ್ಬದ ರೀತಿಯಲ್ಲಿ ಆಚರಣೆ ಆಗಬೇಕು ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನುಡಿದರು. ಅವರು ರವಿವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ, ಶಾಲಾ ಶತಮಾನೋತ್ಸವ ದ ವರ್ಷಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಶತಮಾನೋತ್ಸವ ಮನವಿ ಪತ್ರ ಬಿಡುಗಡೆ ಮತ್ತು ಶಾಲೆಗೆ ನೂತನ ವಾಹನ ಹಸ್ತಾಂತರ ಪ್ರಕ್ರಿಯೆಯನ್ನು ಶಾಲಾ ಸಂಚಾಲಕ ರಾಮದಾಸ್ ಪ್ರಭು ಹಾಗೂ ಮುಖ್ಯ ಶಿಕ್ಷಕಿ ಸಂಗೀತ ಆರ್.ಪಾಟ್ಕರ್ ಇವರಿಗೆ ವಾಹನದ ಕೀ ಹಸ್ತಾಂತರಿಸಿ ಮಾತನಾಡಿದರು.
ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಇವರು ದೀಪ ಪ್ರಜ್ವಲನದ ಮೂಲಕ ಶತಮಾನೋತ್ಸವ ವೇದಿಕೆಯನ್ನು ಅನಾವರಣಗೊಳಿಸಿ ಶತಮಾನೋತ್ಸವ ಸಮಿತಿಗೆ ಅಭಿನಂದಿಸಿ ಶುಭ ಹಾರೈಸಿದರು. ಪಾಂಬೂರು ಹೋಲಿಕ್ರಾಸ್ ಚರ್ಚ್ನ ಧರ್ಮಗುರುಗಳಾದ ರೆ.ಫಾ. ರೋಶನ್ ಡಿಸೋಜ ಇವರು ಶತಮಾನೋತ್ಸವ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಶುಭ ಕೋರಿದರು. ಶಾಲಾ ಹಳೆವಿದ್ಯಾರ್ಥಿ ಮಾನಿಪಾಡಿ ರತ್ನಾಕರ ಶೆಟ್ಟಿ ನೂತನ ಶಾಲಾ ಪೀಠೋಪಕರಣಗಳಾದ ಹಸ್ತಾಂತರಿಸಿ ಹಿಂದಿನ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ ಶುಭ ಕೋರಿದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪೂಜಾರಿ ಇವರು ಶಾಲಾ ಆವರಣದಲ್ಲಿ ಕರುವಿನೊಂದಿಗಿನ ಕಾಮಧೇನು ಪ್ರತಿಮೆ ಅನಾವರಣ ಮಾಡಿದರು. ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕ್ಕಣ್ಣಾಯ ವಿದ್ಯಾರ್ಥಿಗಳಿಗೆ ಗುರುಚೀಟಿ ವಿತರಿಸಿ ಶುಭ ಕೋರಿದರು. ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂ.ಮೌಲ್ಯದ ನಿರಖುಠೇವಣಿ ಪತ್ರ ನೀಡಿ ಶುಭ ಕೋರಿದರು. ಕಟಪಾಡಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಳದ 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸದ ಪ್ರಯುಕ್ತ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಶಾಲೆಯ ಹಿರಿಯ ವಿದ್ಯಾರ್ಥಿ 89ರ ಹರೆದ ನಿವೃತ್ತ ಮುಖ್ಯ ಶಿಕ್ಷಕ ಕೋಡುಗುಡ್ಡೆ ನಾರಾಯಣ ಪ್ರಭು ಸಹಿತ 75 ವರ್ಷ ದಾಟಿದ ಹಳೆವಿದ್ಯಾರ್ಥಿಗಳನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಸಮಿತಿಯ ಪದಾಧಿಕಾರಿಗಳಾದ ಭಾಸ್ಕರ ಶೆಟ್ಟಿ ಸಡಂಬೈಲು, ರಾಮಚಂದ್ರ ನಾಯಕ್ ಪಡುಬೆಳ್ಳೆ, ಲೂವಿಸ್ ಮಾರ್ಟಿಸ್ ಬಂಟಕಲ್ಲು, ಎಸ್.ಎಸ್.ಪ್ರಸಾದ್, ದಾಮೋದರ ಆಚಾರ್ಯ, ಅನಂತರಾಮ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ದಿನೇಶ್ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಪಾಟ್ಕರ್ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಆಚಾರ್ಯ ಪ್ರಾರ್ಥಿಸಿದರು. ಅಂಗನವಾಡಿ ಶಿಕ್ಷಕಿ ವಿನಯಾ ವಂದಿಸಿದರು.
ಚೆಸ್ ಸ್ಪರ್ಧೆ : ಇನ್ನಂಜೆ ಎಸ್ ವಿ ಎಸ್ ಶಾಲೆಯ ವಿದ್ಯಾರ್ಥಿ ಶ್ರೀಪಾದ ರಾಜ್ಯಮಟ್ಟಕ್ಕೆ ಆಯ್ಕೆ
.jpg)
Posted On: 10-08-2025 10:02PM
ಕಾಪು : ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಇನ್ನಂಜೆ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶ್ರೀಪಾದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾಡಳಿತ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕಾಪು : ಮಂಡೇಡಿ ಶ್ರೀದೇವಿ ಭಜನಾ ಮಂಡಳಿ - ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ

Posted On: 10-08-2025 09:59PM
ಕಾಪು : ಮಂಡೇಡಿ ಶ್ರೀದೇವಿ ಭಜನಾ ಮಂಡಳಿ ವತಿಯಿಂದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆಯು ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಮಂಡೇಡಿ ಗ್ರಾಮದ ದೇರೆಕ್ಯಾರ್ ಮನೆ ದಿ. ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಪುತ್ರ ದಯಾನಂದ ವಿ. ಶೆಟ್ಟಿಯವರ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೆ ಪೋತ್ಸಾಹ ಧನ ನೀಡಿ ಗೌರವಿಸಲಾಯಿತು. ಹಾಗೂ ಅವರು ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಅನ್ನಪ್ರಸಾದ ಸೇವೆ ನೀಡಿದರು.
ಈ ಸಂದರ್ಭದಲ್ಲಿ ಊರ ಹಿರಿಯರು, ಗಣ್ಯರು, ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಡುಬಿದ್ರಿ ಬಂಟರ ಭವನದಲ್ಲಿ ಆಟಿದ ಗೌಜಿ ಕಾರ್ಯಕ್ರಮ

Posted On: 10-08-2025 09:41PM
ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಪಡುಬಿದ್ರಿ, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಆಯೋಜನೆಯಲ್ಲಿ ಆಟಿದ ಗೌಜಿ ಕಾರ್ಯಕ್ರಮ ಪಡುಬಿದ್ರಿ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ, ಯಕ್ಷಗಾನ ಕಲಾವಿದೆ ಎಕ್ಕಾರು ದಯಾಮಣಿ ಸುಧಾಕರ ಶೆಟ್ಟಿ ಮಾತನಾಡಿ, ಆಟಿ ಅನಿಷ್ಟದ ತಿಂಗಳು ಅಲ್ಲ. ಆರೋಗ್ಯಪೂರ್ಣ ತಿಂಗಳು. ನಮ್ಮ ಪರಂಪರೆ ಋಷಿ ಮತ್ತು ಕೃಷಿ ಪರಂಪರೆಯಿಂದ ಮುಂದುವರೆದಿದೆ. ಮನಸಿನ ಹಸಿವು ತಣಿಸಿದರೆ ಸಾಲದು ಜ್ಞಾನದ ಹಸಿವನ್ನು ನೀಗಿಸುವುದು ಮುಖ್ಯ. ಸಾಗುವಳಿಯನ್ನು ಕಟ್ಟಿಕೊಂಡು ನಮ್ಮ ಭೂಮಿ ಬೇರೆಯವರ ಪಾಲಾದರೂ ಸಾಧಿಸುವ ಛಲದ ಬಂಟರು ನಾವಾದೆವು ಎಂದು ಹೇಳಿದರು. ಬಂಟ್ಸ್ ವೆಲ್ಫೇರ್ ಪಡುಬಿದ್ರಿ ಅಧ್ಯಕ್ಷರು, ಜಾನಪದ ವಿದ್ವಾಂಸ ಡಾ| ವೈ. ಎನ್. ಶೆಟ್ಟಿ ಮಾತನಾಡಿ, ಆಟಿ ಆಷಾಢವಲ್ಲ. ಆಟಿ ತುಳುವರ ಆಟಿ. ಆಟಿ ಭೂಮಿಗೆ ಚೇತನವಾಗಿ ಮಳೆಯಿಂದ ಜಲ ಸಂಗ್ರಹದ ಸಮಯ. ಆಟಿ ಒಂದು ದಿನದ ಕಾರ್ಯಕ್ರಮವಲ್ಲ ಎಂದು ಹೇಳಿದರು.
ಕೃಷಿಕ ಶಿವರಾಮ ಶೆಟ್ಟಿ ಮತ್ತು ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ವಹಿಸಿದ್ದರು.
ವೇದಿಕೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಶ್ಮಿತಾ ಎಮ್ ಶೆಟ್ಟಿ, ಕೋಶಾಧಿಕಾರಿ ಲತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿ ಕಳೆಂಜ, ಕಂಗೀಲು ನೃತ್ಯದ ಜೊತೆಗೆ ಸುಮಾರು 20 ಕ್ಕೂ ಅಧಿಕ ಬಗೆಯ ಆಟಿ ಖಾದ್ಯಗಳನ್ನು ಉಣಬಡಿಸಲಾಯಿತು.