Updated News From Kaup
ಪಡುಬಿದ್ರಿ : ನೂರ್ ಹುದಾ ಮದ್ರಸ ಮಕ್ಕಳ ಕಲಾ ಉತ್ಸವ

Posted On: 07-09-2025 11:01PM
ಪಡುಬಿದ್ರಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರಾನಿಯಾ ಹುದಾ ಮದ್ರಸ ಪಡುಬಿದ್ರಿ – ದೀನ್ ಸ್ಟ್ರೀಟ್, ಮಿಸ್ಕ್ – ಎ - ಮದೀನಾ ವತಿಯಿಂದ 2025ನೇ ಸಾಲಿನ ವಿದ್ಯಾರ್ಥಿಗಳ ಕಲಾ ಉತ್ಸವವು ಭಾನುವಾರ ಪಡುಬಿದ್ರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನೂರಾನಿಯಾ ಜುಮ್ಮಾ ಮಸೀದಿಯ ಮೌಲಾನಾ ಅಬ್ದುಲ್ ಕುದ್ದೂಸ್ ಉದ್ಘಾಟಿಸಿದರು. ಜುಮ್ಮಾ ಮಸೀದಿಯ ಖತೀಬ್ ಎಸ್.ಎಂ. ಅಬ್ದುಲ್ ರಹ್ಮಾನ್ ಮದನಿ ಉಸ್ತಾದ್ ದುವಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷರಾದ ಪಿ.ಕೆ. ಮೋಹಿದೀನ್ ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಬುಡನ್ ಶೈಖ್, ಜುಮಾ ಮಸೀದಿ ಕಂಚಿನಡ್ಕ ಖತೀಬ್ ಅಬ್ದುಲ್ ಲತೀಫ್ ಮದನಿ, ಸದರ್ ಉಸ್ತಾದ್ ಅಶ್ರಫ್ ಸಅದಿ, ಮಾಜಿ ಅಧ್ಯಕ್ಷ ರಾದ ಅಬ್ದುಲ್ ರಹ್ಮಾನ್, ಜುಮಾ ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೋಶಾಧಿಕಾರಿ ಎ.ಹೆಚ್. ಮೊಹಮ್ಮದ್, ಸದಸ್ಯರಾದ ಅಕ್ಬರ್, ಬಾಶ ಬೆಂಗ್ರೆ, ಎಂ.ಎಸ್ ಶಾಫಿ , ಮೈಯದಿ, ಇಸ್ಮಾಯಿಲ್, ಹಂಝ, ನಜ಼ೀರ್, ಮುಸ್ತಕ್ ಮತ್ತಿತರರು ವಿದ್ಯಾರ್ಥಿಗಳನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಕಲಾ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸ್ಪರ್ಧೆಗಳು ಜರಗಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅವರಾಲು ಮಟ್ಟುವಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣೆ

Posted On: 07-09-2025 09:06PM
ಪಡುಬಿದ್ರಿ : ಶ್ರೀ ನಾರಾಯಣಗುರು ಸೇವಾ ಸಮಿತಿ ಅವರಾಲು ಮಟ್ಟು ನೇತೃತ್ವದಲ್ಲಿ ಅವರಾಲು ಮಟ್ಟು ನಾರಾಯಣ ಪೂಜಾರಿ ಇವರ ಮನೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿಯನ್ನು ಆಚರಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭ ಅವರಾಲು ಮಟ್ಟುವಿನ ಬಿಲ್ಲವ ಸಮಾಜಕ್ಕಾಗಿ ಶ್ರಮಿಸಿದ ಕುಂದಾಪುರ ಮೆಜಿಸ್ಟ್ರೇಟ್ ಕೋಟ್೯ನಲ್ಲಿ ಶಿರಸ್ತೇದಾರ್ ಆಗಿದ್ದ ನಿವೃತ್ತ ಜೀವನ ನಡೆಸುತ್ತಿರುವ ಮದುಸೂದನ್ ಕೋಟ್ಯಾನ್ ರನ್ನು ಶ್ರೀ ನಾರಾಯಣಗುರು ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಾಳಿಕಾಂಬ ಮಹಿಳಾ ಮಂಡಳಿ ಕಡಂಬು ಮಟ್ಟಾರ್ - ಅಧ್ಯಕ್ಷರಾಗಿ ಜಯಶ್ರೀ ಶಿವಾನಂದ ಆಚಾರ್ಯ ಆಯ್ಕೆ

Posted On: 07-09-2025 10:58AM
ಕಾಪು : ಕಾಳಿಕಾಂಬ ಮಹಿಳಾ ಮಂಡಳಿ ಕಡಂಬು ಮಟ್ಟಾರ್ ಇದರ ವಾರ್ಷಿಕ ಸಭೆಯಲ್ಲಿ 2025-2026 ಸಾಲಿನ ನೂತನ ಅಧ್ಯಕ್ಷರಾಗಿ ಜಯಶ್ರೀ ಶಿವಾನಂದ ಆಚಾರ್ಯ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ವಿಶಾಲ ಅಚ್ಚುತ ಆಚಾರ್ಯ, ಕಾರ್ಯದರ್ಶಿಯಾಗಿ ವಾಣಿ ಜಯರಾಮ ಆಚಾರ್ಯ, ಕೋಶಾಧಿಕಾರಿಯಾಗಿ ಕಾಂಚನ ಶ್ರೀಧರ ಆಚಾರ್ಯ ಆಯ್ಕೆಯಾಗಿದ್ದಾರೆ.
ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Posted On: 03-09-2025 09:51AM
ಮೂಲ್ಕಿ: ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ಪ್ರತಿ ತಿಂಗಳ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮೂಲ್ಕಿ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಮಾತನಾಡಿ, “ಧಾರ್ಮಿಕ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧಕರನ್ನು ಗುರುತಿಸಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ” ಎಂದು ಹೇಳಿದರು. ಮೂಲ್ಕಿಯ ಏಕೈಕ ಪತ್ರಿಕೆಯಾದ ‘ಹೊಸ ಅಂಗಣ’, ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ. ಪತ್ರಿಕೆಯನ್ನ ನಡೆಸೋದು ಸುಲಭದ ಕೆಲಸವಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಸಾಹಿತ್ಯದ ಮೇಲೆ ತಮ್ಮ ಆಸಕ್ತಿಯನ್ನು ಇರಿಸಿಕೊಂಡು ಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು ಎಂದರು. ಹತ್ತು ವರ್ಷಗಳಿಂದ ಪತ್ರಿಕೆ ಹಲವಾರು ಹೊಸ ಲೇಖಕರಿಗೆ ಪ್ರೋತ್ಸಾಹ ನೀಡಿದೆ. ಮೂಲ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರು ಗುರುತಿಸದ ಸಾಧಕರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಸನ್ಮಾನ ಮಾಡುವ ಈ ಪ್ರಯತ್ನಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್ ಪ್ರಬಂಧಕ ವಿಠಲ್ ವಾಗ್ಲೆಯವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ, ಮೂಲ್ಕಿಯ ಜನಮನ ಗೆದ್ದಿರುವ ‘ಹೊಸ ಅಂಗಣ’ಕ್ಕೆ ತಮ್ಮ ಬ್ಯಾಂಕ್‌ನಿಂದ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು. ಸುಮಾರು 33 ವರ್ಷಗಳಿಂದ ದೈವ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಹಳೆಯಂಗಡಿಯ ಮೋಹನ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸದಾನಂದ, ಮುಂಬೈ ಮೊಗವೀರ ಪತ್ರಿಕೆಯ ಅಶೋಕ್ ಸುವರ್ಣ, ಚಿತ್ರಾಪು ಕೇಶವಾನಂದ ಸ್ವಾಮೀಜಿ, ಸತೀಶ್ ಕಿಲ್ಪಾಡಿ, ಸರೋಜಿನಿ ಸುವರ್ಣ, ಲ. ಪುಷ್ಪರಾಜ್ ಚೌಟ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಶೆಟ್ಟಿ, ವಕೀಲ ರವೀಶ್ ಕಾಮತ್, ಅಬ್ದುಲ್ ರಜಾಕ್, ಜಯ ಕುಮಾರ್ ಕುಬೆವೂರು, ಜಯರಾಮ್ ಬಿ.ಎಸ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ವಂದಿಸಿದರು. ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಸೆ.3 ರಿಂದ ಸೀರತ್ ಅಭಿಯಾನ

Posted On: 03-09-2025 09:45AM
ಕಾಪು : ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದರು, ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕದ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಶೀರ್ಷಿಕೆಯಡಿ ಸೆಪ್ಟೆಂಬರ್ 3 ರಿಂದ 14ರ ವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು.
ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಾಪು ವರ್ತುಲದಿಂದ ವಿಚಾರ ಗೋಷ್ಠಿ. ಚಹಾ ಕೂಟ, ಆಸ್ಪತ್ರೆ ಸಂದರ್ಶನ, ಹಣ್ಣು ಹಂಪಲು ವಿತರಣೆ, ವೃದ್ದಾಶ್ರಮ ಭೇಟಿ, ಅನಾಥಶ್ರಮ ಭೇಟಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವೈಯಕ್ತಿಕ ಮತ್ತು ತಂಡ್ಡ ಭೇಟಿ, ಫೋಲ್ಡರ್ಸ್ ವಿತರಣೆ, ವೈದ್ಯಕೀಯ ತಪಾಸಣಾ ಶಿಬಿರ ಇತ್ಯಾದಿ ಕಾರ್ಯಕ್ರಮಗಳು ಹಾಕಿ ಕೊಂಡ್ದಿದ್ದು ಅದನ್ನು ಈ ಅಭಿಯಾನದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಕಾಪು ವರ್ತುಲದ ಜಮಾ ಅತೆ ಇಸ್ಲಾಮೀ ಹಿಂದ್ ನ ಅಧ್ಯಕ್ಷರಾದ ಅನ್ವರ್ ಅಲಿ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರ ಭೇಟಿ

Posted On: 01-09-2025 10:55AM
ಕಾಪು : ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಉಮಾ ಶಂಕರ್ ಅವರು ಭಾನುವಾರ ಪತ್ನಿ ಮತ್ತು ಪುತ್ರನೊಂದಿಗೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇಲ್ಲಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನವನ್ನು ಪಡೆದರು.
ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದವನ್ನು ನೀಡಿದರು.
ದೇವಳದ ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವಿಸಲಾಯಿತು.
ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಅವರು ಜೀರ್ಣೋದ್ಧಾರ ನಡೆದು ಬಂದ ಹಾದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಯನ್ನು ನೀಡಿದರು.
ಬನ್ನಂಜೆಯ ನಾರಾಯಣಗುರು ವೃತ್ತ ತೆರವು ; ದಾರ್ಶನಿಕ ಪುರುಷರಿಗೆ ಮಾಡಿದ ಅಪಮಾನ - ರಘುಪತಿ ಭಟ್ ಖಂಡನೆ

Posted On: 31-08-2025 06:02PM
ಉಡುಪಿ : ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಉಡುಪಿ ಬನ್ನಂಜೆಯ ನಾರಾಯಣಗುರು ವೃತ್ತವನ್ನು ತೆರವುಗೊಳಿಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ನಾರಾಯಣ ಗುರು ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದ್ದು, ಇಲ್ಲಿದ್ದ ವೃತ್ತವನ್ನು ಪೊದೆಗಳಲ್ಲಿ ಬಿಸಾಡಿರುವುದು ಖಂಡನೀಯ. ಇದು ದಾರ್ಶನಿಕ ಮಹಾನ್ ಪುರುಷರಿಗೆ ಮಾಡಿದ ಮಹಾ ಅಪಮಾನವಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಶೇಷವಾಗಿ ಪ್ರಯತ್ನಿಸಿದ ಫಲವಾಗಿ ಬನ್ನಂಜೆ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ಪದನಾಮಕರಣ ಮಾಡಿ ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ವೃತ್ತ ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದವನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ನಾರಾಯಣ ಗುರುಗಳು ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಜಾತಿ ಪದ್ಧತಿಯ ಅನ್ಯಾಯಗಳ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಗೌರವದ ಪ್ರತೀಕವಾಗಿ ಬನ್ನಂಜೆ ವೃತ್ತವನ್ನು ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ನಿರ್ಣಯಿಸಲಾಗಿತ್ತು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬರುವ ವೃತ್ತ ಹಾಗೂ ಜಂಕ್ಷನ್ ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದನಾಮಕರಣ ಮಾಡುವ ಬಗ್ಗೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ತೀರ್ಮಾನ ಕೈಗೊಂಡು ಬಳಿಕ ಈ ಕುರಿತಾಗಿ ಸಾರ್ವಜನಿಕರ ಆಕ್ಷೇಪಣೆ ಹಾಗೂ ಶಾಂತಿ ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧೀಕ್ಷಕರ ವರದಿ ಕೇಳಲಾಗುತ್ತದೆ. ಈ ಎಲ್ಲಾ ವೃತ್ತ/ಜಂಕ್ಷನ್ ಗಳಿಗೆ ನಗರ ಸಭೆ ನಿರ್ಣಯಿಸಿ ತೀರ್ಮಾನಿಸಿದ ಹೆಸರುಗಳಿಗೆ ಯಾವುದೇ ಆಕ್ಷೇಪಣೆ ಇಲ್ಲದೆ ಇರುವ ಬಗ್ಗೆ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿ ಬಳಿಕ ನಾನು ಸರ್ಕಾರದ ಮಟ್ಟದಲ್ಲಿ ಹಂತ ಹಂತವಾಗಿ ವಿಶೇಷವಾಗಿ ಪ್ರಯತ್ನಿಸಿದ ಫಲವಾಗಿ 2022, ನವೆಂಬರ್ ರಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964 211ರ ಅನ್ವಯದಂತೆ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ, ಜಂಕ್ಷನ್ ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು. ಅದರಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ಸರ್ಕಲ್ ಗೆ "ನಾರಾಯಣಗುರು ವೃತ್ತ", ಕಲ್ಸಂಕ ವೃತ್ತಕ್ಕೆ "ಮಧ್ವಾಚಾರ್ಯ ವೃತ್ತ", ಡಯಾನಾ ಸರ್ಕಲ್ ಗೆ "ವಾದಿರಾಜ ವೃತ್ತ", ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಗೆ "ಕೋಟಿ - ಚೆನ್ನಯ್ಯ ವೃತ್ತ", ಬ್ರಹ್ಮಗಿರಿ ದೊಡ್ಡ ಸರ್ಕಲ್ ಗೆ "ಆಸ್ಕರ್ ಫೆರ್ನಾಂಡಿಸ್ ಸರ್ಕಲ್" ಹಾಗೂ ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ಮಧ್ಯದಲ್ಲಿರುವ ವೃತ್ತಕ್ಕೆ "ಶ್ರೀರಾಮ ವೃತ್ತ" ಎಂದು ನಾಮಕರಣ ಮಾಡಲು ಆದೇಶಿಸಲಾಗಿತ್ತು.
ಸರ್ಕಾರದ ಆದೇಶದಂತೆ ಈ ಎಲ್ಲಾ ಸರ್ಕಲ್ ಗಳನ್ನು ನಗರ ಸಭೆಯಿಂದ ಸುಂದರವಾಗಿ ನಿರ್ಮಿಸುವ ಯೋಜನೆ ನನ್ನದಾಗಿತ್ತು. ಆದರೆ ಇದರಲ್ಲಿ ಈಗ ನಾರಾಯಣ ಗುರು ವೃತ್ತವನ್ನು ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ವೃತ್ತ ರಚಿಸಿದ್ದು ತಪ್ಪು. ಇದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದ್ದು, ತಪ್ಪು ಮಾಡಿದವರನ್ನು ತಕ್ಷಣದಲ್ಲಿ ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಬನ್ನಂಜೆ ವೃತ್ತದಲ್ಲಿ ನಗರ ಸಭೆ ವತಿಯಿಂದ ಸುಂದರವಾದ ನಾರಾಯಣ ಗುರು ವೃತ್ತ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನಾನು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ನಾರಾಯಣಗುರುಗಳಿಗೆ ಅವಮಾನ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ಖಂಡನೆ

Posted On: 31-08-2025 03:57PM
ಉಡುಪಿ : ಇಲ್ಲಿನ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಬನ್ನಂಜೆ ವೃತ್ತದಿಂದ ಕಿತ್ತು ಬಿಸಾಕಿ, ಉಡುಪಿ ನಗರ ಸಂಚಾರಿ ಠಾಣೆಯ ಪಾಲುಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಿದ್ದು, ಶ್ರೀ ನಾರಾಯಣ ಗುರುಗಳ ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತವನ್ನು ರಚಿಸಿದ್ದು ಇದು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ, ಇದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ತೀವ್ರವಾಗಿ ಖಂಡಿಸಿದೆ.
ಸ್ಥಳೀಯ ಜಿಲ್ಲಾಡಳಿತ ತಕ್ಷಣ ಹೆಚ್ಚೆತ್ತು ಸ್ಪಷ್ಟನೆಯನ್ನು ಕೊಡಬೇಕು ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಸ್ವಾಮಿಗಳ ಪಟ್ಟಾಭಿಷೇಕ ವರ್ಧಂತಿ ಉತ್ಸವ

Posted On: 29-08-2025 05:38PM
ಉಡುಪಿ : ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಸೆಪ್ಟೆಂಬರ್ 3, ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಉಡುಪಿ ರಾಮ ಸಮಿತಿಯ ಎಜುಕೇಶನಲ್ ಟ್ರಸ್ಟ್ ನ ಗೌರವ ಅಧ್ಯಕ್ಷರು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ರವರು ಈ ಪಟ್ಟಾಭಿಷೇಕ ವರ್ಧಂತಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಒಬೂ ಪೂಜಾರಿ ಹಾಗೂ ಬಿ. ಎಸ್. ನಾರಾಯಣ್ ಮತ್ತು ರಘುನಾಥ್ ಉಪಸ್ಥಿತರಿದ್ದರು.
ಎಬಿವಿಪಿ ಉಡುಪಿ : ನಿಟ್ಟೆ ಭಾಗದಲ್ಲಿ ಅಸಮರ್ಪಕ ಬಸ್ ವ್ಯವಸ್ಥೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Posted On: 29-08-2025 02:01PM
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ನಿಟ್ಟೆ ಭಾಗದಲ್ಲಿ ಅಸಮಪರ್ಕ ಬಸ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿಕೊಂಡು ಪ್ರಯಾಣಿಸುತ್ತಿದ್ದಾರೆ. ಈ ಮಾರ್ಗದಲ್ಲಿ ವಿಪರೀತವಾದ ಬಸ್ ಸಮಸ್ಯೆಯಿದ್ದು ಇದನ್ನು ತಕ್ಷಣದಲ್ಲಿ ಪರಿಹರಿಸುವ ಅವಶ್ಯಕತೆಯಿದೆ. ಪ್ರತಿನಿತ್ಯ ಬಸ್ಸಿನ ಫೂಟ್ ಬೋರ್ಡ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುತ್ತಿದ್ದು ಪರದಾಡುವಂತಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಮಂಜೂರಾಗಿದ್ದರು ಖಾಸಗಿ ಬಸ್ ಮಾಲೀಕರು ಹೂಡಿದ ದಾವೆಯಿಂದಾಗಿ ಅದೂ ಇಲ್ಲದಂತಾಗಿದೆ ಮತ್ತು ಖಾಸಗಿ ಬಸ್ ಗಳು ಅಗತ್ಯಕ್ಕೆ ಬೇಕಾದಷ್ಟು ಇಲ್ಲದೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಒಬ್ಬ ವಿದ್ಯಾರ್ಥಿ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುವ ವೇಳೆ ಕಾಲು ಜಾರಿ ಬಿದ್ದು, ಏನು ಹೆಚ್ಚಿನ ಅಪಾಯವಾಗದೆ ಇರುವುದು ನಾವು ಗಮನಿಸಬೇಕು. ಮತ್ತೊಮ್ಮೆ ದೊಡ್ಡ ಅಪಾಯ ಆಗುವ ಮುಂಚೆ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜನಿತ್ ಶೆಟ್ಟಿ ಎನ್ನುವ ವಿದ್ಯಾರ್ಥಿಯ ದುರ್ಮರಣದ ನಂತರ ಅನೇಕ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ ಪೊಲೀಸ್ ಇಲಾಖೆ ಬಸ್ಸುಗಳಲ್ಲಿ ಕಡ್ಡಾಯವಾಗಿ ಬಾಗಿಲನ್ನು ಅಳವಡಿಸಲು ಸೂಚಿಸುವುದಾಗಿ ತಿಳಿಸಿದ್ದರು ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ರೀತಿಯ ಪ್ರಯತ್ನ ನಡೆಯದೆ ಇರುವುದು ಶೋಚನೀಯ. ಹಾಗಾಗಿ ತಕ್ಷಣ ಈ ಸಂಬಂಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಈ ಸಂದರ್ಭದಲ್ಲಿ ವಿವಿಧ ಮಾರ್ಗಗಳಲ್ಲಿ ನಿಟ್ಟೆಗೆ ಸಂಪರ್ಕಿಸುವ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ, ವಿಶೇಷವಾಗಿ ಸರಕಾರಿ ಬಸ್ಸುಗಳನ್ನು ಸೇರಿಸುವುದು, ಬಸ್ಸಿನಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಕೊಂಡೊಯ್ಯದಂತೆ ನೋಡಿಕೊಳ್ಳುವುದು ಎಲ್ಲಾ ಬಸ್ಸುಗಳಲ್ಲಿ ಕಡ್ಡಾಯವಾಗಿ ಬಾಗಿಲನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಬಸ್ಸಿನ ವೇಗವನ್ನು ನಿಗ್ರಹದಲ್ಲಿ ಇಡಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.