Updated News From Kaup
ಕಾಪು : ಉದ್ಯಮಿ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡ ಸಖೇಂದ್ರ ಬಿ. ಸುವರ್ಣ ನಿಧನ
Posted On: 28 Jul 2026, 05:46 PM
ಕಾಪು: ಕಾಪುವಿನ ಹಿರಿಯ ಉದ್ಯಮಿ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡ ಸಖೇಂದ್ರ ಬಿ. ಸುವರ್ಣ (69) ಅವರು ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಸಖೇಂದ್ರ ಸುವರ್ಣ ಅವರು ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರಾಗಿ, ಕಾಪು ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಕಾಪುವಿನ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಉದ್ಯಾವರದ ರೇಷ್ಮಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕರಾಗಿದ್ದ ಅವರು, ವೈನ್ ಮರ್ಚಂಟ್ ಅಸೋಸಿಯೇಷನ್‌ನ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಜಕೀಯ, ಸಾಮಾಜಿಕ ಗಣ್ಯರು ಅಗಲಿದ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರರಾದ ಗಂಗಾಧರ ಸುವರ್ಣ, ಕಮಲಾಕ್ಷ ಸುವರ್ಣ ಸೇರಿದಂತೆ ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ 10 ಗಂಟೆಗೆ ಕಾಪುವಿನ ಸುವರ್ಣ ಕಾಂಪೌಂಡ್ ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ನಾರಾಯಣಗುರು ಪ್ರೌಢಶಾಲೆ ಪಡುಬೆಳ್ಳೆ : ಬೀಳ್ಕೊಡುಗೆ ಸಮಾರಂಭ
Posted On: 28 Jul 2026, 09:02 AM
ಕಾಪು : ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಪಡುಬೆಳ್ಳೆಯಲ್ಲಿ ಇಬ್ಬರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು.
ಮುಖ್ಯ ಶಿಕ್ಷಕಿ ಉಷಾ ಎಸ್ ಮತ್ತು ಸಹ ಶಿಕ್ಷಕಿ
ಅರುಂಧತಿ ಪ್ರಭು ಇವರನ್ನು ಚಿನ್ನದ ನಾಣ್ಯ, ಉಡುಗೊರೆಗಳೊಂದಿಗೆ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.
ಹರೀಶ್ ಶೆಟ್ಟಿ ಸೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಭಾಧ್ಯಕ್ಷತೆಯನ್ನು ಮುಂಬೈ ಬಿಲ್ಲವ ಅಸೋಸಿಯೇಷನ್ ಇದರ ಶಕುಂತಲಾ ಸುವರ್ಣ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಸಂತೋಷ್ ಸುವರ್ಣ, ಪ್ರಸಾದ್, ಸ್ಟೀಫನ್, ದಿನೇಶ್, ಸಂತೋಷ್, ಕೇದಾರನಾಥ, ವಿನುತ, ವಿಶಾಲಾಕ್ಷಿ, ರಿಚರ್ಡ್, ಶಾಲಾ ನಿವೃತ್ತ ಶಿಕ್ಷಕರು, ಶಾಲಾ ನಿರ್ವಾಹಕರು, ಶಿವಾಜಿ ಸುವರ್ಣ, ಶಿಕ್ಷಕರು ವಿದ್ಯಾರ್ಥಿಗಳು, ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು.
ನಿತ್ಯಾನಂದ ಆಚಾರ್ಯ ಸ್ವಾಗತಿಸಿದರು.
ಪಾಂಡುರಂಗ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶುಭಲಕ್ಷ್ಮಿ ಹಾಗೂ ಅಕ್ಷತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಮಂಜುನಾಥ್ ಪಾಟ್ಕರ್ ಹಾಗೂ ರಿಚರ್ಡ್ ಧಾಂತಿ ಶುಭಾಶಂಸನೆಗೈದರು. ಸುರೇಶ್ ನಾಯಕ್, ಹಾಗೂ ಗಣೇಶ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಧೀರಜ್ ವಂದಿಸಿದರು.
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ 2026-27 ನೇ ಸಾಲಿನ ಪದಪ್ರಧಾನ ಸಮಾರಂಭ
Posted On: 27 Jul 2026, 09:47 PM
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ 2026-27 ನೇ ಸಾಲಿನ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕಮಂಡಲ ವೇದಿಕೆಯಲ್ಲಿ ನೆರವೇರಿತು.
ಪದ ಪ್ರಧಾನ ಅಧಿಕಾರಿಯಾಗಿ ರೋಟರಿ ಶಂಕರಪುರದ ಅಧ್ಯಕ್ಷರಾದ ರೋ. ಪೌಲ್ ಕ್ವಾಡ್ರಸ್ ರವರು ನೂತನ ಅಧ್ಯಕ್ಷರಾದ ಆರ್‌ಸಿ ಮನೋಹರ್ ಪೂಜಾರಿ, ಕಾರ್ಯದರ್ಶಿ ಆರ್ ಸಿ ಸಿ ಜಗದೀಶ್ ಅಮೀನ್ ಇವರಿಗೆ ಅಧಿಕಾರ ಹಸ್ತಾಂತರಿಸಿ ಪ್ರಮಾಣ ವಚನಗೈದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರ್ ಸಿ ಸಿ ಸಭಾಪತಿ ರೋ. ಎಮ್ ಪಿ ಎಚ್ ಎಫ್ ಜಗನ್ನಾಥ್ ಕೋಟೆ, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಆರ್ಸಿಸಿ ರವಿ ಪ್ರಸಾದ್, ಪಾಸ್ಟ್ ಝೋನ್ 5 ರೋ. ಎಮ್ ಪಿ ಎಚ್‌ಎಫ್ ನವೀನ್ ಅಮೀನ್ ಶಂಕರಪುರ,
ರೋಟರಿ ಶಂಕರಪುರ ಕಾರ್ಯದರ್ಶಿ ರೋ. ಕ್ಲಿಫರ್ಡ್ ಡಿಮೆಲ್ಲೋ, ಇನ್ನಂಜೆ ಎಸ್ ವಿಎಚ್ ಶಾಲೆಯ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಪ್ರಭಾಕರ್ ಭಟ್, ಆರ್ ಸಿ ಸಿ ಇನ್ನಂಜೆಯ ಸಭಾಪತಿ ರೋ. ಮಾಲಿನಿ ಶೆಟ್ಟಿ, ಆರ್‌ಸಿಸಿ ಇನ್ನಂಜೆ ಯ ನಿಕಟಪೂರ್ವ ಅಧ್ಯಕ್ಷರಾದ ವಜ್ರೇಶ್ ಆಚಾರ್ಯ, ನಿಕಟ ಪೂರ್ವ ಕಾರ್ಯದರ್ಶಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಮಾಧ್ಯಮ ಶಿಕ್ಷಕರಾದ ಪ್ರಭಾಕರ್ ಭಟ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಲಾ ಬಿ ಮತ್ತು ಇನ್ನಂಜೆ ಎಸ್ ವಿ ಎಚ್ ಪ್ರೌಢಶಾಲೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕುಮಾರಿ ಸಾಧಿಕ ಇವರನ್ನು ಸನ್ಮಾನಿಸಲಾಯಿತು.
ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಜಿಲ್ಲೆ 3182ರ ಆರ್ ಸಿ ಸಿ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಆರ್ ಸಿ ಸಿ ರವಿಪ್ರಸಾದ್ ಮತ್ತು ಆರ್ ಸಿ ಸಿ ಜಿಲ್ಲಾ ಸಭಾಪತಿಯಾಗಿ ಆಯ್ಕೆಯಾದ ರೋ.ಎಮ್ ಪಿ ಎಚ್ ಎಫ್ ಜಗನ್ನಾಥ್ ಕೋಟೆ ಇವರಿಗೆ ಅಭಿನಂದನೆ ಸಮರ್ಪಿಸಲಾಯಿತು.
ಆರ್ ಸಿ ಸಿ ವಜ್ರೇಶ್ ಆಚಾರ್ಯ ಸ್ವಾಗತಿಸಿ, ಆರ್ ಸಿ ಸಿ ಜಗದೀಶ್ ಅಮಿನ್ ವಂದಿಸಿ, ಆರ್ ಸಿ ಸಿ ಶ್ರೀಕಲಾರವರು ನಿರೂಪಿಸಿದರು.
ಪಡುಕುತ್ಯಾರು : ಆಷಾಢ ಮಾಸದ ಆಚರಣೆ
Posted On: 27 Jul 2026, 09:33 PM
ಕಾಪು : ಶ್ರೀ ದುರ್ಗಾ ಮಹಿಳಾ ಮಂಡಳಿ, ಪಡುಕುತ್ಯಾರು ಮತ್ತು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಆಷಾಢ ಮಾಸದ ಆಚರಣೆಯನ್ನು ಶ್ರೀ ದುರ್ಗಾದೇವಿ ಮಂದಿರದಲ್ಲಿ ಆಚರಿಸಲಾಯಿತು.
ಪ್ರಥಮವಾಗಿ ಆಷಾಡ ಮಾಸದ ಆಚರಣೆಯ ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ದೀಕ್ಷಾ ಜಿತೇಶ್ ಆಚಾರ್ಯ, ವಿಶ್ವಕರ್ಮ ಸಮಾಜ ಸೇವಾಸಂಘದ ಅಧ್ಯಕ್ಷರಾದ ಸದಾಶಿವ ಎ ಆಚಾರ್ಯ, ಕೂಡುವಳಿಕೆಯ ಮೋಕ್ತೇಶರ್ರಾದ ಪ್ರವೀಣ್ ಆಚಾರ್ಯ, ಕಾರ್ಯಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರಾದ ಹರಿಶ್ಚಂದ್ರ ಆಚಾರ್ಯ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ದೀಕ್ಷಾ ಜಿತೇಶ್ ಆಚಾರ್ಯ ಮಾತನಾಡಿ, ತುಳುನಾಡಿನ ಸಂಸ್ಕೃತಿಯಂತೆ ವಿವಿಧ ಆಹಾರ ಖಾದ್ಯಗಳಲ್ಲಿ ಔಷಧೀಯ ಗುಣಗಳು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳು ಈ ವಿಚಾರವನ್ನು ತಿಳಿದುಕೊಂಡು ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಆರೋಗ್ಯ ಸಮಸ್ಯೆ ಬರುವುದಿಲ್ಲವೆಂದರು.
ಸಭೆಯಲ್ಲಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸಂಘದ ಪದಾಧಿಕಾರಿಗಳು, ಕೂಡುವಳಿಕೆಯ ಸದಸ್ಯರು, ಮಹಿಳೆಯರು, ಯುವಕರು, ಮಕ್ಕಳು ಭಾಗವಹಿಸಿದ್ದರು.
ಸುಮಾರು 22 ಬಗೆಯ ವಿವಿಧ ಖಾದ್ಯಗಳನ್ನು ಉಣ ಬಡಿಸಿದರು.
ವೇದಿಕೆಯಲ್ಲಿ ಹಿರಿಯರಾದ ಹರಿಶ್ಚಂದ್ರ ಆಚಾರ್ಯ, ಪ್ರವೀಣ್ ಆಚಾರ್ಯ, ಜಯರಾಮ ಆಚಾರ್ಯ ಕಾಪು , ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ಶಾಲಿನಿ ರತ್ನಾಕರ ಆಚಾರ್ಯ, ಹೇಮಾವತಿ ಪ್ರಕಾಶ್ ಆಚಾರ್ಯ, ಜಯಶ್ರೀ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.
ಸೌಮ್ಯ ದಿನೇಶ್ ಆಚಾರ್ಯ ಪ್ರಸ್ತಾವನೆಗೈದರು. ಸಂಘದ ಅಧ್ಯಕ್ಷರಾದ ಸದಾಶಿವ ಎ ಆಚಾರ್ಯರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಸೌಮ್ಯ ದಿನೇಶ್ ಆಚಾರ್ಯ ನಿರೂಪಿಸಿ, ಶಾಲಿನಿ ರತ್ನಾಕರ ಆಚಾರ್ಯರವರು ವಂದಿಸಿದರು.
ಇನ್ನಂಜೆ : ಎಸ್ ವಿ ಹೆಚ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಮಾರ್ಟ್ ಬೋರ್ಡ್ ಉದ್ಘಾಟನೆ
Posted On: 25 Jul 2026, 01:48 PM
ಕಾಪು : ಇನ್ನಂಜೆಯ ಎಸ್ ವಿ ಹೆಚ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಎಸ್ ವಿ ಹೆಚ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನ ಕುಮಾರ್ ಸ್ಮಾರ್ಟ್ ಬೋರ್ಡ್ ಉದ್ಘಾಟಿಸಿ ಮಾತನಾಡಿ, ಬದಲಾಗುತ್ತಿರುವ ಕಾಲ ಘಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹೊಸ ಹೊಸ ವಿಷಯಗಳನ್ನು ಕಲಿತು ಮುಂದುವರೆದಾಗ ಮಾತ್ರ ಪರಿಪೂರ್ಣತೆ ಸಾಧ್ಯ. ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲಾ ಕಡೆಯಿಂದ ಒಳ್ಳೆಯ ಜ್ಞಾನವನ್ನು ಪಡೆದು ಮುಂದುವರೆದಾಗ ಮಾತ್ರ ಪರಿಪೂರ್ಣತೆ ಸಾಧ್ಯ ಎಂದರು.
ಸ್ಮಾರ್ಟ್ ಬೋರ್ಡ್ ಗಳನ್ನು ನೀಡಿದ ವಿಜಯ ರಾಘವೇಂದ್ರ ಬೆಂಗಳೂರು ಇವರು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಬೋರ್ಡ್ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಪ್ರಾಚಾರ್ಯ ರಾಜೇಂದ್ರ ಪ್ರಭು ರವರು ಸ್ವಾಗತಿಸಿ, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಪು : ಉಚಿತ ಬಂಜೆತನ ತಪಾಸಣಾ ಶಿಬಿರ ಉದ್ಘಾಟನೆ
Posted On: 25 Jul 2026, 01:43 PM
ಕಾಪು : ಜೇಸಿಐ ಕಾಪು ಘಟಕ ಮತ್ತು ನೋವಾ ಐವಿಎಫ್ ಫರ್ಟಿಲಿಟಿ ಇವರ ಸಹಯೋಗದೊಂದಿಗೆ ಜು. 25ರಂದು ಕಾಪು ಜೇಸಿ ಭವನದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ ಜರುಗಿತು.
ಆರೋಗ್ಯ ತಜ್ಞೆ ಡಾ. ಮಧುರಾ ಬಿ. ಆರ್ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ನಿಕಟ ಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ನೋವಾ ಐವಿಎಫ್ ಫರ್ಟಿಲಿಟಿ ಸಿಬ್ಬಂದಿ ಹರ್ಷ ಕೆಮ್ಮಣ್ಣು, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷ ರಾಕೇಶ್ ಕುಂಜೂರು, ರಾಜೇಂದ್ರ ಬಿ ಕೆ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತಿ ಪುಷ್ಪ ಪ್ರಸಾದ್ ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ
Posted On: 23 Jul 2026, 12:48 PM
ಉಡುಪಿ : ಉಡುಪಿಯ ಖ್ಯಾತ ಸಾಹಿತಿ ಶ್ರೀಮತಿ ಪುಷ್ಪ ಪ್ರಸಾದ್ ಅವರು ಪ್ರತಿಷ್ಠಿತ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ.
ಮೂಲತಃ ಮಡಿಕೇರಿಯವರಾದ ಪುಷ್ಪ ಪ್ರಸಾದ್ ಅವರು ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಉಡುಪಿಯ ನ್ಯಾಯಾಲಯ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಸೇವೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿರುವ ಅವರು, ಹಲವಾರು ಸಾಹಿತ್ಯ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಅವರು ಉಡುಪಿ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷೆ, ಆಮಂತ್ರಣ ಉಡುಪಿ ಜಿಲ್ಲಾಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಸಾಹಿತ್ಯ ಕೃತಿಗಳಲ್ಲಿ 'ಒಸಗೆಯ ಎಸಳು', 'ಭಾವ ನೈವೇದ್ಯ', 'ಹೆಜ್ಜೆ ತಾಳದ ಗೆಜ್ಜೆ ಘಲಿರು', 'ನಕ್ಷತ್ರ ಪುಂಜ', 'ಪುಟಾಣಿ ಸ್ವರ್ಗ', 'ಸೃಷ್ಟಿಯ ತೋರಣ', 'ಗುಡಿಗಾರ', 'ದಿವ್ಯಾಕ್ಷರಿ' ಹಾಗೂ 'ಸುಖ ಧರೆ' ಪ್ರಮುಖವಾಗಿದ್ದು, ಕವನ, ಲೇಖನ, ನೀತಿಕಥೆ ಹಾಗೂ ನ್ಯಾನೋ ಕಥೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ಅನೇಕ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಇದಲ್ಲದೆ, ಅವರು ಪ್ರತಿಲಿಪಿ ವೇದಿಕೆಯ ಸಕ್ರಿಯ ಸಾಹಿತಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. ಫೇಸ್‌ಬುಕ್ ಮೂಲಕ ನಡೆಯುವ ಇಂಟರ್‌ನ್ಯಾಷನಲ್ ವುಮೆನ್ ಐಕಾನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ 'ಯಕ್ಷಲೋಕ' ಕವನವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವುದು ವಿಶೇಷ.
ಹಲವಾರು ಸಾಹಿತ್ಯ ಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿ, ಉಪನ್ಯಾಸಕಿ ಹಾಗೂ ನಿರೂಪಕಿಯಾಗಿ ಸೇವೆ ಸಲ್ಲಿಸಿರುವ ಪುಷ್ಪ ಪ್ರಸಾದ್ ಅವರಿಗೆ ದೊರೆತಿರುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಉಡುಪಿ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ.
ಉದ್ಯಾವರ : ನಿರಂತರ್ ಬಹುಭಾಷಾ ಸಿನಿಮಾ ಉತ್ಸವ - 2026 ರ ಪೋಸ್ಟರ್ ಬಿಡುಗಡೆ
Posted On: 23 Jul 2026, 11:46 AM
ಕಾಪು : ಕಲೆ, ಸಾಹಿತ್ಯ, ನಾಟಕ, ಸಂಗೀತ ಮತ್ತು ಸಿನಿಮಾಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿರಂತರ್ ಉದ್ಯಾವರ್ ನೇತೃತ್ವದಲ್ಲಿ ಜು. 31 ರಿಂದ ಆ.2ರವರೆಗೆ ನಡೆಯುವ ಮೂರು ದಿನದ 'ನಿರಂತರ್ ಬಹುಭಾಷಾ ಸಿನಿಮಾ ಉತ್ಸವ - 2026' ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬಲಾಯಿಪಾದೆ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉದ್ಯಾನವನದಲ್ಲಿ ನಡೆಯಿತು.
ವಿವಿಧ ಧರ್ಮದ ಸಾಮಾಜಿಕ ಮುಖಂಡರುಗಳು ಜಂಟಿಯಾಗಿ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಬಳಿಕ ಮಾತನಾಡಿದ ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ಜಿಲ್ಲೆ ಇದರ ಗೌರವಾಧ್ಯಕ್ಷ ಸದಾಶಿವ ಕಟ್ಟೆಗುಡ್ಡೆ, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಇಂತಹ ಸಿನಿಮಾಗಳು ಸಮಾಜದಲ್ಲಿ ಬದಲಾವಣೆ ಮತ್ತು ಹೊಸತನಕ್ಕೆ ಕಾರಣವಾಗುತ್ತಿದೆ. ಶ್ರೀ ನಾರಾಯಣ ಗುರುಗಳ ಚಿಂತನೆಯಂತೆ ಸಮಾಜ ಕಟ್ಟುವ ಪ್ರಯತ್ನದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಸಿನಿಮಾ ಉತ್ಸವಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫೆರ್ನಾಂಡಿಸ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ವ್ಯವಸ್ಥಾಪಕ ಜೀವನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಜೋನ್ ಗೋಮ್ಸ್, ಕೋಶಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.
ನಿರಂತರ್ ಉದ್ಯಾವರ ಅಧ್ಯಕ್ಷ ರೋಷನ್ ಕ್ರಾಸ್ಟೋ ಸ್ವಾಗತಿಸಿದರೆ, ರೊನಾಲ್ಡ್ ಡಿಸೋಜಾ ವಂದಿಸಿದರು. ನಿರಂತರ ಉದ್ಯಾವರದ ಸ್ಥಾಪಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಜು. 31ರಂದು ಶುಕ್ರವಾರ ಸೂತನ್ ಗೌಡ ರಚನೆ ಮತ್ತು ನಿರ್ದೇಶನದ ಕನ್ನಡ ಸಿನಿಮಾ ವಲವಾರ, ಅಗಸ್ಟ್ 1 ಶನಿವಾರ ಅನೀಶ್ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನದ ತುಳು ಸಿನಿಮಾ ದಸ್ಕತ್ ಮತ್ತು ಅಗಸ್ಟ್ 2 ರವಿವಾರ ಸ್ಟ್ಯಾನಿ ಬೆಳಾ ರಚನೆ ಮತ್ತು ನಿರ್ದೇಶನದ ಕೊಂಕಣಿ ಸಿನಿಮಾ ಬಾಪಾಚೆ ಪುತಾಚೆ ನಾಂವಿಂ ಪ್ರದರ್ಶನವಾಗಲಿದೆ. ಉದ್ಯಾವರ ಗುಡ್ಡೆಅಂಗಡಿಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿರುವ ಕ್ಸೇವಿಯರ್ ಸಭಾಭವನದಲ್ಲಿ ಪ್ರತಿದಿನ 6.30ಕ್ಕೆ ಈ ಸಿನಿಮಾಗಳು ಉಚಿತ ಪ್ರವೇಶದೊಂದಿಗೆ ನಡೆಯಲಿದೆ.
ಹೊಂಡ ಗುಂಡಿಗಳ ಇನ್ನಂಜೆ ಶಂಕರಪುರ ರಸ್ತೆ : ಸಂಚಾರಕ್ಕೆ ಸಂಕಷ್ಟಪಡುತ್ತಿರುವ ವಾಹನ ಸವಾರರು
Posted On: 23 Jul 2026, 11:44 AM
ಕಾಪು : ಉಡುಪಿ ಜಿಲ್ಲೆಯಲ್ಲಿ ಹಾಳಾಗಿರುವ ಬಹಳಷ್ಟು ರಸ್ತೆಗಳಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಇನ್ನಂಜೆ ಶಂಕರಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಗಿರುವ ಬೃಹತ್ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರರು ದಿನನಿತ್ಯ ಹರಸಾಹಸಪಡುತ್ತಿದ್ದು, ಸಾವಿನ ದವಡೆಯಲ್ಲಿ ಪ್ರಯಾಣಿಸುವಂತಾಗಿದೆ.
ಸರಿಸುಮಾರು 15ವರ್ಷಗಳ ಹಿಂದಿನ ಕಾಮಗಾರಿ ಇದಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆಪಡುವಂತಾಗಿದೆ, ಈ ಭಾಗಕ್ಕೆ ಹೊಸ ರಸ್ತೆಯ ಅಗತ್ಯವಿದ್ದು, ಜನಪ್ರತಿನಿದಿಗಳು, ಅಧಿಕಾರಿ ವರ್ಗ ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಂಟಕಲ್: ದ್ವಿ-ಹಸಿರು ಕಾರ್ಯಕ್ರಮಗಳ ಮೂಲಕ ವನಮಹೋತ್ಸವ–2026
Posted On: 23 Jul 2026, 11:40 AM
ಶಿರ್ವ : ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ.ರೋಡ್ ಹರಿತಿ ಧರಿತ್ರೀ, ಜೀವನೇ ಸರ್ವತ್ರ ಪ್ರೀತಿಃ - "ಹಸಿರು ಭೂಮಿ ಎಲ್ಲೆಡೆ ಪ್ರೀತಿ ಮತ್ತು ಸಂತೋಷವನ್ನು ಹರಡುತ್ತದೆ" ಎಂಬ ಧ್ಯೇಯದಡಿ ಜುಲೈ ತಿಂಗಳಲ್ಲಿ ಎರಡು ಅರ್ಥಪೂರ್ಣ ಹಸಿರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವನಮಹೋತ್ಸವ–2026 ಆಚರಿಸಿತು.
ವನಮಹೋತ್ಸವದ ಅಂಗವಾಗಿ ಮೊದಲ ಕಾರ್ಯಕ್ರಮವು ಜು. 5, ಭಾನುವಾರ, ಲಯನ್ ವಿಜಯ್ ಧೀರಜ್ ಅವರ ತೋಟದ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರು ಹಣ್ಣಿನ, ಹೂವಿನ ಹಾಗೂ ನೆರಳು ನೀಡುವ ವಿವಿಧ ಜಾತಿಯ ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ ಸ್ಯಾಮ್ಸನ್ ನೊರೊನ್ಹಾ ಅವರು ಮಾತನಾಡಿ, ಪರಿಸರದ ಸಮತೋಲನ ಕಾಪಾಡುವುದು, ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ವನಮಹೋತ್ಸವದ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬರೂ ವೃಕ್ಷಾರೋಪಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೆಟ್ಟ ಪ್ರತಿಯೊಂದು ಸಸಿಯನ್ನೂ ಪೋಷಿಸಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರ ನೆಡುವುದು ಮಾತ್ರವಲ್ಲದೆ ಅದನ್ನು ಪೋಷಿಸುವುದೇ ನಿಜವಾದ ಸೇವೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರು ನೆಟ್ಟ ಸಸಿಗಳನ್ನು ರಕ್ಷಿಸಿ ಬೆಳೆಸುವ ಸಂಕಲ್ಪವನ್ನು ಕೈಗೊಂಡರು.
ವನಮಹೋತ್ಸವದ ಆಚರಣೆಯ ಮುಂದುವರಿದ ಭಾಗವಾಗಿ ಜುಲೈ 18, ಶನಿವಾರ, ಸುಂದರ ಕುರ್ದಾಯಿ ಕೆರೆ ಪರಿಸರದಲ್ಲಿ "ಹರಿತಿ ಧರಿತ್ರೀ – ಜೀವನೇ ಸರ್ವತ್ರ ಪ್ರೀತಿಃ" ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದ ಅಂಗವಾಗಿ ಸದಸ್ಯರು ಕೆರೆಯ ಸುತ್ತಮುತ್ತ ಬಣ್ಣಬಣ್ಣದ ಕ್ರೋಟನ್ ಗಿಡಗಳನ್ನು ನೆಟ್ಟು, ಕೆರೆಯ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುವುದು, ಆಕರ್ಷಕ ಹಸಿರು ವಾತಾವರಣ ನಿರ್ಮಿಸುವುದು ಹಾಗೂ ಪರಿಸರ ಸ್ನೇಹಿ ಸಾರ್ವಜನಿಕ ಸ್ಥಳಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದರು. ಕೆರೆಯ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರು ಸ್ವಚ್ಛ ಹಾಗೂ ಹಸಿರು ಪರಿಸರದ ಬಗ್ಗೆ ಹೆಮ್ಮೆ ಮತ್ತು ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಜೆ.ಎಫ್. ಲಯನ್ ಫೆಲಿಕ್ಸ್ ಫೆರ್ನಾಂಡಿಸ್ ಅವರು ಪರಿಸರ ಸಂರಕ್ಷಣೆಯತ್ತ ಕ್ಲಬ್ ತೋರಿದ ಬದ್ಧತೆಯನ್ನು ಶ್ಲಾಘಿಸಿ, ಸಮಾಜಕ್ಕೆ ನೇರ ಪ್ರಯೋಜನವಾಗುವ ಅರ್ಥಪೂರ್ಣ ಯೋಜನೆಗಳನ್ನು ಆಯೋಜಿಸಿರುವುದಕ್ಕಾಗಿ ಸದಸ್ಯರನ್ನು ಅಭಿನಂದಿಸಿದರು. "ಹರಿತಿ ಧರಿತ್ರೀ – ಜೀವನೇ ಸರ್ವತ್ರ ಪ್ರೀತಿಃ" ಅಭಿಯಾನದ ಆಶಯವನ್ನು ವಿವರಿಸಿದ ಅವರು, ಹಸಿರು ಪರಿಸರವು ಆರೋಗ್ಯವಂತ ಹಾಗೂ ಸಂತೋಷಭರಿತ ಸಮಾಜ ನಿರ್ಮಾಣಕ್ಕೆ ಮೂಲಾಧಾರವಾಗುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಮ್ಮೆ ಒಂದು ಮರವನ್ನು ನೆಟ್ಟು ಅದನ್ನು ಪೋಷಿಸಬೇಕು ಎಂದು ಕರೆ ನೀಡಿದ ಅವರು, "ಇಂದು ಪ್ರಕೃತಿಯನ್ನು ರಕ್ಷಿಸುವುದೇ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯುತ್ತಮ ಉಡುಗೊರೆ" ಎಂದು ಹೇಳಿದರು.
ಅವರು ಹವಾಮಾನ ಬದಲಾವಣೆ, ಅರಣ್ಯ ನಾಶ ಹಾಗೂ ನೀರಿನ ಕೊರತೆಯಂತಹ ಸಮಸ್ಯೆಗಳು ಪರಿಸರ ಸಂರಕ್ಷಣೆಯ ಅಗತ್ಯವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ತಿಳಿಸಿದರು. ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಮರವನ್ನು ನೆಟ್ಟು ಅದರ ಆರೈಕೆ ಮಾಡಬೇಕು ಹಾಗೂ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮವು ಪರಿಸರ ಜಾಗೃತಿ ಅಭಿಯಾನವಾಗಿಯೂ ನಡೆಯಿತು. ಜೀವ ವೈವಿಧ್ಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ನೀರಿನ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸದಸ್ಯರು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಪರಿಸರ ಸಂರಕ್ಷಣೆಯಲ್ಲಿ ಸಣ್ಣ ಸಣ್ಣ ಕಾರ್ಯಗಳ ಮೂಲಕವೂ ಮಹತ್ತರ ಬದಲಾವಣೆ ತರಬಹುದು ಎಂದು ತಿಳಿಸಿದರು.
ಈ ಎರಡೂ ಕಾರ್ಯಕ್ರಮಗಳಲ್ಲಿ ಕ್ಲಬ್ ಅಧ್ಯಕ್ಷ ಲಯನ್ ಟೋನಿ ಮೊನಿಸ್, ಮುಖ್ಯ ಅತಿಥಿ ಎಂ.ಜೆ.ಎಫ್. ಲಯನ್ ಫೆಲಿಕ್ಸ್ ಫೆರ್ನಾಂಡಿಸ್, ಕಾರ್ಯದರ್ಶಿ ಲಯನ್ ಪೆಲ್ವಿನ್ ಕ್ವಾಡ್ರಸ್, ಖಜಾಂಚಿ ಲಯನ್ ಸ್ಯಾಮ್ಸನ್ ನೊರೊನ್ಹಾ, ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.
ಈ ಹಸಿರು ಉಪಕ್ರಮಗಳ ಮೂಲಕ ಲಯನ್ಸ್ ಕ್ಲಬ್ ಬಂಟಕಲ್ ಬಿ.ಸಿ.ರೋಡ್, ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಜಾಗತಿಕ ಪರಿಸರ ಸೇವಾ ಉದ್ದೇಶ (Global Cause – Environment)ಕ್ಕೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು. ಮಾನವೀಯ ಸೇವೆಯ ಜೊತೆಗೆ ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ಕೂಡ ಸಮಾಜ ಸೇವೆಯ ಅವಿಭಾಜ್ಯ ಅಂಗವಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮಗಳ ಮೂಲಕ ನೀಡಲಾಯಿತು.
"ನಾವು ಸೇವೆ ಸಲ್ಲಿಸುತ್ತೇವೆ • ನಾವು ನೆಡುತ್ತೇವೆ • ನಾವು ಬೆಳೆಸುತ್ತೇವೆ" ಎಂಬ ಪ್ರೇರಣಾದಾಯಕ ಸಂದೇಶದೊಂದಿಗೆ, ಪ್ರತಿಯೊಬ್ಬರೂ ಹಸಿರು ಚಳವಳಿಯಲ್ಲಿ ಭಾಗವಹಿಸುವಂತೆ ಕ್ಲಬ್ ಸಾರ್ವಜನಿಕರಿಗೆ ಕರೆ ನೀಡಿತು. "ಇಂದು ನೆಡುವ ಪ್ರತಿಯೊಂದು ಮರವು ನಾಳಿನ ಶುದ್ಧ ಗಾಳಿ, ಸಮೃದ್ಧ ಜೀವ ವೈವಿಧ್ಯ ಮತ್ತು ಆರೋಗ್ಯಕರ ಭವಿಷ್ಯದ ಭರವಸೆಯಾಗಿದೆ" ಎಂಬ ಸಂದೇಶದೊಂದಿಗೆ ವನಮಹೋತ್ಸವ–2026 ಕಾರ್ಯಕ್ರಮವು ಸಮೂಹ ಹಸಿರು ಪ್ರತಿಜ್ಞೆಯೊಂದಿಗೆ ಸಮಾರೋಪಗೊಂಡಿತು. ವರ್ಷಪೂರ್ತಿ ಇಂತಹ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ಹಸಿರು ಹಾಗೂ ಸುಸ್ಥಿರ ಭವಿಷ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಂಕಲ್ಪವನ್ನು ಸದಸ್ಯರು ವ್ಯಕ್ತಪಡಿಸಿದರು.
ವರದಿ : ಲಯನ್ ಸ್ಯಾಮ್ಸನ್ ನೊರೊನ್ಹಾ
ಚಿತ್ರಗಳು: ರಾಜೇಶ್ ಜೋಗಿ
