Updated News From Kaup
ದ್ವಿತೀಯ ಪಿ.ಯು.ಸಿ ಮರುಮೌಲ್ಯಮಾಪನ ಫಲಿತಾಂಶ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ, ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ‍್ಯಾಂಕ್
Posted On: 27 Apr 2024, 01:36 PM
ಕಾರ್ಕಳ : ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಇವರು ಉತ್ತರಕನ್ನಡದ ಹೊನ್ನಾವರದ ಜಗದೀಶ್ ರಾವ್ ಬಿ ಎಸ್ ಮತ್ತು ವಿನುತಾ ಭಟ್ ದಂಪತಿಗಳ ಸುಪುತ್ರಿ. ವಾಣಿಜ್ಯ ವಿಭಾಗದ ಭಕ್ತಿ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ರ‍್ಯಾಂಕ್, ವಿಜ್ಞಾನ ವಿಭಾಗದ ಸಾಗರ್ ಎಸ್. ಟಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಪಡುಬಿದ್ರಿ : ಕಾರಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ನಿಂತ ಲಾರಿ ; ಸಂಚಾರ ತೊಡಕು
Posted On: 27 Apr 2024, 01:28 PM
ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ನಿಂತ ಸರಕು ಸಾಗಾಣಿಕೆ ಲಾರಿ.ಸಂಚಾರ ತೊಡಕು. ಪಡುಬಿದ್ರಿ : ಉಡುಪಿಯಿಂದ ಮಂಗಳೂರು ಕಡೆಗೆ ಸರಕು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಕಳ ಕಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ನಿಂತ ಘಟನೆ ಸಂಭವಿಸಿದೆ. ಕಾರಿನಲ್ಲಿ ಆರು ಮಹಿಳಾ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.ಕಾರು ನುಜ್ಜುಗುಜ್ಜಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದಿಕೂರು : ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಮಹಿಳೆ ಮೃತ್ಯು
Posted On: 26 Apr 2024, 08:50 PM
ನಂದಿಕೂರು : ಮಂಗಳೂರಿನಿಂದ ಕಾರ್ಕಳ ಮಾಳದತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮೃತ ಮಹಿಳೆಯನ್ನು ಕಾವೂರಿನ ಸುಮಂಗಲಾ ಅಭ್ಯಂಕರ್(51) ಎಂದು ಗುರುತಿಸಲಾಗಿದೆ. ಉಪನಯನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ಕಾವೂರಿನ ತಮ್ಮ ನಿವಾಸದಿಂದ ತೆರಳುತ್ತಿದ್ದರು. ಪತಿ ಪುರುಷೋತ್ತಮ ಅಭ್ಯಂಕರ್(61) ಅವರು ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಹರಸಾಹಸಪಟ್ಟು ಸುಮಂಗಲಾ ಅವರನ್ನು ಹೊರತೆಗೆದಿದ್ದರೂ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು : ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ವಾಡ್೯ನಲ್ಲಿ ಬಿರುಸಿನ ಮತದಾನ
Posted On: 26 Apr 2024, 05:35 PM
ಕಾಪು : ಊರಿನ ಸಮಸ್ಯೆಗಳು ಪರಿಹಾರ ಕಾಣದೆ ಮತದಾನ ಬಹಿಷ್ಕಾರಕ್ಕೆ ನಿರ್ಣಯಿಸಿದ್ದ ಕಟ್ಟಿಂಗೇರಿ ನಿವಾಸಿಗಳು ಕೊನೆಗೆ ರಾಜಕೀಯ ನಾಯಕರ ಭರವಸೆಯಿಂದ ಮತದಾನ ಬಹಿಷ್ಕಾರ ಹಿಂಪಡೆದಿದ್ದು ಇಂದು ವಾರ್ಡ್ 1 ಬೂತ್ ನಂಬರ್ 104 ರಲ್ಲಿ ಮತದಾನ ಮಾಡಿದರು. ಈ ವಾರ್ಡ್ ನ ಮತದಾರರು ಅತೀ ಉತ್ಸಾಹದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಉದ್ಯಾವರ : ಹಿರಿಯ ದಂಪತಿಗಳಿಂದ ಮತದಾನ
Posted On: 26 Apr 2024, 03:29 PM
ಉದ್ಯಾವರ : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜಾ (98 ವರ್ಷ) ಮತ್ತು ಕ್ರಿಸ್ತಿನ್ ಡಿಸೋಜಾ (93 ವರ್ಷ) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು.
ಉಡುಪಿ -ಚಿಕ್ಕಮಗಳೂರು, ದ.ಕ ಕಾಂಗ್ರೆಸ್, ಬಿಜೆಪಿ ಲೋಕಸಭಾ ಅಭ್ಯರ್ಥಿಗಳಿಂದ ಮತದಾನ
Posted On: 26 Apr 2024, 03:23 PM
ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿಯವರು ಕುಂದಾಪುರದಲ್ಲಿ ಮತ ಚಲಾಯಿಸಿದ ಬಳಿಕ ಸೆಲ್ಫಿ ಪಾಯಿಂಟಿನಲ್ಲಿ ಫೋಟೋವನ್ನು ತೆಗೆಸಿಕೊಂಡರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮನೆ ಸಮೀಪದ ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 97ರಲ್ಲಿ ಸಹೋದರಿಯರಾದ ಸರೋಜಿನಿ ಹೆಗ್ಡೆ ಹಾಗೂ ಶಶಿಕಲಾ ಹೆಗ್ಡೆಯೊಂದಿಗೆ ಆಗಮಿಸಿ ಬೆಳಿಗ್ಗೆ 7 ಗಂಟೆಗೆ ಮತದಾನ ಮಾಡಿದರು. ದ.ಕ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮತದಾನ : ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಳಗ್ಗೆಯೇ ನಗರದ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ರಥಬೀದಿಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ತಾಯಿ - ತಂದೆಯರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಎಪ್ರಿಲ್ 27 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 'ಶ್ರೀರಾಮ ವೈಭವ' - ನೃತ್ಯರೂಪಕ
Posted On: 26 Apr 2024, 03:08 PM
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 25ರಿಂದ ಮೊದಲ್ಗೊಂಡು ಮೇ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ನಿಮಿತ್ತ ಎಪ್ರಿಲ್ 27, ಶನಿವಾರ ಶ್ರೀಮತಿ ಸ್ವಾತಿ ಕೃಷ್ಣಾನಂದ ಭಟ್, ಯಸ್ಯ ನಾಟ್ಯಾಲಯ, ಮುದರಂಗಡಿ ಇವರಿಂದ ಸಂಜೆ ಗಂಟೆ 6:30ರಿಂದ 'ಶ್ರೀರಾಮ ವೈಭವ' - ನೃತ್ಯರೂಪಕ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಎ.26 - 27 : ಶ್ರೀ ಧೂಮಾವತಿ ದೈವಸ್ಥಾನ ಮಲಂಗೋಲಿ ಕಳತ್ತೂರು - ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Posted On: 26 Apr 2024, 02:56 PM
ಕಾಪು : ತಾಲೂಕಿನ ಕಳತ್ತೂರು ಮಲಂಗೋಳಿ ಶ್ರೀ ಧೂಮವತಿ ದೈವಸ್ಥಾನದಲ್ಲಿ ನವೀಕೃತ ಗರ್ಭಗೃಹ ಸಮರ್ಪಣೆ, ಪುನಃ ಪ್ರತಿಷ್ಠೆ - ದೈವ ಸಂದರ್ಶನ, ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ದೈವಸ್ಥಾನದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮತದಾನ
Posted On: 26 Apr 2024, 02:38 PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಕಳತ್ತೂರು ವಾರ್ಡಿನ ಮತಗಟ್ಟೆ ಸಂಖ್ಯೆ 157 ರಲ್ಲಿ ಮತದಾನ ಮಾಡಿದರು.
ಎ.25 - ಮೇ9 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Posted On: 26 Apr 2024, 11:10 AM
ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದೊಂದಿಗೆ ಎಪ್ರಿಲ್ 25ರಿಂದ ಮೊದಲ್ಗೊಂಡು ಮೇ 9ರವರೆಗೆ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ – ಬಿಂಬ ಪುನಃಪ್ರತಿಷ್ಠೆ, 500 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಸಹಸ್ತ್ರ ನಾಲಿಕೇರ ಮಹಾಗಣಪತಿ ಯಾಗ, ಸಹಸ್ತ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಮನ್ಮಹಾರಥೋತ್ಸವ, ಮಹಾಅನ್ನಸಂತರ್ಪಣೆಯು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
