Updated News From Kaup
ನಾಳೆ : ಹಿಂದೂ ಜಾಗರಣ ವೇದಿಕೆ ಪೈಯ್ಯಾರು ಘಟಕ ವತಿಯಿಂದ ಗೋಪೂಜೆ ಹಾಗೂ ವಾಹನ ಪೂಜೆ

Posted On: 13-11-2023 07:09PM
ಕಾಪು : ಹಿಂದೂ ಜಾಗರಣ ವೇದಿಕೆ ಪೈಯ್ಯಾರು ಘಟಕ ಕಾಪು ತಾಲೂಕು ವತಿಯಿಂದ ಗೋಪೂಜೆ ಹಾಗೂ ವಾಹನ ಪೂಜೆಯು ನವೆಂಬರ್ 14, ಮಂಗಳವಾರದಂದು ಬೆಳಿಗ್ಗೆ 9.30 ರಿಂದ ಪೈಯ್ಯಾರು ಶಾಲೆ ಸಮೀಪ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಮಟ್ಟಾರು : 11 ನೇ ವರ್ಷದ ಸಾರ್ವಜನಿಕ ಗೋಪೂಜೆ, ವಾಹನ ಪೂಜೆ

Posted On: 13-11-2023 05:11PM
ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ 11 ನೇ ವರ್ಷದ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು.
ವಿಷ್ಣುಮೂರ್ತಿ ಉಪಾಧ್ಯಾಯರ ಮುಂದಾಳುತ್ವದಲ್ಲಿ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು. ನವೆಂಬರ್ 5 ರಂದು ಜರಗಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಅಧ್ಯಾಪಕರಾದ ಭಾಸ್ಕರ ಶೆಟ್ಟಿ ಬೆಳೆಂಜಾಲೆ ಸಭಾಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ, ಬಜರಂಗದಳ ಕಾಪು ಪ್ರಖಂಡ ಗೋರಕ್ಷಾ ಪ್ರಮುಖ್ ಅಭಿನಂದನ್ ಪಡುಬಿದ್ರಿ, ಶಿರ್ವ ವಲಯ ಸಂಚಾಲಕ ವಿಶ್ವನಾಥ ಆಚಾರ್ಯ, ವಿಶ್ವ ಹಿಂದು ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಕೋಶಾಧಿಕಾರಿ ಅಜಿತ್ ಪೂಜಾರಿ, ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಪ್ರಭು ಸ್ವಾಗತಿಸಿ, ವಂದಿಸಿದರು.
ಕಟಪಾಡಿ : ಯೋಗ ದೀಪಾವಳಿ ಸಂಪನ್ನ

Posted On: 13-11-2023 05:03PM
ಕಟಪಾಡಿ : ಇಲ್ಲಿನ ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ ವತಿಯಿಂದ ಕಟಪಾಡಿ ಇನ್ವೆಂಜರ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ವಿಶೇಷವಾಗಿ ಹಣತೆ ದೀಪಗಳೊಂದಿಗೆ ಯೋಗ ದೀಪಾವಳಿ ಕಾರ್ಯಕ್ರಮವನ್ನು ಕಟಪಾಡಿ ಮಹಿಳಾ ಮಂಡಲ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.
ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಸನಾತನ ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಾನ್ಯತೆ ನೀಡಲಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವಲ್ಲಿ ಬೆಳಕು ಎಷ್ಟು ಪ್ರಾಮುಖ್ಯವೋ ಆರೋಗ್ಯಕರ ಜೀವನ ಸಾಗಿಸುವಲ್ಲಿ ನಿರಂತರ ಯೋಗಾಭ್ಯಾಸ ಕೂಡಾ ಅತೀ ಅಗತ್ಯ ಎಂದರು.
ಪತಂಜಲಿ ಯೋಗ ಸಮಿತಿ ಕಟಪಾಡಿ ಕಕ್ಷೆಯ ಯೋಗಶಿಕ್ಷಕ ರಾಜೇಶ್ ಕಾಮತ್ ಅವರು ದೀಪದ ಬೆಳಕಿನೊಂದಿಗೆ ಮಹತ್ವದ ಯೋಗಾಸನಗಳನ್ನು ಕಲಿಸಿಕೊಟ್ಟರು. ಸಹಶಿಕ್ಷಕ ರಾಮಚಂದ್ರ ಪೈ, ಶಿಬಿರಾರ್ಥಿಗಳಾದ ಪ್ರದೀಪ್ ಆರ್. ಶೆಟ್ಟಿ, ಅನುಪಮ ಪೈ, ಅರುಂಧತಿ ಕಾಮತ್, ನಂದಿನಿ ಶೆಣೈ, ಸುಧೀಂದ್ರ ಶೆಟ್ಟಿ ಪಾಂಗಳ, ಪ್ರವೀಣ್ ಭಕ್ತ, ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ ಸೃಷ್ಠಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ರಂಗನಟ ನಾಗೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಪು : ಎಸ್.ಕೆ.ಪಿ.ಎ ವತಿಯಿಂದ ಗೋವುಗಳ ಪೂಜೆ, ಹಿಂಡಿ ವಿತರಣೆ

Posted On: 13-11-2023 12:59PM
ಕಾಪು : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಕಾಪು ವಲಯದ ವತಿಯಿಂದ ದೀಪಾವಳಿ ಪ್ರಯುಕ್ತ ಕಾಪು ಗೋ ಶಾಲೆಯಲ್ಲಿ ಗೋಪೂಜೆ ಆಚರಿಸಲಾಯಿತು.
ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಳದ ಸಮೀಪದ ಗೋಶಾಲೆಯ ಗೋಪಾಲಕೃಷ್ಣ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ, ಗೋವುಗಳಿಗೆ ಹಿಂಡಿ, ಫಲ, ದವಸ ಧಾನ್ಯಗಳನ್ನು ತಿನ್ನಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ, ಗೌರವಾಧ್ಯಕ್ಷ ಕರುಣಾಕರ ನಾಯಕ್, ಕಾರ್ಯದರ್ಶಿ ರಾಘವೇಂದ್ರ ಭಟ್, ಉಪಾಧ್ಯಕ್ಷ ಸಂತೋಷ್ ಕಾಪು, ಸತೀಶ್ ಅದಮಾರು, ಪೂರ್ವಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಐತಾಳ್, ಅನಂತರಾಜ್ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳು

Posted On: 13-11-2023 12:47PM
ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವಿದ್ಯಾನಗರ ಮುದರಂಗಡಿ ಹಾಗೂ ಊರಿನ ಸಹೃದಯಿ ದಾನಿಗಳ ಸಹಯೋಗದೊಂದಿಗೆ ದೀಪಾವಳಿಯಂದು ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ಸಾವಿತ್ರಿ ಆಚಾರ್ಯ ಮೈಕೋಡಿ ಇವರ ಮನೆಯ ಟಾಯ್ಲೆಟ್ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ಸಂಪೂರ್ಣವಾಗಿ ಪುನನಿರ್ಮಿಸಿ ಹಸ್ತಾಂತರಿಸಲಾಯಿತು.

ವಿದ್ಯಾನಗರದಲ್ಲಿ ಅಳವಡಿಸಿದ ರೋಡ್ ಮಿರರ್ ಉದ್ಘಾಟನೆ ಹಾಗೂ ಒಂದು ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು, ಒಂದು ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಮಂದಿರದ ಅರ್ಚಕರಾದ ಶ್ರೀಧರ ಆಚಾರ್ಯ, ಉದ್ಯಮಿಗಳಾದ ಗಂಗಾಧರ್ ಶೆಟ್ಟಿ ಮತ್ತು ವಿಶ್ವನಾಥ್ ಶೆಟ್ಟಿ, ಹರಿ ಎಚ್ ಮೈಕೋಡಿ, ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ್ ಭಂಡಾರಿ ಸ್ಥಳೀಯರಾದ ರಾಮ ಪೂಜಾರಿ ಹಾಗೂ ವಿದ್ಯಾ ನಗರ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಪು : ನಾಗಸ್ವರ ವಾದಕ ಜಲೀಲ್ ಸಾಹೇಬ್ ವಿಧಿವಶ

Posted On: 13-11-2023 10:09AM
ಕಾಪು : ಪರಿಸರದಲ್ಲಿ ಹೆಸರುವಾಸಿಯಾಗಿದ್ದ ನಾಗಸ್ವರ ವಾದಕ ಜಲೀಲ್ ಸಾಹೇಬ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕಾಪುವಿನ ಕೊಪ್ಪಲಂಗಡಿಯ ನಿವಾಸಿಯಾಗಿರುವ ಇವರು ಹಲವಾರು ದೈವಸ್ಥಾನ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಕ್ಕಳ ಕರ್ನಾಟಕ ರಾಜ್ಯೋತ್ಸವ-2023 ಬಾಲ ಪ್ರಶಸ್ತಿಗೆ ಅರ್ಜಿ ಆಹ್ವಾನ

Posted On: 13-11-2023 09:53AM
ಕಟಪಾಡಿ : ಇನ್ವೆಂಜರ್ ಫೌಂಡೇಷನ್ ಮಂಗಳೂರು, ಸೃಷ್ಠಿ ಫೌಂಡೇಶನ್ ಕಟಪಾಡಿ, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ವತಿಯಿಂದ ನೀಡಲಾಗುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿಗೆ ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
5ರಿಂದ 18ವರ್ಷದೊಳಗಿನ ಮಕ್ಕಳು ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಬಹುಮುಖ ಪ್ರತಿಭೆಗಳನ್ನು ಬಾಲಪ್ರಶಸ್ತಿಗೆ ಪರಿಗಣಿಸಲಾಗುವುದು. ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ,ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು ಅರ್ಜಿ ಸಲ್ಲಿಸಬಹುದು.
ಆಸಕ್ತರು ತಮ್ಮ ಸಾಧನೆಗಳ ಕುರಿತ ಸವಿವರ ಮಾಹಿತಿಯನ್ನು ಸೂಕ್ತ ಸ್ವಯಂ ದೃಢೀಕರಣ ಮಾಡಿ ಅರ್ಜಿ ಯನ್ನು ನ.25ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಕಾಮತ್ ಸರ್ವಿಸಸ್,ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲೆ ಎದುರು,ಹಳೇ ರಸ್ತೆ ಕಟಪಾಡಿ ಅಂಚೆ ಉಡುಪಿ ಜಿಲ್ಲೆ-574105 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕೆ.ನಾಗೇಶ್ ಕಾಮತ್ - 9886432197, ಪ್ರಕಾಶ ಸುವರ್ಣ ಕಟಪಾಡಿ - 9964019229.
ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಿ ಸೂಕ್ತ ವೇದಿಕೆ ಕಲ್ಪಿಸುವ ವಿನೂತನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಾಂತ್ಯಕ್ಕೆ ಆಯೋಜಿಸಲಾಗಿದೆ. ಇದೇ ವೇಳೆ ಗಾನಗಂಧರ್ವ ಎಸ್ ಪಿಬಿ ಸಂಗೀತೋತ್ಸವ ಹಾಗೂ ಮಕ್ಕಳಸ್ನೇಹಿ ಪತ್ರಕರ್ತ ಶೇಖರ್ ಅಜೆಕಾರ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ದೀಪದ ಹಬ್ಬ : ನಿಸರ್ಗ ನೀರೆಗೆ ನೀರಾಜನ ಬೆಳಗುವ ಮುನ್ನ....!

Posted On: 12-11-2023 10:43PM
ಕತ್ತಲಲ್ಲಿ ಬೆಳಕಿನ ವಿಜ್ರಂಭಣೆ. ಹೊಲ-ಗದ್ದೆಗಳಲ್ಲಿ ಸೊಡರ ಸೊಂಪು. ಧಾನ್ಯದ ರಾಶಿಗೆ ಮನದುಂಬಿದ ಮಂಗಳಾರತಿ. ಹಟ್ಟಿ-ಕೊಟ್ಟಿಗೆಗಳೆಲ್ಲ ದೀಪಮಯ. ದೈವ-ದೇವ ಸನ್ನಿಗಳಲ್ಲಿ ದೀಪಾರಾಧನೆ. ಬಯಲು ಬೆಳ್ಳಂಬೆಳಕಾಗಿದೆ; ಆಲಯಗಳಲ್ಲಿ ಆನಂದ ತುಂಬಿದೆ. ಭೂರಮೆಗೆ ಕೃತಜ್ಞತಾರ್ಪಣೆ. ಬಲೀಂದ್ರನಿಗೆ ’ಬಲಿ’ ಸಮರ್ಪಣೆ. ’ಪೊಲಿ’ ಎಂಬ ಆಶಯದ ಸಮೃದ್ಧಿಯನ್ನು ಬೇಡುತ್ತಾ ನೆರವೇರುವ ಆಚರಣೆ. ಇದು ದೀಪಾವಳಿ. ಎಲ್ಲ ಹಬ್ಬಗಳಿಗಿಂತಲೂ ಹೆಚ್ಚಿನ ಸಡಗರದಿಂದ, ಮುತುವರ್ಜಿಯಿಂದ, ಶ್ರದ್ಧೆಯಿಂದ ನಡೆಸಲ್ಪಡುವ ಈ ಪರ್ವ ನಿಜ ಅರ್ಥದ ಹಬ್ಬ, ಆದುದರಿಂದಲೆ ನಮಗಿದು ’ಪರ್ಬ'. ಮನೆ ತುಂಬಿರುತ್ತದೆ - ಕೃಷಿಯ ಶ್ರಮದ ಪ್ರತಿಫಲವಾಗಿ ಧಾನ್ಯ ರಾಶಿ ಬಿದ್ದಿದೆ. ಕೃಷಿ ಆಧರಿತ ಸಂಸ್ಕೃತಿಯಲ್ಲಿ ಭೂಮಿ, ಕೃಷಿ ಉತ್ಪನ್ನಗಳೇ ಪ್ರಧಾನ. ಆದುದರಿಂದ ಧಾನ್ಯ ದೇವತೆಗೆ ಆರಾಧನೆ. ನಿಸರ್ಗ ’ನೀರೆ’ಗೆ ನೀರಾಜನ. ಈ ನಡುವೆ ಪ್ರತಿದಿನವೂ ಹಬ್ಬದ ಸಮೃದ್ಧಿಯನ್ನು ಸ್ಥಾಪಿಸಿ ಪ್ರಜೆಗಳನ್ನು ಪಾಲಿಸಿದ್ದ ಪುರಾತನ ಭೂನಾಥ ಬಲೀಂದ್ರನನ್ನು ಕೃತಜ್ಞತಾ ಭಾವದೊಂದಿಗೆ ಸ್ಮರಿಸುವುದು. ಆತನಿಂದಲೇ ಪೊಲಿ (ಹೊಲಿ) ಎಂಬ ಅತಿಶಯ ಸಮೃದ್ಧಿಯನ್ನು ಬೇಡುವುದು ನಡೆದು ಬಂದ ಪದ್ಧತಿ. ಇದು ಶತಮಾನಗಳಿಂದ ಸಾಗಿಬಂದಿದೆ. ಈ ಶ್ರದ್ಧೆ ಪ್ರಾಚೀನ, ಈ ಆಚರಣೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಲಗುಂದದೆ, ಮೌಲ್ಯ ಕಳೆದುಕೊಳ್ಳದೆ ಆಚರಿಸಲ್ಪಡುತ್ತಿದೆ.
ಪರಮ ಧಾರ್ಮಿಕರು, ಆದರ್ಶ ಪುರುಷರು, ಜನತೆಯಲ್ಲಿ ಜನಾರ್ದನನ್ನು ಕಂಡ ಪುಣ್ಯಾತ್ಮರು ಇಲ್ಲಿ ರಾಜ್ಯವಾಳಿದ ಬಗ್ಗೆ ಪುರಾಣ ಹೇಳುತ್ತದೆ. ಇತಿಹಾಸ ವಿವರಿಸುತ್ತದೆ. ಆದರೆ ಪೂರ್ವದ ಬಲಿ ಚಕ್ರವರ್ತಿಯ ಅಸ್ತಿತ್ವ ಮಾತ್ರ ಸ್ಮರಣೀಯವಾಗುತ್ತದೆ. ಇದು ಬಲೀಂದ್ರನ ಪ್ರಜಾವತ್ಸಲ ಮನೋಧರ್ಮ. ನಡೆ-ನುಡಿ, ಆಚಾರ-ವಿಚಾರಗಳು, ಕೊಟ್ಟ ಮಾತಿಗೆ ತಪ್ಪದೆ ತನ್ನ ಸರ್ವಸ್ವವನ್ನೂ ದಾನಕೊಟ್ಟ ಸ್ಥಿರ ಮನಃಸ್ಥಿತಿಗಳು ಕಾರಣವಾಗಿ ಸ್ಥಾಯಿಯಾದ ಪುಣ್ಯ ಕೀರ್ತಿ ಇರಬೇಕು. ಮಣ್ಣಿನ - ಮಣ್ಣಿನ ಮಕ್ಕಳ - ತನ್ನ ನಡುವಿನ ಅವಿನಾಭಾವ ಸಂಬಂಧವನ್ನು ಮರೆಯಲಾರದಷ್ಟು ಗಾಢವಾಗಿ ಸ್ವೀಕರಿಸಿರುವ ಈ ಮಹನೀಯ ಮತ್ತೆ ಬರುತ್ತಿದ್ದಾನೆ, ದೀಪ ಹಚ್ಚೋಣ, ಬಲಿ ಅರ್ಪಿಸೋಣ, ’ಪೊಲಿ’ಯಾಚಿಸೋಣ. ಎಣ್ಣೆ ಸ್ನಾನ, ಮನೆ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವುದು. ಜಾನುವಾರುಗಳ ಮೈ ತೊಳೆದು ಅಲಂಕರಿಸುವುದು, ಕೃಷಿ ಉಪಕರಣಗಳನ್ನು ಶುಚಿಗೊಳಿಸುವುದು. ಧಾನ್ಯದ ರಾಶಿಗೆ ಪೂಜೆ ಸಲ್ಲಿಸಲು ಸಿದ್ಧತೆಗಳನ್ನು ಮಾಡುವುದು. ಸೊಡರು (ತುಡಾರ್) ಹಚ್ಚಲು ದೀಪದ ಕಂಬ-ಬಲಿಗೆ ಸೊಪ್ಪು, ಕಾಡುಹೂಗಳನ್ನು ಸಂಗ್ರಹಿಸುವುದು. ಹೊಸಬಟ್ಟೆ ತೊಟ್ಟು ಅಮಾವಾಸ್ಯೆಯ ಕತ್ತಲು ಆವರಿಸುವ ಸಮಯ ನಿರೀಕ್ಷಿಸುತ್ತಾ ದಿನ ಕಳೆಯುವ ದಿನ ದೀಪಾವಳಿ.
ದೀಪ ಹಚ್ಚುವ ಮೊದಲು : ಬಲೀಂದ್ರನನ್ನು ಕರೆಯಲು, ದೀಪ ಹಚ್ಚಲು, ಬಲಿ ಸಮರ್ಪಿಸಲು ಸಿದ್ಧತೆಗಳಾಗಿವೆ. ಆದರೆ ಸೂರ್ಯಾಸ್ತವಾಗಿಲ್ಲ, ಕೊಂಚ ಸಮಯಾವಕಾಶವಿದೆ. ...ಈಗ ಯೋಚಿಸೋಣ.... ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ನಂಬಿ ಬದುಕು ಕಟ್ಟಿದ ಮಾನವ ಲಕ್ಷಾಂತರ ವರ್ಷಗಳಿಂದ ಮುಂದುವರಿದು ಬರುತ್ತಲೇ ಇದ್ದಾನೆ. ಕಾಲ ಬದಲಾಗಿದೆ. ಆಧುನಿಕತೆ ನಮ್ಮನ್ನು ಆವರಿಸಿದೆ. ಅಭಿವೃದ್ಧಿಯ ಅನಿವಾರ್ಯತೆ ನಮ್ಮ ಮುಂದಿದೆ. ಈ ಎಲ್ಲವೂ ಹಿಂದೆಯೂ ನಡೆದಿದೆ. ಅಭಿವೃದ್ಧಿ ಸಾಧಿಸಲ್ಪಟ್ಟಿದೆ. ನಾವು ಸುಸಂಸ್ಕೃತರಾಗಿ ಬದುಕು ಬಾಳಿದ್ದೇವೆ. ಎಲ್ಲವೂ ಸರಿಯಾಗಿತ್ತು. ಏಕೆಂದರೆ ಒಂದು ಸಮತೋಲನವಿತ್ತು. ಕಾಡು-ನಾಡು-ನಗರ-ಹಳ್ಳಿಗಳ ಪ್ರಮಾಣ ಮನುಕುಲವನ್ನು ನಿಯಂತ್ರಿಸುತ್ತಿತ್ತು. ಪರಿಸರ ಪರಿಶುದ್ಧವಾಗಿತ್ತು. ಜೀವನಾಧಾರ ನದಿಗಳು ಸ್ವೇಚ್ಛೆಯಿಂದ ಹರಿಯುತ್ತಿದ್ದವು. ನದಿದಡದಲ್ಲಿ ನಾಗರಿಕತೆ ಬೆಳೆಯಿತು-ಸಂಸ್ಕೃತಿ ಮಡುಗಟ್ಟಿತು. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ಆತಂಕ ಉಂಟು ಮಾಡುತ್ತಿವೆ. ಪರಿಸರ ನಾಶ. ನಮ್ಮ ಮುಂದಿರುವ ಬಗೆಹರಿಸಲಾರದ ಸಮಸ್ಯೆ. ಶುದ್ಧ ಪರಿಸರಬೇಕೆನ್ನುವುದು ಹಕ್ಕು ಹೊರತು ಅಭಿವೃದ್ಧಿ ವಿರೋಧವಲ್ಲ. ಪ್ರಾಕೃತಿಕ ಸ್ವರೂಪ ಬದಲಾವಣೆ ಬೇಡ. ಏಕೆಂದರೆ ನೈಜತೆ ಬೇಕು ಎಂಬ ಪ್ರೀತಿ. ಒಟ್ಟಿನಲ್ಲಿ ಈ ಕಾಳಜಿ ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಯಥಾಸ್ಥಿತಿಯಲ್ಲಿ ಹಸ್ತಾಂತರಿಸಬೇಕೆಂಬ ಮಹದಾಸೆ. ಪ್ರಕೃತಿ-ಕೃಷಿ-ಸಂಸ್ಕೃತಿ ಈ ಮೂರನ್ನೂ ಆರಾಧಿಸುವ, ವಿವಿಧ ಪರಿಕಲ್ಪನೆಗಳೊಂದಿಗೆ ಸ್ವೀಕರಿಸಿರುವ ನಾವು ನಿಸರ್ಗದ ಮಡಿಲಲ್ಲೆ ನಿಸರ್ಗ ಸಹಜ ವಸ್ತುಗಳನ್ನು ಪಡೆಯುತ್ತಾ ಪೂಜೆ, ಆಚರಣೆಗಳನ್ನೂ ನಡೆಸುತ್ತೇವೆ. ಬಲೀಂದ್ರನ ಕಾಲದಲ್ಲಿ ಕೃಷಿ ಕಾಯಕ ಗಾಢವಾಗಿತ್ತು. ಸಮೃದ್ಧಿ ಇತ್ತು. ಆದರೆ ಇಂದು ಕೃಷಿ ಭೂಮಿ ಪರಿವರ್ತನೆಗೊಂಡಿವೆ. ಉದ್ಯಮಗಳು ಬೆಳೆದಿವೆ. ಕೃಷಿ ಭೂಮಿ ಕೃಶವಾಗಿದೆ. ಭೂಮಿ ಇದ್ದರೂ ಬೆಳೆ ಬೆಳೆಯುವ ಆಸಕ್ತಿ ಇಲ್ಲ. ಕೃಷಿ ಲಾಭದಾಯಕವಾಗಿಲ್ಲ ಎಂಬುದು ಒಂದು ಉತ್ತರವಿದೆ. ಏನಿದ್ದರೂ ಕೃಷಿಯೊಂದಿಗೆ ಕೃಷಿ ಸಂಸ್ಕೃತಿಯೂ ಕೃಶವಾಗುತ್ತಿದೆ ಎಂಬುದು ಸತ್ಯ ತಾನೆ?
ಹಾಗಿದ್ದರೆ ಇನ್ನೆಷ್ಟು ವರ್ಷ ಬಲೀಂದ್ರನ ಆಗಮನಕ್ಕೆ ಸಿದ್ಧರಾಗಬಹುದು, ಬಲೀಂದ್ರನಿಗೆ ಆತನು ಆಳಿದ ಸಮೃದ್ಧ ಭೂಮಿಯನ್ನು ತೋರಿಸಬಹುದು. ದೀಪ ಹಚ್ಚಲು ಕೃಷಿಭೂಮಿ ಬರಡು ನೆಲವಾಗುತ್ತದೆ. ಸೊಡರು ಹಚ್ಚಲು ಹಟ್ಟಿ-ಕೊಟ್ಟಿಗೆ ಇಲ್ಲವಾಗಬಹುದು. ಮಂಗಲಾರತಿ ಎತ್ತಲು ಭತ್ತದ ರಾಶಿಯೇ ಇಲ್ಲ. ಇಂತಹ ಸ್ಥಿತಿ ಸನ್ನಿಹಿತವಾಗುವ ದಿನ ಬರುತ್ತಿದೆ. ಬರಡು ನೆಲಕ್ಕೆ, ಧಾನ್ಯದ ರಾಶಿಯ ಸಮೃದ್ಧಿ ಇಲ್ಲದ ಮನೆಗೆ, ದನ-ಕರು-ಕೋಣ-ಎತ್ತುಗಳ ಸಾಕಣೆಗಳೇ ಇಲ್ಲದ ವಾಸ್ತವ್ಯಕ್ಕೆ ಬಲೀಂದ್ರನನ್ನು ಹೇಗೆ ಕರೆಯೋಣ. ಅಲ್ಪಸ್ವಲ್ಪ ಉಳಿಸಿರುವ ನಾವೇನೊ ಕರೆಯಬಹುದು, ನಮ್ಮ ಮುಂದಿನ ತಲೆ ಯಾರು ಬಲೀಂದ್ರನನ್ನು ಕರೆಯುವ ಕ್ರಮವನ್ನೇ ಮಾಡದಿರಬಹುದೋ ಏನೋ? ಸಜ್ಜನ, ಪುಣ್ಯಾತ್ಮ, ಮಳೆದೇವತೆ, ಬಂದು ಹೋಗುವ ದೇವರು ಎಂಬಿತ್ಯಾದಿ ಬಿರುದಾಂಕಿತ ಬಲಿಚಕ್ರವರ್ತಿಗೆ ಮನುಕುಲ ವಂಚಿಸಿದಂತಾಗದೆ....? ಕ್ಷಮಿಸು ಬಲೀಂದ್ರ. ಮಕ್ಕಳು ಸಿಡಿಸಿದ ಪಟಾಕಿಯೊಂದು ಆಲೋಚನಾ ಪರನಾಗಿದ್ದ ನನ್ನನ್ನೂ ಎಚ್ಚರಿಸಿದೆ. ವಾಸ್ತವದಲ್ಲಿ ಕಾಣುತ್ತಿರುವುದು ಎಲ್ಲೆಡೆ ದೀಪ ಬೆಳಗುತ್ತಿದೆ. ಬಲೀಂದ್ರನನ್ನು ಕರೆಯುತ್ತಾ ಜನ ಬಯಲಲ್ಲಿ ದೀಪಾರಾಧನೆ ನಿರತರಾಗಿದ್ದರೆ, ಪೂರ್ವದ ಸೊಗಡು, ಬಲ, ಸಂಭ್ರಮ, ತೀವ್ರತೆ ಇಲ್ಲವಾಗಿದೆ. ಎಲ್ಲೆಲ್ಲೂ ಇರಬೇಕಾದ್ದು ಅಲ್ಲಲ್ಲಿದೆ. ಓ....ಬಲೀಂದ್ರ ಎಂಬ ಕರೆಯೇ ಕ್ಷೀಣವಾಗುತ್ತಿದೆ. ಇದರೊಂದಿಗೆ ಕೃಷಿ ಆಧರಿಸಿ ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಒಂದು ಸಮೃದ್ಧ ಸಂಸ್ಕೃತಿ ತನ್ನ ಪ್ರಖರತೆಯನ್ನೂ ಕ್ರಮೇಣ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಈಗ..ಬುದ್ಧಿವಂತ ಮೊಮ್ಮಗ ಕೇಳುತ್ತಿದ್ದಾನೆ.... ಅಜ್ಜಾ....ಅಮಾವಾಸ್ಯೆಯ ಕತ್ತಲಲ್ಲಿ ಬೆಳಗುವ ಈ ಎಣ್ಣೆ ದೀಪದಲ್ಲಿ ಬಲೀಂದ್ರನಿಗೆ ಯಾವುದೂ ನಿಚ್ಛಳವಾಗಿ ಕಾಣದು ಅಲ್ಲವೇ....? ’ಓ ಬಲೀಂದ್ರ....ಬಲಿಗೆತೊಂದು ಪೊಲಿಕೊರ್ಲ. ಲೇಖನ : ಕೆ.ಎಲ್.ಕುಂಡಂತಾಯ
ಇನ್ನಂಜೆ : ನಿಸರ್ಗ ಫ್ರೆಂಡ್ಸ್ ಪಾದೆಕೆರೆ - ಗೂಡುದೀಪ

Posted On: 12-11-2023 06:11PM
ಇನ್ನಂಜೆ : ಎಲ್ಲೆಲ್ಲೂ ದೀಪದ ಹಬ್ಬ ದೀಪಾವಳಿಯ ಸಂಭ್ರಮ. ಅದರಲ್ಲೂ ಮನೆ, ಬೀದಿಗಳಲ್ಲಿ ಗೂಡುದೀಪಗಳನ್ನು ನೋಡುವುದೇ ಚಂದ.
ಕಳೆದ 12 ವರ್ಷಗಳಿಂದ ಗೂಡುದೀಪವನ್ನು ತಯಾರಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ ನಿಸರ್ಗ ಫ್ರೆಂಡ್ಸ್ (ರಿ.)ಪಾದೆಕೆರೆ, ಇನ್ನಂಜೆ ತಂಡ. ಈ ಬಾರಿಯೂ 8×5 ಫೀಟ್ ಮಾದರಿಯ ಗೂಡುದೀಪ ತಯಾರಿಸಿದ್ದಾರೆ.
ಪಲಿಮಾರು ಹೊೖಗೆ ಫ್ರೆಂಡ್ಸ್ ವತಿಯಿಂದ ಕಾರುಣ್ಯ ಆಶ್ರಮಕ್ಕೆ ದಿನಬಳಕೆಯ ವಸ್ತುಗಳ ವಿತರಣೆ

Posted On: 12-11-2023 06:01PM
ಕಟಪಾಡಿ : ದೀಪಾವಳಿ ಹಬ್ಬದ ಪ್ರಯುಕ್ತ ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಇವರು ಕಟಪಾಡಿಯ ಕಾರುಣ್ಯ ಆಶ್ರಮಕ್ಕೆ ದಿನಬಳಕೆಯ ವಸ್ತುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ , ಕಾರ್ಯದರ್ಶಿ ಸತೀಶ ಕುಮಾರ್, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ರಾಘವೇಂದ್ರ ಜೆ ಸುವರ್ಣ, ವಿಶು ಕುಮಾರ್, ರವಿ ದೇವಾಡಿಗ, ಶ್ರೀಜಿತ್, ಅಂಕಿತ್, ಅಭಿಷೇಕ್, ಸಿಂಚನ್ ಎಸ್ ಅಮೀನ್, ಆಶ್ರಮದ ಮೇಲ್ವಿಚಾರಕರಾದ ಪಿ. ಕುಮಾರ್ ಮತ್ತು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.