Updated News From Kaup
ಕಾರ್ಕಳ : ಜೆ.ಇ.ಇ ಮೈನ್ಸ್ ಫಲಿತಾಂಶ ಪ್ರಕಟ - ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
Posted On: 13 Feb 2024, 06:51 PM
ಕಾರ್ಕಳ : ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ ಮೈನ್ಸ್ ನ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಕಾಲೇಜಿನ 26 ವಿದ್ಯಾರ್ಥಿಗಳು 95 ಪರ್ಸಂಟೈಲ್ ಗಿಂತ ಅಧಿಕ ಅಂಕಗಳಿಸಿದ್ದಾರೆ 81 ವಿದ್ಯಾರ್ಥಿಗಳು 90 ಪರ್ಸಂಟೈಲ್ ಗಿಂತ ಅಧಿಕ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಣವ್ ಟಿ. ಎಂ 98.6313, ಯುವರಾಜ್ ಬಿ. ಕೆ 98.2878, ಸತೀಶಗೌಡ 97.9123, ಅನನ್ಯ ಡಿ. ಜೆ ಗೌಡ 97.7325, ಕಾರ್ತಿಕ್ ಎ.ಎಸ್ 97.4489, ಕದಂಬ ಸಿದ್ದಾಂತ್. ಎಸ್ 97.3435, ಸುಜಿತ್ ಡಿ.ಕೆ 97.2340 ಹಾಗೂ ಪ್ರೇಮ್‌ಸಾಗರ್ ಪಾಟೀಲ್ 97.1615 ಶೇಕಡಾ ಅಂಕ ಗಳಿಸಿದ್ದಾರೆ. ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ ಇ ಇ ಸಂಯೋಜಕರಾದ ನಂದೀಶ್ ಹೆಚ್. ಬಿ ಶ್ಲಾಘಿಸಿ ಅಭಿನಂದಿಸಿದ್ದಾರೆ.
ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವ ಸಂಪನ್ನ
Posted On: 13 Feb 2024, 05:10 PM
ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವವನ್ನು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇದೆ ಎಂದು ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಯುವ ವಿಚಾರ ವೇದಿಕೆಯ ಹಡಿಲು ಭೂಮಿ ಕೃಷಿಯ ಫಸಲನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಸನ್ಮಾನ/ ಅಭಿನಂದನೆ : ಸ್ಪಂದನ ವಿಶೇಷ ಚೇತನ ಶಾಲೆ ಮುಖ್ಯಸ್ಥರಾದ ಉಮೇಶ್ ಹಾಗೂ ಜನಾರ್ಧನ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಸ್ಥಳೀಯ ವಿದ್ಯಾರ್ಥಿಗಳಾದ ಹರ್ಷಿತಾ, ಪ್ರಜ್ಞಾ, ರಿಯಾ, ಪ್ರೀತಮ್, ದಾನಿಗಳಾದ ಪ್ರಶಾಂತ್ ಶೆಟ್ಟಿ ಅಮ್ಮುಂಜೆ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪೂರು ವ್ಯ.ಸೇ.ಸ. ಸಂಘದ ಅಧ್ಯಕ್ಷರಾದ ರಮೇಶ್ ಎನ್ ಶೆಟ್ಟಿ, ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳು ರೆ|ಫಾ| ಜೋಸೆಫ್ ಮಚಾದೋ, ಉದ್ಯಮಿ ರೋಯಲ್ ರತ್ನಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕ ಪ್ರಾಂಕಿ ಡಿಸೋಜ, ಮಾಹೆ ಮಣಿಪಾಲದ ಪ್ರಾಧ್ಯಾಪಕ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ರಾಜಶ್ರೀ ಮಸ್ಕರೇನಸ್, ಸಮಾಜ ಸೇವಕರಾದ ರಮೇಶ್ ಕರ್ಕೇರ, ಉದ್ಯಮಿ ಸಂದೀಪ ನಾಯಕ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಸ್ಥಳೀಯ ಅಂಗನವಾಡಿ ಮಕ್ಕಳು ಹಾಗೂ ವೇದಿಕೆಯ ಸದಸ್ಯರಾದ, ನೃತ್ಯ ಗುರು ವಿದ್ವಾನ್ ಕೆ ಭವಾನಿ ಶಂಕರ್ ಅವರ ನಿರ್ದೇಶನದಲ್ಲಿ ಸ್ಪಂದನ ವಿಶೇಷ ಚೇತನ ಶಾಲೆ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದ ನೃತ್ಯ ರೂಪಕ "ಶ್ರೀ ರಾಮಾಯಣ ಕಥಾ ಸಾರಾಂಶ" ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯ ಮಹಿಳಾ ಸದಸ್ಯರ, ಮಕ್ಕಳ ನೃತ್ಯ ಪ್ರದರ್ಶನವಾಯಿತು. ಬಳಿಕ ವೇದಿಕೆಯ ಸದಸ್ಯರು ಅಭಿನಯಿಸಿದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಅಜ್ಜಿಗ್ ಏರ್ಲಾ ಇಜ್ಜಿ ಪ್ರದರ್ಶನವಾಯಿತು. ಸಭಾ ಕಾರ್ಯಕ್ರಮದ ಅತಿಥಿ ಗಣ್ಯರಿಗೆ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಬೆಳಗ್ಗಿನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯ ಅಶೋಕ್ ಹಾಗೂ ಸುರೇಶ್ ವಂದಿಸಿದರು. ವೇದಿಕೆಯ ಸದಸ್ಯರಾದ ಯೋಗೀಶ್ ಗಾಣಿಗ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ. ಕಾರ್ಯಕ್ರಮ ನಿರೂಪಿಸಿದರು.
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ
Posted On: 13 Feb 2024, 03:32 PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು 2023-24ನೇ ಸಾಲಿನಿಂದ ಎಂಬಿಎ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭವಾಗಿದ್ದು ಅದರ ಉದ್ಘಾಟನೆಯನ್ನು ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಕಾಲೇಜಿನ ಆವರಣದಲ್ಲಿ ಮಾಡಿದರು. ಈ ಸಂದರ್ಭ ಮಾತನಾಡಿದ ಶ್ರೀಗಳು ವಿದ್ಯಾಸಂಸ್ಥೆಯಲ್ಲಿ ಎಂಬಿಎ ತರಗತಿಗಳನ್ನು ಪ್ರಾರಂಭಿಸಿದ್ದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿ, ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ಉಡುಪಿಯಲ್ಲಿ ಅಷ್ಟಮಠ ವ್ಯವಸ್ಥೆಯನ್ನು 16ನೇ ಶತಮಾನದಲ್ಲಿಯೇ ರೂಪಿಸಿ, ಈಗಿನ ನಿರ್ವಹಣಾಶಾಸ್ತ್ರದ ಪರಿಣಿತರಿಗೆ ಮಾದರಿಯಾಗಿದ್ದಾರೆ. ತತ್ವಶಾಸ್ತ್ರವನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಮಾತ್ರ ಉತ್ತಮ ಆವಿಷ್ಕಾರಗಳು ಹೊರಬರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಎಂಬಿಎ ಕೋರ್ಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರು ಭಾಗವಹಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತವನ್ನು ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಎಂಬಿಎ ಪದವೀಧರರ ಪಾತ್ರವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ದಿನ ಪತ್ರಿಕೆಗಳಲ್ಲಿನ ವ್ಯಾಪಾರ, ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಣಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇದಲ್ಲದೆ, ಕೈಗಾರಿಕೆಗಳಲ್ಲಿ ನಿರ್ವಹಣಾ ಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಬೇಕೆಂದು ಸಲಹೆ ನೀಡಿದರು. ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿಗಳಾದ ರತ್ನಕುಮಾರ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್, ವಿಭಾಗದ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನ ಅಧಿಕಾರಿ, ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕು. ಸುಪ್ರೀತ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಎಂಬಿಎ ವಿಭಾಗದ ಆಡಳಿತ ಅಧಿಕಾರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ ವಂದಿಸಿದರು ಮತ್ತು ಪ್ರಾಧ್ಯಾಪಕಿಯಾದ ಅಕ್ಷತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
ಫೆಬ್ರವರಿ 20 : ಕವಿ ಸರ್ವಜ್ಞ ಜಯಂತಿ ಆಚರಣೆ
Posted On: 12 Feb 2024, 10:35 PM
ಉಡುಪಿ : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಇವರ ಆಯೋಜನೆಯಲ್ಲಿ ಉಡುಪಿಯ ಅಜ್ಜರಕಾಡು ಪಿ. ಜಿ. ಎ.ವಿ ಹಾಲ್ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ಕಾಲೇಜು ಇಲ್ಲಿ ಫೆಬ್ರವರಿ 20 ರಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಕುಲಾಲ ಸಂಘಗಳ ಪ್ರಮುಖರ ಸಮ್ಮುಖದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕುಲಾಲ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿರುವರು.
ಓಮನ್ ಬಿಲ್ಲವಾಸ್ - ಕ್ರೀಡಾಮಹೋತ್ಸವ 2024 ಸಂಪನ್ನ
Posted On: 12 Feb 2024, 06:52 PM
ಮಸ್ಕತ್ : ಇಲ್ಲಿನ ಓಮನ್ ಬಿಲ್ಲವಾಸ್ ಸಂಘಟನೆಯಿಂದ ಒಂದು ದಿನದ ಹೊನಲು ಬೆಳಕಿನ ಕ್ರೀಡಾಕೂಟ ಸಂಘದ ಅಧ್ಯಕ್ಷರಾದ ಸುಜಿತ್ ಅಂಚನ್ ಪಾಂಗಳ ಇವರ ನೇತೃತ್ವದಲ್ಲಿ ಶುಕ್ರವಾರ ಮಸ್ಕತ್ತಿನ ಅಲ್ ಹೈಲ್ ಕ್ರಿಕೆಟ್ ಮೈದಾನದಲ್ಲಿ ಜರಗಿತು. ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿವಂಗತ ಪಿ. ಬಿ. ಅಳಕೆ ಇವರ ಸ್ಮರಣಾರ್ಥ ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಕ್ರಿಕೆಟ್ ಮತ್ತು ತ್ರೋಬಾಲ್. ಮಕ್ಕಳಿಗೆ, ಹಿರಿಯರಿಗೆ ವಿವಿದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪುರುಷರ ೮ ತಂಡಗಳು ಹಾಗೂ ಮಹಿಳೆಯರ ೪ ತಂಡಗಳು ಪ್ರಪ್ರಥಮವಾಗಿ ಆಯೋಜಿಸಲ್ಪಟ್ಟ 'Late Shri P. B. Alke Trophy 2024’ ಕ್ಕಾಗಿ ತಲಾ 5 ಓವರ್ ಗಳ ಲೀಗ್ ಮಾದರಿಯಲ್ಲಿ ರೋಚಕವಾಗಿ ಸೆಣಸಾಡಿದರು. ಪುರುಷರ ತಂಡಗಳಾದ 'ಕುದ್ರೋಳಿ XI', 'ಬೆದ್ರ XI', 'ಬಿರ್ವ್ಹಾ ಸ್ಮ್ಯಾಶರ್ಸ್', 'ಜೇನುಗೂಡು', 'ಗೆಜ್ಜೆಗಿರಿ XI', 'ಕಟ್ಪಾಡಿ XI', 'ಸೋಹಾರ್ ವಾರಿಯರ್ಸ್', ಹಾಗೂ ‘ಕಾನ್ಸೆಪ್ಟ್ XI' ತಂಡಗಳು ಭಾಗವಹಿಸಿದ್ದವು. ಅಂತಿಮ ಸೆಣಸಾಟದಲ್ಲಿ ಸುಕುಮಾರ್ ಅಂಚನ್ ಪಾಂಗಾಳ ಇವರ ಮಾಲಕತ್ವದ ‘ಗೆಜ್ಜೆಗಿರಿ XI' ತಂಡವು ಸಂದೀಪ್ ಕರ್ಕೇರಾ ಮಾಲಕತ್ವದ 'ಬೆದ್ರ XI' ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯಭೇರಿಪಡೆದು ಪ್ರತಿಷ್ಠಿತ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ‘ ಬಿರ್ವ್ಹಾ ಬೊಳ್ಳಿಲು’, ‘ಟೀಮ್ ಶಕ್ತಿ’, ‘ಸೋಹಾರ್ ವಾರಿಯರ್ಸ್' ಹಾಗೂ ‘ಟೀಮ್ ಭೈರವಿ’ ತಂಡಗಳು ಭಾಗವಹಿಸಿದ್ದವು. ಫೈನಲ್ ಹಣಾಹಣಿಯಲ್ಲಿ 'ಟೀಮ್ ಶಕ್ತಿ' ತಂಡವು 'ಟೀಮ್ ಭೈರವಿ' ವಿರುದ್ಧ 6 ವಿಕೆಟ್ ಗಳ ರೋಚಕ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿತು. ಇನ್ನೊಂದೊಡೆ ತ್ರೋಬಾಲ್ ಪಂದ್ಯದಲ್ಲಿ 'ಟೀಂ ಶಕ್ತಿ', 'ಬಿರ್ವ್ಹಾ ಬೊಳ್ಳಿಲು’ ಹಾಗೂ 'ಬ್ರಾಮರಿ' ತಂಡಗಳು ಭಾಗವಹಿಸಿದ್ದವು. ಫೈನಲ್ ಮುಖಾಮುಖಿಯಲ್ಲಿ 'ಟೀಮ್ ಶಕ್ತಿ' ತಂಡವು ‘ಬಿರ್ವ್ಹಾ ಬೊಳ್ಳಿಲು’ ವಿರುದ್ಧ ಜಯಸಾಧಿಸಿ ಪ್ರಶಸ್ತಿಗಳಿಸುವಲ್ಲಿ ಸಫಲತೆಯನ್ನು ಕಂಡಿತು. ಉತ್ತಮ ಆಟಗಾರರಿಗೆ, ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಯಿತು. ನವೀನ್ ಪೂಜಾರಿ, ಗಣೇಶ್ ಪೂಜಾರಿ ಮತ್ತು ನಿತೇಶ್ ತಂಡ ಊಟೋಪಚಾರದ ನೇತೃತ್ವವಹಿಸಿದ್ದರು. ಈ ಕ್ರೀಡಾಮಹೋತ್ಸವದಲ್ಲಿ ಅಧ್ಯಕ್ಷ ಸುಜಿತ್ ಅಂಚನ್, ಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಸುವರ್ಣ, ಎಸ್. ಕೆ. ಪೂಜಾರಿ, ಡಾ. ಅಂಚನ್ ಸಿ. ಕೆ, ಓಮನ್ ತುಳುವೆರ್ ಅಧ್ಯಕ್ಷ ರಮಾನಂದ ಶೆಟ್ಟಿ, ಮಸ್ಕತ್ ಮೊಗವೀರ್ಸ್ ಪ್ರತಿನಿಧಿ ಶ್ರೀಶ ಕಾಂಚನ್, ಕರಾವಳಿ ಫ್ರೆಂಡ್ಸ್ ನ ಹಿತೇಶ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 : ಶಿವಾನಂದ ಕೋಟ್ಯಾನ್ ಗೆ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ
Posted On: 12 Feb 2024, 06:42 PM
ಸೌದಿ ಅರೇಬಿಯಾ : 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 ಸೌದಿ ಅರೇಬಿಯಾದ ದಮಮ್ ನಲ್ಲಿ ಫೆಬ್ರವರಿ 8 ರಂದು ಅದ್ಧೂರಿಯಾಗಿ ಸಂಪನ್ನವಾಯಿತು. ಓಮಾನ್ ಮಸ್ಕತ್ ನಲ್ಲಿರುವ ಅನಿವಾಸಿಗ ಶಿವಾನಂದ ಕೋಟ್ಯನ್ ರವರಿಗೆ ವಿಶೇಷವಾಗಿ ಆಹ್ವಾನಿಸಿ ತಮ್ಮ ಕೊಡುಗೆ ಕಲೆ, ಸಾಹಿತ್ಯ ಮತ್ತು ಚಲನಚಿತ್ರಗಳ ಆಯೋಜನೆ, ಸಹಾಯ- ಸಹಕಾರ ಸಮಾಜ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿನ ಸೇವೆಯ ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ವೈಭವಯುತವಾದ 17ನೇ ವಿಶ್ವ ಕನ್ನಡ ಸಂಸ್ಕೃತಿಕ ಸಮ್ಮೇಳನ ಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಯಶಸ್ವಿಯಾಗಿ ಜರುಗಿತು. ಕನ್ನಡ ಭಾಷೆ, ನಡೆ ನುಡಿಯ ಬಗೆಗಿನ ಮನರಂಜನೆ, ಕವಿ ಗೋಷ್ಟಿ, ಯಕ್ಷಗಾನ ಕಾರ್ಯಕ್ರಮಗಳು ಜರಗಿದವು. ಮುಖ್ಯ ಅತಿಥಿಗಳಾಗಿ ಸಭಾಪತಿ ಯು.ಟಿ. ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಅನಿವಾಸಿ ಕನ್ನಡಿಗರ ಕೋಶ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ಪುತ್ತೂರು ಶಾಸಕ ಅಶೋಕ್ ರೈ, ಪೌರ ಆಡಳಿತ ಮತ್ತು ಹಜ್ ಖಾತೆ ಸಚಿವ ಜನಾಬ್ ರಹೀಮ್ ಖಾನ್ ವಕೀಲ ಪದ್ಮರಾಜ್ ಆರ್, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಮಂಜುನಾಥ ಸಾಗರ್ ಉಪಸ್ಥಿತಿಯಿದ್ದರು. ಜನಾಬ್ ಝಕರಿಯಾ ಬಜ್ಪೆ, ಜನಾಬ್ ಶೇಖ್ ಕರ್ನಿರೆ ಮತ್ತು ಸತೀಶ್ ಕುಮಾರ್ ಬಜಲ್ ಮತ್ತು ತಂಡವು ಕಾರ್ಯಕ್ರಮ ಆಯೋಜಿಸಿತ್ತು. ಕನ್ನಡ, ತುಳು ಗಾಯನ, ಹಾಗೂ ನೃತ್ಯ, ವೈವಿಧ್ಯವೂ ಜರಗಿತು.
ಪಾಂಗಳ ಬ್ರಿಡ್ಜ್ ಹತ್ತಿರ ಟಿಪ್ಪರ್ ಪತ್ತೆ ಟೈಯರ್ ನಾಪತ್ತೆ
Posted On: 12 Feb 2024, 10:52 AM
ವಾಹನ ಮಾಲೀಕರೇ ಚಾಲಕರೇ ಎಚ್ಚರ ಎಚ್ಚರ ಎಚ್ಚರ ನೆನ್ನೆ ರಾತ್ರಿ ಪಡುಬಿದ್ರಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನವನ್ನು ಕಳ್ಳತನ ಮಾಡಿ ಪಾಂಗಳ ಬ್ರಿಡ್ಜ್ ಹತ್ತಿರ ತಂದು ನಿಲ್ಲಿಸಿ ವಾಹನದ ಅಷ್ಟು ಟೈರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿರುತ್ತಾರೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ಗೆ ತಿಳಿಸಿ.
ಫೆಬ್ರವರಿ 20 : ಕಾಪುವಿನಲ್ಲಿ ಆನಂದ ಲಹರಿ ಮಹಾ ಸತ್ಸಂಗ
Posted On: 10 Feb 2024, 05:58 PM
ಕಾಪು : ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಜೀವನ ಕಲೆ ಹಾಗೂ ಸುದರ್ಶನ ಕ್ರಿಯಾಯೋಗದ ಸ್ಥಾಪಕಾಚಾರ್ಯ, ಅಂತರಾಷ್ಟ್ರೀಯ ಖ್ಯಾತಿಯ ಪದ್ಮವಿಭೂಷಣ ಶ್ರೀ ರವಿಶಂಕರ್ ಗುರೂಜಿ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಫೆಬ್ರವರಿ 20, ಮಂಗಳವಾರದಂದು ಸಂಜೆ 5 ಗಂಟೆಗೆ ಕಾಪು ಸಮುದ್ರ ಕಿನಾರೆಯಲ್ಲಿರುವ ಮಂಥನ ರೆಸಾರ್ಟ್ ಬಳಿ ನಡೆಯಲಿರುವ ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಶನಿವಾರ ಮಂಥನ ರೆಸಾರ್ಟ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾನವತಾವಾದಿ ಹಾಗೂ ಶಾಂತಿದೂತ ಶ್ರೀ ರವಿಶಂಕರ್ ಗುರೂಜಿ ಅವರ ಮಹಾ ಸತ್ಸಂಗವನ್ನು ಆಯೋಜಿಸಿರುತ್ತೇವೆ. ಜೀವನಕಲಾ ಸಂಸ್ಥೆಯ ಕಾರ್ಯಕ್ರಮಗಳು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದು ಇಡೀ ಜಗತ್ತಿನಲ್ಲಿ ಲಾಭರಹಿತವಾದ ಶೈಕ್ಷಣಿಕ, ಮಾನವೀಯ ಮೌಲ್ಯಗಳುಳ್ಳ ಪ್ರಮುಖ ಸಂಸ್ಥೆಯಾಗಿದೆ. ಉಡುಪಿ ಜಿಲ್ಲೆಗೆ ಬಂದು ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಿ ಜ್ಞಾನ, ಧ್ಯಾನ ಹಾಗೂ ಗಾನದ ಸವಿಯನ್ನು ನೀಡಲಿದ್ದಾರೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಆಟ್೯ ಆಫ್ ಲಿವಿಂಗ್ ಶಿಕ್ಷಕರಾದ ರಾಧಾ ಶೆಣೈ, ದಿನೇಶ್ ಕಾಮತ್, ವಸಂತ್ ಕುಮಾರ್, ಪ್ರಶಾಂತ್ ಪೈ, ವಿಮಲಾಕ್ಷಿ ದಿವಾಕರ್, ಶೈಲಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪುಸ್ತಕ ಮನೆಯ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಯೋಜನೆಗೆ ಅಭೂತಪೂರ್ವ ಬೆಂಬಲ
Posted On: 10 Feb 2024, 05:47 PM
ಕಾರ್ಕಳ : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸಾರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು. ಈ ಯೋಜನೆಗೆ ಸಾರ್ವಜನಿಕರು, ಪುಸ್ತಕ ಪ್ರಿಯರಿಂದ ರೂ. 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312 ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಗಿದೆ ಹಾಗೂ ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳೇ ಸ್ವತಃ ಪತ್ರ ಮುಖೇನ ತಮ್ಮ ಅಭಿಪ್ರಾಯ ತಿಳಿಸುವುದು ಹೆಮ್ಮೆಯ ಸಂಗತಿಯಾಗಿದೆ ಮತ್ತು ಪುಸ್ತಕ ಪ್ರೀತಿಯ ದ್ಯೋತಕವಾಗಿದೆ. ಇದೀಗ ಫೆಬ್ರವರಿ ತಿಂಗಳಿನ ಪುಸ್ತಕ ತಲುಪಿಸುವ ಕಾರ್ಯ ನಡೆಯುತ್ತಿದೆ. ಸಾಹಿತ್ಯಾಸಕ್ತರು, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು, ಶಿಕ್ಷಕ ಬಂಧುಗಳು, ಸಾರ್ವಜನಿಕರು ಈ ಯೋಜನೆಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.
ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ
Posted On: 10 Feb 2024, 05:34 PM
ಕಾಪು : ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ದೇಗುಲ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಇದಕ್ಕಾಗಿ ಮೊಗವೀರ ಸಂಘಟನೆಗಳಾದ ಮೊಗವೀರ ಮಹಾಸಭಾ ದ.ಕ, ಮೊಗವೀರ ಮಹಾಜನ ಸಂಘ(ರಿ.) ಮತ್ತು ಕಾಪು ನಾಲ್ಕು ಪಟ್ಣ ಮೊಗವೀರ ಸಭಾ ಹಾಗೂ ಮಹಿಳಾ ಮಂಡಳಿ ಇವರ ನೇತೃತ್ವದಲ್ಲಿ ಗುರುವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಅರ್ಚಕರಾದ ಜನಾರ್ದನ ತಂತ್ರಿ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಮೊಗವೀರ ಸಮುದಾಯಕ್ಕೆ ಅಪಾರ ಮತ್ಸ್ಯ ಸಂಪತ್ತು ದೊರಕುವಂತಾಗಲಿ ಮತ್ತು ಅಮ್ಮನ ದಯೆಯಿಂದ ಅತೀ ಹೆಚ್ಚು ಮೊಗವೀರ ಬಂಧುಗಳು "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರ್ಪಡೆಯಾಗಲಿ ಎಂದು ಪ್ರಾರ್ಥಿಸಿದರು. ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಯಾಗಲು ಮನವಿ ಪತ್ರವನ್ನು ಕಾಪು ಕ್ಷೇತ್ರದ ಶಾಸಕರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಅವರು ದ. ಕ ಮೊಗವೀರ ಮಹಾಸಭಾದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ನಂತರ ಕಾಮಗಾರಿ ವೀಕ್ಷಣೆ ಮಾಡಲಾಯಿತು. ಗೌರವಾಧ್ಯಕ್ಷರಾದ ನಾಡೋಜ ಡಾ. ಜಿ. ಶಂಕರ್ ಮತ್ತು ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಇವರ ಮುಂದಾಳತ್ವದಲ್ಲಿ ಉಪ್ಪಳದಿಂದ ಶಿರೂರು ಭಾಗದವರೆಗಿನ ಎಲ್ಲಾ ಮೊಗವೀರ ಸಮಾಜ ಬಾಂಧವರಿಗೆ ಈ ಮನವಿ ಪತ್ರವನ್ನು ತಲುಪಿಸಲಿದ್ದೇವೆ ಮತ್ತು ಅತೀ ಹೆಚ್ಚಿನ ಆರ್ಥಿಕ ಸಹಕಾರವನ್ನು ನಮ್ಮ ಸಮಾಜದಿಂದ ನೀಡಲಿದ್ದೇವೆ ಎಂದು ದ. ಕ. ಮೊಗವೀರ ಮಹಾಸಭಾದ ಕಾರ್ಯದರ್ಶಿ ಸುಧಾಕರ ಕುಂದರ್ ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಹಿರಿಯಡಕ, ದಿನೇಶ್ ಏರ್ಮಾಳು, ಕಾಪು ನಾಲ್ಕು ಪಟ್ನ ಅಧ್ಯಕ್ಷರಾದ ಮನೋಜ್ ಕಾಂಚನ್, ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಮೋಹನ್ ಬಂಗೇರ, ದೇವಳದ ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ್ ಅಮೀನ್, ಬಾಬು ಮಲ್ಲಾರ್, ಶೈಲಜಾ ಪುರುಷೋತ್ತಮ್, ಪ್ರಚಾರ ಸಮಿತಿಯ ಸಂಚಾಲಕರುಗಳಾದ ಜಯರಾಮ್ ಆಚಾರ್ಯ, ಶ್ರೀಧರ ಕಾಂಚನ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಕಾಪು ಮೊಗವೀರ ಮಹಾಸಭಾ ಅಧ್ಯಕ್ಷರಾದ ಕುಶ ಸಾಲ್ಯಾನ್, ಶೀಲರಾಜ್, ಜಗದೀಶ್ ಮೆಂಡನ್, ಆಶಾ ಎಂ. ಕುಂದರ್, ಶಕುಂತಲಾ ಕೋಟ್ಯಾನ್, ಉಷಾ, ಕವಿತಾ, ಮಮತಾ, ಗೀತಾ ರಾಜ್, ಕೃಷ್ಣ ಕರ್ಕೇರ, ಭಾಸ್ಕರ ಅಮೀನ್, ಸುನೀತಾ, ಯಶವಂತಿ, ಸುನಿಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
