Updated News From Kaup

ಕುತ್ಯಾರು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ - ಇಂಗ್ಲೀಷ್ ಭಾಷಾ ಶಿಕ್ಷಕರ ಕಾರ್ಯಾಗಾರ

Posted On: 29-11-2023 01:34PM

ಕುತ್ಯಾರು : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ದ್ವಿತೀಯ ಭಾಷೆ ಇಂಗ್ಲೀಷ್ ಕಾರ್ಯಾಗಾರ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಇಲ್ಲಿ ನಡೆಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸದಸ್ಯರಾದ ಶ್ರೀಕಾಂತ ಪ್ರಭು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತರಬೇತಿ ಶಿಕ್ಷಕರಿಗೆ ಅನಿವಾರ್ಯವಾಗಿದೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂತೋಷವನ್ನುಂಟು ಮಾಡಲು ವಿದ್ಯಾರ್ಥಿಗಳು ಸಂತೋಷದಾಯಕವಾಗಿ ಇರಲು ಶಿಕ್ಷಕರು ಸಂಪತ್ಭರಿತವಾಗಿರಬೇಕು ಎಂದರು.

ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಶೈಕ್ಷಣಿಕ ಆಡಳಿತ ಅಧಿಕಾರಿ ದಿವಾಕರ ಆಚಾರ್ಯ ಮಾತನಾಡಿ ತರಬೇತಿಯಿಂದ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ. ತರಬೇತಿಯಿಂದ ಶಿಕ್ಷಕರು ಹಲವಾರು ವಿಧದ ಜ್ಞಾನವನ್ನು ಕೌಶಲವನ್ನು ಪಡೆಯುವುದಕ್ಕೆ ಸಾಧ್ಯ. ಶಿಕ್ಷಕರು ನಿರಂತರವಾಗಿ ತರಬೇತಿಯನ್ನು ಪಡೆಯುವುದರಿಂದ ಬೋಧನೆಯಲ್ಲಿ ಗುಣಮಟ್ಟವನ್ನ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ ವಹಿಸಿದ್ದರು.

ಈ ಸಂದರ್ಭ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಶೈಕ್ಷಣಿಕ ಆಡಳಿತ ಅಧಿಕಾರಿ ದಿವಾಕರ ಆಚಾರ್ಯ, ಮುಖ್ಯ ಶಿಕ್ಷಕಿ ಸಂಗೀತ, ವಿದ್ಯಾಭಾರತಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಸರಸ್ವತಿ ಪೀಠ ಕಾರ್ಯದರ್ಶಿ ಗುರುರಾಜ್ ಆಚಾರ್ಯ ವಹಿಸಿದ್ದರು. ಕಾರ್ಯಗಾರದಲ್ಲಿ12 ಸಂಸ್ಥೆಗಳ ದ್ವಿತೀಯ ಭಾಷೆ ಇಂಗ್ಲಿಷ್ ನ 22 ಶಿಕ್ಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸವಿತಾ ಸಹಕರಿಸಿದ್ದರು.

ಶಿಕ್ಷಕಿ ಅನಿತಾ ಸ್ವಾಗತಿಸಿದರು. ಉಡುಪಿ ಜಿಲ್ಲೆಯ ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ರಮ್ಯ ನಿರೂಪಿಸಿ, ಶರೋನ್ ವಂದಿಸಿದರು.

ಕ್ರಿಯೇಟಿವ್‌ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವ್‌-2023

Posted On: 27-11-2023 04:49PM

ಕಾರ್ಕಳ : ವಸುದೈವ ಕುಟುಂಬಕಂ ಪರಿಕಲ್ಪನೆಯ ಮೂಲಕ ಎಲ್ಲ ಭಾಷೆಗಳನ್ನು ಗೌರವಿಸುವ ಮತ್ತು ಪರಿಚಯಿಸುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನವೆಂಬರ್ 25 ರಂದು ಹಿರ್ಗಾನದ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಗೀತಾಂಜಲಿ ಸಭಾಭವನದಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ವಾಗ್ಮಿ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಜೀವನದ ಎಲ್ಲ ಹಂತಗಳಲ್ಲಿ ಹೋರಾಟ ಇರುತ್ತದೆ. ಕಠಿಣ ಪರಿಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ, ಬಂದ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿ. ಆಗ ಯಶಸ್ಸು ಹಿಂಬಾಲಿಸಿ ಬರುತ್ತದೆ. ಸಾಧಕರ ಸಾಧನೆಗಳು ಕೇಳಲು ರೋಮಾಂಚನ ಉಂಟುಮಾಡುತ್ತದೆ. ಆದರೆ ಅದರ ಹಿಂದೆ ಬಹುದೊಡ್ಡ ತ್ಯಾಗವಿರುತ್ತದೆ. ಅದು ಕ್ರಿಯೇಟಿವ್‌ ನ ವಿದ್ಯಾರ್ಥಿಗಳಿಂದ ಸಾಧ್ಯವಾಗಲಿ ಎಂದು ಹಾರೈಸಿದರು. ಮತ್ತು ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಸಾಧಕ ಪುರಸ್ಕಾರ” ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಕಾಲೇಜಿನಲ್ಲಿ ವಾಸಂಗ ಮಾಡಿ ರಾಜ್ಯದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಡಾ. ಗಣನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಯೇಟಿವ್‌ ಕಾಲೇಜು ಪ್ರಾರಂಭವಾದ ಮೂರೇ ವರ್ಷದ ಅವಧಿಯಲ್ಲಿ ಅನೇಕ ಹೊಸ ಸಾಧನೆಗಳನ್ನು ಮಾಡಿದೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನವಚೇತನ ನೀಡುವ ಕಾರ್ಯ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್‌ ಎಸ್. ಎಲ್‌ ಅವರು ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕಲೆ, ಸಂಸ್ಕೃತಿಯ ಮೂಲಕ ಶ್ರೀಮಂತ ಮೌಲ್ಯಗಳನ್ನು ತಿಳಿಸಲಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ. ಕೆ, ಅಶ್ವತ್‌ ಎಸ್.‌ ಎಲ್‌, ಹೆಚ್‌.ಕೆ.ಎಸ್‌ ನ ಪ್ರಾಂಶುಪಾಲರಾದ ವಿಮಲ್‌ ರಾಜ್.‌ ಜಿ, ಗಣಪತಿ ಕೆ. ಎಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಪ್ರಾಚಾರ್ಯರಾದ ವಿದ್ವಾನ್‌ ಗಣಪತಿ ಭಟ್‌ ಸಂಸ್ಥೆಯ ಸಾಧನೆಗಳನ್ನು ತಿಳಿಸುವ ವಾರ್ಷಿಕ ವರದಿ ವಾಚಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್‌ ಎಸ್‌. ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿನಾಯಕ ಜೋಗ್‌ ವಂದಿಸಿದರು. “ಸಾಧಕರ ಸನ್ಮಾನ” ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಕಳ : ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಗೆ ಚಿನ್ನದ ಪದಕ

Posted On: 27-11-2023 04:39PM

ಕಾರ್ಕಳ : ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಚಿನ್ನದ ಪದಕ ಪಡೆದಿದ್ದಾರೆ.

ನಿಟ್ಟೆ ನಿವಾಸಿ ರಮೇಶ್ ಸಂಜನ್ ಹಾಗೂ ದಿವ್ಯ ದಂಪತಿಗಳ ಪುತ್ರನಾದ ಇವರು. ನಿಟ್ಟೆ ಡಾ.ಎನ್.ಎಸ್.ಎ.ಎಮ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

ಕಾಪು : ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವ

Posted On: 25-11-2023 10:11PM

ಕಾಪು : ಶ್ರೀ ಲಕ್ಷ್ಮಿಜನಾರ್ದನ ದೇವಳದ ಆಡಳಿತಕ್ಕೊಳಪಟ್ಟಿರುವ ಕೊಪ್ಪಲಂಗಡಿ ಶ್ರೀ ವಾಸುದೇವ ದೇವಸ್ಥಾನದ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವದ ದೀಪ ಪ್ರಜ್ವಲನೆಯನ್ನು ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೆ ಪಿ ಆಚಾರ್ಯ ಮಾಡಿದರು.

ಈ ಸಂದರ್ಭ ಮೋಹನ್ ಬಂಗೇರ, ಕೊಪ್ಪಳಮನೆ ಉದಯ ಶೆಟ್ಟಿ, ಜಯರಾಮ ಆಚಾರ್ಯ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಪೂಜಾರಿ, ಸದಸ್ಯರು, ದೇವಳದ ಸಿಬ್ಬಂದಿವರ್ಗ ಹಾಗೂ ಊರವರು ಉಪಸ್ಥಿತರಿದ್ದರು.

ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಆಚರಣೆ

Posted On: 25-11-2023 06:17PM

ಹೆಜಮಾಡಿ : ಹಬ್ಬಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಅಚರಣೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನಿಸಲು ವೇದಿಕೆಯಾಗಿದೆ. ಈ ಹಬ್ಬಗಳ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಪದ್ದತಿಗಳು ಹಾಗು ಆಚರಣೆಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಕೂಡು ಕುಟುಂಬ ಒಡೆದು ಹೋಗಿರುವುದರಿಂದ ಹಬ್ಬಗಳ ಮಹತ್ವ ಕಳೆದು ಹೋಗಿದೆ. ಪುರಾಣದ‌ ಹಿನ್ನೆಲೆಯುಳ್ಳ ಇಂತಹ ಹಬ್ಬಗಳನ್ನು ವಿವಿಧ ಧರ್ಮದ ಜನರನ್ನು ಸೇರಿಸಿ ಸೌಹಾರ್ದತೆಯ ರೀತಿಯಲ್ಲಿ ಅಚರಿಸುತಿರುವ ಹೆಜಮಾಡಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಪ್ರವಚನಕಾರ, ಯಕ್ಷಗಾನ ಕಲಾವಿದ ಭಾಸ್ಕರ್ ಪಡುಬಿದ್ರಿ ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಹೆಜಮಾಡಿ ಯುವವಾಹಿನಿ (ರಿ.) ವತಿಯಿಂದ ನಡೆದ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಕಾರ್ಯಕ್ರಮದಲ್ಲಿ ತುಡರ್ ದೀಪ ಬೆಳಗಿಸಿ ಮಾತಾನಾಡಿದರು.

ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕ ಹೆಜಮಾಡಿ ಶೇಖರ್ ಕುಕ್ಯಾನ್ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಭರತೇಶ್, ಉದ್ಯಮಿ ಜೋನ್ ಕ್ವಾಡ್ರಸ್, ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ರಮೀಜ್ ಹುಸೇನ್, ಕಾರ್ಯಕ್ರಮ ನಿರ್ದೇಶಕ ಮಹೇಂದ್ರ ಸಾಲ್ಯಾನ್, ಹೆಜಮಾಡಿ ಯುವವಾಹಿನಿ ಕಾರ್ಯದರ್ಶಿ ನಾಗವೇಣಿ ಉಪಸ್ಥಿತರಿದ್ದರು.

ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ. ಕೋಟ್ಯಾನ್ ಸ್ವಾಗತಿಸಿದರು. ಹೆಜಮಾಡಿ ಯುವವಾಹಿನಿಯ ಗೌರವ ಸಲಹೆಗಾರ ಪ್ರಭೋಧ್ ಚಂದ್ರ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಕರ್ಕೇರ ಮತ್ತು ಧೀರಜ್ ಹೆಜಮಾಡಿ ನಿರೂಪಿಸಿದರು. ಕುಮಾರಿ ಪ್ರಾಪ್ತಿ ಹೆಜಮಾಡಿ ವಂದಿಸಿದರು.

ಡಿಸೆಂಬರ್ 3, 4 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ; ಗುರು ವಂದನೆ ಕಾರ್ಯಕ್ರಮ

Posted On: 25-11-2023 06:04PM

ಶಂಕರಪುರ : ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರು ವಂದನೆ ಕಾರ್ಯಕ್ರಮ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ದ್ವಾರಕಾಮಾಯಿ ಮಠದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ, ದಾನಿಗಳು, ಭಕ್ತರ ಸಹಾಯದಿಂದ 3 ವರ್ಷದ ಮೊದಲು ಜೀರ್ಣೋದ್ದಾರಗೊಂಡ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನವು ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ, ಹೊರ ದೇಶದ ಭಕ್ತರನ್ನು ಆಕರ್ಷಿಸುವ ಈ ಪುಣ್ಯ ಕ್ಷೇತ್ರವಾಗಿದೆ.

ಮಠದ ಆವರಣದಲ್ಲಿಯೇ 2018ರಲ್ಲಿ ಶ್ರೀ ಸಾಯಿನಾಥರ 100ನೇ ಪುಣ್ಯಸ್ಮರಣೆಯ ದಿನದಂದು ಬಿಲ್ವಮರದ ಕಟ್ಟೆಗೆ "ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆ" ಎಂದು ಸಂಕಲ್ಪಿಸಿ ಮೋಕ್ಷಕಾರಕ ಶಿವನ ಸಂಕಲ್ಪದಲ್ಲಿ ಪೂಜೆ ಸಲ್ಲುತ್ತಿತ್ತು. 2022ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಗುರುಗಳಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರು ಇಲ್ಲಿ ಶಿವನೇ ಕಾಲಭೈರವನಾಗಿ ಮೋಕ್ಷ ಕಟ್ಟೆಯಲ್ಲಿ ನೆಲೆಸಿದ್ದಾನೆ ಎಂದು ತಿಳಿಸಿ, ಈ ಕಟ್ಟೆಯಲ್ಲಿ ಉಜ್ಜಯಿನಿಯ ಸಂಕಲ್ಪದಲ್ಲಿ ಕಾಲ ಭೈರವ - ಸ್ವಾಮಿಗೆ ಸ್ಥಾನವನ್ನು ನೀಡಬೇಕು ಎಂದು ಪ್ರಸ್ತಾಪಿಸಿದರು. ಗುರುವಿನ ಆಜ್ಞೆಯಂತೆ ಅದೇ ಜಾಗದಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಪಾನ ಪ್ರಿಯ ಕಾಲಭೈರವ ಸ್ವಾಮಿಯನ್ನು ಇದೇ 2023ರ ಡಿಸೆಂಬರ್ 3 ಮತ್ತು 4ರಂದು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ದೇವದಾಸ್ ತಂತ್ರಿ, ಮುಂಬೈ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಈ ಧಾರ್ಮಿಕ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ 110ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ.

ಡಿಸೆಂಬರ್ 3ರಂದು ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬಳಿಕ 11:30ಕ್ಕೆ ಶಿರ್ವ ಮಟ್ಟಾರ್‌ನ ಪಾಂಜಗುಡ್ಡೆಯಲ್ಲಿ ಮಠದ ಮಹತ್ವದ ಯೋಜನೆಯಾದ ಸಂತ ಆಶ್ರಯ ಧಾಮಕ್ಕೆ ಸಾಧು ಸಂತರು ಭಗವತ್ ಧ್ವಜವನ್ನು ಇಟ್ಟು ದೀಪ ಬೆಳಗಿಸಿ ಪ್ರಾರ್ಥಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಅಖಿಲ ಭಾರತೀಯ ಸಂತ ಸಮಿತಿಯ ಪ್ರಾಂತ್ಯ ಸಭೆಯು ನಡೆಯಲಿದೆ. ಸಂಜೆ 5ಕ್ಕೆ ಸಾಲ್ಮರ ಶಂಕರಪುರದಿಂದ ಕಾಲಭೈರವ ಸ್ವಾಮಿ ಪ್ರತಿಮೆ ಹಾಗೂ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, 10:30ಕ್ಕೆ ಗುರುವಂದನೆ, 12:30 ಮಹಾಪೂಜೆ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಎಂದರು.

ಈ ಸಂದರ್ಭ ಮಠದ ಟ್ರಸ್ಟಿ ವಿಶ್ವನಾಥ ಸುವರ್ಣ, ಗೌರವ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ಷೇತ್ರದ ಮಾರ್ಗದರ್ಶಕರುಗಳಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯ್ ಕುಂದರ್ ಉಪಸ್ಥಿತರಿದ್ದರು.

ನವೆಂಬರ್ 26 : ಮಾತೃಜಾ ಸೇವಾ ಸಿಂಧು ನಿಟ್ಟೆ ಇದರ ಸಮಾಲೋಚನ ಸಭೆ

Posted On: 24-11-2023 04:33PM

ಕಾರ್ಕಳ :ಇಲ್ಲಿಯ ನಿಟ್ಟೆ ಭಾಗದಲ್ಲಿ ಹಲವಾರು ಅಶಕ್ತ ಬಡ ಕುಟುಂಬಕ್ಕೆ ನೆರವಾಗುತ್ತ, ಆ ಕುಟುಂಬದಲ್ಲಿ ಮಂದಹಾಸ ಕಾಣುವ, ಸಮಾನ ಮನಸ್ಕರ ತಂಡದ ಸಭೆಯು ನವೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಿಟ್ಟೆ ಲೆಮಿನ ಕ್ರಾಸ್ ಬಳಿಯ ಸನ್ಮಾನ್ ರಿಜೆನ್ಸಿ ಸಭಾಭವನದಲ್ಲಿ ನಡೆಯಲಿದೆ.

ತಂಡದ ಸೇವಾ ಬಂಧುಗಳು ಹಾಗೂ ಹಿತೈಷಿಗಳು ಅಂದು ಹಾಜರಿರಬೇಕಾಗಿ ಮಾತೃಜ ಸೇವಾ ಸಿಂಧು ನಿಟ್ಟೆ ಇದರ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಮನಸ್ವೀ ಕುಲಾಲ್ ಗೆ ಶಿವರಾಮ ಕಾರಂತ ಪುರಸ್ಕಾರ

Posted On: 24-11-2023 03:57PM

ಕಾರ್ಕಳ : ತಾಲೂಕಿನ ಸ.ಹಿ.ಪ್ರಾ ಶಾಲೆ ಕಲಂಬಾಡಿ ಪದವು ಇಲ್ಲಿಯ ವಿದ್ಯಾರ್ಥಿನಿ ಕುಮಾರಿ ಮನಸ್ವೀ ಕುಲಾಲ್ ಕಾರಂತ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ.

ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನವೆಂಬರ್ 26 ರಂದು ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ| ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನಸ್ವೀ ಕುಲಾಲ್ ಅವರು ಕಾರ್ಕಳ ಪದವು ಸಂತೋಷ್ ಕುಲಾಲ್ ಮತ್ತು ಮಂಜುಳಾ ದಂಪತಿಯ ಸುಪುತ್ರಿ.

ಮೂಳೂರು : ಕಾರು ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು

Posted On: 23-11-2023 11:54AM

ಮೂಳೂರು : ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ಮೂಳೂರಿನಲ್ಲಿ ಬುಧವಾರ ನಡೆದಿದೆ.

ಮೂಳೂರು ಮಹಾಲಕ್ಷ್ಮೀ ನಗರ ನಿವಾಸಿ ಲೀಲಾವತಿ ಸಾಲ್ಯಾನ್ (65) ಮೃತ ಮಹಿಳೆ. ಬುಧವಾರ ಮಧ್ಯಾಹ್ನ ಮೂಳೂರು ಅಂಚೆ ಕಚೇರಿಗೆ ಬಂದು ಮನೆಗೆ ತೆರಳುತ್ತಿದ್ದಾಗ ರಾ.ಹೆ. 66ರಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಲೀಲಾವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾಪು ಪೋಲಿಸರು ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮೃತ ಲೀಲಾವತಿ ಸಾಲ್ಯಾನ್ ಅವರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಪಡುಬಿದ್ರಿ ರೋಟರಿ ಕ್ಲಬ್ : ಮನೆ ಬೆಳಕು ಕಾರ್ಯಕ್ರಮದಡಿಯಲ್ಲಿ ಗ್ಯಾಸ್ ಸ್ಟವ್, ಸಿಲಿಂಡರ್‌ ಹಸ್ತಾಂತರ

Posted On: 22-11-2023 09:14PM

ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ "ಮನೆ ಬೆಳಕು" ಕಾರ್ಯಕ್ರಮದಡಿ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಸುಮಿತ್ರಾ ಪೂಜಾರಿಯವರಿಗೆ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್‌ ನ್ನು ಪೂರ್ವ ಸಹಾಯಕ ಗರ್ವನರ್ ಗಣೇಶ್ ಆಚಾರ್ಯ ಉಚ್ಚಿಲ ಹಸ್ತಾಂತರಿಸಿದರು.

ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಲಯ ‌ಸಂಯೋಜಕ ರಮೀಜ್ ಹುಸೇನ್, ನಿಕಟ ಪೂರ್ವ ಅಧ್ಯಕ್ಷರಾದ ಗೀತಾ ಅರುಣ್, ಪೂರ್ವ ಅಧ್ಯಕ್ಷರಾದ ಗಣೇಶ್ ಅಚಾರ್ಯ ಎರ್ಮಾಳ್, ಮಹಮ್ಮದ್ ನಿಯಾಜ್, ನಿಯೋಜಿತ ಅಧ್ಯಕ್ಷ ಬಿ.ಎಸ್ ಅಚಾರ್ಯ, ಕಾರ್ಯದರ್ಶಿ ಪವನ್ ಸಾಲ್ಯಾನ್, ಕೋಶಾಧಿಕಾರಿ ಸುನಿಲ್ ಕುಮಾರ್, ಸದಸ್ಯರಾದ ಜ್ಯೋತಿ ಮೆನನ್, ಪುಷ್ಪಲತಾ ಗಂಗಾಧರ್, ತಸ್ನೀನ್ ಅರಾ ಉಪಸ್ಥಿತರಿದ್ದರು.

ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಬಿ.ಎಸ್ ಅಚಾರ್ಯ ನಿರೂಪಿಸಿದರು. ಪವನ್ ಸಾಲ್ಯಾನ್ ವಂದಿಸಿದರು.