Updated News From Kaup
ಪಡುಕುತ್ಯಾರು : ಆನೆಗುಂದಿ ಮಹಾ ಸಂಸ್ಥಾನದಲ್ಲಿ ಆರ್ಟಿಸನ್ ಕಾರ್ಡ್ ವೃತ್ತಿ ಪ್ರಾತ್ಯಕ್ಷಿಕ ಪರೀಕ್ಷೆ

Posted On: 19-10-2023 04:24PM
ಪಡುಕುತ್ಯಾರು : ಕರ ಕುಶಲ ಕಲೆ ಅಭಿವೃದ್ಧಿ ಇಲಾಖೆಯಿಂದ ಕೇಂದ್ರಸರಕಾರದ ಸವಲತ್ತುಗಳನ್ನು ಪಡೆಯಲು ಆರ್ಟಿಸನ್ ಕಾರ್ಡ್ ಅತಿ ಅಗತ್ಯ, ಕುಶಲಕರ್ಮಿಗಳ ಹೆಸರಿನಲ್ಲಿ ಹಲವಾರು ಮಂದಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಅವುಗಳ ವಸ್ತುನಿಷ್ಠತೆ ಮತ್ತು ನಿಖರತೆಯನ್ನು ಪರಿಶೀಲಿಸಲು ಇತ್ತೀಚೆಗಿನ ದಿನಗಳಿಂದ ಪ್ರಾತ್ಯಕ್ಷಿಕ ಪರೀಕ್ಷೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಮಂಗಳೂರು ವಿಭಾಗದ ಹ್ಯಾಂಡಿಕ್ರಾಪ್ಟ್ಸ್ ಸರ್ವಿಸ್ ಸೆಂಟರ್ ಅಸಿಸ್ಟೆಂಟ್ ಡೈರೆಕ್ಟರ್ ವೀಣಾ ಅವರು ನುಡಿದರು. ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ನೇತೃತ್ವದಲ್ಲಿ ಇಲ್ಲಿನ ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ಆರ್ಟಿಸನ್ ಕಾರ್ಡ್ ಗಾಗಿ ನಡೆದ ವೃತ್ತಿ ಕೌಶಲ್ಯ ಪ್ರಾತ್ಯಕ್ಷಿಕೆ ಪರೀಕ್ಷೆಗೆ ಹಾಜರಾದ ಕುಶಲಕರ್ಮಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ಆರ್ಟಿಸನ್ ಕಾರ್ಡಿನ ಅರ್ಜಿ ಸಲ್ಲಿಸುವಿಕೆ, ಅವುಗಳ ಉಪಯೋಗಗಳು ಇವುಗಳ ವಿವರವಾದ ಮಾಹಿತಿಯನ್ನು ಅವರು ವೇಳೆ ನೀಡಿದರು. ಕೇಂದ್ರ ಸರ್ಕಾರವು ಎಂಎಸ್ಎಂಇ ಇಲಾಖೆಯ ಮೂಲಕ ಪಿಎಂ ವಿಶ್ವಕರ್ಮಯೋಜನೆ ಹಾಗೂ ಟೆಕ್ಸ್ ಟೈಲ್ಸ್ ಇಲಾಖೆಯ ಮೂಲಕ ಕರಕುಶಲ ಅಭಿವೃದ್ಧಿಗಾಗಿ ಅಗತ್ಯ ಇರುವ ಆರ್ಟಿಸನ್ ಕಾರ್ಡ್ ಗಳನ್ನು ಕರಕುಶಲಕರ್ಮಿಗಳಿಗೆ ನೀಡುತ್ತಿದೆ. ಕೇಂದ್ರಸರ್ಕಾರದ ಯೋಜನೆಗಳನ್ನು ಅರ್ಹಜನರಿಗೆ ತಲುಪಿಸುವ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಮತ್ತು ಐಎಂಎಸ್ ಫೌಂಡೇಶನ್ ವಿವಿಧ ಕಾರ್ಯಗಾರಗಳನ್ನು ನಡೆಸುತ್ತಿದೆ ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಘು ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಪದಾಧಿಕಾರಿ, ಅಸೆಟ್ ಸಲಹಾ ಮಂಡಳಿಯ ರಾಜೇಶ್ ಚಿಂಚೆವಾಡಿ ಬೆಂಗಳೂರು ನುಡಿದರು. ಕರಕುಶಲ ಕರ್ಮಿಗಳು ಕ್ಲಸ್ಟರ್ ಮುಖಾಂತರ ಸರ್ಕಾರದ ಸವಲತ್ತುಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಯಂತ್ರೋಪಕರಣಗಳ ಸಹಾಯವಿಲ್ಲದೆ ಕೈಗಳಿಂದ ತಯಾರಿಸುವ ಕರಕುಶಲ ವಸ್ತುಗಳ ತಯಾರಕರು ಈ ವಿಭಾಗಕ್ಕೆ ಸೇರುತ್ತಾರೆ. ಇಲ್ಲಿ ನುರಿತ ಕೆಲಸಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಗಳಿಸಿದವರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಆರ್ಟಿಸನ್ ಕಾರ್ಡ್ ಹೊಂದಿದವರು ಕೇಂದ್ರ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಮೊದಲ ಪ್ರಾಶಸ್ತ್ಯ ಹೊಂದಿರುತ್ತಾರೆ. ವಿವಿಧ ಟೂಲ್ ಕಿಟ್ ಸಹಿತ ಉಪಕರಣಗಳು, ಸ್ಟೈ ಫಂಡ್, . ಅನುದಾನಗಳು, ಬ್ಯಾಂಕ್ ಸಾಲಗಳು (ರೂಪಾಯಿ 50,000 ಕ್ಕಿಂತ ಮೇಲ್ಪಟ್ಟು-20 ಶೇಕಡಾ ರಿಯಾಯಿತಿಗಳು,) ಆಯ್ದ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತರಿಗೆ ಮಾಸಿಕ ಪಿಂಚಣಿ(5000/-, ಮೇಲ್ಪಟ್ಟು) ವಸ್ತು ಪ್ರದರ್ಶನಕ್ಕೆ ಇರುವ ಪ್ರಯಾಣ ಬತ್ಯೆ ವೆಚ್ಚಗಳು, ವಿವಿಧ ಕೌಶಲ್ಯ ಆಧಾರಿತ ತರಬೇತಿ ತರಗತಿಗಳು ಮುಂತಾದ ಅನೇಕ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಪುರಾತನ ಶೈಲಿಯ ಕರಕುಶಲ ವಸ್ತುಗಳ ನಿರ್ಮಾಣಕ್ಕೆ ಆದ್ಯತೆಯಿದೆ. ಚಿನ್ನ ಬೆಳ್ಳಿ, ಕಂಚು ಹಿತ್ತಾಳೆಗಳ ಎರಕ, ಕಬ್ಬಿಣ, ಕಾಷ್ಟ, ಶಿಲಾ ಶಿಲ್ಪ ಇವುಗಳ ಪಾರಂಪರಿಕ ಪುರಾತನ ಶೈಲಿಯ ಕಲೆಗಳು, ನಶಿಸಿ ಹೋಗುತ್ತಿರುವ ಪುರಾತನ ಕರಕುಶಲ ಕಲೆಗಳು ಇವುಗಳನ್ನು ಉಳಿಸುವ ಕೇಂದ್ರ ಸರಕಾರದ ಯೋಜನೆಗಳ ಸವಲತ್ತು ಗಳನ್ನ ಪಡೆಯಲು ಪ್ರಸ್ತುತ ಆರ್ಟಿಸನ್ ಕಾರ್ಡ್ ಉಪಯೋಗವಾಗಲಿದೆ ಎಂದು ಅವರು ವಿವರಣೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸವಲತ್ತುಗಳನ್ನು ಪಡೆಯಲು ಆಸಕ್ತಿ ವಹಿಸಿ ಆರ್ಟಿಸನ್ ಕಾರ್ಡ್ ಮೂಲಕ ಪ್ರಯೋಜನವನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಕೇಂದ್ರ ರಾಜ್ಯ ಸರಕಾರಗಳ ಚಿಕ್ಕ ಸವಲತ್ತಾದರೂ ಅದನ್ನು ಪಡೆದು ಅಳವಡಿಸಿಕೊಂಡು ಕಾರ್ಯಗತಗೊಳಿಸಿದಲ್ಲಿ ದೊಡ್ಡ ರೀತಿಯ ಯೋಜನೆಗಳು ನಮಗೆ ದೊರೆಯಲು ಸಾಧ್ಯವಿದೆ. ಆ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಕೂಡ ಆಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
60 ಕರಕುಶಲಕರ್ಮಿಗಳ ವೃತ್ತಿ ಕೌಶಲ್ಯ ಪ್ರಾತ್ಯಕ್ಷಕ ಪರೀಕ್ಷೆ ನಡೆಯಿತು. ಕರಕುಶಲ ಇಲಾಖೆಯ ದೀಪಕ್, ಇಲಾಖೆಯ ಸಹ ಸಂಯೋಜಕ ಗಣೇಶ್ ಆಚಾರ್ಯ ಕೋಟ, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಅಸೆಟ್ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕೆ ಜೆ ಮಂಗಳೂರು, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ, ಜನಾರ್ಧನ ಆಚಾರ್ಯ ಕನ್ಯಾನ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಮುಂತಾದವರು ಉಪಸ್ಥಿತರಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ದಿನೇಶ್ ಆಚಾರ್ಯ ಪಡುಬಿದ್ರಿ ವಂದಿಸಿದರು.
ಅಕ್ಟೋಬರ್ 21 : ಮೆನ್ಕಿನ ತುಡರ್ ವೀರಾಂಜನೇಯ ಭಕ್ತಿ ಗೀತೆ ಬಿಡುಗಡೆ

Posted On: 18-10-2023 03:02PM
ಕಾಪು : ಸಚೇಂದ್ರ ಅಂಬಾಗಿಲು ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ಸಹ ನಿರ್ಮಾಣದಲ್ಲಿ ಮೆನ್ಕಿನ ತುಡರ್ ವೀರಾಂಜನೇಯ ಭಕ್ತಿ ಗೀತೆಯು ಅಕ್ಟೋಬರ್ 21, ಶನಿವಾರ ಬಿಡುಗಡೆಗೊಳ್ಳಲಿದೆ.
ಏಕಕಾಲದಲ್ಲಿ 100ಕ್ಕೂ ಅಧಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬಿಡುಗಡೆಗೊಳ್ಳಲಿದೆ.
ನಾಗೇಂದ್ರ ಕುಮಾರ್ ನಿರ್ಮಾಣದಲ್ಲಿ, ಯುವ ಕಲಾವಿದೆ ದಿಶಾಲಿ, ಬಾಲ ಕಲಾವಿದರಾದ ರಿಧ ಮತ್ತು ಶಾಸ್ಯ ನಟಿಸಿದ್ದಾರೆ.
ಅನುಷಾ ಶೇಟ್ ಗಾಯನ, ಕಾಸ್ಟ್ಯೂಮ್ ಮತ್ತು ಮೇಕಪ್ ಸಪ್ನ ಉಡುಪಿ, ಛಾಯಾಗ್ರಹಣದಲ್ಲಿ ಸಚಿನ್, ಗಗನ್, ಎಡಿಟಿಂಗ್ ಕಾರ್ಯದಲ್ಲಿ ಅಶ್ವತ್ ಪೂಜಾರಿ, ಸಹ ನಿರ್ದೇಶನ ಸುಜಿತ್ ಕೋಟ್ಯಾನ್, ರೆಕಾರ್ಡಿಂಗ್ ನಲ್ಲಿ ಬ್ರಾಹ್ಮರಿ ಸ್ಟುಡಿಯೋ ಹೆಬ್ರಿ ಕಾರ್ಯನಿರ್ವಹಿಸಿದ್ದಾರೆ.
ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನಿರ್ವಹಣಾ ಸಮಿತಿ ಸಭೆ

Posted On: 18-10-2023 02:39PM
ಉಡುಪಿ : ಜಿಲ್ಲೆಯ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನಿರ್ವಹಣಾ ಸಮಿತಿ ಸಭೆ ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಬ್ಲೂ ಫ್ಲಾಗ್ ಬೀಚ್ ನಲ್ಲಿ ಕಸ ವಿಲೇವಾರಿ ಸ್ವಚ್ಛತೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಹಾಗೂ ಸಮರ್ಪಕವಾದ ಶುಲ್ಕ ವಸೂಲಾತಿ ಬಗ್ಗೆ ಜೊತೆಗೆ ವಾಟರ್ ಸ್ಪೋರ್ಟ್ಸ್ ಚಟುವಟಿಕೆ ಆರಂಭಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟಕಲ್ಲು : ಇ-ಸ್ಟಾಂಪಿಂಗ್ ಸೇವೆ ಲೋಕಾರ್ಪಣೆ

Posted On: 17-10-2023 05:27PM
ಬಂಟಕಲ್ಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ (ಲಿ.) ಶಾಖೆಯಲ್ಲಿ ಮಂಗಳವಾರ ಇ-ಸ್ಟಾಂಪಿಂಗ್ ಸೇವೆ ಲೋಕಾರ್ಪಣೆಗೊಂಡಿತು.
ಕರ್ನಾಟಕ ಬ್ಯಾಂಕ್ ಬಂಟಕಲ್ಲು ಶಾಖಾ ಪ್ರಬಂಧಕರಾದ ವಿಘ್ನೇಶ್ವರ ಉಡುಪ ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಶಿರ್ವ ಹೊರತು ಪಡಿಸಿ ಈ ಭಾಗದಲ್ಲಿ ಇ-ಸ್ಟಾಂಪಿಂಗ್ ಸೇವೆ ಇಲ್ಲ. ಈ ಭಾಗದ ನಾಗರಿಕರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಈ ವ್ಯವಸ್ಥೆಯನ್ನು ಒದಗಿಸಿದ ಶ್ರೀ ದುರ್ಗಾಪರಮೇಶ್ವರೀ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಿದರು.
ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಸೊಸೈಟಿಯ ಅಧ್ಯಕ್ಷರಾದ ಕೊಡಂಗೆ ಅಶೋಕ ಕಾಮತ್ ಮಾತನಾಡಿ ನಮಗೆ ಲಾಭಾಂಶ ಮುಖ್ಯವಲ್ಲ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವಾ ಭಾವನೆಯಿಂದ ಇ ಸ್ಟಾಂಪಿಂಗ್ ವ್ಯವಸ್ಥೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್, ಕಡ್ತಾಲ್ ಗಣಪತಿ ನಾಯಕ್, ಜಯಂತಿ ನಾಯಕ್, ಶಾಖಾ ಪ್ರಬಂಧಕ ಸುಧಾಕರ್ ನಾಯಕ್, ಸಲಹಾ ಸಮಿತಿಯ ಸದಸ್ಯರಾದ ಹರೀಶ್ ಪಾಟ್ಕರ್, ರಂಜಿತ್ ಕೆ.ಎಸ್, ಸಿಬ್ಬಂದಿಗಳಾದ ಅಭಿಲಾಷ್ ಕಾಮತ್, ಚೇತನ್ ನಾಯಕ್, ವಸಂತಿ ವಾಗ್ಲೆ, ನರೇಂದ್ರ ನವೆಲ್ಕರ್, ಗ್ರಾಹಕರು ಉಪಸ್ಥಿತರಿದ್ದರು. ನಿರ್ದೇಶಕರಾದ ಕೋಡುಗುಡ್ಡೆ ರವೀಂದ್ರ ಪಾಟ್ಕರ್ ನಿರೂಪಿಸಿ ಸ್ವಾಗತಿಸಿದರು. ಕಾರ್ಯನಿರ್ವಾಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ವಂದಿಸಿದರು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಆವಿಷ್ಕಾರ ದಿನ ಆಚರಣೆ

Posted On: 17-10-2023 05:20PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇನ್ನೊವೇಶನ್ ಕೌನ್ಸಿಲ್ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೋಶದ ಸಹಯೋಗದೊಂದಿಗೆ ರಾಷ್ಟ್ರೀಯ ಆವಿಷ್ಕಾರ ದಿನವನ್ನು ಅಕ್ಟೋಬರ್ 16ರಂದು ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಎನ್ ಐ ಟಿ ಕೆ ಸುರತ್ಕಲ್‌ನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಅರುಣ್ ಮೋಹನ್ ಇಸ್ಲೂರು ಉದ್ಘಾಟಿಸಿದರು. ಇವರು ಉದ್ಯಮಶೀಲತೆ, ಉದ್ಯಮಿಗಳಿಗೆ ಅಗತ್ಯವಿರುವ ಶಿಸ್ತು, ಹೊಂದಿಕೊಳ್ಳುವಿಕೆ, ಸೃಜನಶೀಲತೆಯ ಬಗ್ಗೆ ತಿಳಿಸಿದರು. ಹಲವಾರು ಉದ್ಯಮಿಗಳ ಉದಾಹರಣೆಯೊಂದಿಗೆ ಕೌಶಲ್ಯ ಮತ್ತು ಕಠಿಣ ಪರಿಶ್ರಮದಿಂದ ಉದ್ಯಮಿಗಳು ತಮ್ಮ ಉದ್ಯೋಗದಲ್ಲಿ ಹೇಗೆ ಯಶಸ್ವಿಯಾಗಬಹುದೆಂದು ವಿವರವಾಗಿ ತಿಳಿಸಿದರು.
ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಉಷಾ ಪಾರ್ವತಿ ಅತಿಥಿಯನ್ನು ಪರಿಚಯಿಸಿದರು. ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸಹನಾ ಕಾರಂತ್ ಸ್ವಾಗತಿಸಿದರು. ಉದ್ಯಮಶೀಲತೆ ಅಭಿವೃದ್ಧಿ ಕೋಶದ ಸಂಯೋಜಕರಾದ ಡಾ. ಮಧುಕ ನಾಯಕ್ ವಂದಿಸಿದರು.
ಶರನ್ನವರಾತ್ರಿ : ಮಾತೃ - ಪ್ರಕೃತಿ - ಶಕ್ತಿ ಉಪಾಸನಾ ಪರ್ವ

Posted On: 17-10-2023 05:06PM
ನಾವೆಲ್ಲರೂ ಒಬ್ಬಳು ’ತಾಯಿ’ಯಿಂದ ಜನಿಸಿದವರು. ನಮ್ಮೆಲ್ಲರನ್ನು ಒಳಗೊಂಡಿರುವ ಜಗತ್ತು ಒಬ್ಬಳೇ ಮಾತೆಯಿಂದ ಉಂಟಾಯಿತು ಎಂಬುದು ಆಶ್ಚರ್ಯದ ವಿಷಯವಲ್ಲ, ಅಸಂಬದ್ಧ ವಿವರಣೆಯಲ್ಲ.ಮಾನವನ ಬದುಕು-ಪ್ರಕೃತಿ- ಹವಾಮಾನ ಇವು ಪರಸ್ಪರ ಸಂಬಂಧಿ. ಪ್ರಕೃತಿಯ ಬದಲಾವಣೆಗೆ ತನ್ನನ್ನು ರೂಢಿಸಿಕೊಂಡು, ಅವಲಂಬಿಯಾಗಿ ತನ್ನ ನೆಲೆಯಾದ ಪ್ರಕೃತಿಯ ನಿಗ್ರಹ, ಅನುಗ್ರಹಗಳೆರಡನ್ನೂ ಸಹಜವಾಗಿ ಸ್ವೀಕರಿಸಿ ’ಬದುಕು ಕಟ್ಟಿಕೊಂಡ ಆದಿ ಮನುಷ್ಯ’ ಎಂಬ ತಿಳಿವಳಿಕೆಯಲ್ಲೂ ಸತ್ಯವಿಲ್ಲವೇ? ಜನ್ಮ ನೀಡಿದ ತಾಯಿಯನ್ನು, ಬದುಕಲು ಅವಕಾಶ ನೀಡಿದ ಪ್ರಕೃತಿಯನ್ನು ಕೃತಜ್ಞತಾ ಭಾವದಿಂದ ಕಂಡು ಪರಸ್ಪರ ಸಮೀಕರಿಸಿ, ಕೊನೆಗೆ ನಾಗರಿಕತೆಯ ಒಂದು ಪೂರ್ಣ ಹಂತದಲ್ಲಿ ನಿಲುಮೆಗೆ ನಿಲುಕದ, ಕಲ್ಪನೆಗೆ ಸಿಗದ ನಿಯಾಮಕ ಶಕ್ತಿಯಾಗಿ ಸ್ವೀಕರಿಸಿದ್ದು, ನಾವು ಸಂಶೋಧನಾ ಸಂಗ್ರಹಗಳಿಂದ ತಿಳಿಯಬಹುದಾದ ವಿಶ್ಲೇಷಣೆ. ಬಹುಶಃ ಇದೇ ಇರಬೇಕು ಮಾತೃ-ಪ್ರಕೃತಿ-ಶಕ್ತಿ ಉಪಾಸನಾ ಪ್ರಕಾರದ ಮೂಲ.
ಪ್ರಜನನ ಶಕ್ತಿ - ಸಸ್ಯಧಾರಣೆ : ಗರ್ಭಧಾರಣೆ ಹಾಗೂ ಪ್ರಜನನ ಶಕ್ತಿ ವಿಶೇಷವನ್ನು ಹೊಂದಿರುವ ಸ್ತ್ರೀ ಮಾತೃ ಆರಾಧನೆ ಮೂಲವಾದಳು. ತನ್ನಂತಹ ಪ್ರತಿರೂಪವನ್ನು ನೀಡಬಲ್ಲ ಸ್ತ್ರೀಯ ವಿಶೇಷ ಶಕ್ತಿ, ತಾನು ಪಡೆದುದನ್ನು ಪೋಷಿಸುವ ವಿಶಿಷ್ಟ ಮನಃಸ್ಥಿತಿಗಳು ಸ್ತ್ರೀ ಪಾರಮ್ಯವನ್ನು ಪ್ರತಿಷ್ಠಾಪಿಸಿಕೊಳ್ಳುವಲ್ಲಿ ಪರಿಣಾಮ ಬೀರಿರುವ ಅಂಶಗಳಿರಬೇಕು. ಕೃಷಿ ಸ್ತ್ರೀಯ ಅನ್ವೇಷಣೆ ಎಂಬುದು ಹಲವು ಸಂಶೋಧಕರ ಅಭಿಪ್ರಾಯ. ಪುರುಷ ಬೇಟೆಗೆ, ಪಶುಪಾಲನೆಗೆ ಹೊರಟಾಗ ಸ್ತ್ರೀ-ಕೃಷಿ ಸಂಬಂಧ ಅನಿವಾರ್ಯವಾಯಿತು. ಈ ಕಾರಣದಿಂದಲೇ ಭೂಮಿ-ಸ್ತ್ರೀ ಸಮಾನ ಸ್ಥಾನಮಾನ ಪಡೆದಿರಬಹುದೆಂಬ ವಾದದಲ್ಲಿ ಅರ್ಥವಿದೆ ಎಂದು ಅನ್ನಿಸುವುದಿಲ್ಲವೇ? ಸ್ತ್ರೀಯ ’ಗರ್ಭಧಾರಣಾ ಸಾಮರ್ಥ್ಯ’ಕ್ಕೆ ಸಂವಾದಿಯಾದ ಭೂಮಿಯ ’ಸಸ್ಯಧಾರಣ ಶಕ್ತಿ’ ಗಮನ ಸೆಳೆಯುವ ಅಂಶವಾಗುತ್ತದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆಯುವ ನಿಸರ್ಗ ನಿಯಮವೂ ಸ್ತ್ರೀ ಸಹಜವಾದ ಮಾತೃತ್ವದ ವಿಶೇಷತೆ ಕಂಡಾಗ ಸ್ತ್ರೀಯನ್ನು ಭೂಮಿಗೆ ಹೋಲಿಸಿದ ಆದಿಮಾನವನು ತಾಯಿಯಂತೆ ಭೂಮಾತೆಗೂ (ಪ್ರಕೃತಿಗೂ) ಗೌರವ ನೀಡಲಾರಂಭಿಸಿದ, ಕೃತಜ್ಞನಾಗತೊಡಗಿದ. ಶಕ್ತಿ-ವಸ್ತು ಪ್ರಕೃತಿಯ ಅವಿಭಾಜ್ಯ ಅಂಗಗಳು. ಇವುಗಳ ಪ್ರಾಂಸಗಿಕ ಸಮಾಗಮ ದೈವೀಶಕ್ತಿ. ನಿಯಾಮಕ ಶಕ್ತಿಯ ಕೆಲಸ ಎಂಬುದು ಒಂದು ಪ್ರಮಾಣ. ಈ ದೈವೀಶಕ್ತಿಯನ್ನು ಶಕ್ತಿ, ಮಹಾಮಾತೆ ಎನ್ನಲೇಬೇಕಾಯಿತು. ತಾಯಿ-ಪ್ರಕೃತಿಯ ಅದ್ಭುತ, ಕಲ್ಪನಾತೀತ ಸಾಮರ್ಥ್ಯವನ್ನು ಕಂಡು ನಿಬ್ಬೆರಗಾಗಿದ್ದ ಮನುಷ್ಯ, ನಿಯಾಮಕ ಶಕ್ತಿಯನ್ನು ಇವುಗಳಿಗಿಂತ ಹೆಚ್ಚಿನ, ಎತ್ತರದ ವಿಶೇಷ ಬಲ ಸಮನ್ವಿತವಾದುದೆಂದು ಊಹಿಸಿದ ಹಂತವೇ ಶಕ್ತಿ ಆರಾಧನೆ ಮೊದಲಿಟ್ಟಿರ ಬಹುದಾದ ಮನುಷ್ಯ ವಿಕಾಸದ ಹಂತವೆಂದು ಪರಿಗ್ರಹಿಸಬಹುದು. ಆಹಾರ ಸಂಗ್ರಹಣೆಯುಗ, ಬೇಟೆಯುಗ, ಪಶುಪಾಲನೆ-ಕೃಷಿಯುಗ, ಕೈಗಾರಿಕಾಯುಗಗಳೆಂದು ಮಾನವ ಬದುಕಿನ ಪುರಾತನ ಜೀವನ ವಿಧಾನಗಳ ಹಂತವನ್ನು ಗುರುತಿಸಿರುವ ವಿದ್ವಾಂಸರು ಪಶುಪಾಲನೆ-ಕೃಷಿಯೊಂದಿಗೆ ದೇವತೆಗಳ ಉಗಮವಾಗಿರಬೇಕು ಎನ್ನುತ್ತಾರೆ. ಇದರೊಂದಿಗೆ ವೈದಿಕ ಪೂರ್ವದ ಮಾತೃ-ಪ್ರಕೃತಿ-ಶಕ್ತಿ ಆರಾಧನೆಯ ಅಸ್ಪಷ್ಟ ನಿಲುವಿನ ಹಂತದಿಂದ ಸುವ್ಯವಸ್ಥಿತ, ಮೌಖಿಕ-ಲಿಖಿತ ಆಧಾರಗಳುಳ್ಳ ವೈದಿಕ ಕಾಲಕ್ಕೆ ಪ್ರವೇಶಿಸೋಣ. ಭಾರತೀಯ ಸಂಸ್ಕೃತಿಯ ಬೇರು ಇರುವುದು ಜನಪದ ಬದುಕಿನ ಹರವಿನಲ್ಲಿ ಅಲ್ಲವೇ? (ವಿವಿಧ ಗ್ರಂಥಗಳು ವಿದ್ವಾಂಸರಿಂದ ಸಂಗ್ರಹಿಸಿದ್ದು)
ಶಕ್ತಿ ಆರಾಧನೆ ವೈದಿಕ ಕಲ್ಪನೆ : ಪರಬ್ರಹ್ಮನ ಚೈತನ್ಯ ಸ್ವರೂಪಿಣಿಯಾದ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಳಾದ ಶಕ್ತಿಯನ್ನು ಮಹಾದೇವನ ಮಡದಿಯಾಗಿ ಶಿವಶಕ್ತಿ ಎಂದು ಶೈವರು, ಶ್ರೀ ಲಕ್ಷ್ಮೀ ಎಂದು ವೈಷ್ಣವರು, ಮಹಾಮಾತೆ ಎಂದು ಶಾಕ್ತರು ಪೂಜಿಸಲಾರಂಭಿಸಿದರು. ವೇದದಲ್ಲಿ ಬರುವ ರಾತ್ರೀ ಸೂಕ್ತ, ವಾಗಂಭೃಣಿಸೂಕ್ತ, ಶ್ರೀ ಸೂಕ್ತಗಳು ಮಹಾಕಾಳಿ, ಮಹಾಸರಸ್ವತೀ, ಮಹಾಲಕ್ಷ್ಮೀಯರ ಅವಿರ್ಭಾವದ ಸ್ಪಷ್ಟ ಕಲ್ಪನೆ ನೀಡುತ್ತದೆ. ವೈದಿಕಗೊಂಡ ಶಕ್ತಿ ಆರಾಧನೆ ಮಹತ್ತ್ವವನ್ನು ಪಡೆಯಿತು. ಮಾರ್ಕಂಡೇಯ ಪುರಾಣದ ಸಪ್ತಶತಿಯು ಶಕ್ತಿ ಆರಾಧನೆಗೆ ಪೂರ್ಣ ಪ್ರಮಾಣದ ವೈದಿಕ ಸಾಕ್ಷಿಯಾಗಿದೆ. ಮಾತೃ ಆರಾಧನೆಯೇ ವಿಕಾಸಗೊಂಡು ಮುಂದೆ ಶಕ್ತಿ ಪೂಜೆಯಾಗಿ, ವೈದಿಕರ ಮಾನ್ಯತೆ ಪಡೆದು ಉಪಾಸನಾ ದೇವತೆಯಾಗಿ ಪುರಾಣಗಳಲ್ಲಿ ಪ್ರಚಾರ ಪಡೆಯಿತು. ದೇವಾಲಯ ಸಂಸ್ಕೃತಿಯು ವೈದಿಕರ ಅನಿವಾರ್ಯ ಹೆಜ್ಜೆಯಾಗಬೇಕಾದ ಕಾಲ ಬಂದಾಗ ದುರ್ಗಾ ದೇವಾಲಯಗಳು ಕಾಣಿಸಿಕೊಂಡವು. ದಕ್ಷಿಣಕನ್ನಡ - ಉಡುಪಿ ಜಿಲ್ಲೆಗಳಲ್ಲಿ ಕ್ರಿ.ಶ. ೭-೮ನೇ ಶತಮಾನದಷ್ಟು ಪುರಾತನವಾದ ದುರ್ಗಾ ಆರಾಧನಾ ಕೇಂದ್ರಗಳಿವೆ. ಇತಿಹಾಸ ಪೂರ್ವಕಾಲದ ಶಕ್ತಿ ಆರಾಧನೆಗೆ ಹೋಲಿಸಬಹುದಾದ ಉಪಾಸನಾ ತಾಣಗಳು ಕರಾವಳಿ ಜಿಲ್ಲೆಗಳಲ್ಲಿವೆ.
ಲೇಖನ : ಕೆ.ಎಲ್.ಕುಂಡಂತಾಯ
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ - ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ಸಂಪನ್ನ

Posted On: 17-10-2023 11:32AM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಹೊಸ ಮಾರಿಗುಡಿ ಜೀರ್ಣೋದ್ದಾರದ ಕಾಪು ವಿಧಾನಸಭಾ ಕ್ಷೇತ್ರ ಗ್ರಾಮ ಸಮಿತಿ ಮತ್ತು ವಿವಿಧ ಸಮಿತಿಯ ಮಹಿಳೆಯರಿಂದ ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ನಡೆಯಿತು.
ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿಯವರ ಮಾರ್ಗದರ್ಶನ ದಲ್ಲಿ ಅರ್ಚಕ ವೆl ಮೂ। ಶ್ರೀನಿವಾಸ ತಂತ್ರಿಯವರ ಪ್ರಾರ್ಥನೆಯೊಂದಿಗೆ ಭಜನೆ, ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕುಂಕುಮಾರ್ಚನೆ ಸೇವೆಯ ಉಸ್ತುವಾರಿ ಗಳಾದ ಶಿಲ್ಪಾ ಜಿ. ಸುವರ್ಣ, ಶಾಂತಲತಾ ಎಸ್. ಶೆಟ್ಟಿ, ಬೀನಾ ವಿ. ಶೆಟ್ಟಿ, ಅನುರಾಧಾ ಎಂ. ಶೆಟ್ಟಿ, ರೇಣುಕಾ ಧನಂಜಯ್, ಶೈಲಜಾ ಪುರುಷೋತ್ತಮ್, ಕವಿತಾ ಶೆಟ್ಟಿ, ಪ್ರತಿಭಾ ಯು. ಶೆಟ್ಟಿ, ಸುನೀತಾ ಶೆಟ್ಟಿ, ಅರ್ಚನಾ ಶೆಟ್ಟಿ, ಸಾವಿತ್ರಿ ಗಣೇಶ್, ವಿಜಯಲಕ್ಷ್ಮಿ ಆಚಾರ್ಯ, ಮಮತಾ ವೈ. ಶೆಟ್ಟಿ, ಹೀರಾ ಡಿ. ಶೆಟ್ಟಿ, ಜಯಲಕ್ಷ್ಮಿ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಸಮಿತಿ ಉಪಾಧ್ಯಕ್ಷರಾದ ಗಂಗಾಧರ ಬಿ. ಸುವರ್ಣ, ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ ಎಸ್. ಶೆಟ್ಟಿ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

Posted On: 16-10-2023 10:45PM
ಬಂಟಕಲ್ಲು : ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಶರನ್ನವರಾತ್ರಿ ಮಹೋತ್ಸವದಲ್ಲಿ ಒಂಭತ್ತು ದಿನಗಳ ಪರ್ಯಂತ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ನವರಾತ್ರಿ ಉತ್ಸವ ಶಕ್ತಿದೇವತೆಗಳ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇದ್ದು ದುರ್ಗೆಯು ಲೋಕಕಲ್ಯಾಣಾರ್ಥ ನವರೂಪಗಳನ್ನು ಧರಿಸಿ ಅಸುರ ದುಷ್ಟಶಕ್ತಿಗಳ ನಾಶ ಮಾಡಿ ಧರ್ಮವನ್ನು ರಕ್ಷಿಸಿದ ಹಿನ್ನೆಲೆಯನ್ನು ದೇಶದಾದ್ಯಂತ ವಿವಿಧ ರೂಪದಲ್ಲಿ ನವರಾತ್ರಿ ಹಬ್ಬದ ಮೂಲಕ ದೇವಿಯ ಆರಾಧನೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿಯೂ ದೇವಿಯ ಆರಾಧನೆಯೊಂದಿಗೆ ಪ್ರತೀ ವರ್ಷವೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಹವ್ಯಾಸಿ ಯಕ್ಷಗಾನ ಹಿರಿಯ ಕಲಾವಿದ ಅಚ್ಯುತ ನಾಯಕ್ ಶಂಕರಪುರ ಇವರನ್ನು ಸನ್ಮಾನಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಯಕ್ಷಗಾನ ಕರಾವಳಿಯ ಹೆಮ್ಮೆಯ ಕಲೆಯಾಗಿದ್ದು, ಅನಾದಿ ಕಾಲದಿಂದಲೂ ಪುರಾಣ, ರಾಮಾಯಣ, ಮಹಾಭಾರತ, ಭಾಗವತದ ಘಟನೆಗಳನ್ನು ರಂಗದಲ್ಲಿ ಅಭಿನಯಿಸಿ ಪ್ರದರ್ಶಿಸುವ ಮೂಲಕ ಜನಸಾಮಾನ್ಯರಲ್ಲೂ, ದೇಶದ ಭವ್ಯ ಸಂಸ್ಕೃತಿ, ಪರಂಪರೆ, ದೈವಭಕ್ತಿ, ಜೀವನ ಮೌಲ್ಯಗಳನ್ನು ಜಾಗೃತಿ ಮೂಡಿಸುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯುವ, ಸನ್ನಡತೆಯ ಗುಣಗಳನ್ನು ಬೆಳೆಸಲು ಪ್ರೇರಣೆ ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ರಾಜಾಪುರ ಸಾರಸ್ವತ ಯುವೃಂದದ ಅಧ್ಯಕ್ಷ ರಾಂಘವೇಂದ್ರ ನಾಯಕ್ ಪಾಲಮೆ, ಶ್ರೀದುರ್ಗಾ ಮಹಿಳಾ ವೇದಿಕೆಯ ಅಧ್ಯಕ್ಷ ಸರಸ್ವತೀ ಎಸ್.ಕಾಮತ್, ಉಷಾ ಮರಾಠೆ, ಉಪಸ್ಥಿತರಿದ್ದರು.
ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕರಾದ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಸುಕನ್ಯಾ ಜೋಗಿ ಪ್ರಾರ್ಥಿಸಿದರು. ನಂತರ ಶ್ರೀಆದಿಶಕ್ತಿ ಮಹಾಲಕ್ಷ್ಮಿ ತೆಂಕುತಿಟ್ಟು ಯಕ್ಷಗಾನ ಮಂಡಳಿ ಇವರಿಂದ "ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕಾಪುವಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಕಾಪು ಅಭಿವೃದ್ಧಿ ಸಮಿತಿ

Posted On: 16-10-2023 10:41PM
ಕಾಪು : ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಪು ಅಭಿವೃದ್ಧಿ ಸಮಿತಿಯು ಕಾಪುವಿನ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ನೀಡಿತು.
ಕಾಪು ಪೇಟೆಯ ಸುತ್ತಮುತ್ತಲೂ ಹಲವಾರು ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಬಿಡಲು ಸೂಕ್ತವಾದ ಒಳಚರಂಡಿಯ ವ್ಯವಸ್ಥೆ, ಟ್ರೀಟ್‌ಮೆಂಟ್ ಪ್ಲಾಂಟ್, ಕುಡಿಯುವ ನೀರು, ಪೇಟೆಯಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಯಿತು.
ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಸರಕಾರೀ ಜಮೀನಿನ ಸಮೀಕ್ಷೆಯನ್ನು ನಡೆಸಿದಾಗ ಕೆಲವೊಂದು ಕಡೆ ಜಮೀನು ಒತ್ತುವರಿಯ ಬಗ್ಗೆ ತಿಳಿಸಲಾಯಿತು. ಪೇಟೆಯಲ್ಲಿ ಸಾಕಷ್ಟು ಬೀದಿದೀಪಗಳ ಕೊರತೆ. ರಾತ್ರಿಯಾದಂತೆ ಕಾಪು ಪೇಟೆಯಲ್ಲಿ ಮಾರ್ಕೆಟ್ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಬಿಟ್ಟರೆ ಉಳಿದ ದೀಪಗಳು ಬೆಳಕು ನೀಡುವಲ್ಲಿ ವಿಫಲವಾಗಿವೆ. ಹಾಗೂ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದಲ್ಲಿ ಅಪರಾಧ ಪತ್ತೆಗೆ ಸಹಾಯವಾಗುತ್ತದೆ. ಸಾರ್ವಜನಿಕ ಹಿಂದೂ ರುದ್ರಭೂಮಿಯ ಪಕ್ಕ ಈ ಹಿಂದೆ ಇದ್ದ ತ್ಯಾಜ್ಯ ಸಂಗ್ರಹ ಕೇಂದ್ರವು ಪ್ರಸ್ತುತ ಕಾಪು ತಾಲೂಕಿನ ಎಲ್ಲೂರು ಗ್ರಾಮಕ್ಕೆ ಸ್ಥಳಾಂತರಿಸಲ್ಪಟ್ಟರೂ, ತ್ಯಾಜ್ಯದ ರಾಶಿಯು ಇನ್ನೂ ಇಲ್ಲೇ ಬಾಕಿಯಾಗಿ ದುರ್ನಾತ ಬೀರುತ್ತಿದೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಬಾವಿಯ ಕಲುಷಿತವಾಗಿದೆ. ಈ ತ್ಯಾಜ್ಯವನ್ನು ಈ ಕೂಡಲೇ ತೆರವುಗೊಳಿಸಲು ನಿರ್ದೇಶಿಸುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಸಂದರ್ಭ ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪಡುಕುತ್ಯಾರು : ಆನೆಗುಂದಿ ಮಹಾ ಸಂಸ್ಥಾನ - ರಜತ ಮಂಟಪ ಸಮರ್ಪಣೆ

Posted On: 15-10-2023 03:46PM
ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡು ಕುತ್ಯಾರಿನ ಶ್ರೀ ಸರಸ್ವತೀ ಮಾತೃ ಮಂಡಳಿಯ ವತಿಯಿಂದ 21ಕಿಲೋಗ್ರಾಂ ಬೆಳ್ಳಿಯಲ್ಲಿ ತಯಾರಿಸಲಾದ 5.5 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅತ್ಯಾಕರ್ಷಕ ಕುಸುರಿ ಕೆಲಸದೊಂದಿಗೆ ನಿರ್ಮಾಣಗೊಂಡ ಜಗದ್ಗುರುಗಳವರ ಪಟ್ಟದ ದೇವರ ರಜತ ಮಂಟಪವು ಶರನ್ನವರಾತ್ರಿಯ ಆರಂಭದ ದಿನವಾದ ರವಿವಾರ ಶ್ರೀಕರಾರ್ಚಿತ ಪೂಜೆಗೆ ಸಮರ್ಪಣೆಗೊಂಡಿತು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಬ್ರಹ್ಮಶ್ರೀ ಅಕ್ಷಯ ಶರ್ಮಾ ತಂತ್ರಿ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಬ್ರಹ್ಮಶ್ರೀ ಕೇಶವ ಶರ್ಮ ಇರುವೈಲು, ಬ್ರಹ್ಮಶ್ರೀ ಮೌನೇಶ್ ಶರ್ಮ ಬ್ರಹ್ಮಶ್ರೀ ರುದ್ರೇಶ್ ಶರ್ಮ ರಜತಾ ಮಂಟಪದ ಶಿಲ್ಪಿಗಳಾದ ಅಣ್ಣಪ್ಪ ಆಚಾರ್ಯ ಶಿರ್ವ, ಮಹೇಶ್ ಆಚಾರ್ಯ ಬಾರ್ಕೂರು, ಧೀರಜ್ ಆಚಾರ್ಯ ಕಾರ್ಕಳ, ಸತೀಶ್ ಆಚಾರ್ಯ ಮಂಚಕಲ್ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಇದೇ ವೇಳೆ ಮಹಾ ಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ ಇವರಿಂದ ಧಾನ್ಯ ಲಕ್ಷ್ಮಿ ಪೂಜೆಯ ಅಂಗವಾಗಿ ಬತ್ತದ ತೆನೆಕಟ್ಟುವ ಸಂಪ್ರದಾಯ ನೆರವೇರಿತು.
ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ ಸೂರ್ಯ ಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಆನೆಗುಂದಿ ಸರಸ್ವತಿ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು, ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರವಿ ಆಚಾರ್ಯ ಬೆಂಗಳೂರು ಲೋಕೇಶ್ ಆಚಾರ್ಯ ಅರೆ ಮಾದನಹಳ್ಳಿ, ಮನೋಹರ ಆಚಾರ್ಯ ಬೆಂಗಳೂರು, ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ,ಇಂದಿರಾ ಪುರುಷೋತ್ತಮ ಆಚಾರ್ಯ ಪುತ್ತೂರು, ಉಷಾ ವಿವೇಕ್ ಆಚಾರ್ಯ ಮಂಚಕಲ್, ಉಷಾ ರೂಪೇಶ್ ಆಚಾರ್ಯ ಶಿರ್ವ,ರಾಘವೇಂದ್ರ ಆಚಾರ್ಯ ಉಡುಪಿ, ಉಷಾ ಸುಬ್ರಹ್ಮಣ್ಯ ಆಚಾರ್ಯ ಕಾಡಬೆಟ್ಟು, ಸುರೇಶ್ ಆಚಾರ್ಯ ಇರಂದಾಡಿ, ನವೀನ್ ಆಚಾರ್ಯ ಪಣಿಯೂರು, ರಮಾ ಅಚ್ಯುತ ಆಚಾರ್ಯ ಉಡುಪಿ, ಲತಾ ಎಸ್ ಆಚಾರ್ಯ ಕುತ್ಯಾರು, ಶಾಲಿನಿ ರತ್ನಾಕರ ಆಚಾರ್ಯ ಕುತ್ಯಾರು, ಸವಿತಾ ನಾಗೇಶ ಆಚಾರ್ಯ ಉಡುಪಿ , ಸುಲೋಚನಾ ರಮೇಶ್ ಆಚಾರ್ಯ ಎರ್ಮಾಳು, ಚಂದ್ರಾವತಿ ಶ್ರೀಧರ. ಆಚಾರ್ಯ ವಡೇರಹೋಬಳಿ, ಪುಷ್ಪಲತಾ ಲೋಕೇಶ್ ಆಚಾರ್ಯ ಕಂಬಾರು ಮುಂತಾದವರು ಉಪಸ್ಥಿತರಿದ್ದರು.