Updated News From Kaup

ಮಾನವಾಧಿಕಾರ ಮಹಿಳಾ ಹಾಗೂ ಬಾಲವಿಕಾಸ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಸ್ಮಿತಾ ಸುಧೀರ್ ಸುವರ್ಣ

Thumbnail
Posted On: 31 Jul 2025, 07:51 PM

ಕಾಪು : ಮಾನವಾಧಿಕಾರ ಮಹಿಳಾ ಹಾಗೂ ಬಾಲವಿಕಾಸ ಸಂಘಟನೆ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ತುಳು ಚಿತ್ರನಟಿ ಶ್ರೀಮತಿ ಸ್ಮಿತಾ ಸುಧೀರ್ ಸುವರ್ಣ ಇವರು ನಿಯುಕ್ತಿಗೊಂಡಿದ್ದಾರೆ. ಇವರನ್ನು ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿಯವರು ನಿಯುಕ್ತಿಗೊಳಿಸಿದ್ದಾರೆ.

ಕಾಪು : ಕಳತ್ತೂರು ಅಯ್ಯಣ್ಣ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

Thumbnail
Posted On: 31 Jul 2025, 07:47 PM

ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಪು ತಾಲೂಕು ವತಿಯಿಂದ ಪಡು ಕಳತ್ತೂರು ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನೆರವೇರಿತು. ಶಾಲಾ ಸಂಚಾಲಕ ಪ್ರವೀಣ್ ಗುರ್ಮೆ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಂಡು ಬಂದಲ್ಲಿ ಮಾತ್ರ ಪರಿಸರದ ಅರಿವು ಮೂಡಲು ಸಾಧ್ಯ. ಮರಗಿಡಗಳನ್ನ ಬೆಳೆಸುವುದು, ನೀರನ್ನು ಉಳಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಅತ್ಯಗತ್ಯ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುತ್ಯಾರು ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷರಾದ ಹರೀಶ್ ಕುಲಾಲ್, ಶಾಲಾ ಮುಖ್ಯ ಶಿಕ್ಷಕಿ ಶಾಂಭವಿ ಆಚಾರ್ಯ, ಪದಾಧಿಕಾರಿ ಪ್ರದೀಪ್, ಕೃಷಿ ಮೇಲ್ವಿಚಾರಕರಾದ ದೇವೇಂದ್ರ, ಅಧ್ಯಾಪಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ, ಪರಿಸರ ಗೀತೆ, ಪ್ರಭಂದ ಸ್ಪರ್ಧೆ, ಎಲೆ ಗುರುತಿಸುವಿಕೆ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್.

Thumbnail
Posted On: 31 Jul 2025, 06:36 PM

ಪಡುಬಿದ್ರಿ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಸ್ತೆ, ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡಿ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಗುಡ್ಡ ಕುಸಿತ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ. ಇದರಿಂದ ಆತಂಕದ ವಾತವರಣ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಒಂದು ದಿನ ಗಿಡ ನೆಟ್ಟು ವರ್ಷಪೂರ್ತಿ ಸಂರಕ್ಷಿಸಿಕೊಂಡು ಬರುವುದು. ನಾವು ನೆಟ್ಟ ಗಿಡ ಭವಿಷ್ಯತ್ತಿನಲ್ಲಿ ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಗಾಳಿ ,ಅಹಾರ ಪೂರೃೆಸುವಂತಿರ ಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಹಸಿರು ಸೇನೆ ಹೆಜಮಾಡಿ ಹಾಗೂ ಪಡುಬಿದ್ರಿ ಪೋಲಿಸ್ ಠಾಣೆ ವತಿಯಿಂದ ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಹಾಗೂ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿದಿನ ಗಿಡಮರಗಳೊಂದಿಗೆ ಹೆಜ್ಜೆ ಹಾಕಬೇಕು. ಮರಗಳಿಲ್ಲದೆ ನಮ್ಮ ಜೀವನ ಅಸಾಧ್ಯ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಬಿಟ್ಟುಹೋಗಲು ಮರಗಳನ್ನು ಸಂರಕ್ಷಿಸುವುದು ಅಗತ್ಯ ಎಂದು ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಶಕ್ತಿವೇಲು ಹೇಳಿದರು. ಹೆಜಮಾಡಿ ಹಸಿರು ಸೇನೆ ಸಂಚಾಲಕ ಶೇಖರ್ ಹೆಜ್ಮಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾಗಿ ಪದನ್ನೋತಿ ಹೊಂದಿದ ಡಾ. ವಿನ್ಸೆಂಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ. ವಿನ್ಸೆಂಟ್, ಶಾಲಾ ಮುಖ್ಯೋಪಾಧ್ಯಾಯಿನಿ ಸಂಪಾವತಿ, ಹಸಿರು ಸೇನೆ ಕಾರ್ಯದರ್ಶಿ ಕೇಶವ್ ಸಾಲ್ಯಾನ್, ರೋಟರಿ ಸದಸ್ಯರಾದ ಗಣೇಶ್ ಆಚಾರ್ಯ ಎರ್ಮಾಳ್, ಗೀತಾ ಅರುಣ್, ಹೇಮಲತಾ ಸುವರ್ಣ, ಶೋಭಾ ಚಂದ್ರಶೇಖರ್, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸುನಿಲ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿ, ಸಂತೋಷ್ ಪಡುಬಿದ್ರಿ ನಿರೂಪಿಸಿದರು.

ಕಾಪು : ಘಂಟಾನಾದ ಸೇವೆಯಲ್ಲಿ ಇಷ್ಟಾರ್ಥ ಸಿದ್ಧಿ - ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

Thumbnail
Posted On: 31 Jul 2025, 04:31 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನಕ್ಕೆ ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕುಟುಂಬದ ಎಲ್ಲಾ ಸದಸ್ಯರು ನವದುರ್ಗಾ ಲೇಖನ ಯಜ್ಞದ ಸಂಕಲ್ಪವನ್ನು ಮಾಡಿದರು. ಪತ್ನಿ ರಂಜಿತಾ ರಾಧಾ ದೇವಿಗೆ ಸೀರೆ ಮತ್ತು ಬಾಗಿನ ನೀಡಿದರು. ಪುತ್ರ ವಿಹಾನ್ ಕಾರ್ಣಿಕ್ ಜೊತೆಗಿದ್ದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ "ಅಮ್ಮನ ಅನುಗ್ರಹ ಪ್ರಸಾದ" ನೀಡಿ ಗೌರವಿಸಿದರು. ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ನಾಗರಪಂಚಮಿಯ ಪರ್ವಕಾಲದಲ್ಲಿ ಕಾಪು ಮಾರಿಯಮ್ಮನ ಸನ್ನಿದಾನಕ್ಕೆ ಬಂದಿದ್ದೇನೆ. ಎಲ್ಲಾ ಸೇವೆಯನ್ನು ಮಾಡುವ ಜೊತೆಗೆ ವಿಶೇಷವಾಗಿ ಘಂಟಾನಾದ ಸೇವೆಯನ್ನು ಮಾಡಿದೆನು. ಇಲ್ಲಿನ ಬೃಹತ್ ಘಂಟೆಯನ್ನು ಬಾರಿಸುವ ಮೂಲಕ ನನ್ನ ಬೇಡಿಕೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದೇನೆ ಎಂದರು. ಅಯೋಧ್ಯೆಯಲ್ಲಿ ದೇಶದ ಪ್ರಥಮ ಬೃಹತ್ ಗಾತ್ರದ ಘಂಟೆ ಇದ್ದರೇ, ಎರಡನೇಯದ್ದು ಉಡುಪಿಯ ಕಾಪುವಿನಲ್ಲಿ ಇರುವಂತದ್ದು. ಘಂಟಾನಾದ ಅದ್ಭುತವಾಗಿದೆ, ಕಂಪನಾಂಶಗಳನ್ನು ಕೇಳುತ್ತಿದ್ದರೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಗೌರವ ಸಲಹೆಗಾರ ನಿರ್ಮಲ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : 'ಕೋಟಿ ಚೆನ್ನಯೆರ್' ನಾಟಕ ಯಶಸ್ವಿ ಪ್ರದರ್ಶನ

Thumbnail
Posted On: 30 Jul 2025, 11:13 AM

ಉದ್ಯಾವರ : ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ, ಇವರು ಸಾದರಪಡಿಸಿದ ರಂಗ ಕೇಸರಿ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದಲ್ಲಿ ಪ್ರಕೃತಿ ಕಲಾವಿದರು ಕುಡ್ಲ ಅಭಿನಯಿಸಿದ, ಭಕ್ತಿ ಪ್ರಧಾನ ತುಳು ನಾಟಕ ಬಿರ್ದ್'ದ ಬೀರೆರ್ 'ಕೋಟಿ ಚೆನ್ನಯೆರ್' ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಸಾವಿರಕ್ಕೂ ಅಧಿಕ ಕಲಾಭಿಮಾನಿಗಳಿಂದ ಉದ್ಯಾವರದ ಕ್ಸೇವಿಯರ್ ಸಭಾಭವನವು ತುಂಬಿತ್ತು. ಇದೇ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಉದ್ಯಾನವನದ ನೀಲ ನಕ್ಷೆಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅನಾವರಣಗೊಳಿಸಿದರು. ಉದ್ಯಾನವನಕ್ಕಾಗಿ ಕಡೆಕಾರಿನಲ್ಲಿ ಸರಕಾರಿ ಭೂಮಿ ಮಂಜೂರಾತಿಗೆ ಸರಕಾರಕ್ಕೆ ಮಾಜಿ ಸಚಿವರ ಮೂಲಕ ಸಂಘಟನೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಸಂಘಟನೆ ಮಾಡುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್ ಉದ್ಯಾವರ, ಶ್ರೇಯಸ್ ಕೋಟ್ಯಾನ್, ಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಮಿಥುನ್ ಅಮೀನ್, ಭೂ ನ್ಯಾಯ ಮಂಡಳಿ ಸದಸ್ಯ ರೊಯ್ಸ್ ಫೆರ್ನಾಂಡಿಸ್, ಪ್ರಮುಖರಾದ ದಿವಾಕರ್ ಬೊಳ್ಜೆ, ಶಬರೀಶ್ ಸುವರ್ಣ, ಸಚಿನ್ ಸಾಲ್ಯಾನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ದಿವಾಕರ್ ಕಡೆಕಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷರಾಗಿ ವಿಧಿತ್ ಪೂಜಾರಿ ಕರ್ನಿರೆ ಆಯ್ಕೆ

Thumbnail
Posted On: 30 Jul 2025, 11:09 AM

ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ 2025 -26ನೇ ವರ್ಷದ ಅಧ್ಯಕ್ಷರಾಗಿ ವಿಧಿತ್ ಪೂಜಾರಿ ಕರ್ನಿರೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿಖಿಲ್ ಪೂಜಾರಿ, 2 ನೇ ಉಪಾಧ್ಯಕ್ಷರಾಗಿ ಸುಜಾತ ಪ್ರಸಾದ್, ಕಾರ್ಯದರ್ಶಿಯಾಗಿ ಭಾಸ್ಕರ್ ಎನ್ ಅಂಚನ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಕರ್ನಿರೆ, ಕೋಶಾಧಿಕಾರಿಯಾಗಿ ತುಳಸಿ, ಸಂಘಟನಾ ಕಾರ್ಯದರ್ಶಿಯಾಗಿ ಅಂಕಿತ್ ಮುದರಂಗಡಿ, ವ್ಯಕ್ತಿತ್ವ ವಿಕಸನ ರಾಜೇಶ್ವರಿ ಅವಿನಾಶ್, ನಾರಾಯಣ ಗುರು ತತ್ವ ಪ್ರಚಾರ ಹರೀಶ್ ಕೋಟ್ಯಾನ್, ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಪೂರ್ಣಿಮಾ ವಿಧಿತ್, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು ಶ್ರವಣ್ ಕುಮಾರ್, ಸಮಾಜ ಸೇವಾ ನಿರ್ದೇಶಕರು ರಾಜೇಶ್ ಕೆ ಪಲಿಮಾರು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ಲಾವಣ್ಯ, ವಿದ್ಯಾರ್ಥಿ ಸಂಘಟನೆ ಕಾರ್ತಿಕ್ ಮತ್ತು ಸುದೀಪ್, ಮಹಿಳಾ ಸಂಘಟನೆ ಲತಾ ವಸಂತ್, ಪ್ರಚಾರ ನಿರ್ದೇಶಕರು ದೀಪಕ್ ಕರ್ನಿರೆ, ವಿದ್ಯಾ ನಿಧಿ ನಿರ್ದೇಶಕರಾಗಿ ಜೆನಿತ ಪಲಿಮಾರು ಆಯ್ಕೆಯಾಗಿದ್ದಾರೆ.

ಎರ್ಮಾಳು ತೆಂಕ ಹಾಗೂ ಬಡಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Thumbnail
Posted On: 29 Jul 2025, 09:13 PM

ಎರ್ಮಾಳು : ಜನ ಕಲ್ಯಾಣಕ್ಕೆ ಪೂರಕವಾದ ಸೇವೆಯನ್ನು ಜನಾರ್ಧನ ಜನ ಕಲ್ಯಾಣ ಸಮಿತಿ ಮಾಡುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜದ ಋಣ ತೀರಿಸುವ ಕಾರ್ಯ ಸಮಿತಿ ಮಾಡುತ್ತಿದೆ ಎಂದು ಎರ್ಮಾಳು ಜನಾರ್ಧನ ದೇವಳದ ಅರ್ಚಕರಾದ ವಿಷ್ಣುಮೂರ್ತಿ ಭಟ್ ಹೇಳಿದರು. ಅವರು ಮಂಗಳವಾರ ಜನಾರ್ಧನ ಜನಕಲ್ಯಾಣ ಸೇವಾ ಸಭಾಂಗಣದಲ್ಲಿ ಶ್ರೀ ಜನಾರ್ಧನ ದೇವಸ್ಥಾನ ಹಾಗೂ ಶ್ರೀ ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿ (ರಿ.) ಎರ್ಮಾಳು ವತಿಯಿಂದ 2024-25ರ ಶೈಕ್ಷಣಿಕ ವರ್ಷದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ 5ನೇ ತರಗತಿಯಿಂದ ಪಿಯುಸಿವರೆಗಿನ ಎರ್ಮಾಳು ತೆಂಕ ಹಾಗೂ ಬಡಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿದರು. ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ಜಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಋಣಾತ್ಮಕವನ್ನು ಯೋಚಿಸದೆ ಧನಾತ್ಮಕ ಚಿಂತನೆಯ ಮೂಲಕ ಜೀವನದಲ್ಲಿ ಮುಂದೆ ಬರಬೇಕು ಎಂದು  ಹೇಳಿದರು.  ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಷಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.   2024-25ರ ಶೈಕ್ಷಣಿಕ ವರ್ಷದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ 5ನೇ ತರಗತಿಯಿಂದ ಪಿಯುಸಿವರೆಗಿನ 100 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಯದಡಿ, ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ, ಜ್ಯೋತಿ ಶೆಟ್ಟಿ,  ಸಂತೋಷ್ ಶೆಟ್ಟಿ ಬರ್ಪಾಣಿ,  ರಾಕೇಶ್ ಎಲ್ ಶೆಟ್ಟಿ, ತೆಂಕ ಗ್ರಾ.ಪಂ ಅಧ್ಯಕ್ಷೆ ಸುರೇಖ, ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು. ಅಮೃತ ಪ್ರಾರ್ಥಿಸಿದರು. ಸುರೇಶ್ ಜಿ ಶೆಟ್ಟಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು. ಓಂಕಾರ್ ಕಲಾ ಸಂಗಮ ಪಡುಬಿದ್ರಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಕಾಪು ತಾಲೂಕಿನಾದ್ಯಂತ ಸಂಭ್ರಮದ ನಾಗರಪಂಚಮಿ ಆಚರಣೆ

Thumbnail
Posted On: 29 Jul 2025, 03:29 PM

ಕಾಪು : ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರಪಂಚಮಿಯನ್ನು ಕಾಪು ತಾಲೂಕಿನಾದ್ಯಂತ ಭಕ್ತರು ತಮ್ಮ ಮೂಲ ನಾಗಬನಗಳಿಗೆ ಭೇಟಿಯಿತ್ತು, ತನು ತಂಬಿಲಾದಿ ಸೇವೆ ನೀಡಿ ಸಂಭ್ರಮದಿಂದ ಆಚರಿಸಿದರು. ಕಾಪು ತಾಲೂಕಿನ ಹೆಜಮಾಡಿ, ಪಡುಬಿದ್ರಿ, ಎಲ್ಲೂರು, ಉಚ್ಚಿಲ, ಶಿರ್ವ, ಕಾಪು ಸೇರಿದಂತೆ ವಿವಿದೆಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ಹಾಲು, ಹೂ, ಸಿಯಾಳ, ಅರಶಿನ ವ್ಯಾಪಾರ ಭರ್ಜರಿಯಾಗಿದ್ದು, ಮಳೆ ಇಲ್ಲದ ಕಾರಣ ಹೆಚ್ಚಿನ ಜನರು ನಾಗಬನಗಳಿಗೆ ಭೇಟಿ ನೀಡಲು ಉಪಯುಕ್ತವಾಯಿತು. ವಾಹನ ಸಂಚಾರ ಹೇರಳವಾಗಿತ್ತು. ಬೆಳಗ್ಗಿನ ಹೊತ್ತು ಪಡುಬಿದ್ರಿ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಸ್ವಲ್ಪ ಕಾಲ ಉಂಟಾಗಿತ್ತು.

ಕಾಪು ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಲಿ : ವಿನಯ ಕುಮಾರ್ ಸೊರಕೆ

Thumbnail
Posted On: 29 Jul 2025, 09:28 AM

ಕಾಪು : ಸರಕಾರದಿಂದ ಅನುದಾನ ಬರುತ್ತಿಲ್ಲ ಎನ್ನುತ್ತಲೇ ಸಮಯ ಕಳೆಯುತ್ತಿರುವ ಕಾಪು ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪು ತಾಲೂಕಿನ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸುವ ಮೂಲಕ ನಮಗೆ ದಾರಿ ತೋರಿಸಿ ಕೊಟ್ಟಿದ್ದರು. ಅವರು ನೀಡಿದ ಅವಕಾಶವನ್ನು ಬಳಸಿಕೊಂಡು ನಾವು ಕೂಡಾ ಪ್ರತಿಭಟನೆ ನಡೆಸಿದ್ದೇವೆ. ಜನರ ಮುಂದೆ ಸತ್ಯದರ್ಶನ ಮಾಡಿಸಿಕೊಟ್ಟಿದ್ದೇವೆ ಎಂದರು.    ಕಾಪು ಶಾಸಕರು ರಾಜ್ಯ ಸರಕಾರವು ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಅವರಿಗೆ ಶಾಸಕರ ನಿಧಿ, ಅಲ್ಪಸಂಖ್ಯಾತರ ನಿಧಿ, ಲೋಕೋಪಯೋಗಿ ಇಲಾಖೆ ಸಹಿತ ಇತರ ಇಲಾಖೆಗಳ ಅನುದಾನ ಹಾಗೂ ತಾ.ಪಂ., ಜಿ. ಪಂ., ನಿಧಿಯೂ ಸಿಕ್ಕಿದೆ. ಆದರೂ ಸರಕಾರದಿಂದ ಅನುದಾನ ಬರುತ್ತಿಲ್ಲ ಎನ್ನುತ್ತಲೇ ಸಮಯ ಕಳೆಯುತ್ತಿರುವ ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ಸೊರಕೆ ಹೇಳಿದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕಾಂಗ್ರೆಸ್‌ ಮುಖಂಡರುಗಳಾದ ಕಾಪು ದಿವಾಕರ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಜಿತೇಂದ್ರ ಪುರ್ಟಾಡೋ, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಝ್, ಶರ್ಪುದ್ದೀನ್ ಶೇಖ್ ಉಪಸ್ಥಿತರಿದ್ದರು.

ಮಂಗಳೂರು - ಉಡುಪಿ ನಡುವೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ಸು ಸಂಚಾರ ಪ್ರಾರಂಭಕ್ಕೆ ಜಯರಾಮ ಆಚಾರ್ಯ ಕಾಪು ಆಗ್ರಹ

Thumbnail
Posted On: 29 Jul 2025, 09:20 AM

ಕಾಪು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಂಗಳೂರು ಮತ್ತು ಉಡುಪಿ ನಡುವೆ (ಪರಿಸರ ಸ್ನೇಹಿ)ಎಲೆಕ್ಟ್ರಿಕ್ ಬಸ್ಸು ಸಂಚಾರ ಪ್ರಾರಂಭಿಸಲು ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ ಕಾಪು ಆಗ್ರಹಿಸಿದ್ದಾರೆ. 45 ಆಸನಗಳು ಮತ್ತು 60-70 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಆರಾಮದಾಯಕ ಎಲೆಕ್ಟ್ರಿಕ್ ಬಸ್ (ಹವಾನಿಯಂತ್ರಿತ) ಪರಿಸರ ಸ್ನೇಹಿ ಮಂಗಳೂರು ಡಿಪೋದಲ್ಲಿ ಲಭ್ಯವಿದ್ದು, ಉಡುಪಿ ಮತ್ತು ಮಂಗಳೂರು ಮದ್ಯೆ ಓಡಾಟ ಪ್ರಾರಂಭಿಸಬೇಕು. ಒಟ್ಟು 55 ಕಿಮೀ ದೂರವಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಈ ಹಿಂದೆ ವೊಲ್ವಾ ಬಸ್ಸು ನಿಲುಗಡೆ ಇದ್ದ ಹಾಗೆ ನಿಲುಗಡೆ ನೀಡಬೇಕು. ಇದರಿಂದ ಮಂಗಳೂರು ಮತ್ತು ಉಡುಪಿ ನಡುವಿನ ದೈನಂದಿನ ಪ್ರಯಾಣಿಕರಿಗೆ, ಸಾರ್ವಜನಿಕರಿಗೂ, ಹೆಚ್ಚು ಅನುಕೂಲವಾಗಲಿದೆ. ಈ ಬಗ್ಗೆ ಸಮಾಜಸೇವಕರಾದ ಕಾಪು ಜಯರಾಮ ಆಚಾರ್ಯರವರು ಕರ್ನಾಟಕ ಸರಕಾರದ ಟ್ರಾನ್ಸ್ಪೋರ್ಟ್ ಮತ್ತು ಮುಜುರಾಯಿ ಇಲಾಖೆ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದ್ದಾರೆ.