Updated News From Kaup
ಶಿರ್ವ ಸಂತ ಮೇರಿ ವಿದ್ಯಾಲಯಕ್ಕೆ ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಭೇಟಿ

Posted On: 10-11-2022 06:41PM
ಶಿರ್ವ: ಇಲ್ಲಿನ ಶಿರ್ವ ಸಂತ ಮೇರಿ ವಿದ್ಯಾಲಯಕ್ಕೆ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ಭೇಟಿ ನೀಡಿದರು. ಯುವ ಸೇನಾದಳದ ಕೆಡೆಟ್ಗಳನ್ನು ಉದ್ದೇಶಿಸಿ ಮಾತನಾಡುತ್ತಾ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್ ಸಿಸಿ ಸಹಾಯಕಾರಿ. ಎನ್ಸಿಸಿ ತರಬೇತಿಯಿಂದ ಕ್ಯಾಡೆಡ್ಗಳಲ್ಲಿ ದೇಶ ಸೇವೆ ಹಾಗೂ ಸಾಮಾಜಿಕ ಸೇವೆ ಮಾಡಲು ಪ್ರೇರೇಪಿಸುತ್ತದೆ. ಶಿಸ್ತುಬದ್ಧವಾದ ಜೀವನವನ್ನು ನಡೆಸಲು, ಉನ್ನತ ಉದ್ಯೋಗ ಪಡೆಯಲು ಕ್ಯಾಡೆಡ್ಗಳಿಗೆ ಎನ್ಸಿಸಿ ಒಂದು ವರವಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು, ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದೃಢರಾಗಲು ಎನ್ಸಿಸಿಯ ವಿವಿಧ ತರಬೇತಿಗಳಲ್ಲಿ ಭಾಗವಹಿಸಿ ಪಡೆದುಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಕ್ಯಾಡೆಟ್ ಗಳು ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಮೊನೀಸ್ ರವರ ಜೊತೆಗೆ ಸಂವಹನ ನಡೆಸಿದರು. ವೇದಿಕೆಯಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಉಡುಪಿಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಆರ್ ಎಸ್ ರಾವತ್, ಟ್ರೈನಿಂಗ್ ಜೆ ಸಿ ಓ ಸುಬೇದಾರ್ ಸಂತೋಷ್ ಕುಮಾರ್ ಮತ್ತು ಶಾಲೆ ವಿಭಾಗದ ಎನ್ಸಿಸಿ ಅಧಿಕಾರಿ ಸೆಕೆಂಡ್ ಆಫೀಸರ್ ಜಾನ್ ವಿಲಿಯಂ ವೇಗಸ್ ಉಪಸ್ಥಿತರಿದ್ದರು.
ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್, ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ ಹಾಗೂ ಕ್ಯಾಡೆಟ್ ಅನುಪ್ ನಾಯಕ್ ಸಹಕರಿಸಿದ್ದರು. ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮ ಶ್ರೀ ಸುದರ್ಶನ್ ವಂದಿಸಿ, ಜೂನಿಯರ್ ಅಂಡರ್ ಆಫೀಸರ್ ಲೋಬೋ ಆನ್ ರಿಯಾ ನೇವಿಲ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ : ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ

Posted On: 09-11-2022 05:21PM
ಕಾರ್ಕಳ : ನಮ್ಮ ದೇಶದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯದ ಹಕ್ಕನ್ನು ನೀಡಿದೆ. ಕಾನೂನಿನ ಅಡಿಯಲ್ಲಿ ಪ್ರತಿ ನಾಗರೀಕನೂ ಕಾನೂನಿಗೆ ತಲೆಬಾಗಿ ತನ್ನ ಸ್ವಾತಂತ್ರವನ್ನು ಅನುಭವಿಸಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಿ ನ್ಯಾಯಾಲಯದಲ್ಲಿ ನ್ಯಾಯ ಪಡೆಯುವ ವ್ಯವಸ್ಥೆಯೂ ಇದೆ. ಇದನ್ನು ದೇಶದ ನಾಗರೀಕರಾದ ನಾವೆಲ್ಲ ಅರ್ಥೈಸಿಕೊಂಡು ಕಾನೂನಿಗೆ ಗೌರವ ನೀಡಿ ಬದುಕಬೇಕಿದೆ ಎಂದು ವಕೀಲ ಪ್ರಸನ್ನ ಕರ್ಮರ್ಕರ್ ಹೇಳಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ನಮಗೂ ಹಕ್ಕಿದೆ @ 75 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ನಾವೆಲ್ಲ ಕಾನೂನು ಮತ್ತು ಸಂವಿಧಾನದ ಆಶಯವನ್ನು ಗೌರವಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್, ಗಣಪತಿ ಕೆ.ಎಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶಾನ್ ಗೌಡ, ಉಪನ್ಯಾಸಕರಾದ ರಾಘವೇಂದ್ರ ರಾವ್, ಉಮೇಶ್, ಅಕ್ಷತಾ ಜೈನ್, ಚಂದ್ರಕಾಂತ್ ಉಪಸ್ಥಿತರಿದ್ದರು. ಉಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅದಮಾರು : ಪಿಪಿಸಿ ವಿದ್ಯಾಸಂಸ್ಥೆಯಿಂದ ಮತದಾರ ಜಾಗೃತಿ ಜಾಥ

Posted On: 09-11-2022 04:42PM
ಅದಮಾರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಬುಧವಾರ ಮತದಾರರ ಜಾಗೃತಿ ಜಾಥ ಕಾರ್ಯಕ್ರಮ ಜರಗಿತು.
ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಶಿಕ್ಷಕರ ಸಹಿತ ಎಲ್ಲಾ ವಿದ್ಯಾರ್ಥಿಗಳು ಅದಮಾರು ಮದರಂಗಡಿ ರಸ್ತೆಯಿಂದ ಆದರ್ಶ ಯುವಕ ಮಂಡಲದವರೆಗೆ ಸಾಗಿ, ಅಲ್ಲಿಂದ ವಾಪಸಾಗಿ ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ ಜಾಥ ಸಮಾಪ್ತಿಗೊಳಿಸಿದರು.
ಈ ಸಂದರ್ಭ ಶಾಲೆಯ ಕನ್ನಡ ವಿಭಾಗದ ಉಪನ್ಯಾಸಕ ಜಯಶಂಕರ್ ಕಂಗಣ್ಣಾರುರವರು ಸಮರ್ಪಕ ಮಾಹಿತಿ ನೀಡಿದರು.
ಈ ಸಂದರ್ಭ ಪ್ರಭಾರ ಪ್ರಾಂಶುಪಾಲ ಸಂಜೀವ ನಾಯಕ್, ನಿಕಟ ಪೂರ್ವ ಪ್ರಾಂಶುಪಾಲ ರಾಮಕೃಷ್ಣ ಪೈ, ಮತದಾರ ಸುರಕ್ಷತಾ ಸಂಘದ ಸಂಚಾಲಕಿ ನವ್ಯ ಬಿ ಎಸ್, ವಿಜಯೇಂದ್ರ ಕುಮಾರ್, ಆದರ್ಶ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕರು ಮತ್ತು ಶಿಕ್ಷಕಿಯರು, 500ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಉದ್ಯಾವರ : ಕನಸಿನ ಮನೆಗೆ ಇನ್ವರ್ಟರ್ ಕೊಡುಗೆ

Posted On: 07-11-2022 09:15PM
ಉದ್ಯಾವರ : ಇಲ್ಲಿಯ ಸ್ನೇಹ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ನಾಗರಿಕರ ಕನಸಿನ ಮನೆಗೆ ಉದ್ಯಾವರ ಹಲೀಮಾ ಸಾಬ್ಜು ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಮತ್ತು ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ವತಿಯಿಂದ ಸುಮಾರು 60 ಸಾವಿರ ರೂ. ಅಧಿಕ ಮೌಲ್ಯದ ಇನ್ವರ್ಟರ್ ಹಾಗೂ ದಿನಬಳಕೆ ಸಾಮಗ್ರಿ ಗಳನ್ನು ಹಸ್ತಾಂತರಿಸಲಾಯಿತು. ಉದ್ಘಾಟಿಸಿ ಮಾತನಾಡಿದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಹಿರಿಯ ನಾಗರಿಕರಿಗೆ ಈ ಕನಸಿನ ಮನೆಯಲ್ಲಿ ನೆಮ್ಮದಿ ಸಿಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಾವರ ಜಾಮಿಯಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ರೆಹಮಾನಿ ಆಶೀರ್ವಚನದಲ್ಲಿ ಮಾತನಾಡಿ, ಬಾಲ್ಯ ಯೌವನ ದಾಟಿ ದೇಹದಲ್ಲಿ ಶಕ್ತಿ ಕುಂದಿದ ದೇವರ ಮಕ್ಕಳಿಗೆ ಆಸರೆಯಾಗಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ಹಾಜಿ ಅಬ್ದುಲ್ ಜಲೀಲ್ ಅವರು ಕೊಡುಗೆ ಮಾನವೀಯತೆಗೆ ಆದರ್ಶಪ್ರಾಯ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ದಾನಿ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಪಳ್ಳಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್, ಪ್ರಮುಖರಾದ ರಾದ ಸಚಿನ್ ಸಾಲ್ಯಾನ್ ಬೊಳ್ಜೆ, ಸಲ್ವದೊರ್ ದಾಂತಿ, ಕನಸಿನ ಮನೆ ಸಹಾಯಕಿ ಕವಿತಾ ನಾಯ್ಕ್ ಉಪಸ್ಥಿತರಿದ್ದರು.
ಸಮಾಜಸೇವಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನಸಿನ ಮನೆ ಮುಖ್ಯಸ್ಥೆ ಸೀಮಾ ದೇವಾಡಿಗ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸಡಗರದ ದೀಪಾವಳಿ ಹಾಗೂ ತುಳಸಿ ಹಬ್ಬ

Posted On: 07-11-2022 08:45PM
ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 5 ರಂದು ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ತಿಳಿಸಿದರು.
ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್ ಎಸ್ ಎಲ್ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲು ಹಬ್ಬವು ಸಾಮರಸ್ಯವನ್ನು ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತೀಯ ಪರಂಪರೆಯನ್ನು ಬಿಂಬಿಸುವ ಉಡುಗೆ-ತೊಡುಗೆಗಳನ್ನು ಧರಿಸಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಥೆಯ ಸಂಸ್ಥಾಪಕರುಗಳಾದ ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ ಕೆ, ವಿಮಲ್ ರಾಜ್, ಗಣಪತಿ ಕೆ ಎಸ್ ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು. ತದನಂತರ ಸಂಸ್ಥೆಯ ಆವರಣದಲ್ಲಿ ದೀವಟಿಗೆ ಬೆಳಕಿನಲ್ಲಿ , ಸುಡುಮದ್ದು ಪ್ರದರ್ಶನ ನಡೆಯಿತು.
ಕಾಪು ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ

Posted On: 07-11-2022 08:37PM
ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ ಇಂದು ಜರಗಿತು.
ಈ ಸಂದರ್ಭ ಮಾತನಾಡಿದ ವೇದಮೂರ್ತಿ ಕಮಲಾಕ್ಷ ಭಟ್ ಶಯನಿ ಏಕಾದಶಿಯಂದು ಮಲಗುವ ಶ್ರೀ ಹರಿ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆಂದು ನಂಬಿಕೆ. ನಾಲ್ಕು ತಿಂಗಳ ಶಯನಾವಸ್ಥೆ ಮುಗಿದು ದೇವರು ಉತ್ಸವಕ್ಕೆ ಹೊರಡುವಾಗ ಮೃಗಬೇಟೆ ಮಾಡುವ ಸಂಪ್ರದಾಯ. ಮೃಗ ಎಂದರೆ ದುಷ್ಟ ನಾಶ. ಅರ್ಥಾತ್ ನಮ್ಮಲ್ಲಿ ತುಂಬಿರುವ ಷಡ್ವೈರಿಗಳ ಸಂಹಾರ. ದೇಗುಲದಲ್ಲಿ ಹುಲಿಯ ವೇಷದಲ್ಲಿ ಒಬ್ಬರು ಅಭಿನಯಿಸಿ ಅದನ್ನು ಅಟ್ಟಿಸಿಕೊಂಡು ಜನರು ಸಂಹರಿಸುವ ಅಭಿನಯವೇ ಈ ಉತ್ಸವ ಆಚರಣೆ ನಡೆಯುತ್ತದೆ ಎಂದರು.
ಯಶಸ್ವಿ ಜನಸಂಕಲ್ಪ ಸಮಾವೇಶ : ಕಾಪು ಬಿಜೆಪಿ

Posted On: 07-11-2022 08:26PM
ಕಾಪು : ಪೂರ್ವತಯಾರಿಕೆಗೆ ಕೆಲವೇ ದಿನಗಳ ಅವಕಾಶ ದೊರೆತರೂ, ಹತ್ತು ಹಲವು ಕಾರ್ಯಕ್ರಮಗಳಿದ್ದರೂ, ವಾರದ ನಡುವೆ ಆದರೂ ನಮ್ಮ ಕಾರ್ಯಕರ್ತರು ಪಕ್ಷಕ್ಕಾಗಿ ಸಮರ್ಪಣೆ ಮಾಡಲು ಸದಾ ಸಿದ್ದ ಎಂದು ರೂಪಿಸಿದ ಐತಿಹಾಸಿಕ ಕಾರ್ಯಕ್ರಮ ಕಾಪು ಬಿಜೆಪಿಯ ಇಂದಿನ ಜನಸಂಕಲ್ಪ ಸಮಾವೇಶ. ಸಮಯ ನಿಗದಿಯಾಗಿ ಕೇವಲ ಕೆಲವೇ ದಿನಗಳು ಬಾಕಿ ಇದ್ದರೂ ಎಲ್ಲ ಪಂಚಾಯತ್ ಗಳಲ್ಲಿ ಸಭೆಗಳನ್ನು ನಡೆಸಿ, ಕಾರ್ಯಕರ್ತರ ಮನ ಒಲಿಸಿ, ಬೇಸಾಯದ ಸಂದರ್ಭದಲ್ಲಿ, ರಜಾದಿನವಲ್ಲದಿದ್ದರೂ, ಬೇರೆ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮ ಇದ್ದರೂ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಬೂತ್ ಬೂತ್ ಗಳಿಂದ ಫಲಾನುಭವಿ ಕಾರ್ಯಕರ್ತರನ್ನು ಕರೆತಂದು ಕಾಪು ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ನಮ್ಮ ದೇವ ದುರ್ಲಭ ಕಾರ್ಯಕರ್ತರು. ಪಕ್ಷದ ಮೇಲಿನ ಅಭಿಮಾನ ಪಕ್ಷದ ಮೇಲಿನ ಗೌರವದ ಮುಂದೆ ಉಳಿದೆಲ್ಲ ವಿಚಾರಗಳ ನಮಗೆ ಗೌಣವಾಗುತ್ತವೆ ಎಂದು ನಿರೂಪಿಸಿರುವಿರಿ. ಎದುರಾಳಿಗಳಿಗೆ ಸ್ಪಷ್ಟ ಸಂದೇಶ ಇಂದು ಸಿಕ್ಕಿರಬೇಕು. ಮತ್ತೂ ಸಿಗದಿದ್ದರೆ ಅವರ ದುರಾದ್ರಷ್ಟ. ಒಂದಂತೂ ಸತ್ಯ ಇಂದಿನ ಕಾರ್ಯಕ್ರಮಕ್ಕೆ ಬಂದ ಎಲ್ಲ ಕಾರ್ಯಕರ್ತರಿಗೆ ಮತ್ತೆ ಚುನಾವಣೆ ಗೆಲ್ಲುವ ಭರವಸೆ ಬಂದದ್ದು ಮಾತ್ರ ಸುಳ್ಳಲ್ಲ. ಈ ಮೂಲಕ ಜನಸಂಕಲ್ಪ ಸಮಾವೇಶ ಯಶಸ್ವಿಯಾಗಿದೆ. ಮತ್ತೆ ಚುನಾವಣೆ ನಾವು ಗೆಲ್ಲುವೆವು. ಗೆದ್ದೇ ಗೆಲ್ಲುವೆವು ಎಂದು ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎರ್ಮಾಳು : ಬಹುಭಾಷಾ ನಟಿ ಜಯಪ್ರದ ಜನಾರ್ಧನ ದೇವಳಕ್ಕೆ ಭೇಟಿ

Posted On: 07-11-2022 08:17PM
ಎರ್ಮಾಳು : ಉತ್ತರ ಪ್ರದೇಶದ ರಾಂಪುರ ಕ್ಷೇತ್ರದ ಮಾಜಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯೆ ಹಾಗೂ ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಜಯಪ್ರದ ಎರ್ಮಾಳು ಜನಾರ್ಧನ ದೇವಳಕ್ಕೆ ಇಂದು ಭೇಟಿ ನೀಡಿದರು.
ಈ ಸಂದರ್ಭ ದೇವಳ ಆಡಳಿತ ಮೊಕ್ತೇಸರರಾದ ಅಶೋಕ್ ರಾಜ್ ಎರ್ಮಾಳು ಬೀಡು, ಹರೀಶ್ ಶೆಟ್ಟಿ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಕಿಶೋರ್ ಶೆಟ್ಟಿ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.
ಇನ್ನಂಜೆ : ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಉದ್ಯಮಿ ಗ್ರೆಗೋರಿ ಮಾತಾಯಸ್ ರಿಂದ ವಿಜ್ಞಾಪನ ಪತ್ರ ಬಿಡುಗಡೆ

Posted On: 07-11-2022 08:11PM
ಇನ್ನಂಜೆ : ಸೋದೆ ವಾದಿರಾಜ ಮಠದ ಯತಿಗಳಾದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಶುಭ ಆಶೀರ್ವಾದದೊಂದಿಗೆ, ಇನ್ನಂಜೆಯ ಯುವ ಉದ್ಯಮಿ ಗ್ರೆಗೋರಿ ಮತಾಯಸ್, ಮತಯಾಸ್ ಹೆರಿಟೇಜ್ ಇನ್ನಂಜೆ ಇವರು ಸುವರ್ಣ ಮಹೋತ್ಸವದ ನೂತನ ಕಟ್ಟಡದ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಸಲಹಾ ಸಮಿತಿಯ ಸದಸ್ಯರುಗಳಾದ ನಂದನ್ ಕುಮಾರ್ ಮತ್ತು ರವಿವರ್ಮ ಶೆಟ್ಟಿ ಮತ್ತು ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಸ್ಥಳೀಯರಿಂದ ಸ್ವಚ್ಚತಾ ಕಾರ್ಯ

Posted On: 06-11-2022 09:17PM
ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಸ್ಥಳೀಯರಿಂದ 92ನೇ ಹೇರೂರು ಬ್ರಹ್ಮನಗರದಿಂದ ಕಲ್ಲುಗುಡ್ಡೆ ಹೋಗುವ ರಸ್ತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.
ನಮ್ಮ ಗ್ರಾಮದ ಜವಾಬ್ದಾರಿಯುತ ವ್ಯಕ್ತಿಗಳು ಸ್ಪಂದಿಸದಿದ್ದರೆ ಗ್ರಾಮಸ್ಥರೇ ಜವಾಬ್ದಾರಿ ವಹಿಸಬೇಕೆಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ಪೂಜಾರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವಾಚಾರ್ಯ, ಸದಸ್ಯರಾದ ಗಂಗಾಧರ ಆಚಾರ್ಯ, ಬಂಟಕಲ್ಲು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರಾದ ಶೈಲೇಶ್, ಕಲ್ಲು ಗುಡ್ಡೆ ಅನಿಲ್ ಸುನಿಲ್, ಚೇತನ್, ಬಂಟಕಲ್ಲು ಕಾರು ಮಾಲಕ ಮತ್ತು ಚಾಲಕ ಸಂಘದ ಸದಸ್ಯರಾದ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.