Updated News From Kaup
ಕಾಪು : ಯುವಸೇನೆ ಮಡುಂಬು - 16ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ
Posted On: 03 Apr 2023, 08:25 PM
ಕಾಪು : ಯುವಸೇನೆ ಮಡುಂಬು ಇದರ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎಪ್ರಿಲ್ 1 ರಂದು ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ನಡೆದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ವಿದ್ವಾನ್ ಕೆ.ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಿಂದೂ ಸಮಾಜದ ವ್ಯವಸ್ಥೆಯೊಳಗೆ ಯಾವುದಕ್ಕೂ ಧಕ್ಕೆ ಬರಬಾರದು. ಪರಶುರಾಮ ಸೃಷ್ಟಿಯಲ್ಲಿ ಹಲವಾರು ವಿವಿಧತೆಗಳಿವೆ. ಹಿಂದುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದೆ ಯುವಸೇನೆ ಮಡುಂಬು. ನಮ್ಮ ಸಂಸ್ಕೃತಿ ನಮಗೆ ಬೇಕು ಅದರ ಬಲಿಷ್ಠತೆ ನಮಗೆ ತಿಳಿದಿರಬೇಕು. ಪ್ರತಿ ಮನೆಗೂ ಭಗವದ್ಗೀತೆ ನೀಡಬೇಕೆನ್ನುವ ಯುವಸೇನೆ ಮಡುಂಬುವಿನ ಸಾಫಲ್ಯತೆಗೆ ಯಶಸ್ವಿಯಾಗಲಿ ಎಂದರು. ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಮಾತನಾಡಿ ಊರಿನ ಸಂಘ ಸಂಸ್ಥೆಗಳಲ್ಲಿ ಊರಿಗಾಗಿ ದುಡಿಯುವ, ಒಂದಾಗುವ ಮನಸ್ಥಿತಿ ಇರುತ್ತದೆ. ಜೊತೆಗೆ ದೇಶ ಭಕ್ತಿ ಧರ್ಮ ಭಕ್ತಿಯಿರುತ್ತದೆ .ಸಾಂಸ್ಕೃತಿಕತೆಯ ಆಚೆಗೆ ನಿಂತು ಧರ್ಮದ ಬಗೆಗೆ ಚಿಂತಿಸುವ ಯುವಸೇನೆಯ ಕಾರ್ಯ ಶ್ಲಾಘನೀಯ. ಧಾರ್ಮಿಕತೆಗೆ ಒಲವಿರುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಜ್ಞಾನದ ಕೊರತೆಯಾಗುತ್ತಿದೆ. ಅವಶ್ಯಕತೆಯಿಲ್ಲದ ಆಚರಣೆಗಳ ಬಗ್ಗೆ ಹಿಂದೂ ಸಮಾಜ ಯೋಚಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಸಾಲ್ಯಾನ್ ವಹಿಸಿದ್ದರು. ವಕೀಲರಾದ ಸಂಕಪ್ಪ ಅಮೀನ್, ಧರಣಿ ಸಂಸ್ಥೆ ಅಧ್ಯಕ್ಷರಾದ ಲೀಲಾಧರ ಶೆಟ್ಟಿ, ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಲ್ಯಾಲು, ಉದ್ಯಮಿ ಯೋಗೀಶ್ ವಿ ಶೆಟ್ಟಿ, ಪತ್ರಕರ್ತ ರಾಕೇಶ್ ಕುಂಜೂರು, ನವೀನ್ ಅಮೀನ್ ಶಂಕರಪುರ, ಸಂದೀಪ್ ಬಂಗೇರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳು ನಾಟಕ ಜರಗಿತು. ಪದ್ಮಶ್ರೀ ಪ್ರಾರ್ಥಿಸಿದರು. ಯುವಸೇನೆ ಮಡುಂಬುವಿನ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ತಿಕ್ ಶೆಟ್ಟಿ ವರದಿ ವಾಚಿಸಿದರು. ಡಾ.ಪ್ರಿಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.
ಉಡುಪಿ : ಅಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್ಗಳ ತೆರವಿಗೆ ಸೂಚನೆ
Posted On: 03 Apr 2023, 07:44 PM
ಉಡುಪಿ : ರಾಜ್ಯ ವಿಧಾನಸಭೆ ಚುನಾವಣೆ - 2023 ಕ್ಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ, ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್ಗಳನ್ನು ತೆರವುಗೊಳಿಸಬೇಕು ಮತ್ತು ಯಾವುದೇ ರೀತಿಯ ರಾಜಕೀಯ ಸಂಬಂಧಿತ ಪೋಸ್ಟರ್ಗಳನ್ನು ಅಳವಡಿಸದಂತೆ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಿ, ಎಫ್.ಐ.ಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟೀಲಿನಲ್ಲಿ "ನಾಗಾರಾಧನಾ ಸಾಹಿತ್ಯ ಸಂವಾದ" ನಾಗ - ವೃಕ್ಷ ಅವಳಿ ಚೇತನಗಳು : ಕೆ.ಎಲ್.ಕುಂಡಂತಾಯ
Posted On: 03 Apr 2023, 06:44 PM
ಕಟೀಲು : ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ. ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ.ನಾಗ ತಂಪನ್ನು ಆಶ್ರಯಿಸಿಕೊಂಡು ಬದುಕುವ ಪ್ರಾಣಿ.ಆದುದರಿಂದಲೇ ನಾಗನ ಆರಾಧನೆಯಲ್ಲಿ ತಂಪೆರೆಯುವ ಕ್ರಿಯೆಗೆ ಪ್ರಾಶಸ್ತ್ಯವಿದೆ.ನಾಗ ವಾಸಸ್ಥಾನ ಬನವನ್ನು ಉಳಿಸಿಕೊಂಡು ಪ್ರಕೃತಿಯನ್ನು ರಕ್ಷಿಸಬೇಕಾದುದು ಕಾಲದ ಅನಿವಾರ್ಯತೆ ಏಕೆಂದರೆ ನಾಗ - ವೃಕ್ಷ ಅವಳಿ ಚೇತನಗಳು ಎಂದು ಜಾನಪದ ಸಂಶೋಧಕ ,ಸಾಹಿತಿ ಕೆ.ಎಲ್.ಕುಂಡಂತಾಯ ಅಭಿಪ್ರಾಯಪಟ್ಟರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ 'ಕುದುರಿ'ನಲ್ಲಿ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಟೀಲು ಪ್ರಥಮದರ್ಜೆ ಕಾಲೇಜಿನ ಎನ್.ಎಸ್ ಎಸ್ .ಘಟಕ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದಲ್ಲಿ ಜರಗಿದ 'ನಾಗಾರಾಧನೆ ನಾಗಾರಾಧನಾ ಸಾಹಿತ್ಯ ಸಂವಾದ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಾನವ ಅಭಿಯೋಗವಾಗದ ಪುರಾತನ ನಾಗಬನವೊಂದರಲ್ಲಿ ಕನಿಷ್ಠ 50 - 60 ವೃಕ್ಷ ಪ್ರಬೇಧಗಳು ಹಾಗೂ ಸುಮಾರು ಇಪ್ಪತ್ತರಷ್ಟು ಔಷಧೀಯ ಸಸ್ಯಗಳು ಇರುತ್ತವೆ.ಪಕ್ಷಿ ಸಂಕುಲಗಳು ಆಶ್ರಯ ಪಡೆದಿರುತ್ತವೆ.ಹುಳು ಹುಪ್ಪಟಿಗಳ ಸಹಿತ ಜೀವರಾಶಿಗಳಿಗೆ ಬನವೊಂದು ಸುರಕ್ಷಿತ ನೆಲೆಯಾಗಿರುತ್ತದೆ,ಆದರೆ ಈ ಸತ್ಯವನ್ನು ಎಣಿಸದೆ ನಾಗಬನಗಳ ನಾಶ ನಡೆಯುತ್ತಲೇ ಇವೆ.ಈ ಅಭಿಯೋಗ ನಿಲ್ಲಬೇಕು ಬನಗಳು ಸಂಸ್ಕೃತಿಯ ಪ್ರತೀಕವಾಗಿ ಉಳಿಯಬೇಕಿದೆ ಎಂದು ಕುಂಡಂತಾಯ ಹೇಳಿದರು ಉರಗತಜ್ಞ,ನಾಗರಹಾವಿನ ಜೀವನ ವಿಧಾನದ ಅಧ್ಯಯನ ಸಹಿತ ಸಾವಿರಾರು ನಾಗರ ಹಾವುಗಳನ್ನು ರಕ್ಷಿಸಿದ ಗುರುರಾಜ ಸನಿಲ್ ಅವರು ಮಾತನಾಡಿ ನಮಗೆ ಹೇಗೆ ಈ ಪರಿಸರದಲ್ಲಿ ಜೀವಿಸುವ ಹಕ್ಕು ಇದೆಯೋ ಅಂತೆಯೇ ಪ್ರಾಣಿಗಳಿಗೂ ವಾಸಿಸುವ ಅಧಿಕಾರವಿದೆ.ನಾಗ ಸಂತತಿಯ ವಾಸಸ್ಥಾನವಾಗಿರುವ ನಾಗಬನಗಳನ್ನು ನಾಶಮಾಡಬಾರದು.ಬನದ ಮರಗಳು ಮಳೆನೀರನ್ನು ಹಿಡಿದಿಟ್ಟುಕೊಂಡು ನೆಲದ ಆಳಕ್ಕೆ ರವಾನಿಸುತ್ತದೆ ಆಮೂಲಕ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು. ನಾಗಾರಾಧನೆಯನ್ನು ವಾಸ್ತವವಾಗಿ ಗಮನಿಸಬೇಕು.ಆಮೂಲಕ ಆರಾಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕು.ನಾಗನ ಬಗ್ಗೆ ಮೂಢನಂಬಿಕೆ ಬೇಡ ಎಂದ ಸನಿಲ್ ಅವರು ನಾಗ ಮನೆಗೆ ಹೇಗೆ ಮತ್ತು ಏಕೆ ಹರಿದು ಬರುತ್ತದೆ ಎಂದು ವಿವರಿಸಿ ಪರಿಸರ ಸ್ವಚ್ಛವಾಗಿರಲಿ ನಾಗ ಬರಲಾರದು ಎಂದರು.ಇಲಿ ಮುಂತಾದ ಪ್ರಾಣಿಗಳ ಬೆನ್ನುಹಿಡಿದು ನಾಗ ಬರುವುದು ಸಾಮಾನ್ಯ ಎಂದು ವಿವರಿಸಿದರು.ಸರ್ಪ ಕಚ್ಚಿದಾಗ ಮಾಡಬೇಕಾ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.ಹೆದರದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸೂಚಿಸಿದರು. ಗುರುರಾಜ ಸನಿಲ್ ಹಾಗೂ ಕೆ.ಎಲ್.ಕುಂಡಂತಾಯ ಅವರು ಬರೆದ ಪುಸ್ತಕಗಳನ್ನು ಖರೀದಿಸುವ ಮೂಲಕ ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಉದ್ಘಾಟಿಸಿದರು. ಗಾಯಕಿ ಅಶ್ವಿನಿ ರಾವ್ ಪಂಜೆ ಮಂಗೇಶರಾಯರ ಪ್ರಸಿದ್ಧ ಹಾವಿನ ಹಾಡನ್ನು ಹಾಡಿದರು. ನಾಡೋಜ ಕೆ.ಪಿ.ರಾವ್,ಹಾಗೂ ಕ.ಸಾ.ಪ.ಮೂಲ್ಕಿ ಘಟಕದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಮಿಥುನ್ ಉಡುಪ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೊಸ್ಸಿ ಪಿಂಟೋ ಸ್ವಾಗತಿಸಿದರು. ರಾಜಶೇಖರ ಎಸ್.ಕಾರ್ಯಕ್ರಮ ನಿರೂಪಿಸಿದರು. ಕುದುರಿನ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು.
ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆಯತ್ತಿರುವ ಉಪನ್ಯಾಸಕ ಧೀರಜ್ ಬೆಳ್ಳಾರೆ
Posted On: 03 Apr 2023, 04:35 PM
ಕೊರೋನಾ ಸಮಯ ಒಂದಷ್ಟು ಪ್ರತಿಭೆಗಳು ಬೆಳಕಿಗೆ ಬಂದದ್ದಂತು ನಿಜ. ಎಲ್ಲಾ ಸ್ತಬ್ಧವಾಗಿದ್ದರೂ ಕತೆ, ಕವನ, ನೃತ್ಯ, ಮಾತು ಇತ್ಯಾದಿ ಚಟುವಟಿಕೆಗಳಿಗೆ ಕೊರತೆ ಇರಲಿಲ್ಲ. ಪ್ರತಿನಿತ್ಯದ ಬಿಝಿಗಳ ನಡುವೆ ಮೊಬೈಲ್ ನಲ್ಲಿ ಕಾಲ ಕಳೆಯುವ ಈ ಕಾಲಘಟ್ಟದಲ್ಲಿ ವಾಟ್ಸಾಪ್ ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆದ ವ್ಯಕ್ತಿ ಧೀರಜ್ ಬೆಳ್ಳಾರೆ. ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಲೇಖಕ, ವಾಗ್ಮಿ, ನಟರಾಗಿ ಗುರುತಿಸಿರುವ ಇವರು ತಮ್ಮ ಸ್ಟೇಟಸ್ ಸಾಹಿತ್ಯದ ಮೂಲಕ ಹಲವಾರು ಜನರ ವಾಟ್ಸಾಪ್ ಸ್ಟೇಟಸ್ ಅಲಂಕರಿಸಿದ್ದಾರೆ. ಕೊರೊನ ಸಮಯದಲ್ಲಿ ಇವರ ಬರಹದ ಆರಂಭವು ಒಂದು ಸಾವಿರ ಕತೆಗಳನ್ನು ದಾಟಿ ಇಂದಿಗೆ ಒಂದು ಸಾವಿರದ ಮೂರನೆಯ ಕತೆಯವರೆಗೆ ತಲುಪಿ ಇನ್ನೂ ಮುಂದುವರಿಯಲಿದೆ. ತಾನೂ ಬರೆಯುವುದಲ್ಲದೆ ಇತರರ ಬರವಣಿಗೆಗೆ ಸ್ಫೂರ್ತಿದಾತರಾಗಿದ್ದಾರೆ. ತಾನು ಬರೆದ ಸಾವಿರ ಕತೆಗಳಲ್ಲಿ ಆಯ್ದ ನೂರು ಕತೆಗಳನ್ನು ಆರಿಸಿ ಸ್ಟೇಟಸ್ ಕತೆಗಳು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕತೆ, ಲೇಖನದ ಕಾರ್ಯ ಮುಂದುವರಿಯಲಿ. ಜನರಲ್ಲಿ ಇಂತಹ ಕತೆಗಳ ಮೂಲಕ ಓದುವಿಕೆಯು ಚಿಗುರೊಡೆಯಲಿ ಎಂದು ಆಶಿಸೋಣ.
ಕಾಪು : ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ, ಪ್ರಭಾವಳಿ, ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ
Posted On: 31 Mar 2023, 08:10 PM
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘದಲ್ಲಿ ಮಾರ್ಚ್ 31 ರಿಂದ ಎಪ್ರಿಲ್ 2ರವರೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಿಸಿದ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕದ ಕಾರ್ಯಕ್ರಮಗಳು ಜರಗಲಿವೆ. ಈ ನಿಮಿತ್ತ ಇಂದು ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಿಂದ ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ ಮತ್ತು ಪ್ರಭಾವಳಿ, ಶ್ರೀ ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ ಜರಗಿತು. ಕರದಾಳ ಕಲಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 7:30 ರಿಂದ ಭದ್ರದೀಪ ಪ್ರಜ್ವಲನೆ, ಆಚಾರ್ಯ ವರ್ಣಕ್ರಿಯೆ, ಸ್ವಸ್ತಿ ಪುಣ್ಯಾಹ ವಾಚನ, ಗಣಹೋಮ, ಸಪ್ತಶುದ್ಧಿ, ತೋರಣ ಮುಹೂರ್ತ, ಮೂರ್ತಿ ಸಂಸ್ಕಾರ ನಡೆಯಿತು. ಸಂಜೆ ಗಂಟೆ 6ರಿಂದ ವಾಸ್ತುಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಚಕ್ರಾಬ್ಜ ಮಂಡಲ ಪೂಜೆ ಜರಗಲಿವೆ.
ಕಾಪು : ಕುಂಜೂರಿನಲ್ಲಿ ಭಜನಾ ಮಂಗಲೋತ್ಸವ ಸಂಪನ್ನ
Posted On: 31 Mar 2023, 07:33 PM
ಕಾಪು : ತಾಲೂಕಿನ ಕುಂಜೂರಿನ ಶ್ರೀ ದುರ್ಗಾ ಮಿತ್ರ ವೃಂದದ 15 ನೇ ವಾರ್ಷಿಕ ಭಜನಾ ಮಂಗಲೋತ್ಸವವು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠ ವರ್ಧಂತಿಯ ಸಂದರ್ಭದಲ್ಲಿ ನೆರವೇರಿತು. ಭಜನಾಮಂಗಲೋತ್ಸವವನ್ನು ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು ಉದ್ಘಾಟಿಸಿದರು. ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ, ಪವಿತ್ರಪಾಣಿ ಕೆ.ಎಲ್.ಕುಂಡಂತಾಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ ಕುಂಡಂತಾಯ,ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ತಹಾಸ ಆಚಾರ್ಯ, ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟೀಚರ್,ದುರ್ಗಾ ಸೇವಾ ಸಮಿತಿಯ ಕಾರ್ಯದರ್ಶಿ ಸುದರ್ಶನ ವೈ.ಎಸ್.,ದುರ್ಗಾ ಮಿತ್ರ ವೃಂದದ ಸತೀಶ ಶೆಟ್ಟಿ ಗುಡ್ಡೆಚ್ಚಿ, ರಾಕೇಶ್ ಕುಂಜೂರು, ಸುನಿಲ್ ಎಸ್.ಮುಂತಾದವರು ಉಪಸ್ಥಿತರಿದ್ದರು. ಬೆಳಗ್ಗೆ ಎಂಟೂವರೆ ಗಂಟೆಯಿಂದ ರಾತ್ರಿ ಎಂಟೂವರೆ ಗಂಟೆ ಪರ್ಯಂತ ಹದಿನೈದು ಭಜನಾ ಮಂಡಳಿಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯೆಯರಿಂದ ಕುಣಿತ ಭಜನೆ ನಡೆದು ಮಂಗಲೋತ್ಸವವು ಸಮಾಪನಗೊಂಡಿತು. ದುರ್ಗಾ ಮಿತ್ರವೃಂದದ ಬಾಲಕರು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು. ದುರ್ಗಾ ಮಾತೆಯ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಬೆಳಗ್ಗೆ ಧಾರ್ಮಿಕ ವಿಧಿಗಳು , ಮಧ್ಯಾಹ್ನ ಅನ್ನಸಂತರ್ಪಣೆ ,ರಾತ್ರಿ ರಂಗಪೂಜೆ ಹಾಗೂ ಬಲಿಉತ್ಸವ ನೆರವೇರಿತು.
ಉಚ್ಚಿಲ : ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
Posted On: 31 Mar 2023, 07:23 PM
ಉಚ್ಚಿಲ : ಸ್ಕೂಟರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ಮೃತಪಟ್ಟ ಘಟನೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎರ್ಮಾಳು ಬಡಾ ಗ್ರಾಮದ ಗೋಪಾಲ ಎ. ಕರ್ಕೆರ (68) ಮೃತಪಟ್ಟವರು. ಇವರು ತಮ್ಮ ಅಣ್ಣನ ಮಗ ರವಿ ವಿ.ಸುವರ್ಣ ಅವರೊಂದಿಗೆ ಮಾಚ್೯ 30ರಂದು ಉಚ್ಚಿಲ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ತೆರಳುವ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಸವಾರ ಜೈ ಪ್ರಕಾಶ್ ಎಂಬಾತ ರಸ್ತೆಯ ಬದಿಯಲ್ಲಿ ನಿಂತಿದ್ದ ಗೋಪಾಲ ಎ ಕರ್ಕೆರ ರವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದ ಬೈಕ್ ಸವಾರ ಹಾಗೂ ಸಹಸವಾರನಿಗೂ ಗಾಯವಾಗಿದ್ದು ಗೋಪಾಲ ಎ ಕರ್ಕೆರ ಅವರು ಗಂಭೀರ ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೋಪಾಲ ಎ ಕರ್ಕೆರ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಗೋಪಾಲ ಎ ಕರ್ಕೆರ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಬಗ್ಗೆ ರವಿ ವಿ. ಸುವರ್ಣ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೈಕ್ ನಿಲ್ಲಿಸುವ ವಿಚಾರ - ಗಲಾಟೆ ಕೊಲೆಯಲ್ಲಿ ಅಂತ್ಯ ; ಕೊಲೆಯಾದ ವ್ಯಕ್ತಿ ಕಾಪುವಿನ ಕುಂಜೂರು ಮೂಲದವರು
Posted On: 31 Mar 2023, 03:08 PM
ಬೆಂಗಳೂರು : ಇಲ್ಲಿನ ಯಲಹಂಕದ ಅಪಾರ್ಟ್‌ಮೆಂಟ್ ಒಂದರಲ್ಲಿ ಒಂದೇ ರೂಂನಲ್ಲಿ ವಾಸವಿದ್ದ ಮೂವರ ನಡುವೆ ಬೈಕ್ ನಿಲ್ಲಿಸುವ ವಿಚಾರಕ್ಕೆ ಗಲಾಟೆಯಾಗಿ ಓರ್ವನನ್ನು ಕೊಲೆಗೈದ ಘಟನೆ ಮಾಚ್೯ 29ರಂದು ನಡೆದಿದೆ. ಯಲಹಂಕದ ಸಾಯಿ ಸಮೃದ್ಧಿ ಅಪಾರ್ಟ್‌ಮೆಂಟ್‌ನ ಒಂದೇ ರೂಂನಲ್ಲಿ ಜರ್ನಾಧನ್ ಭಟ್ಟ, ಸುಲೇಮಾನ್ ಮತ್ತು ರಿಜ್ವಾನ್ ಎಂಬುವವರು ವಾಸವಾಗಿದ್ದರು. ತಡರಾತ್ರಿ ರೂಂ ನ ಪಕ್ಕದಲ್ಲಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಸುಲೇಮಾನ್, ರಿಜ್ವಾನ್‌ರವರು ಇಬ್ಬರೂ ಜರ್ನಾಧನ್ ಭಟ್ಟ ರವರೊಂದಿಗೆ ಗಲಾಟೆ ಮಾಡಿ, ಜನಾರ್ಧನ್ ಭಟ್ಟ ರವರ ಕಾಲುಗಳನ್ನು ವೈರ್‌ನಿಂದ ಕಟ್ಟಿ ಮತ್ತು ಬಾಯಿಗೆ ಟೇಪ್ ಹಾಕಿ ಮಾಡಿ ಜರ್ನಾಧನ್ ಭಟ್ಟರವರನ್ನು ಕೊಲೆ ಮಾಡಿ ಸುಲೇಮಾನ್ ಮತ್ತು ರಿಜ್ವಾನ್ ಪರಾರಿಯಾಗಿದ್ದರು. ಕೊಲೆಯಾದ ವ್ಯಕ್ತಿ ಜರ್ನಾಧನ್ ಭಟ್ಟರವರು ಕಾಪು ತಾಲುಕಿನ ಕುಂಜೂರು ಮೂಲದವರಾಗಿದ್ದಾರೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಸಲುವಾಗಿ ತನಿಖೆ ಕೈಗೊಳ್ಳಲಾಗಿದೆ.
ಉಡುಪಿ : ಶಸ್ತ್ರಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ
Posted On: 30 Mar 2023, 08:12 PM
ಉಡುಪಿ : ಕರ್ನಾಟಕ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ, ಮೇ 10 ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಶಸ್ತ್ರಾಸ್ತ್ರ ಆಯುಧ ಮತ್ತು ಮದ್ದುಗುಂಡುಗಳೊಂದಿಗೆ ಸಂಚಾರ ಹಾಗೂ ಅವುಗಳನ್ನು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ. ಆತ್ಮ ರಕ್ಷಣೆ ಮತ್ತು ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ವಿಧಧ ಶಸ್ತ್ರಾಸ್ತ್ರಗಳನ್ನು (ಎಸ್ಬಿಬಿಎಲ್, ಡಿಬಿಬಿಎಲ್, ಎಸ್ಬಿಎಂಎಲ್, ಡಿಬಿಎಂಎಲ್, ಎನ್ಪಿಬಿ ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲ್) ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್ಗಳಲ್ಲಿ ಕಡ್ಡಾಯವಾಗಿ ವಿಳಂಬ ಮಾಡದೇ ಠೇವಣಿ ಮಾಡಿ, ರಶೀದಿ ಪಡೆಯಬೇಕು. ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್ಗಳಿಂದ ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬಹುದು. ಈ ನಿಷೇಧ ಆದೇಶವು ಸರ್ಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ. ಸದರಿ ಠೇವಣಿ ಆದೇಶದಿಂದ ವಿನಾಯಿತಿ ಕೋರುವ ಪರವಾನಿಗೆದಾರರು ಏಪ್ರಿಲ್ 5 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ಸದಸ್ಯರಾದ ಪೊಲೀಸ್ ಅಧೀಕ್ಷಕರ ಕಮಿಟಿ ಮುಂದೆ ಮಂಡಿಸಿ, ಅರ್ಜಿಗಳ ಅವಶ್ಯಕತೆ ಹಾಗೂ ನೈಜ್ಯತೆಯ ಬಗ್ಗೆ ಪರಿಶೀಲಿಸಿ, ವಿನಾಯಿತಿ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಿಗೆ ರಹಿತ ಶಸ್ತ್ರಾಸ್ತ್ರ /ಆಯುಧ ಇತ್ಯಾದಿಗಳ ಸಂಗ್ರಹಣೆ, ಬಳಕೆ, ಸಾಗಾಟ ಮಾಡುತ್ತಿರುವ ಸುಳಿವು ದೊರೆತಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಪು : ಗಾಂಜಾ ಸೇವನೆ ಪ್ರಕರಣ ದಾಖಲು
Posted On: 30 Mar 2023, 11:17 AM
ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಸಂಪಿಗೆನಗರ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವ ಕಂಡು ಬಂದಿದ್ದು, ಆತನನ್ನು ಪೋಲಿಸರು ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡಿದ್ದರು. ಆತನ ಹೆಸರು ಮಹಮ್ಮದ್ ಅನಸ್ ಸಾಹೇಬ (25) ಎಂದು ತಿಳಿಸಿದ್ದು, ಮಣಿಪಾಲದ ಪೊರೆನ್ಸಿಕ್ ವಿಭಾಗದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
