Updated News From Kaup
R.M ಕ್ರಿಯೆಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಮಾಜಂದಿನ ಮೋಕೆ ತುಳು ಆಲ್ಬಮ್ ಗೀತೆ ಬಿಡುಗಡೆ

Posted On: 14-02-2021 09:38PM
ಪ್ರಿಯ ಕ್ರಿಯೇಷನ್ಸ್ ಅರ್ಪಿಸುವ ಅಕ್ಕ-ತಂಗಿಯ ಪ್ರೀತಿಯ ಸಂಬಂಧವನ್ನು ಸಾರುವ ಮಾಜಂದಿನ ಮೋಕೆ ಎಂಬ ತುಳು ಆಲ್ಬಮ್ ಗೀತೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಡ್ವೆಯಲ್ಲಿ, ಯುವವಾಹಿನಿ (ರಿ) ಅಡ್ವೆ ಘಟಕದ ಆಶ್ರಯದಲ್ಲಿ ಕ್ಷೇತ್ರದ ಪೂಜಾ ಕಾರ್ಯಕ್ರಮದೊಂದಿಗೆ R.M ಕ್ರಿಯೆಷನ್ಸ್ ಲಾಂಛನದ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷರಾದ ಶಶಿಧರ್ ಟಿ ಪೂಜಾರಿ, ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ, ಘಟಕದ ಗೌರವ ಸಲಹೆಗಾರರಾದ ಜಯರಾಮ್ ಸುವರ್ಣ, ಸ್ಥಾಪಕಾದ್ಯಕ್ಷರಾದ ನೀತೇಶ್ ಜೆ ಕರ್ಕೇರ , ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಪೂಜಾರಿ ಉಪಸ್ಥಿತರಿದ್ದರು.
ಶರತ್ ಅಡ್ವೆ ಸಾಹಿತ್ಯ , ರಕ್ಷಿತಾ ಪೂಜಾರಿ ಮತ್ತು ಪ್ರಿಯಾಂಕ ಅಡ್ವೆಯವರ ಗಾಯನ ದಿನೇಶ್ ಎರ್ಮಾಳ್ ಸಂಗೀತ, ಸುದೀಪ್ ಕಾಪು ಮತ್ತು ವಿರಾಜ್ ಕಾಪು ಸಂಕಲನ, ನಿತೇಶ್ ಜೆ. ಕರ್ಕೇರ , ಶೀನ ಶಕುಂತಲಾ ನಿರ್ಮಾಣದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ.
ಗೀತಾ ಎನ್. ಸುವರ್ಣ ಪ್ರಾರ್ಥಿಸಿ, ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಾಜಂದಿನ ಮೋಕೆ ತುಳು ಆಲ್ಬಮ್ ಗೀತೆ ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ Click here to watch MOKE Tulu Album song
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡ ವಿಜಯ ಬಾಲನಿಕೇತನ ಭೇಟಿ

Posted On: 14-02-2021 08:48PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯ ಆಶಕ್ತ ಕಾರ್ಮಿಕ ಮಕ್ಕಳ ವಸತಿ ಗೃಹ ವಿಜಯ ಬಾಲನಿಕೇತನಕ್ಕೆ ಭೇಟಿ ನೀಡಿ ಅವರ ಬೇಡಿಕೆಯ ಅವಶ್ಯ ತರಕಾರಿ ಸಾಮಗ್ರಿ ವಿತರಿಸಲಾಯಿತು.
ಆಸರೆ ತಂಡದ ಅಧ್ಯಕ್ಷರಾದ ಡಾ. ಕೀರ್ತಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಂಡದ ಜಗದೀಶ್ ಬಂಟಕಲ್, ಮೋಕ್ಷ, ಶ್ಲೋಕ ಪಾಲ್ಗೊಂಡಿದ್ದರು. ಅಲ್ಲಿಯ ವ್ಯವಸ್ಥಾಪಕರು ಆದಂತಕ ಜಯರಾಮ್ ನೈರಿ ಅವರು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಸ್ಥೆಗಳಿಗೆ ನಿಮ್ಮ ಆಸರೆ ಆಗಲಿ ಎಂದು ಹಾರೈಸಿದರು.
ನವ ಭಾರತಕ್ಕಾಗಿ ಒಂದಾಗೋಣ ಪುಲ್ವಾಮಾ ದಾಳಿಗೆ ದೈಯ೯ವಾಗಿ ಉತ್ತರಿಸೋಣ

Posted On: 14-02-2021 08:38PM
ಫೆಬ್ರವರಿ 14 ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದು ನಮ್ಮ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ದಿನ. ಹೇಡಿ ಉಗ್ರರ ಪಾಪಕೃತ್ಯಕ್ಕೆ ಗಡಿಯಲ್ಲಿ ನಮ್ಮ ವೀರರು ಅಮರರಾಗಿದ್ದರು. ನರಿಬುದ್ಧಿ ಉಗ್ರರ ಈ ಕುಕೃತ್ಯದ ಫಲವಾಗಿ ನಮ್ಮ 40 ವೀರರು ಹುತಾತ್ಮರಾದ ದಿನವಿಂದು. ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಇಂತಹ ನೋವಿನ ದಿನಕ್ಕೆ ಇವತ್ತಿಗೆ ಎರಡು ವರ್ಷ ತುಂಬಿದೆ. 2019ರ ಫೆಬ್ರವರಿ 14ರ ಶುಕ್ರವಾರ 40 ಸಿಆರ್‌ಪಿಎಫ್ ಯೋಧರಿದ್ದ ವಾಹನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೊರಾದಲ್ಲಿ ರಕ್ಕಸ ಉಗ್ರರು ದಾಳಿ ಮಾಡಿದ್ದರು.
ಭಾರತದ ಹೋರಾಟ ಅನನ್ಯ: ವಾಯುದಾಳಿಯ ನಂತರ ಪ್ರಧಾನಿ ಜಾಗತಿಕ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡು ಪ್ರಮುಖ ರಾಷ್ಟ್ರಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದು ಮಿಸುಕಾಡದಂತೆ ಮಾಡಿದ ಪರಿಯಂತೂ ಅನನ್ಯವಾದ್ದು. ಶಕ್ತರಾಷ್ಟ್ರಗಳು ಮಾತ್ರ ಈ ಪರಿಯ ದಿಗ್ಬಂಧನ ಹೇರಬಹುದೆನ್ನುವುದಾದರೆ ಭಾರತ ಇಂದೂ ಅದೇ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ ಎಂದಾಯ್ತು. ಸ್ವತಃ ಚೀನಾ ಕೂಡ ಪಾಕಿಸ್ತಾನದ ಸಹಕಾರಕ್ಕೆ ಬರದೇ ದೂರವೇ ಉಳಿದು ಮೌನವನ್ನು ಕಾಪಾಡಿಕೊಂಡಿದ್ದು ಪಾಕಿಸ್ತಾನ ತನ್ನ ಆಲೋಚನಾ ದಿಸೆಯನ್ನು ಬದಲಾಯಿಸಬೇಕೆಂಬುದಕ್ಕೆ ಉದಾಹರಣೆಯಾಯ್ತು.
ಈ ನಡುವೆಯೇ ಬಂದ ಮತ್ತೊಂದು ಸುದ್ದಿ ಪಾಕಿಸ್ತಾನದ ಪಾಲಿಗೆ ಆಘಾತಕಾರಿಯೇ ಸರಿ. ಅಲ್ಲಿನ ಸೇನಾ ಮುಖ್ಯಸ್ಥ ಬಾಜ್ವಾನ ಗಮನಕ್ಕೂ ತರದಂತೆ ಸೈನಿಕರು ಮತ್ತು ಜೈಶ್-ಎ-ಮೊಹಮ್ಮದ್ ಕಮ್ಯಾಂಡರುಗಳು ಈ ಯೋಜನೆಯನ್ನು ರೂಪಿಸಿದ್ದರಂತೆ. ಅಂದರೆ ಭಯೋತ್ಪಾದಕರು ಈಗ ಸೇನೆಯನ್ನೂ ಮೀರಿ ಬೆಳೆದಿದ್ದಾರೆ. ಪಾಕಿಸ್ತಾನ ಬಿತ್ತಿದ ಬೀಜ ಹೆಮ್ಮಾರಿಯಾಗಿ ಅವರನ್ನೇ ತಿನ್ನುತ್ತಿದೆ. ವಿಕಾಸದ ಕನಸನ್ನು ಹೊತ್ತು ಬಂದ ಇಮ್ರಾನ್ ಹಿಂದೆಂದೂ ಇಲ್ಲದಂತಹ ಪ್ರತಿರೋಧವನ್ನು ಈಗ ಎದುರಿಸುತ್ತಿದ್ದಾರೆ. ಒಂದೆಡೆ ಬಲಾಢ್ಯವಾಗಿರುವ ಭಾರತ, ಮುಲಾಜಿಲ್ಲದ ಸಕಾ೯ರ ಮತ್ತೊಂದೆಡೆ ಕೈಗೇ ಸಿಗದ ಪಾಕಿಸ್ತಾನದ ಆಥಿ೯ಕತೆ ಮತ್ತು ರಾಷ್ಟ್ರವನ್ನೇ ಮೀರಿ ಬೆಳೆಯುತ್ತಿರುವ ಭಯೋತ್ಪಾದಕರು, ಇವು ಶತ್ರು ರಾಷ್ಟ್ರವನ್ನು ಖಂಡಿತವಾಗಿಯೂ ತಿನ್ನುತ್ತಿವೆ.
ಏನೇ ಆಗಲಿ ಮುಂದೆ ಈ ರೀತಿಯ ದಾಳಿ ಆಗದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.ಭಯೋತ್ಪಾದನೆಯ ಮೂಲ ಬೇರು ಹೋಗುವವರೆಗೂ ಹೋರಾಡಬೇಕು. ನಮ್ಮ ದೇಶದ ದೇಶ ಬಾಂಧವರು ಪ್ರೇಮಿಗಳ ದಿನಕ್ಕೆ ಹೆಚ್ಚು ಒತ್ತು ನೀಡದೆ ಈ ದಿನವನ್ನು ಸೈನಿಕರ ದಿನವಾಗಿ ಆಚರಿಸಿ ಅವರಿಗೆ ಮತ್ತಷ್ಟು ಶಕ್ತಿ ತುಂಬುವ ಕಾಯ೯ ಮಾಡಲಿ. ಏನೇ ಆಗಲಿ ಮುಂದೆ ಸಾಗೋಣ ನವ ಭಾರತ ಕಟ್ಟಲು ಈ ದಿನವನ್ನು ಮುಡಿಪಾಗಿಡೋಣ. ಲೇಖನ : ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಪ್ರೇಮಿಗಳ ದಿನಾಚರಣೆಯಂದು ಸ್ವಚ್ಛತಾ ಶ್ರಮದಾನ

Posted On: 14-02-2021 08:26PM
ಪ್ರೇಮಿಗಳ ದಿನಾಚರಣೆ ಯಂದು ಪರಿಸರ ಪ್ರೇಮಿಗಳಾಗೋಣ ಎಂಬ ಧೇಯವಾಕ್ಯದೊಂದಿಗೆ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು ಇವರ ಆಶ್ರಯದಲ್ಲಿ ಇಂದು ಬೆಳಿಗ್ಗೆ 7.30 ರಿಂದ 9.30 ರವರೆಗೆ ಶಿರ್ವ ಮಹಾಲಸ ನಾರಾಯಣಿ ದೇವಸ್ಥಾನದ ತಿರುವಿನಿಂದ ಶಿರ್ವ ಪೇಟೆಯ ಮುಖ್ಯ ರಸ್ತೆ ಎರಡು ಬದಿಗಳಲ್ಲಿ ಹರಡಿದ್ದ ತ್ಯಾಜ್ಯ,ಕಸ, ಪ್ಲಾಸ್ಟಿಕ್, ಹೆಕ್ಕುವ ಮೂಲಕ ಸ್ವಚ್ಚತೆ ಕಾರ್ಯಕ್ರಮ ನಡೆಯಿತು.

ಡಾನ್ ಬೋಸ್ಕೊ ಶಾಲೆ ಮುಂಬಾಗ, ಅಂಚೆ ಕಛೇರಿ, ಸಮುದಾಯ ಆರೋಗ್ಯ ಕೇಂದ್ರ ಮುಂಬಾಗ, ಸಂತ ಮೇರಿ ಪ.ಪೂ ಕಾಲೇಜು ಮುಂಬಾಗ , ಶಾಂಭವಿ ಹೈಟ್ಸ್ ವರೆಗೆ ಸ್ವಚ್ಛತಾ ಕಾರ್ಯಕ್ರಮದೊಂದಿಗೆ , ಪ್ರೇಮಿಗಳ ದಿನಾಚರಣೆಯನ್ನು ಪರಿಸರ ಪ್ರೇಮಿಗಳಾಗಿ ಶ್ರಮದಾನ ನಡೆಯಿತು.

ಯುವ ವೃಂದದ ಗೌರವಾಧ್ಯಕ್ಷ, ಗ್ರಾ.ಪಂ ಸದಸ್ಯ ಕೆ ಆರ್ ಪಾಟ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಕಾರ್ಯದರ್ಶಿ ಆಶಿಷ್ ಪಾಟ್ಕರ್, ಹಿರಿಯ ಶಿಕ್ಷಕ ದೇವದಾಸ ಪಾಟ್ಕರ್, ಸೇನಾನಿ ರಾಜೇಂದ್ರ ಪಾಟ್ಕರ್, ಲಯನ್ ಅನಂತರಾಮ ವಾಗ್ಲೆ, ವೀರೇಂದ್ರ ಪಾಟ್ಕರ್, ಯುವ ವೃಂದದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು. ಸ್ಥಳೀಯರಾದ ಶ್ರೀನಿವಾಸ ಶೆಣೈಯವರು ಉಪಹಾರ, ಹಾಗೂ ಗಿರಿದರ್ ಪ್ರಭು ಶಿರ್ವ ರವರು ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಅನೈತಿಕ ತಾಣವಾಗಿ ಇತಿಹಾಸ ಪ್ರಸಿದ್ಧ ಧನಸ್ಸು ತೀರ್ಥ, ಭರವಸೆ ಈಡೇರಿಸದ ಪೊಲೀಸ್ ಇಲಾಖೆ, ಮೌನವಹಿಸಿದ ಪಂಚಾಯತ್, ಸ್ಥಳೀಯ ಯುವಕರಿಂದ ಸ್ವಚ್ಛತಾ ಕಾರ್ಯ

Posted On: 14-02-2021 02:04PM
ಗುರು ಪರಶುರಾಮ ರಿಂದ ನಿರ್ಮಿತವಾಗಿದೆ ಎಂಬ ನಂಬಿಕೆ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನಸ್ಸು ತೀರ್ಥವು ಶ್ರೀ ಕ್ಷೇತ್ರ ಕುಂಜಾರುಗಿರಿ ಸಂಬಂಧಿಸಿದ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ, ಮಜೂರು ಗ್ರಾಮಗಳ ಗಡಿಭಾಗದಲ್ಲಿದೆ.

ಅನೈತಿಕ ಚಟುವಟಿಕೆಗಳ ತಾಣವಾದ ಸ್ಥಳ : ಇಂತಹ ಪೂಜನೀಯ ಧಾರ್ಮಿಕ ಧನಸ್ಸು ತೀರ್ಥವು ಇದೀಗ ಪುಂಡು-ಪೋಕರಿಗಳ ಕಾಲಕಳೆಯುವ ಸ್ಥಳವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮದ್ಯ ಪ್ರಿಯರ ಮನೋರಂಜನಾ ಸ್ಥಳವಾಗಿ ಪರಿಣಮಿಸಿರುವುದು ದುರಂತ. ಈ ಬಗ್ಗೆ ಇಂತವರಿಗೆ ಮನವರಿಕೆ ಮಾಡಿದರೆ ವಾಗ್ವಾದ, ಘರ್ಷಣೆಗಳು ಸಂಭವಿಸಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು.

ಸಂಬಂಧಪಟ್ಟ ಇಲಾಖೆಗಳ ದಿವ್ಯಮೌನ : ಜೂನ್ ತಿಂಗಳಿನಲ್ಲಿ ಸ್ಥಳೀಯರು ಈ ಬಗ್ಗೆ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ. ಬೀಟ್ ವ್ಯವಸ್ಥೆಯನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದರೂ ವ್ಯವಸ್ಥೆಯನ್ನು ಮಾಡಿಲ್ಲ. ಸ್ಥಳೀಯರ ಒತ್ತಡದ ಮೇರೆಗೆ ಪಂಚಾಯತ್ ವತಿಯಿಂದ ಸೂಚನಾ ಫಲಕವನ್ನು ಹಾಕಲಾಗಿದೆ. ಆದರೂ ನಿಯಮ ಪಾಲನೆ ಆಗುತ್ತಿಲ್ಲ. ಕೆರೆಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ ಬೀಳುತ್ತಿದೆ. ಇದಕ್ಕೆ ಗಮನ ವಹಿಸಬೇಕಾದ ಪಂಚಾಯತ್ ಮೌನವಹಿಸಿದೆ.

ಸ್ವಚ್ಚತಾ ಕಾರ್ಯದಲ್ಲಿ ಯುವಕರು : ಯಾರೂ ಇತ್ತ ಗಮನ ಹರಿಸಿದಾಗ ಸ್ಥಳೀಯ ಯುವಕರ ತಂಡವಾದ ಅಜ್ಜಿಲಕಾಡು ಫ್ರೆಂಡ್ಸ್ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗೋಡೆಯಲ್ಲಿ ಶಿಲ್ಪಿಗಳಿಗೆ ಕಂಡ ನಗುಮುಖದ ಬಾಬಾ

Posted On: 13-02-2021 11:47PM
ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ನೂತನ ಸಾಯಿಬಾಬಾ ಮೂರ್ತಿಯನ್ನು ಕೆತ್ತುತಿರುವ ರಾಜಸ್ಥಾನದ ಜೈಪುರದ ಶಿಲ್ಪಕಲಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ್ದರು.

ಜೈಪುರದಲ್ಲಿ ಸಾಯಿ ಮೂರ್ತಿ ಕೆತ್ತನೆಯ ಶಿಲ್ಪ ಕೇಂದ್ರಕ್ಕೆ ಭೇಟಿ ನೀಡಿದಾಗ ಕಲಾವಿದರು ಬಾಬಾ ಪ್ರತಿಷ್ಠಾಪನಾ ಸ್ಥಳದ ಚಿತ್ರ ಕೇಳಿದಾಗ ಗುರುಗಳು ಮಂದಿರದ ಸಹಾಯಕರಿಗೆ ಕರೆ ಮಾಡಿ ಪೋಟೋ ಕ್ಲಿಕ್ಕಿಸಿ ಕಳುಹಿಸಲು ತಿಳಿಸಿದರು.

ಪೋಟೋವನ್ನು ಗಮನಿಸಿದ ಕಲಾವಿದರು ಹೇಳಿದ್ದು ಹರ್ಷದ ಮಾತು "ಬಾಬಾ ತೋ ಮಂದಿರ್'ಮೇ ಹೀ ಹೇ" ("ಬಾಬಾ ಮಂದಿರದಲ್ಲಿಯೇ ಇದ್ದಾರೆ") ಮಂದಿರದ ಗೋಡೆಯಲ್ಲಿ ನಗುಮುಖದ ಬಾಬಾ ಕಾಣಿಸುತ್ತಿದ್ದಾರೆ ನೋಡಿ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಮ್ ಕಾರ್ಯಕರ್ತರಿಂದ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ

Posted On: 13-02-2021 11:26PM
ಶಿರ್ವ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಮ್ ಕಾರ್ಯಕರ್ತರಿಂದ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ವಿಶೇಷ ಆಂದೋಲನದ ಪ್ರಯುಕ್ತ ಸ್ವಚ್ಛತಾ ಶ್ರಮದಾನ ನಡೆಯಿತು.

ನಮ್ಮ ಗ್ರಾಮ ನಮ್ಮ ಜವಾಬ್ದಾರಿ ದ್ಯೇಯ ದೊಂದಿಗೆ ಶಿರ್ವ ಗ್ರಾಮದ ಶಿರ್ವ- ಕುತ್ಯಾರ್ ರಸ್ತೆ, ಶಿರ್ವ-ಕಾಪು ರಸ್ತೆ, ನ್ಯಾರ್ಮ ರಸ್ತೆ, ಮಟ್ಟಾರ್-ಮೂಡುಬೆಳ್ಳೆ ರಸ್ತೆ ಬದಿಯ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲಾಯಿತು.
ಟ್ರೀ ಹೌಸ್ ಕೆಫೆ NH66 ಎರ್ಮಾಳು-ಉಚ್ಚಿಲ ಗ್ರಾಹಕರ ಸೇವೆಗೆ ಲಭ್ಯ

Posted On: 13-02-2021 11:13PM
ಮಂಗಳೂರು ಉಡುಪಿ NH66 ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಮಾಳು ಬಡದಿಂದ ಉಚ್ಚಿಲದ ಕಡೆಗೆ ಹೋಗುವಾಗ ದಮನಿಕಾ ಪ್ಲಾಜಾದ ಎದುರು ತನ್ನ ವಿಶಿಷ್ಟ ರೀತಿಯ ವಿನ್ಯಾಸದ ಕಟ್ಟಡದಿಂದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಪೀಜಾ, ಮೊಮೊಸ್,ಪಾಸ್ತಾ,ಬರ್ಗರ್, ಸ್ಯಾಂಡ್ವಿಚ್, ರೊಲ್ಸ್, ಸಾಲಡ್ಸ್ , ಟೀ, ಕಾಪಿ, ಸ್ಮೂತೀಸ್, ಸೋಡಾ, ಜ್ಯೂಸ್,ಮಿಲ್ಕ್ ಶೇಕ್, ಐಸ್ ಕ್ರೀಮ್ ಮುಂತಾದ ಬಗೆ ಬಗೆಯ ತಿನಿಸುಗಳಿಂದ ಗ್ರಾಹಕರನ್ನು ಸಂತ್ರಪ್ತಿಗೊಳಿಸುತ್ತಿದೆ.

ಹೋಮ್ ಡೆಲಿವರಿಗಾಗಿ ಕರೆ ಮಾಡಿ- 733815698/8139923922. ಇಂದೇ ಬೇಟಿ ನೀಡಿ ಟ್ರೀ ಹೌಸ್ ಕೆಫೆ. The real Tree House with Pizza, Mommos, Pasta's, Burger's, Sandwiche's, Roll's,Salad's,Tea, Coffee, Smoothly's, Soda's, Juices', Milkshakes...and many more. At Damanica plazza,Yermal bad a, uchila (Manglore-udupi Highway) Call us for Door Delivery-733815698/8139923922.
ಬಿರುವೆರ್ ಕಾಪು ಸೇವಾ ಟ್ರಸ್ಟ್ : ಜ್ಞಾನದೀವಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮ

Posted On: 13-02-2021 03:10PM
ಕಾಪು ತಾಲೂಕಿನ ಪ್ರತಿಭಾವಂತ ಬಿಲ್ಲವ ಹಾಗೂ ಇತರ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2020 -21 ನೇ ಸಾಲಿನ ಜ್ಞಾನದೀವಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮವು ಬಿರುವೆರ್ ಕಾಪು ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಇದರ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಫೆಬ್ರವರಿ 21, ಆದಿತ್ಯವಾರ ಸಂಜೆ 3.30 ರಿಂದ 6 ಗಂಟೆಯ ತನಕ ನಡೆಯಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಇದರ ಅಧ್ಯಕ್ಷರಾದ ವಿಕ್ರಂ ಕಾಪು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್, ಶ್ರೀ ಗುರುಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರಿನ ರಮೇಶ್ ಜಿ. ಅಮೀನ್, ಕಾಪು ಬಿಲ್ಲವರ ಸಹಾಯಕ ಸಂಘ (ರಿ.)ದ ಗೌರವ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಕಾಪುವಿನ ಉದ್ಯಮಿ ದೀಪಕ್ ಕುಮಾರ್ ಎರ್ಮಾಳ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೆಡ್ಡಸ ಮರೆತು ಹೋಗುತ್ತಿರುವ ಆಚರಣೆ - ಭೂಮಿತಾಯಿ ಪುಷ್ಪವತಿ ಎಂಬ ಒಸಗೆ

Posted On: 13-02-2021 02:00PM
[ಫೆ.10,11,12 ಅಂದರೆ ಮಕರಮಾಸದ ಕೊನೆಯ ಮೂರು ದಿನ,ಪುಯಿಂತೆಲ್ ತಿಂಗಳ ಅಂತ್ಯದ ದಿನಗಳು ಭೂರಜಸ್ವಲಾ ದಿನ.] ನಿಸರ್ಗ ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ ಎಂಬುದು ಒಂದು ಹಳೆಯ ರೂಢಿಯ ಮಾತು. ಕಾಡು ನಾಡಾಗುತ್ತಾ ಕೃಷಿ ಲಾಭಕಾರಿ ಎನಿಸದೆ, ಅವಗಣನೆಗೆ ಒಳಗಾಗಿರುವ ಅಭಿವೃದ್ಧಿಯ ಭರಾಟೆಯ ಈ ಕಾಲಘಟ್ಟದಲ್ಲಿ ಒಂದು ಪುರಾತನ ಸಾಂಸ್ಕೃತಿಕ ಸಂಭ್ರಮ ಮರೆಯಾಗುತ್ತಿದೆ. ಆದುದರಿಂದಲೇ ನಮ್ಮ ಆಚರಣೆಗಳು ಮೂಲ ಆಶಯ ಕಳೆದುಕೊಳ್ಳುತ್ತಿವೆ, ಔಪಚಾರಿಕವಾಗುತ್ತಿವೆ. ಅಥವಾ ಮರೆತೇ ಹೋಗುತ್ತಿವೆ. ಮರೆತು ಹೋದ - ಹೋಗುತ್ತಿರುವ ಆಚರಣೆಗಳಲ್ಲಿ ತುಳುವರ ‘ಕೆಡ್ಡಸ’ ಒಂದು; ಹೌದು... ಕೆಡ್ಡಸ ಹಾಗಂದರೆ ಏನು, ಯಾವಾಗ ಸನ್ನಿಹಿತವಾಗುತ್ತದೆ ಎಂದು ಪ್ರಶ್ನಿಸುವಂತಾದ ಈ ಸ್ಥಿತಿಗೆ ನಮ್ಮ ಬದುಕಿನ ರೀತಿ-ನೀತಿ-ರಿವಾಜುಗಳು ಬದಲಾದುದೇ ಕಾರಣ. ಮನಸ್ಸು - ಮನಸ್ಸುಗಳ ನಡುವಿನ ಮಾನಸಿಕ ಅಂತರ ಹಿಗ್ಗುತ್ತಾ ಭಾವನಾತ್ಮಕ ಸಂಬಂಧಗಳು ಕೇವಲ ‘ಸೋಗು ಅನ್ನಿಸುತ್ತಾ’ ಮುಂದೆ ಗಮಿಸುವ ಅತಿ ಉತ್ಸಾಹದಲ್ಲಿ ನೆಲ, ಜಲ, ಮರಮಟ್ಟು ,ಒಟ್ಟಿನಲ್ಲಿ ಪ್ರಕೃತಿಯನ್ನು ಕಾಣುವ ದೃಷ್ಟಿಯೂ ಬದಲಾಗಿದೆ. ಒಂದು ಕಾಲಕ್ಕೆ ಪ್ರಕೃತಿ ನಮ್ಮನ್ನು ಪೋಷಿಸುವ, ಜೀವನಾಧಾರಳಾಗಿರುವ ತಾಯಿ. ನೆಲದವ್ವೆಯನ್ನು ನಂಬಿದ್ದು ಎಲ್ಲಿಯವರೆಗೆ ಎಂದರೆ ‘ಭೂಮಿಸಾಕ್ಷಿಯಾಗಿ ಹೇಳುತ್ತೇನೆ' ಎಂದು ಭೂಮಿಯನ್ನು ಸ್ಪರ್ಶಿಸಿ ಸಾಕ್ಷಿ ಹೇಳುವ ಮಾತು ಜನಮಾನಸದಲ್ಲಿ ಸಹಜವಾಗಿ ಚಾಲ್ತಿಯಲ್ಲಿತ್ತು. ನಾವು ಭೂಮಿಯನ್ನು ಗೌರವಿಸುತ್ತಿದ್ದೆವು, ಪೂಜಿಸುತ್ತಿದ್ದೆವು.ಜನಪದರ ಜೀವನ ಭೂಮಿಗೆ ಅಂತಹ ಮಹತ್ತರ ಪ್ರಾಶಸ್ತ್ಯ ಕೊಟ್ಟಿತ್ತು ಎಂಬುದಕ್ಕೆ ‘ಕೆಡ್ಡಸ’ ಆಚರಣೆಯ ಸ್ವರೂಪ, ಕಲ್ಪನೆ, ಅನುಸಂಧಾನಕ್ಕೆ ಆಧಾರವಾಗುತ್ತದೆ.

ಭೂಮಿ ಹೆಣ್ಣು ಎಂದು ಪರಿಗ್ರಹಿಸಿದ ಮಾನವ ಭೂಮಿಯಂತೆ ಫಲಸಮೃದ್ಧಿಯನ್ನು ನೀಡುವ, ಜನ್ಮ ನೀಡಿದ ತಾಯಿಯ ಔದಾರ್ಯಕಂಡ; ‘ನೆಲವನ್ನು ಅಬ್ಬೆ ಎಂದು ಪ್ರೀತಿಸಿದ. ಆಕೆಯ ಉತ್ಪನ್ನಗಳೆಲ್ಲ ‘ಫಲವೆಂದು ಪರಿಗ್ರಹಿಸಿ ತಾಯಿಯಿಂದ ತಾನು, ಭೂಮಿಯಿಂದ ಫಲವಂತಿಕೆ’ ಎಂದು ಸಮೀಕರಿಸಿ ಆರಾಧಿಸತೊಡಗಿದ. ಜನಪದರ ಸರಳ, ಮುಗ್ಧ ಆದರೆ ಗಾಢವಾದ ಚಿಂತನೆಯುಳ್ಳ ಪ್ರಕೃತಿ ಪರ ಕಾಳಜಿ ಎಷ್ಟು ಭವ್ಯವಾಗಿದೆ ತಾನೆ! ಸ್ತ್ರೀ ಸಹಜ ದೈಹಿಕ ಬದಲಾವಣೆಯನ್ನು ಗಮನಿಸುತ್ತಾ ಪ್ರಕೃತಿಯ ಋತುಚಕ್ರಕ್ಕನುಗುಣವಾಗಿ ಭೂಮಿತಾಯಿಯಲ್ಲಿ ಕಾಣುವ ಸ್ಥಿತ್ಯಂತರಗಳನ್ನು ಕ್ರೋಡೀಕರಿಸಿಕೊಂಡ ಜನಪದರು ತನ್ನ ತಾಯಿಯಂತೆಯೇ ಭೂಮಿದೇವಿಯೂ 'ಋತುಮತಿ'ಯಾಗುವ ಕಾಲವನ್ನು, ಮತ್ತೆ ಸೃಷ್ಟಿಗೆ ಅಣಿಯಾಗುವ ಸಂದರ್ಭವನ್ನು ಪ್ರಾಕೃತಿಕ ಋತುಮಾನಕ್ಕೆ ಅನುಗುಣವಾಗಿ ನಿಗದಿಪಡಿಸಿ ಆಚರಿಸತೊಡಗಿದ , ಹೇಗಿದೆ ಮುಗ್ಧ ಹೃದಯಗಳ ಕಲ್ಪನೆ? ನಮ್ಮವ್ವೆ ತಿಂಗಳಿಗೊಮ್ಮೆ ಪುಷ್ಪವತಿಯಾಗುವುದಾದರೆ, ‘ಭೂಮಿ ಅವ್ವೆ ವರ್ಷಕ್ಕೊಮ್ಮೆ ಋತುಮತಿಯಾಗುವುದು. ನಮ್ಮ ಜೀವನ ವಿಧಾನದಲ್ಲಿ ಇರುವ ಎಲ್ಲ ವಿಧಿ-ನಿಷೇಧಗಳೂ ಭೂಮಿತಾಯಿಗೂ ಇದೆ ಎಂದು ನಿರ್ಧರಿಸಿ ಭೂಮಿಯನ್ನು ಅಗೆಯಬಾರದು, ಕೃಷಿಗೆಂದು ಉಳಬಾರದು, ಮರಗಿಡಗಳನ್ನು ಕಡಿಯಬಾರದು , ಬದಲಾಗುವ ನಿಸರ್ಗದ ಸೌಂದರ್ಯ ನೋಡುತ್ತಾ ಸೌಭಾಗ್ಯ ರೂಪದ ಕೃಷಿ ಸಮೃದ್ಧಿ ನೀಡಲು ಭೂಮಿತಾಯಿ ಪ್ರಕೃತಿಯ ಮಡಿಲಲ್ಲಿ ಮತ್ತೆ ಅಣಿಯಾದಳು ಎಂಬ ಸಂಕೇತವಾಗಿ ಫಲೀಕರಣಕ್ಕೆ ಮುನ್ನ ಪುಷ್ಪವತಿಯಾಗಿ ತಾನು ಸಿದ್ಧಳಾಗುತ್ತಿದ್ದಾಳೆ ಎಂದು ಭವದ ಭವ್ಯತೆಯನ್ನು ನಿರೂಪಿಸಿರಬೇಕು. 'ಭೂದೇವಿ ಪುಷ್ಪವತಿ' ಎಂಬ ಸಡಗರವಾದರೆ ಈ ಸಂಭ್ರಮಾಚರಣೆಗೆ ‘ಬೇಟೆ’ ಒಂದು ಪೂರಕ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಜ್ವರ ಬರುವ ದಿನಗಳಂತೆ, ಉಳಿದಂತೆ ಕಾಡು ಪ್ರಾಣಿಗಳ ಕಾಲಿನ ಪಾದದ (ಗೊರಸು, ಪಂಜ ಇತ್ಯಾದಿ) ಅಡಿಭಾಗ ಬಿರಕು ಬಿಟ್ಟು ಓಡಲು ಕಷ್ಟವಾಗುವ ಸಂದರ್ಭವು ಕಾಲಮಾನಕ್ಕೆ ಸರಿಯಾಗಿ ಒದಗುತ್ತದದಂತೆ. ಊರಿನ ಜನರೆಲ್ಲ ಸಾಮೂಹಿಕವಾಗಿ ಬೇಟೆಯಾಡುತ್ತಾ ಬೇಟಯನ್ನು ಸಂಭ್ರಮಿಸುತ್ತಾರೆ. ಊರಿನ ಮುಖ್ಯಸ್ಥನ ಅಥವಾ ಅರಸನ ಅಪ್ಪಣೆಯೂ ಬೇಟೆಯಾಟಕ್ಕೆ ಇತ್ತಂತೆ. ಒಟ್ಟಿನಲ್ಲಿ ಸ್ತ್ರೀಯರ ಆಚರಣೆಯಲ್ಲಿ ಪುರುಷರಿಗೆ ಬೇಟೆಯ ಅವಕಾಶ. ಮನೆಯಂಗಳದಲ್ಲಿ ‘ಕೆಡ್ಡಸ’ ಬರೆದು ಅದರ ಮೇಲೆ ಮಾಂಗಲ್ಯ ಸೂಚಕ ವಸ್ತುಗಳನ್ನು ಕೊಡಿಬಾಳೆ ಎಲೆಯಲ್ಲಿಡುವ, ಸ್ನಾನಕ್ಕೆ ಬೇಕಾದ ಪ್ರಕೃತಿಜನ್ಯ ಸವಲತ್ತುಗಳನ್ನು ಒದಗಿಸುತ್ತಾ ಫುಷ್ಪವತಿಯಾದ ತಾಯಿ ಮಡಿಸ್ನಾನದಿಂದ ಪರಿಶುದ್ಧಳಾಗಿ ಮನೆಯೊಳಗೆ ಬರುವ ಮುಂತಾದ ವಿವಿಧ ಆಚರಣೆಗಳು ನಡೆಯುತ್ತವೆ. ಫಲವತಿಯಾಗುವ ಸರ್ವ ಲಕ್ಷಣ ಸಂಪನ್ನೆಯಾಗಿ ಪುಷ್ಪವತಿಯಾಗುವ ಪೂರ್ವಭಾವೀ ಚಿಂತನೆ, ಸ್ನಾನದ ಸಡಗರ, ಈ ನಡುವೆ ತಿನ್ನಲು ನೀಡುವ ,ಆ ಕಾಲದಲ್ಲಿ ಲಭ್ಯವಿರುವ ಧಾನ್ಯಗಳನ್ನು ಹುರಿದು ತಯಾರಿಸಿದ ವಿಶೇಷ ತಿನಿಸುಗಳು ತುಳುನಾಡಿನ ‘ಕೆಡ್ಡಸ’ ಆಚರಣೆಯ ವಿಶಿಷ್ಟ ವಿಷಯಗಳು. ಧಾನ್ಯಗಳಲ್ಲಿ ‘ಜೀವ’ವನ್ನು, ದೈಹಿಕ ಕಾಮನೆಗಳನ್ನು ಪ್ರಚೋದಿಸುವ ಗುಣಗಳು ಇವೆ ಎಂಬುದೂ ಒಂದು ಆಯಾಮದ ಚಿಂತನೆ. ಭೂ ದೇವಿಗೆ ಪುಷ್ಪವತಿ ಎಂಬ ಸಂಭ್ರಮ ಮುಗಿದು ಜಳಕದ ಸಿದ್ಧತೆಗಳಾಗುತ್ತಿವೆ. ಇದು ‘ಕೆಡ್ಡಸ’.

ಕುಡುವರಿ - ನನ್ನೆರಿ :ಕುಡುವರಿ ನನ್ನೆರಿ ಅಕ್ಕಿ, ಹುರುಳಿ, ಹೆಸರು ಮುಂತಾದ ಧಾನ್ಯಗಳನ್ನು ಹುರಿದು ತೆಂಗಿನ ಕಾಯಿ ತುಂಡುಗಳನ್ನು ಬೆರೆಸಿ ತಯಾರಿಸುವ ವಿಶಿಷ್ಟ ತಿನಿಸು 'ಕೆಡ್ಡಸದ ಕುಡುವರಿ'. ಹೀಗೆ ಹುರಿದ ಧಾನ್ಯಗಳನ್ನು ಕುಟ್ಟಿಪುಡಿ ಮಾಡಿ ಬೆಲ್ಲ ಮತ್ತು ತೆಂಗಿನ ಕಾಯಿ ಬೆರೆಸಿ ಸಿದ್ಧಗೊಳಿಸುವ ‘ನನ್ನೆರಿ’ ಎಂಬುದು ಪ್ರಾದೇಶಿಕ ಭಿನ್ನತೆಯಾಗಿ ರೂಢಿಯಲ್ಲಿದೆ. • ಕುಡುವರಿಯನ್ನು ಎಲ್ಲರೂ ತಿನ್ನಬೇಕು. ಊರಿನಲ್ಲಿಲ್ಲದಿದ್ದರೆ ತೆಗೆದಿಟ್ಟು ಬಂದಾಗ ಕೊಡಬೇಕು. ಚೊಚ್ಚಲ ಮಕ್ಕಳಿಗೆ ಇದರಲ್ಲೂ ಆದ್ಯತೆ. • ಕೆಡ್ಡಸದ ಗಾಳಿ, ಕೆಡ್ಡಸ ಬರೆಪುನಿ ಮುಂತಾದುವು ಕೇಳಿಬರುತ್ತಿರುವ ಶಬ್ದಗಳು. ಈಗ ಗಾಳಿಯೂ ಬೀಸುವುದಿಲ್ಲ. ಭೂಮಿಯೂ ಪರಿಮಳ ಬೀರುವುದಿಲ್ಲ. ಮಂದಾರ ರಾಮಾಯಣದಲ್ಲಿ ‘ಬನ್ನಗನೆ ಕೆಡ್ಡಸದ ಪೊತ್ತುದಿನರಿ, ಕುಡುಕಡಲೆ, ಪೇರ‍್ಪದೆಂಗಿದ ಪೊದಿಕೆನ್ ಕಣತ್ ದೀದ್' ಎಂಬ ಉಲ್ಲೇಖವಿದೆ. • ಕೆಡ್ಡಸ ಒಂದು ಕಾಲದ ವಿಜೃಂಭಣೆಯ ಆಚರಣೆಯಾಗಿತ್ತು. ಆದರೆ ಈಗ ನೆನಪೇ ಆಗದ ಪರ್ವ ದಿನ’ವಾಗಿದೆ. ಒಂದು ವ್ಯತ್ಯಾಸವಾದರೆ ಅದನ್ನು ಆಧರಿಸಿದ ಎಲ್ಲವೂ ವ್ಯತ್ಯಸ್ತಗೊಂಡಂತೆ ತಾನೆ? ಪ್ರಕೃತಿಯ ಮಡಿಲಲ್ಲಿ ನಿಸರ್ಗದ ನಿಶ್ಚಿತ ಸ್ಥಿತ್ಯಂತರಗಳ ವಿಸ್ಮಯಗಳನ್ನು ಗಮನಿಸುತ್ತಾ ಮನುಷ್ಯ ಬದುಕು ಕಟ್ಟಿದ. • ಪುಯಿಂತೆಲ್ ಅಥವಾ ಪೊನ್ನಿ ತಿಂಗಳ (ಮಕರಮಾಸ) ಇಪ್ಪತ್ತೇಳನೇ ದಿನ ಸಂಜೆಯಿಂದ ಮಾಯಿ ತಿಂಗಳು ಬರುವ ಸಂಕ್ರಮಣ (ಕುಂಭ ಸಂಕ್ರಮಣ)ದವರೆಗೆ ಮೂರು-ನಾಲ್ಕು ದಿನ 'ಕೆಡ್ಡಸ'. ಸುರುಕೆಡ್ಡಸ-ನಡುಕೆಡ್ಡಸ-ಕಡೆಕೆಡ್ಡಸವೆಂದು ಮೂರು ದಿನ ಆಚರಣೆ. ಫಲವಂತಿಕೆಯನ್ನು ನೀಡುವ ಭೂದೇವಿ ಬೆಳೆ ಸಮೃದ್ಧಿಯನ್ನು ನೀಡಲು ಮತ್ತೆ ಸನ್ನದ್ಧಳಾದಳೆಂಬ ಸಂದರ್ಭದ ಆರಾಧನಾ ವಿಧಿಯಾಗಿ ‘ಕೆಡ್ಡಸ’ ತುಳುವರ ವಿಶಿಷ್ಟ ಹಬ್ಬ. • ಮಳೆಗಾಲದ ಪ್ರಧಾನ ಕೃಷಿಗೆ (ಕರಾವಳಿಯಲ್ಲಿ ಹೆಚ್ಚಾಗಿ ಭತ್ತ) ಪೂರ್ವಭಾವಿ ಸಿದ್ಧತೆಯನ್ನು ಚಳಿಗಾಲ ಮುಗಿದು ಧಾನ್ಯಗಳ ಬೆಳೆಯ ಬಳಿಕ ಆರಂಭಿಸಲಾಗುತ್ತದೆ. ಪೊನ್ನಿ ತಿಂಗಳ (ಜನವರಿ ತಿಂಗಳ ಮಧ್ಯದಿಂದ ಫೆಬ್ರವರಿ ತಿಂಗಳ ಮಧ್ಯದವರೆಗೆ) ಆರಂಭವು ಬೇಸಗೆ ಕಾಲವನ್ನು ಘೋಷಿಸುತ್ತದೆ.ಮುಂದಿನ ಮಳೆಗಾಲದಲ್ಲಿ ಭೂಮಿ (ಗದ್ದೆಯನ್ನು) ಉತ್ತು, ನೇಜಿ ನೆಡಲು ಸಿದ್ಧತೆ ನಡೆಸಲು ಜಾಗೃತನಾಗುವಂತೆ ಕೃಷಿಕನನ್ನು ಎಚ್ಚರಿಸುತ್ತಾಳೆ ಪ್ರಕೃತಿ. • ಮೂಡು ದಿಕ್ಕಿನಿಂದ ವಿಶಿಷ್ಟವಾದ ಗಾಳಿ ಬೀಸತೊಡಗುತ್ತದೆ. ಭೂಮಿಗೆ ವಿಶೇಷ ಕಂಪು ಬರುತ್ತದೆ. ಇದು ಪುಯಿಂತೆಲ್ ಕೊನೆಯ ದಿನಗಳಾಗಿರುತ್ತವೆ. • ಇದು 'ಭೂ ರಜಸ್ವಲಾ' ಪರ್ವ ಕಾಲವಾಗಿರುತ್ತದೆ. ಭೂದೇವಿ ರಜಸ್ವಲೆಯಾದಳೆಂದು ನಂಬಲಾಗುವ ಈ ದಿನಗಳು ಪರ್ವವಾಗಿ ಸ್ವೀಕರಿಸಲ್ಪಟ್ಟ ಕಲ್ಪನೆ ಹಾಗೂ ಕೃಷಿ ಆಧಾರಿತ ಜೀವನ ಶೈಲಿ. • ಭೂಮಾತೆಗೆ ಬಡಿಸುವ ಆಹಾರ (ಕುಡುಅರಿ - ನನ್ನೆರಿ) ವಸ್ತುಗಳೆಲ್ಲ ಫಲವಂತಿಕೆಯ ಬಯಕೆಯ ಸಂಕೇತಗಳೇ ಆಗಿರುತ್ತವೆ. ಹಲಸಿನ ಎಳಸು ಕಾಯಿ ಹಾಕಿದ ಪದಾರ್ಥ, ಉದ್ದಿನ ದೋಸೆ, ನುಗ್ಗೆ ಕೋಡು ಹಾಕಿದ ಪಲ್ಯಗಳು ಪ್ರಧಾನ. • ಕೆಡ್ಡಸದ ಅವಧಿಯಲ್ಲಿ ಹೆಂಗಸರು ಮುಟ್ಟಾದರೆ ಹಸಿ ಸೋಗೆಯಲ್ಲಿ ಮಲಗಬೇಕು. ತಾನು ಮುಟ್ಟಾಗುವ ವೇಳೆ ಇತರ ಹೆಣ್ಣು ಮಕ್ಕಳುಮುಟ್ಟಾಗುವುದನ್ನು ಭೂಮಿತಾಯಿ ಸಹಿಸಲಾರಳೆಂಬ ಕಲ್ಪನೆ ಜನಪದರಲ್ಲಿದೆ. ಕೈಯಲ್ಲಿ ಹಿಡಿದುಕೊಂಡೇ ತಿಂಡಿ ತಿನ್ನುವ, ಊಟ ಮಾಡುವ ಸಂಪ್ರದಾಯವೂ ಇದೆ (ಇತ್ತು). • ಭೂಮಿಯನ್ನು ಯಾವುದೇ ಕಾರಣಕ್ಕೆ ಅಗೆಯಬಾರದು ಎಂಬ ನಿಷೇಧ ಕೆಡ್ಡಸದ ಅವಧಿಯಲ್ಲಿ ಅನುಸರಿಸಲಾಗುತ್ತದೆ ಅಥವಾ ಅನುಸರಿಸಲಾಗುತ್ತಿತ್ತು. • ಭೂದೇವಿ ಪುಷ್ಪವತಿಯಾಗುವಳೆಂಬ ಕಲ್ಪನೆಯೇ ಅನನ್ಯವಾದುದು. ಬೆಳೆ ಆಕೆಯ ಫಲವಂತಿಕೆಯ ಫಲಗಳೆಂಬುದು ವಿಶಿಷ್ಟ ಕಲ್ಪನೆ.
ಕೆಡ್ಡಸದ ಬೋಂಟೆ : ‘ಕೆಡ್ಡಸ’ ಎಂದರೆ ಬೇಟೆ ಸಂಬಂಧಿಯಾದುದು ಎಂಬ ನಿರ್ವಚನವೂ ಇದೆ. ಆದುದರಿಂದಲೇ ಬೇಟೆಯೂ ಕೆಡ್ಡಸದ ಅವಿಭಾಜ್ಯ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಈ ಶ್ರಾಯದಲ್ಲಿ ಜ್ವರ ಬರುತ್ತದೆಯಂತೆ. ‘ಪುಂಡದ ಬೋಟೆ’ ಎಂಬುದು ವಾಡಿಕೆ. ‘ಕೆಡ್ಡಸ’ ಎಂದರೆ ತೊಡಗು ಎಂಬ ಅರ್ಥವೂ ಇದೆ. ತೊಡಗುವುದು ಎಂದರೆ ಕೃಷಿ ಆರಂಭಿಸು ಎಂದು ಪರಿಗ್ರಹಿಸಬಹುದು. ಕೆಡ್ಡಸದ ನೇಮ, ಕೆಡ್ಡಸದ ಆಯನ, ಕೆಡ್ಡಸದ ಗಾಳಿ, ಕೆಡ್ಡಸದ ಕುಡುಅರಿ ಮುಂತಾದವು ಜನಪದರಲ್ಲಿ ರೂಢಿಯಲ್ಲಿರುವ ಆಡು ಮಾತು. ಸಂಪ್ರದಾಯ : ಮೂರುದಿನ ಹಸಿ ಕಡಿಯಬಾರದು, ಒಣಗಿರುವುದನ್ನು ಮುರಿಯಬಾರದು ಎಂಬ ನಂಬಿಕೆಇದೆ. ಲೇಖನ : ಕೆ.ಎಲ್.ಕುಂಡಂತಾಯ