Updated News From Kaup
ಸಾಧನೆಯ ಹಾದಿಯಲ್ಲಿ ಜನಮೆಚ್ಚಿದ ಗಾಯಕಿ ಸೌಜನ್ಯ
Posted On: 15 Dec 2020, 05:24 PM
ಸಾಧನೆ ಎನ್ನುವುದು ಯಾರದ್ದು ಮತ್ತು ಯಾವುದೇ ಹಂಗಿಲ್ಲದೆ ಮಾಡುವುದು. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ಯಾವುದೇ ಅಹಂ ಇರಬಾರದು. ಅಂತಹ ಒಬ್ಬ ಸಾಮಾನ್ಯನಿಗೆ ಮಾತ್ರ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ. ತನ್ನ ಮುಗುಳುನಗೆ ಮತ್ತು ಮುಗ್ದ ಮನಸ್ಸಿನಿಂದ ಎಲ್ಲರ ಮನಸು ಗೆದ್ದ ಅದ್ಭುತ ಕಂಠದ ಹಾಡುಗಾರ್ತಿ ಸೌಜನ್ಯ. ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಡಿಯಾಲ ಗ್ರಾಮದ ದಿ. ಕುಶಾಲಪ್ಪ ಮತ್ತು ದೇವಕಿ ದಂಪತಿಗಳ ಮೂರನೇಯ ಮಗಳು ಸೌಜನ್ಯ. ಸುಮಧುರ ಗಾಯನದ ಮೂಲಕ ಮನ ಸೆಳೆದಿರುವ ಈಕೆಗೆ ಸಂಗೀತವೇ ಉಸಿರು! ಹುಟ್ಟಿದ್ದು ಬಡ ಕುಟುಂಬದಲ್ಲಿ . ತನ್ನ ಜೀವನಕ್ಕಾಗಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಿಂದಲೂ ಸಂಗೀತ ಮತ್ತು ಹಾಡುವುದು ಎಂದರೆ ಎಲ್ಲಿ ಇಲ್ಲದ ಆಸಕ್ತಿ. ಆದರೆ ಇವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ , ಪ್ರೋತ್ಸಾಹ ಮಾಡುವವರು ಇಲ್ಲದೇ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಆದರೂ ತಾನು ಸಾಧನೆ ಮಾಡಬೇಕು, ಎಲ್ಲರೂ ಗುರುತಿಸಬೇಕು ಎನ್ನುವ ಕನಸು ಕನಸಾಗಿಯೇ ಉಳಿದಿತ್ತು. ಆದರೂ ತನ್ನ ಪ್ರಯತ್ನ ಬಿಡಲ್ಲಿಲ ಬೆಳ್ಳಾರೆ ಕಿರಣ್ ಕುಮಾರ್ ಗಾನಸಿರಿಯವರ ಬಳಿ ಒಂದು ವರ್ಷ ಸಂಗೀತ ಅಭ್ಯಾಸ ಮಾಡಿದ ನಂತರವು ಅಷ್ಟೊಂದು ವೇದಿಕೆಗಳು ಸಿಗಲಿಲ್ಲ. ಆದರೂ ಪ್ರಯತ್ನ ಬಿಡದ ಸೌಜನ್ಯ 2019 ರಲ್ಲಿ ಕರಾವಳಿ ಗಾನಕೋಗಿಲೆ ಆಯ್ಕೆಯಾದ ನಂತರ ಇವರ ಸಾಧನೆಯ ಪಯಣ ಮುಂದುವರಿಯಿತು. ತುಳುನಾಡಿನ ಹೆಮ್ಮೆಯ ಗಾಯಕ ಅರ್ವಿಂದ್ ವಿವೇಕ್ ರವರ ಕರಾವಳಿ ಗಾನಕೋಗಿಲೆ ಎನ್ನುವ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ ಸೌಜನ್ಯ ಹಂತ ಹಂತವಾಗಿ ಸಂಗೀತದಲ್ಲಿ ಬೆಳೆಯಲಾರಂಭಿಸಿದ್ದರು. ಇವರ ಈ ಸಾಧನೆಗೆ ಅರ್ವಿಂದ್ ಮೆಲೋಡಿಸ್ ಟೀಮ್ ನ ಎಲ್ಲಾ ಸದ್ಯಸರು ಬೆಂಬಲವಾಗಿ ನಿಂತಿದ್ದಾರೆ ಅರ್ವಿಂದ್ ವಿವೇಕ್ ರವರ ತಂಡದ ಜೊತೆ ಗುರುತಿಸಿಕೊಂಡ ನಂತರ ಇವರು ಜನಪ್ರಿಯರಾದರು. ಭಾರತದಲ್ಲಿ ಮಾತ್ರ ಅಲ್ಲದೆ ವಿದೇಶದಲ್ಲಿಯೂ ಇವರ ಅಭಿಮಾನಿಗಳು ಇದ್ದಾರೆ. ಸದಾ ನಗು ಮುಖದ ಸೌಜನ್ಯ ನಿರಂತರ ಫೇಸ್ಬುಕ್ ಲೈವ್ ಶೋ ದಲ್ಲಿ ಕಾರ್ಯ ನಿರಾತರಾಗಿದ್ದಾರೆ. ಈಗ ಸೌಜನ್ಯ ಒಬ್ಬ ಜನಪ್ರಿಯ ಗಾಯಕಿ.!! ಜನಪ್ರಿಯ ಗಾಯಕಿ ಆದರೂ ಯಾವುದೇ ದೊಡ್ಡಸ್ತಿಕೆ ಇಲ್ಲದೆ ತನ್ನದೇ ಆದ ಬಟ್ಟೆ ಅಂಗಡಿ ತೆರೆದು ಟೈಲರಿಂಗ್ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೆಷ್ಟೋ ಜನರ ಮನಸ್ಸು ಗೆದ್ದಿರುವ ಈ ಅದ್ಭುತ ಕಂಠದ ಸೌಜನ್ಯ ಇವರಿಗೆ ಇವರು ಕಂಡ ಕನಸು ನನಸಾದರು ಇನ್ನು ದೊಡ ಸಾಧನೆ ಮಾಡಬೇಕು ಎನ್ನುವ ಆಸೆ ಇದೆ. ಅವರ ಆಸೆ ಆದಷ್ಟು ಬೇಗ ನೆರವೇರಲಿ ಇನ್ನಷ್ಟು ಅವಕಾಶ ಸಿಗಲಿ ಸರಸ್ವತಿ ದೇವಿಯ ಅನುಗ್ರಹ ಸದಾ ಇವರ ಮೇಲಿರಲಿ ಎಂದು ಹಾರೈಸುವ. ಲೇಖನ : ಪ್ರಶಾಂತ್ ಅಂಚನ್ ಮಸ್ಕತ್ತ್
ಕೆಲಸಕ್ಕಾಗಿ ಮುಂಬಯಿ ತಲುಪಿದ ಹುಡುಗ ಇಂದು ಸುಮಾರು ಐದು ಸಾವಿರ ಜನರಿಗೆ ಕೆಲಸ ಕೊಡಿಸಿದ ಅನ್ನದಾತ - ಗೋವಿಂದ ಬಾಬು ಪೂಜಾರಿ
Posted On: 15 Dec 2020, 04:21 PM
ಸಾಮಾನ್ಯವಾಗಿ ಕೆಲವು ವರ್ಷಗಳ ಹಿಂದೆ ಕರಾವಳಿಯವರು ಜೀವನವನ್ನು ಹುಡುಕಿಕೊಂಡು ಹೋಗುತ್ತಿದ್ದುದು ಮಹಾನಗರಿ ಮುಂಬಯಿಗೆ. ಮುಖ್ಯವಾಗಿ ಹೋಟೇಲುಗಳಲ್ಲಿ ಕೆಲಸ ಮಾಡಲು. ಅಂದು ಏಳನೆಯ ತರಗತಿಯವರೆಗೆ ಓದಿದ್ದ ಆ ಹುಡುಗ ಕೂಡ ಜೀವನವನ್ನು ಹುಡುಕಿಕೊಂಡು ಮುಂಬಯಿ ಬಸ್ ಹತ್ತಿದ್ದ. ಕೈಯಲ್ಲಿ ದುಡ್ಡಿರಲಿಲ್ಲ. ಆದರೆ ಕಣ್ಣ ತುಂಬಾ ಕನಸುಗಳಿದ್ದವು. ಆ ಹುಡುಗನ ಹೆಸರು ಗೋವಿಂದ ಬಾಬು ಪೂಜಾರಿ ಊರು ಕಡಲತಡಿಯ ಬೈಂದೂರಿನ ಬಿಜೂರು. ಕಡು ಬಡತನ. ಓದು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ. ಸಾಮಾನ್ಯವಾಗಿ ಸ್ವಲ್ಪ ಮಟ್ಟಿಗೆ ಈ ಕಷ್ಟಗಳಿಂದ ಹೊರಬರಲು ಕಣ್ಮುಂದೆ ಕಾಣಿಸುವುದೇ ಹೊಟೇಲ್ ಕೆಲಸ. ಅಂದು ಕನಸು ತುಂಬಿದ್ದ ಕಣ್ಣುಗಳಿಂದ ಬಸ್ಸಿನಲ್ಲಿ ಎಣ್ಣೆ ಡಬ್ಬದ ಮೇಲೆ ಗೋಣಿಚೀಲ ಹಾಕಿಕೊಂಡು ಕುಳಿತು ಸುಮಾರು ಇಪ್ಪತ್ತು ಗಂಟೆ ಪ್ರಯಾಣ ಮಾಡಿ ಮುಂಬಯಿ ತಲುಪಿದ್ದ ಗೋವಿಂದ ಪೂಜಾರಿ ಆರಂಭದಲ್ಲಿ ಒಂದು ಕ್ಯಾಂಟೀನ್ ನಲ್ಲಿ ಟೀ ಮಾಡುವ ಹುಡುಗನಾಗಿ ಸೇರಿಕೊಳ್ಳುತ್ತಾರೆ. ಆಮೇಲೆ ಇನ್ನೊಂದು ಹೋಟೇಲ್ ನಲ್ಲಿ ಅಡಿಗೆಯವರಾಗಿ ಕೆಲಸಮಾಡುತ್ತಾರೆ. ಆದರೆ ತನ್ನದೇ ಆದ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ಆ ಮನುಷ್ಯನಲ್ಲಿತ್ತು. ದುಡಿದು ಉಳಿಸಿದ ಹಣದಿಂದ ಒಂದು ಕಿರಾಣಿ ಅಂಗಡಿ ಆರಂಭಿಸುತ್ತಾರೆ. ಆದರೆ ವಿಪರೀತ ನಷ್ಟ ಅನುಭವಿಸುತ್ತಾರೆ. ನಂತರ ಒಬ್ಬರ ಸಹಾಯದಿಂದ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಕ್ಲಿನಿಂಗ್ ಕೆಲಸಕ್ಕೆ ಸೇರುತ್ತಾರೆ. ನಂತರ ಅದೇ ಹೋಟೇಲ್ ನಲ್ಲಿ ಕಿಚನ್ ವಿಭಾಗ ಸೇರಿಕೊಳ್ಳುತ್ತಾರೆ. ಮುಂದೆ ಅನುಭವದಿಂದ ಹಾಗೂ ಪರಿಶ್ರಮದ ಫಲವಾಗಿ ನಾಲ್ಕೈದು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಶೇಫ್ ಆಗಿ ಕೆಲಸಮಾಡುತ್ತಾರೆ. ಆದರೆ ತನ್ನ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ನಿದ್ದೆ ಮಾಡಲಿಕ್ಕೆ ಬಿಡಬೇಕಲ್ವ. ಒನ್ ಫೈನ್ ಡೇ ಈ ಕೆಲಸಗಳಿಗೆಲ್ಲ ಇತೀಶ್ರೀ ಹಾಡಿ ಒಂದು ಕಂಪನಿಯಲ್ಲಿ ತಮ್ಮದೇ ಕ್ಯಾಂಟೀನ್ ಆರಂಭಿಸುತ್ತಾರೆ. ಆಗ ಕಾಲ ಸ್ತಂಭಿಸಿತು. ಮುಂದೆಂದೂ ಅವರು ಹಿಂತಿರುಗಿ ನೋಡಲಿಲ್ಲ. ನಾಲ್ಕು ಜನ ಉದ್ಯೋಗಿಗಳಿಂದ ಆರಂಭವಾಯಿತು ಆ ಕ್ಯಾಂಟೀನ್ . ಮುಂದೆ ಆಹಾರದ ಗುಣಮಟ್ಟ, ಉತ್ತಮ ಸೇವೆಗಳಿಂದ ಮುಂಬಯಿಯ ಸುಮಾರು ಮೂವತ್ತು ಕಂಪನಿಗಳಲ್ಲಿ ಇವರ ಕ್ಯಾಂಟೀನ್ ಆರಂಭವಾಗುತ್ತದೆ. ಆಮೇಲೆ ಹೈದರಾಬಾದ್, ಪುಣೆ, ಜಾರ್ಖಂಡ್, ಗುಜರಾತ್ ಮುಂತಾದ ಕಡೆಗಳಲ್ಲಿನ ಕಂಪನಿಗಳಲ್ಲಿ ತಮ್ಮ ಕ್ಯಾಂಟೀನ್ ಆರಂಭಿಸುತ್ತಾರೆ. 2007 ರಲ್ಲಿ ಇವರ ಕಂಪನಿಗೆ "ಶೆಫ್ ಟಾಕ್ ಫುಡ್ ಆ್ಯಂಡ್ ಹಾಸ್ವಿಟ್ಯಾಲಿಟಿ ಪ್ರೈವೇಟ್ ಲಿಮಿಟೆಡ್ " ಎಂದು ನಾಮಕರಣಗೊಂಡು ಇಂದು ಸುಮಾರು ಐದಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರಿ ಸುಮಾರು ಐದು ಸಾವಿರ ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ. ಕೆಲವೊಂದು ವಿಷಯಗಳನ್ನು ಓದಿ ತಿಳಿದು ಕೊಳ್ಳಬಹುದು. ಆದರೆ ಹಸಿವನ್ನು ಓದಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದವನು ಮಾತ್ರ ತಿಳಿದುಕೊಳ್ಳುತ್ತಾನೆ. ಗೋವಿಂದ ಪೂಜಾರಿ ಹಸಿವನ್ನು ಅನುಭವಿಸಿ ತಿಳಿದುಕೊಂಡವರು. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಊರಿನಲ್ಲಿ " ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ " ಸ್ಥಾಪಿಸಿದ್ದಾರೆ. ಇದರ ಮುಖ್ಯ ಧ್ಯೇಯ ವಿದ್ಯೆ ಮತ್ತು ಆರೋಗ್ಯ. ಕೋವಿಡ್ 19 ಸಂದರ್ಭದಲ್ಲಿ ಈ ಒಂದು ಟ್ರಸ್ಟಿನಿಂದ ಬೈಂದೂರು ಮತ್ತು ಕುಂದಾಪುರಗಳಲ್ಲಿನ ಹಲವಾರು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಯಿತು. ನೀರಿನ ಅಭಾವವಿದ್ದ ಬೀಜೂರು ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿ ಕೊಡಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಜ್ಞಾಸಾಗರ್ ಹೋಟೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಈಗಾಗಲೆ ನಾಲ್ಕು ಹೋಟೆಲುಗಳು ಆರಂಭಗೊಂಡಿವೆ. ಇನ್ನು ಹತ್ತು ಹೋಟೇಲುಗಳು ಆರಂಭಗೊಳ್ಳಲಿವೆ. ಇನ್ನೂ ಹೊಸ ಪ್ರಾಡಕ್ಟ್ " ಫಿಶ್ ಚಿಪ್ಸ್ " ಕೂಡ ಇವರ ಕಂಪನಿಯ ವತಿಯಿಂದ ಲಾಂಚ್ ಆಗಿದೆ. ಸುಮಾರು ಹತ್ತು ಸಾವಿರ ಉದ್ಯೋಗ ಸೃಷ್ಟಿಸಬೇಕೆಂಬ ಕನಸು ಗೋವಿಂದ ಬಾಬು ಪೂಜಾರಿಯವರದ್ದು. ಅವರ ಕನಸು ನನಸಾಗಲಿ. ಯೂಟ್ಯೂಬ್ ನಲ್ಲಿ ಅವರ ಕೆಲವು ಸಂದರ್ಶನಗಳನ್ನು ನೋಡಿ ಶಬ್ಧ ರೂಪಕ್ಕೆ ಅಕ್ಷರ ರೂಪ ಕೊಟ್ಟಿದ್ದೇನೆ. ಇಂತವರು ಇಂದಿನ ಬಡ ವಿದ್ಯಾರ್ಥಿಗಳಿಗೆ ಆದರ್ಶವಾಗಲಿ. ಅವರ ಉದ್ಯಮದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ. ಹಸಿವನ್ನು ಅನುಭವಿಸಿ ತಿಳಿದುಕೊಂಡಿರುವ ಅವರಿಂದ ಬಹಳಷ್ಟು ಕುಟುಂಬಗಳ ಹಸಿವಿನ ಚೀಲ ತುಂಬಲಿ. ಲೇಖನ :ಅರುಣ್ ವಿ ಬಾರ್ಕೂರ್
ಕಾಂತಾವರ ಕನ್ನಡ ಸಂಘ: ಕೆ.ಪಿ.ರಾವ್, ಕುಂಡಂತಾಯ, ಖಂಡಿಗೆ, ಮುರಲಿ ಅವರಿಗೆ ಪ್ರಶಸ್ತಿ ಪ್ರದಾನ
Posted On: 14 Dec 2020, 10:14 AM
ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.13 ರಂದು ಕಾಂತಾವರದ ಕನ್ನಡ ಸಂಘದಲ್ಲಿ ನೆರವೇರಿತು . ಕ.ಸಾ.ಪ .ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು .ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ.ಮೊಗಸಾಲೆ ಉಪಸ್ಥಿತರಿದ್ದರು. ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. 'ಜಿನರಾಜ ಹೆಗ್ಡೆ ಸ್ಮಾರಕ ಪ್ರಶಸ್ತಿ'ಯನ್ನು 'ಭಾರತೀಯ ಭಾಷಾ ಗಣಕ ಪಿತಾಮಹ' ನಾಡೋಜ ಕೆ.ಪಿ.ರಾವ್ ಅವರಿಗೆ . ಭಾಷಾ ವಿಜ್ಞಾನಿ ಡಾ.ಯು.ಪಿ .ಉಪಾಧ್ಯಾಯರ ದತ್ತಿನಿಧಿಯ 'ಸಂಶೋಧನಾ ಮಹೋಪಾಧ್ಯಾಯ ಪ್ರಶಸ್ತಿ'ಯನ್ನು ವಿದ್ವಾಂಸ , ಚಿಂತಕ ಕೆ.ಎಲ್.ಕುಂಡಂತಾಯ ಅವರಿಗೆ .ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ಕಾಂತಾವರ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಇವರ ದತ್ತಿನಿಧಿಯ 'ಕಾಂತಾವರ ಪ್ರಶಸ್ತಿ'ಯನ್ನು ಸಾಹಿತಿ,ಚಿಂತಕ ಟಿ.ಎ.ಎನ್. ಖಂಡಿಗೆ ಅವರಿಗೆ . ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿವಂಗತ ಕೆ.ಬಾಲಕೃಷ್ಣ ಆಚಾರ್ಯ ಮತ್ತು ವಾಣಿ ಬಿ. ಆಚಾರ್ಯ ಅವರ ದತ್ತಿನಿಧಿಯಿಂದ 'ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ'ಯನ್ನು ಅಪರೂಪದ ನಿವೃತ್ತ ಶಿಕ್ಷಕ ಮುರಳಿ ಕಡೆಕಾರ್ ,ಉಡುಪಿ ಅವರಿಗೆ ಪ್ರದಾನಿಸಲಾಯಿತು . ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ, ಪ್ರ.ಕಾರ್ಯದರ್ಶಿ ಸದಾನಂದ ನಾರಾವಿ, ಸಂಚಾಲಕ ವಿಠಲ ಬೇಲಾಡಿ, ಉಪಾಧ್ಯಕ್ಷ ಸತೀಶ ಕುಮಾರ್ ಕೆಮ್ಮಣ್ಣು ಅವರು ಉಪಸ್ಥಿತರಿದ್ದರು .
ಕೊಡಪಾನದೊಳಗೆ ತಲೆ ಸಿಲುಕಿ ನಾಯಿಯ ಪೇಚಾಟ
Posted On: 13 Dec 2020, 07:59 PM
ಕಟಪಾಡಿ: ಅನಾವಶ್ಯಕ ವಿಷಯಕ್ಕೆ ಮೂಗು ತೂರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ... ! ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ನಿಚ್ಚಳ. ಮರಳಿ ಸುರಕ್ಷತೆಯನ್ನು ಪಡೆಯಲು ಮತ್ತಷ್ಟು ಕರುಣಾಮಯಿ ಜನರನ್ನು ಅವಲಂಭಿಸಿದ ಘಟನೆಯು ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಶ್ರೀ ಶಂಭುಶೈಲೇಶ್ವರ ದೇಗುಲದ ಅರ್ಚಕರ ಮನೆಯ ಬಳಿಯಲ್ಲಿ ಬೆಳ್ಳಂಬೆಳಗ್ಗೆಯೇ 6.30 ಗಂಟೆಯ ಸುಮಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇಲ್ಲಿ ಅಪರಿಚಿತ ಬೀದಿ ನಾಯಿಯೊಂದು ಅಲ್ಯುಮೀನಿಯಂ ಕೊಡಪಾನದಲ್ಲಿ ಮೂಗು ತೂರಿಸಲು ಹೋಗಿ ತಲೆಯೇ ಸಿಲುಕಿಸಿಕೊಂಡು ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಕಂಡು ಬಂದಿತ್ತು. ಎಲ್ಲಿಂದಲೋ ಬಂದಿದ್ದ ಶ್ವಾನದ ಈ ದುಸ್ಥಿಯನ್ನು ಕಂಡ ಅರ್ಚಕ ಗಣಪತಿ ಆಚಾರ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೂಡಲೇ ಸ್ಥಳೀಯರ ಸಹಕಾರವನ್ನು ಯಾಚಿಸಿದ್ದು, ಸೋಮನಾಥ ಉದ್ಯಾವರ, ರಾಕೇಶ್ ಉದ್ಯಾವರ ಮತ್ತಿತರರು ಬಂದು ಸುಮಾರು ಒಂದು ಗಂಟೆಗೂ ಮಿಕ್ಕಿದ ಕಾಲ ಸಾಕಷ್ಟು ಹರಸಾಹಸ ಪಟ್ಟು ತಾವೂ ಕೂಡಾ ಅಪಾಯವನ್ನು ಎದುರಿಸಿಕೊಂಡು ಕೊಡಪಾನದ ಬಾಯಿಯನ್ನು ತುಂಡರಿಸಿ ನಾಯಿಯನ್ನು ಸ್ವತಂತ್ರಗೊಳಿಸಿದರು.
ಯುವವಾಹಿನಿ ಪಡುಬಿದ್ರಿ ಘಟಕದಿಂದ ಶ್ರಮದಾನ
Posted On: 13 Dec 2020, 01:20 PM
ಯುವವಾಹಿನಿ ಪಡುಬಿದ್ರಿ ಘಟಕದ ಸದಸ್ಯರು ಕಲ್ಲಟ್ಟೆ ಜಾರಂದಾಯ ದೈವಸ್ಥಾನಕ್ಕೆ ಹೋಗುವ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಿತ್ರಾಕ್ಷಿ ಕೆ. ಕೋಟ್ಯಾನ್ , ಕಾರ್ಯದರ್ಶಿ ಶಾಶ್ವತ್ ಎಸ್. ಪೂಜಾರಿ, ಸಮಾಜ ಸೇವಾ ನಿರ್ದೇಶಕಿ ಶ್ರೀಮತಿ ಲತಾ ವಸಂತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ
Posted On: 13 Dec 2020, 12:53 PM
ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಮೋಘ ಪಾಂಡಿತ್ಯದ ಮೂಲಕ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅನುವಾದವನ್ನು ಮಾಡಿರುತ್ತಾರೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ತುಳುಲಿಪಿಯಲ್ಲಿಯೂ ಪಾಂಡಿತ್ಯವಿದ್ದ ಇವರು ಉಡುಪಿ ಮಠದಲ್ಲಿದ್ದ ತುಳು ಲಿಪಿಯ ಎಲ್ಲಾ ಗ್ರಂಥಗಳಿಗೆ ವ್ಯಾಖ್ಯಾನವನ್ನು ಬರೆದವರಾಗಿದ್ದಾರೆ. ಜ್ಞಾನ ಹಂಚಲು ತುಡಿಯುವ ಮನಸ್ಸುಳ್ಳವರಾಗಿದ್ದರು.
ಕರಾವಳಿ ಶಾಸಕರುಗಳ ಪ್ರಯತ್ನ ಶ್ಲಾಘನೀಯ : ಪ್ರವೀಣ್ ಎಂ. ಪೂಜಾರಿ
Posted On: 13 Dec 2020, 12:20 PM
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರ ವೀರರಾದ ಕೋಟಿ ಚೆನ್ನಯರ ಹೆಸರನ್ನಿಡಬೇಕೆಂದು ಕರಾವಳಿಯ ಶಾಸಕರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಾನ್ಯ ಮುಖ್ಯಮಂತ್ರಿಗೆ ಮನವಿ ನೀಡಿರುವುದು ಅಭಿನಂದನಾರ್ಹ ಸಂಗತಿ.ಸಮಸ್ತ ಸಮಾಜದ ಸಮಂಜಸವಾದ ಬೇಡಿಕೆಯನ್ನು ಈಡೇರಿಸುವ ಕುರಿತಾದ ಜನಪ್ರತಿನಿಧಿಗಳ ನಿರ್ಧಾರ ಮೆಚ್ಚುವಂತದ್ದು. ಈ ಪ್ರಯತ್ನವು ಮುಂದುವರಿಯಲಿ.ಕೋಟಿ ಚೆನ್ನಯರ ಹೆಸರು ನೋಂದಣಿಯಾಗುವವರೆಗೂ ಇಚ್ಚಾಶಕ್ತಿಯಿಂದ ಜನಪ್ರತಿನಿಧಿಗಳಲ್ಲಿ ಒಮ್ಮತದ ಬದ್ದತೆಯಿರಲಿ ಎಂದು ಬಯಸುತ್ತೇವೆ.ಹಲವಾರು ಸಂಘಟನೆಗಳ ಬೇಡಿಕೆಯನ್ನು ಪರಿಗಣಿಸಿ ಕೋಟಿಚೆನ್ನಯರ ಹೆಸರೇ ಹೆಚ್ಚು ಸೂಕ್ತವೆನಿಸಿದ್ದು ಸಾರ್ವಕಾಲಿಕ ಸತ್ಯಕ್ಕೆ ಸಂದ ಅತಿಶ್ರೇಷ್ಠ ಗೌರವವಾಗಿದೆ. ಇಂತಹ ಒಳ್ಳೆಯ ನಡೆಗೆ ಸದಾ ನಮ್ಮ ಸಹಮತವಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ ತಿಳಿಸಿದ್ದಾರೆ.
ಕಲ್ಲುಗುಡ್ಡೆ : ದೀಪ ಸಂಭ್ರಮ, ನೂತನ ಪಂಚಮಿ ಭಜನಾ ಮಂಡಳಿ ಉದ್ಘಾಟನೆ
Posted On: 12 Dec 2020, 06:48 PM
ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನ ಕುಂಜ ಕಲ್ಲುಗುಡ್ಡೆ ಕ್ಷೇತ್ರದಲ್ಲಿ ನೂತನ ಪಂಚಮಿ ಭಜನಾ ಮಂಡಳಿಯನ್ನು ದೀಪ ಬೆಳಗಿ ಉದ್ಘಾಟಿಸಲಾಯಿತು. ಇದೇ ಸಂದರ್ಭ ನಡೆದ ದೀಪಸಂಭ್ರಮದಲ್ಲಿ ಪ್ರತಿಯೊಬ್ಬರೂ ದೀಪ ಬೆಳಗಿ ನಮ್ಮ ಬಾಳಿನ ಕತ್ತಲನ್ನು ಹೋಗಲಾಡಿಸೆಂದು ಅಶ್ವಥ ನಾರಾಯಣ ಒಡಗೂಡಿ ಪಂಚದೈವಾದಿ ನಾಗಬ್ರಹ್ಮನಲ್ಲಿ ಪ್ರಾರ್ಥಿಸಲಾಯಿತು. ಭಜನಾ ಕಾರ್ಯಕ್ರಮವು ನಡೆಯಿತು. ಇದೇ ಸಂದರ್ಭ ಮಂಡಳಿಗೆ ತಾಳ ಹಸ್ತಾಂತರಿಸುವುದರ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಲಾಯಿತು.
ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕರ ಕೊಡುಗೆ ಅಪಾರ-ಜಿಲ್ಲಾಧಿಕಾರಿ ಜಿ. ಜಗದೀಶ್
Posted On: 11 Dec 2020, 05:19 PM
ಉಡುಪಿ, ಡಿಸೆಂಬರ್ 11 : ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ರಕ್ಷಕದಳವು ಪೊಲೀಸರಿಗೆ ಸಮನ್ವಯದೊಂದಿಗೆ ಪೂರಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಇಂದು ಜಿಲ್ಲಾ ಗೃಹ ರಕ್ಷಕದಳದ ಕಚೇರಿ ಆವರಣದಲ್ಲಿ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಗೃಹರಕ್ಷಕದಳ ದಿನಾಚರಣೆಯನ್ನು ರಕ್ತದಾನ ಮಾಡುವ ಮೂಲಕ ಆಚರಿಸುತ್ತಿರುವುದು ಉತ್ತಮ ವಿಚಾರ. ಒಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ನಾಲ್ಕು ಜನರ ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದರಲ್ಲಿ ಉಡುಪಿಯು ಮಾದರಿ ಜಿಲ್ಲೆಯಾಗಿದ್ದು, ಈ ನಿಟ್ಟಿನಲ್ಲಿ ಕೈಜೋಡಿಸಿದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ತುರ್ತು ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಗೃಹ ರಕ್ಷಕದಳದವರ ಪಾತ್ರ ಬಹಳ ಮುಖ್ಯ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಕಾಳಜಿ ವಹಿಸಿ, ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ಸೇವೆ ಸಲ್ಲಿಸುತ್ತಿದ್ದು, ಪೊಲೀಸ್ ಇಲಾಖೆಯವರು ಸೂಚಿಸಿದ ಕರ್ತವ್ಯಗಳನ್ನು ಅವರೊಂದಿಗೆ ಸಮನ್ವಯ ಸಾಧಿಸಿ, ಉತ್ತಮವಾಗಿ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೃಹರಕ್ಷಕರ ಕೊಡುಗೆ ಅವಿಸ್ಮರಣೀಯ. ಕಾಪು ಬೀಚಿನಲ್ಲಿ ಡಾ. ಪ್ರಶಾಂತ ಶೆಟ್ಟಿಯವರ ನೇತೃತ್ವದಲ್ಲಿ ಉತ್ತಮ ಕೆಲಸ ನಿರ್ವಹಣೆ ತೋರುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ಈಜು ಪರಿಣಿತಿ ಹೊಂದಿರುವ ಗೃಹ ರಕ್ಷಕ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ರಕ್ಷಣೆಯ ಜೊತೆಗೆ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮಾತನಾಡಿ, ಗೃಹ ರಕ್ಷಕರು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿ ಕೆಲಸ ನಿರ್ವಹಿಸುತ್ತಿದ್ದು, ಗೃಹ ರಕ್ಷಕದಳದ ಸಿಬ್ಬಂದಿಗಳು ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧವಾಗಿದ್ದಾರೆ ಎಂದರು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಗೃಹ ರಕ್ಷಕದಳದ ಸ್ವಯಂ ಸೇವಕರ ತ್ಯಾಗ ಮೆಚ್ಚುವಂತದ್ದು. ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಕೊಡುಗೆ ಅಪಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 500 ಗೃಹ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಉಡುಪಿ, ಮಣಿಪಾಲ, ಕಾಪು, ಪಡುಬಿದ್ರೆ, ಕಾರ್ಕಳ, ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ಒಟ್ಟು 8 ಘಟಕಗಳಿವೆ. ಅಲ್ಲದೇ ಪ್ರವಾಸೋದ್ಯಮ ಇಲಾಖೆ, ಆರ್.ಟಿ.ಓ ಆಫೀಸ್, ಎನ್.ಸಿ.ಸಿ, ಕಾರಾಗೃಹದಲ್ಲಿ ಗೃಹರಕ್ಷಕ ದಳದವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಧೈರ್ಯದಿಂದ ಕಾರ್ಯ ನಿರ್ವಹಿಸಿ, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು. ಗೃಹರಕ್ಷಕದಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್, ಉಪಾಧೀಕ್ಷಕರಾದ ಜಯಶಂಕರ, ವೃತ್ತ ನಿರೀಕ್ಷಕರಾದ ಮಂಜುನಾಥ, ಕಾನ್ಸ್ಟೇಬಲ್ ಸಂತೋಷ್, ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ, ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಗೃಹ ರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ ರಾಜೇಶ್ ಸ್ವಾಗತಿಸಿದರು, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ ವಂದಿಸಿದರು, ಸಾಯಿನಾಥ್ ಉದ್ಯಾವರ ನಿರೂಪಿಸಿದರು.
ಕುತ್ಯಾರು : ಕೊನೆಗೂ ರಸ್ತೆ ಹೊಂಡಕ್ಕೆ ಸಿಕ್ಕಿತು ಮುಕ್ತಿ
Posted On: 11 Dec 2020, 01:41 PM
ಮುದರಂಗಡಿ- ಶಿರ್ವ ಮುಖ್ಯರಸ್ತೆಯ ಕುತ್ಯಾರು ಬ್ಯಾಂಕ್ ಆಫ್ ಬರೋಡ ಬಳಿ ಪೈಪ್ ಅಳವಡಿಸಲು ಅಗೆಯಲಾಗಿದ್ದ ರಸ್ತೆಯನ್ನು ಇಲಾಖೆ ಗುರುವಾರ ಸರಿಪಡಿಸಿ ಡಾಮರೀಕರಣಗೊಳಿಸಿದೆ. ತಿರುವಿನ ರಸ್ತೆಯಲ್ಲಿ ಹೊಂಡ ಉಂಟಾಗಿ ತಿಂಗಳುಗಳೇ ಕಳೆದು ಸಣ್ಣಪುಟ್ಟ ಅಪಘಾತಗಳಾಗಿ ಜೊತೆಗೆ ಡಾಮರೀಕರಣಕ್ಕಾಗಿ ಜಲ್ಲಿ ಹಾಕಲಾಗಿದ್ದು ಪರಿಸರವಿಡೀ ಧೂಳುಮಯವಾಗಿತ್ತು. ಇದೀಗ ಈ ರಸ್ತೆಯನ್ನು ಸರಿಪಡಿಸಿದ್ದು ಸ್ಥಳೀಯರು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ತಕ್ಷಣ ಸ್ಪಂದಿಸಿದ ಅಧಿಕಾರಿವರ್ಗ, ಗುತ್ತಿಗೆದಾರರಿಗೆ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ಹಾಗೂ ಕುತ್ಯಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್ ಕೇಂಜ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
