Updated News From Kaup
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು : ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ

Posted On: 22-06-2024 07:27AM
ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023 -24ನೇ ಸಾಲಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಈ ಕಾಲೇಜು ಉತ್ತಮವಾಗಿ ಬೆಳೆದು ಬರಲು ಹಲವು ಶಿಕ್ಷಣ ಪ್ರೇಮಿಗಳ ಕೊಡುಗೆ ಇದೆ. ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಂಸ್ಥೆಯ ಮೂಲಕ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಹಲವಾರು ಕೊಡುಗೈ ದಾನಿಗಳ ಮೂಲಕ ಈ ಸಂಸ್ಥೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು. ಕಾಪು ದಂಡ ತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಮನೋಭಾವದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚು ಹೊತ್ತು ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಅವರ ಜೀವನದ ದಿಕ್ಕನ್ನು ಬದಲಾಯಿಸಿ ಕಷ್ಟಕ್ಕೆ ಎಡೆ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳು ಪೋಷಕರು, ಗುರುಗಳು, ಹಿರಿಯರ, ಮಾರ್ಗದರ್ಶನದಲ್ಲಿ ನಡೆದು ಗುರು ಹಿರಿಯರಿಗೆ ವಿಧೇಯರಾಗಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜು ಪೊಲಿಪುವಿನ ಉಪನ್ಯಾಸಕ ಸುಧಾಕರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸನ್ಮಾನ/ ಗೌರವ : ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿತ ಕರ್ಕೇರ ಮತ್ತು ಇತಿಹಾಸ ವಿಭಾಗದ ಡಾ. ಮೆಹೆಬೂಬ್ ಸಾಬ್ ಡಿಪಿ ಅವರನ್ನು ಈ ಶೈಕ್ಷಣಿಕ ಸಾಲಿನಲ್ಲಿ ಪಿಎಚ್ಡಿ ಪದವಿ ಪಡೆದುದಕ್ಕಾಗಿ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಯಮುನಪ್ಪ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿರುವುದರಿಂದ ಗುರುತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ವಹಿಸಿದ್ದರು. ಪೋಷಕ -ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಜಾತ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ದೀಪಿಕಾ ಸುವರ್ಣ, ಸಾಂಸ್ಕೃತಿಕ ಸಂಘದ ಸಂಚಾಲಕ್ಕೆ ಡಾ. ನಾಯನ ಎಲ್ ಎಂ, ಐಕ್ಯೂಎಸ್ ಸಿ ಘಟಕದ ಸಂಚಾಲಕಿ ಡಾ. ರೋಷನೀ ಯಶ್ವಂತ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸವಿತಾ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾದ ಕುಮಾರಿ ಕವಿತಾ ಸ್ವಾಗತಿಸಿದರು. ಕುಮಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಶ್ಮಿತಾ ವಂದಿಸಿದರು.
ಹೆದ್ದಾರಿಯಲ್ಲಿ ಬಸ್ ಹಿಂಬದಿಗೆ ಕಾರು ಢಿಕ್ಕಿ ; ಮಹಿಳೆಗೆ ಗಾಯ

Posted On: 21-06-2024 08:55PM
ಪಡುಬಿದ್ರಿ : ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಸರ್ವಿಸ್ ಬಸ್ ಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಸರ್ವಿಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಹೆದ್ದಾರಿಯಲ್ಲಿ ಹಠಾತ್ತ್ ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಬಸ್ ನ ಹಿಂಬದಿಗೆ ಗುದ್ದಿದೆ. ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕದಲ್ಲಿದ್ದ ಮಹಿಳೆ ಮಂಗಳೂರು ನಿವಾಸಿ ಪುಷ್ಪಲತಾ ಆಚಾರ್ಯರಿಗೆ ಮುಖ, ಕೈ, ಕಾಲುಗಳಿಗೆ ಗಾಯವಾಗಿದ್ದು ತಕ್ಷಣ ಪಡುಬಿದ್ರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದಂತೆ ಮಹಿಳೆಯರು ಕಾರಲ್ಲಿ ಇದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.
ಸರ್ವಿಸ್ ರಸ್ತೆಗೆ ಇಳಿಯದ ಕೆಲವು ಬಸ್ಸುಗಳು : ಅಗಲ ಕಿರಿದಾದ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆಗಳಿಂದಾಗಿ ಜನರಿಗೆ ತೊಂದರೆಯಾಗಿದೆ. ಉಡುಪಿ ಕಡೆಗೆ ಸಾಗುವ ಬಸ್ ಗಳ ತಂಗುದಾಣ ಸರ್ವಿಸ್ ರಸ್ತೆಯಲ್ಲಿದ್ದರೂ ಕೆಲವೊಂದು ಬಸ್ ಗಳು ಸರ್ವಿಸ್ ರಸ್ತೆಗೆ ಬಾರದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲುತ್ತಿದೆ. ಬಸ್ ಬಂದ ತಕ್ಷಣ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಗಮನಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುವ ಬಸ್ ಗಳೆಡೆ ಸಾಗುವ ಭರದಲ್ಲಿ ಸರ್ವಿಸ್ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೂ ಇದು ಸವಾಲಾಗಿದೆ. ಇದು ಅಪಘಾತಗಳಿಗೆ ಎಡೆ ಮಾಡಿದಂತಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಾಪು : ಈ ದಿನ ಮಾನ್ಯ ತಹಶಿಲ್ದಾರ್ ಪ್ರತಿಭಾ ಆರ್ ರವರ ನೇತೃತ್ವದಲ್ಲಿ

Posted On: 21-06-2024 05:08PM
ಕಾಪು : ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶಿಲ್ದಾರ್ ಪ್ರತಿಭಾ ಆರ್ ರವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಪ್ರತಿಭಾ ಆರ್, ಯೋಗದಿಂದ ದೈಹಿಕ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಉತ್ತಮಗೊಳ್ಳುತ್ತದೆ. ಆದ್ದರಿಂದ ಎಲ್ಲರೂ ಯೋಗ ಅನ್ನು ದಿನ ನಿತ್ಯದ ಚಟುವಟಿಕೆಯ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯೋಗ ಗುರುಗಳಾದ ರವಿ ಬಂಗೇರ ಮತ್ತು ಶೈಲಜಾ ಇವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲ್ಲೂಕು ಆಡಳಿತದ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ

Posted On: 21-06-2024 04:22PM
ಕಾಪು : ಇಲ್ಲಿನ ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಎನ್.ಸಿ.ಸಿ, ಸ್ಕೌಟ್ಸ್-ಗೈಡ್ಸ್, ಎನ್.ಎಸ್.ಎಸ್., ಕಬ್-ಬುಲ್-ಬುಲ್ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೇಸಿ ವಲಯ 15ರ ಪೂರ್ವ ಉಪಾಧ್ಯಕ್ಷ, ಯೋಗಶಿಕ್ಷಕ ಮಕರಂದ ಇವರು ಯೋಗದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಪ್ರಾಂಶುಪಾಲರಾದ ನೀಲಾನಂದ ನಾಯ್ಕ ಇವರು ಸಭಾಧ್ಯಕ್ಷತೆ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್, ಕಾರ್ಯಕ್ರಮದ ನಿರ್ದೇಶಕಿ ಶೋಭಾ ವಿವಿಧ ಯುನಿಟ್ಗಳ ಮಾರ್ಗದರ್ಶಕರಾದ, ತೇಜಸ್ವಿನಿ, ವೀಣಾ ನಾಯಕ್, ಉದಯಕುಮಾರ್, ಹೇಮಲತಾ, ಪ್ರಭಾಕರ ಶೆಟ್ಟಿ, ಸುರಥ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ, ರಿತಿಕಾ ಶೆಟ್ಟಿ, ಸಾನ್ವಿ ಶೆಟ್ಟಿ, ಗೌರಿ ನಾಯಕ್, ಆಯಿಷಾ ಮಿಸ್ಬಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾಪು : 92 ಹೇರೂರಿನಲ್ಲಿ ವಿವಿಧ ಸಂಘ -ಸಂಸ್ಥೆಗಳ ಆಶ್ರಯದಲ್ಲಿ ವನಮಹೋತ್ಸವ

Posted On: 21-06-2024 04:05PM
ಕಾಪು : ಹೇರೂರು ಫ್ರೆಂಡ್ಸ್ ಕ್ಲಬ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ 92 ಹೇರೂರು ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಭಜನಾ ಮಂಡಳಿಯ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಅರಣ್ಯಾಧಿಕಾರಿ ಚರಣ್ ಜೋಗಿ ಭಾಗವಹಿಸಿ ವನಮಹೋತ್ಸವದ ಬಗ್ಗೆ ಅರಿವು ಮೂಡಿಸಿದರು. ಕೃಷಿ ಕಾಯಕ ಮಾಡುತ್ತಿರುವ ಜೇಸಿಂತ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೂರು ಸಂಸ್ಥೆಗಳ ಅಧ್ಯಕ್ಷರುಗಳು, ಸ್ಥಳೀಯ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್, ಗ್ರಾಮಸ್ಥರು ಉಪಸ್ಥಿತರಿದ್ದರು.
ದೀಕ್ಷಾ, ಅಶ್ಮಿತಾ ಪ್ರಾರ್ಥಿಸಿದರು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಸ್ವಾಗತಿಸಿದರು. ಜೋಗಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ ಶೆಟ್ಟಿ ವಂದಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಲಾಯಿತು.
ಇಂದು ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ - ಹವಾಮಾನ ಇಲಾಖೆ

Posted On: 20-06-2024 11:58AM
ಉಡುಪಿ : ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಜೂನ್ 20 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳಗಿನ ಕರ್ನಾಟಕದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜೂನ್ 21ರಂದು ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಹಲವೆಡೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ವಿಜಯನಗರ ಜಿಲ್ಲೆಗಳು ಮತ್ತು ಉತ್ತರ ಅಂತರಿಕ ಕರ್ನಾಟಕದ ಜಿಲ್ಲೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ. ಜೂನ್ 25ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಕಾಪು : ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಶಿಬಿರ

Posted On: 20-06-2024 11:47AM
ಕಾಪು : ಇಲ್ಲಿನ ಮಜೂರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಮತ್ತು ಆಧಾರ್ ತಿದ್ದುಪಡಿ ಹಾಗೂ ಹೊಸ ನೋಂದಣಿ ಕಾರ್ಯಕ್ರಮ ಇಂದು ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಸಾರ್ವಜನಿಕರಿಗಾಗಿ ಸರಕಾರ ಅನೇಕ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ಪ್ರತಿ ಗ್ರಾಮಗಳಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡಾಗ ಇದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಹೇಳಿದ ಅವರು ಅಂಚೆ ಇಲಾಖೆ ಜಾರಿಗೆ ತಂದಿರುವ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಮಾಡಿಸಿ ಸಾರ್ವಜನಿಕರು ಇರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ, ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ್ ಭಟ್, ಮಜೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ಕಾರ್ಯದರ್ಶಿಗಳಾದ ಪ್ರಸಾದ್ ಭಂಡಾರಿ, ಇಂಡಿಯನ್ ಪೋಸ್ಟ್ ಬ್ಯಾಂಕ್ ಅಧಿಕಾರಿಗಳಾದ ಸ್ಮಿತಾ, ದಯಾನಂದ ಉಪಸ್ಥಿತರಿದ್ದರು.
ಕಾಪು : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಹೊಸ ಮಾರಿಗುಡಿ ಭೇಟಿ

Posted On: 19-06-2024 11:12PM
ಕಾಪು : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಕಾಪು ಮಾರಿಯಮ್ಮನ ದರುಶನಕ್ಕಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು.
108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಮಹಾ ಸಂಕಲ್ಪದ ಅಂಗವಾಗಿ 5ನೇ ದಿನ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಸಮಗ್ರ ಜಿರ್ಣೋದ್ಧಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಗುರೂಜಿ ಸಾಯಿ ಈಶ್ವರ್ ಅವರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ ಹಾಗೂ ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ನೀಡಿ ಬಿಲ್ವಪತ್ರೆಯ ಗಿಡ ನೀಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಸಂಚಾಲಕ ಜಯರಾಮ್ ಆಚಾರ್ಯ, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಂ. ಸುವರ್ಣ, ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕಿ ಸಾವಿತ್ರಿ ಗಣೇಶ್, ದ್ವಾರಕಾಮಯಿ ಮಠದ ಟ್ರಸ್ಟಿ ಸುಧಾಕರ್ ಶೆಟ್ಟಿ, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್ ಕಾಪು, ವೀಣಾ ಶೆಟ್ಟಿ, ಅಭಿರಾಜ್ ಸುವರ್ಣ ಮತ್ತು ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಐಎಂಎ ರಾಜ್ಯ ವೈದ್ಯ ಪ್ರಶಸ್ತಿಗೆ ಡಾ|| ಸುಧಾ ಡಿ.ಕಾಮತ್ ಆಯ್ಕೆ ; ಅಭಿನಂದನೆ

Posted On: 19-06-2024 04:52PM
ಉಡುಪಿ : ಭಾರತೀಯ ವೈದ್ಯಕೀಯ ಸಂಘ ಕನಾ೯ಟಕ ವತಿಯಿಂದ ನಡೆಯಲಿರುವ ವೈದ್ಯರ ದಿನದಂದು ರಾಜ್ಯ ಮಟ್ಟದ ವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯಡಕದ ಹಿರಿಯ ವೈದ್ಯರಾಗಿರುವ ಡಾ|| ಸುಧಾ ಡಿ. ಕಾಮತ್ ರವರನ್ನು ಜೂನ್ 19 ರಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ವತಿಯಿಂದ ಗೌರವಿಸಲಾಯಿತು.
ಈ ಸಂದಭ೯ದಲ್ಲಿ ಮನೆಯೇ ಗ್ರಂಥಾಲಯ ಅಭಿಯಾನದ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಕಾಯ೯ಕ್ರಮದಲ್ಲಿ ಡಾII ದೇವದಾಸ ಕಾಮತ್, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ಮತ್ತು ಕ್ಲಿನಿಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಪು : ದಂಡತೀರ್ಥ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Posted On: 18-06-2024 06:51PM
ಕಾಪು : ಇಲ್ಲಿನ ಉಳಿಯಾರಗೋಳಿ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ತನ್ನು ಪೊಲಿಪು ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸುಧಾಕರ್ ಎಮ್. ಎ. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ಜೀವನದಿಂದಲೇ ವಿದ್ಯಾರ್ಥಿಗಳಿಗೆ ಸಂಸತ್ತಿನ ಅರಿವು ಮೂಡಿಸಿ, ಆಡಳಿತಾತ್ಮಕ ವಿಚಾರಗಳನ್ನು ತಿಳಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬಲಯುತರಾಗುತ್ತಾರೆ ಹಾಗೂ ಸಮಾಜಕ್ಕೆ ಒಳ್ಳೆಯ ಆಡಳಿತವನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಉಪನ್ಯಾಸಕರಾದ ಸುಧಾಕರ್ ಎಮ್. ಎ. ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ಮಫಾಝ್, ಧನುಷ್, ಅನಿಷಾ, ಶಮಿಕ್ ಆಳ್ವ ವಿವಿಧ ಮಂತ್ರಿಗಳಾಗಿ ತಮ್ಮ ಕಾರ್ಯಭಾರವನ್ನು ವಹಿಸಿಕೊಂಡರು. ಮುಯಿಝಾ ಬಾನು ಸ್ಪೀಕರ್ ಆಗಿ ಆಯ್ಕೆಯಾದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್, ವಿದ್ಯಾರ್ಥಿಗಳು ಶಿಸ್ತಿನಿಂದ ಶಿಕ್ಷಣ ಪಡೆದು, ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾಗಿ ಮೂಡಿಬರಬೇಕು. ಸ್ವೀಕರಿಸಿದ ಪ್ರತಿಜ್ಞೆಗನುಸಾರವಾಗಿ ಶಾಲೆಯ ಶಿಸ್ತನ್ನು ಕಾಪಾಡಬೇಕೆಂಬ ಕಿವಿಮಾತನ್ನು ಹೇಳಿದರು.
ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯಾರ್, ಶಾಲಾ ಸಂಸತ್ತಿನ ಮಾರ್ಗದರ್ಶಕಿ ಶೋಭಾ, ವಿರೋಧ ಪಕ್ಷದ ನಾಯಕ ಸಿದ್ಧಾರ್ಥ್ ಶೆಟ್ಟಿ, ಉಪನಾಯಕ ಜೆಶಿತ್ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ನಾಯಕ ಸುಮಿತ್ ಸ್ವಾಗತಿಸಿದರು. ಯಶಿಕಾ ವಂದಿಸಿದರು.