Updated News From Kaup

ಪಡುಬಿದ್ರಿ : ಎಸ್ ಬಿ ವಿ ಪಿ ಹಿ.ಪ್ರಾ. ಶಾಲೆ, ಗಣಪತಿ ಪ್ರೌಢಶಾಲೆ - ವಿದ್ಯಾನಿಧಿ ಪ್ರದಾನ ಸಮಾರಂಭ

Posted On: 18-06-2024 06:13PM

ಪಡುಬಿದ್ರಿ : ಇಲ್ಲಿನ ಶ್ರೀ ಬ್ರಹ್ಮ ವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘ ಇವರ ಸಹಯೋಗದಲ್ಲಿ ಕನ್ನಡ ಮಾಧ್ಯಮ ಶಾಲೆಯ ಪುನರುತ್ಥಾನದ ದೃಢ ಸಂಕಲ್ಪದೊಂದಿಗೆ ಜೂ.18 ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ವಿದ್ಯಾನಿಧಿ - ಪ್ರದಾನ ಸಮಾರಂಭವನ್ನು ಕಾಪು ವಿಧಾನಸಭಾ ‌ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.

ಸಮಾರಂಭದಲ್ಲಿ ಶೈಕ್ಷಣಿಕ ನಿಧಿ, ವಿಧ್ಯಾರ್ಥಿ ವೇತನ, ಸ್ಪೋಕನ್ ಇಂಗ್ಲಿಷ್ ಪುಸ್ತಕ ಹಸ್ತಾಂತರ ಮಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗಣಪತಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಕೆ. ಅನಂತಪಟ್ಟಾಭಿ ರಾವ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮೊಕ್ತೇಸರರಾದ ರತ್ನಾಕರ ರಾಜ್ ಅರಸು, ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ ಪ್ರತಿನಿಧಿ ಪ್ರೊ. ನಿತ್ಯಾನಂದ, ಉದ್ಯಮಿಗಳಾದ ಪ್ರಥ್ವಿರಾಜ್ ಹೆಗ್ಡೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಜೂ. 29 - 30 : ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ

Posted On: 18-06-2024 05:53PM

ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಇವರ ವತಿಯಿಂದ ಜೂ. 29 ಮತ್ತು 30 ರಂದು ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ. ತಿಳಿಸಿದರು. ಅವರು ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಕರ್ನಾಟಕ ಸಹಿತ ವಿವಿಧ ರಾಜ್ಯಗಳ 300ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧಾಳುಗಳು ಮತ್ತು ಅವರೊಂದಿಗೆ ಬರುವ ಪೋಷಕರಿಗೆ 2 ದಿನದ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು. ಎಫಿಲೆನ್ಸ್ ಟೆಕ್ನಾಲಜೀಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಮಂಗಳೂರು, ಯುಡಿಸಿಎ ಉಡುಪಿ, ಕೆಎಸ್‌ಸಿಎ, ಎಐಸಿಎಸ್ ಫಿಡೆಗಳ ಸಹಕಾರದೊಂದಿಗೆ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಎರಡು ಲಕ್ಷ ರೂ. ವರೆಗೆ ನಗದು ಬಹುಮಾನ ನೀಡಲಾಗುವುದು. 6,8,10,12,14,16, ವರ್ಷ ಪ್ರಾಯದ ಹುಡುಗರು ಮತ್ತು ಹುಡುಗಿಯರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಪ್ರತೀ ವಿಭಾಗದಲ್ಲಿ ತಲಾ 10 ರಂತೆ 120 ಟ್ರೋಫಿ, ಓಪನ್‌ನಲ್ಲಿ 20, ಇತರ ವಿಭಾಗದಲ್ಲಿ 47 ಟ್ರೋಫಿ ಸಹಿತ 187 ಟ್ರೋಫಿ ವಿತರಿಸಲಾಗುವುದು ಎಂದರು.

ಜೂ. 29 ರಂದು ಬೆಳಿಗ್ಗೆ 8.45ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂದ್ಯಾಟವನ್ನು ಉದ್ಘಾಟಿಸಲಿದ್ದು, ಎಫಿಲೆನ್ಸ್ ಟೆಕ್ನಾಲಜೀಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಮಂಗಳೂರು ಇದರ ಸ್ಥಾಪಕ ಅವಿನಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಹಶೀಲ್ದಾರ್ ಡಾ| ಪ್ರತಿಭಾ ಆರ್., ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೂ. 30 ರಂದು ಸಂಜೆ 4.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಇದರ ಅಧ್ಯಕ್ಷ ಉಮಾನಾಥ್ ಕಾಪು, ನಿರ್ದೇಶಕಿ ಸೌಂದರ್ಯ ಯು.ಕೆ., ಮುಖ್ಯ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ ಉಡುಪಿ, ಸಲಹೆಗಾರ ನಾಗೇಶ್ ಕಾರಂತ್ ಕಾಪು, ಪಾಂಗಾಳ ಆಸರೆ ಸಂಸ್ಥೆಯ ಸ್ಥಾಪಕ ಪೆನ್ವಿಲ್ ಸೋನ್ಸ್, ಲೋಕೇಶ್ ಕೊಡ್ಮಾಣ್ ಉಪಸ್ಥಿತರಿದ್ದರು.

ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನೆ

Posted On: 17-06-2024 11:41AM

ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನಾ ಸಮಾರಂಭವು ಜೂ.16ರಂದು ತ್ರಿಷಾ ಸಭಾಭವನ ಹೆಬ್ರಿ ಇಲ್ಲಿ ಜರಗಿತು. ಮಹಿಳಾ ಘಟಕದ ಉದ್ಘಾಟನೆಯನ್ನು ಹೆಬ್ರಿ ಶ್ರೀ ರಾಮ್ ಜ್ಯುವೆಲರಿನ ಜಯಶ್ರೀ ನಾರಾಯಣ್ ಕೆ. ಕುಲಾಲ್ ಇವರು ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ರೇಖಾ ಪ್ರಭಾಕರ್ ಕುಲಾಲ್ ಇವರು ಭಾಗವಹಿಸಿ ಸಂಘಟನೆ ಬಗ್ಗೆ ಮಾತನಾಡಿದರು. ಅಧ್ಯಕ್ಷರಾದ ಸುಮಿತ್ರ ಕುಲಾಲ್ ಬೆಪ್ದೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ವೇದಿಕೆಯಲ್ಲಿ ಜ್ಯೋತಿ ಕುಲಾಲ್ ನಿಟ್ಟೆ, ಪೂರ್ಣಿಮಾ ಕುಲಾಲ್ ಶಿವಪುರ, ಗುಲಾಬಿ ಕುಲಾಲ್ ಚಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೆಬ್ರಿ, ಕಾರ್ಕಳ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿರಿದ್ದರು.

ಲಾವಣ್ಯ ಕುಲಾಲ್ ಕಬ್ಬಿನಾಲೆ ಸ್ವಾಗತಿಸಿದರು. ವಂದನಾ ಕುಲಾಲ್ ಚಾರ ನಿರೂಪಿಸಿದರು. ಸುನಂದಾ ಕುಲಾಲ್ ಶಿವಪುರ ವಂದಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಪ್ರದರ್ಶಿಸಿದೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 17-06-2024 10:39AM

ಕಾಪು : ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸಿದ ರಾಜ್ಯ ಸರಕಾರದ ನೀತಿ ಖಂಡನೀಯ. ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯನ್ನು ಏರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಪ್ರದರ್ಶಿಸಿದೆ.

ಗ್ಯಾರಂಟಿ ಯೋಜನೆಯ ಮೂಲಕ ಜನರನ್ನು ಮರುಳು ಮಾಡಿ, ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಇದೀಗ ಖಾಲಿಯಾಗಿದ್ದು, ತೆರಿಗೆ ಹೆಚ್ಚಳ ಮಾಡುವ ಮೂಲಕ ಜನತೆಗೆ ಬರೆ ಹಾಕಿದೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಏಳು ಮಾಗಣೆ ಕೂಟ ಹೊಸ ಪದಾಧಿಕಾರಿಗಳ ಆಯ್ಕೆ

Posted On: 17-06-2024 10:10AM

ಪಡುಬಿದ್ರಿ : ಸಾವಿರ ಸೀಮೆಯ ಶ್ರೀ ಕೋಡ್ದಬ್ಬು ದೈವಸ್ಥಾನಗಳೊಂದಿಗೆ ಪರಂಪರಾಗತ ಮುಂಡಾಲ ಸಮುದಾಯದ ಈ ಹಿಂದಿನ ಧಾರ್ಮಿಕ ಪರಂಪರೆಯನ್ನು ಉಳಿಸುತ್ತ, ಭವಿಷ್ಯತ್ತಿನ ದಿನಗಳಿಗೆ ಸಮುದಾಯದ ಐಕ್ಯತೆಯ ಮತ್ತು ಸ್ವಾಭಿಮಾನವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಏಳು ಮಾಗಣೆಗೆ ಹೊಸ ಚೈತನ್ಯ ನೀಡುವ ಸಂಕಲ್ಪದೊಂದಿಗೆ ಏಳು ಮಾಗಣೆ ಕೂಟ 2024 - 27 ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ರವಿವಾರ ಪಡುಬಿದ್ರಿ ಸಂತೆಕಟ್ಟೆ ಕೋಡ್ದಬ್ಬು ದೈವಸ್ಥಾನದಲ್ಲಿ ಜರಗಿತು.

ಹಿರಿಯರಾದ ದೇಜು ಮುಖಾರಿ, ಬಾಬು ಮುಖಾರಿ, ವಾಮಾನ ಸಾಲ್ಯಾನ್ ರವರ ಮಾರ್ಗದರ್ಶನದಲ್ಲಿ ನೂತನವಾದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶೇಖರ (ಅಂಗಡಿಬೆಟ್ಟು), ಅಧ್ಯಕ್ಷರಾಗಿ‌ ಸದಾನಂದ (ಬೊಗ್ಗರಿಲಚ್ಚಿಲ್), ಉಪಾಧ್ಯಕ್ಷರಾಗಿ ಸುರೇಶ್ ಪಡುಬಿದ್ರಿ (ಸಂತೆಕಟ್ಟೆ), ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ನಂಬಿಯಾರ್ (ಕೊಂಕನಡ್ಪು), ಜೊತೆ ಕಾರ್ಯದರ್ಶಿಯಾಗಿ ಪ್ರಸನ್ನಕುಮಾ‌ರ್ (ಸಂತೆಕಟ್ಟೆ), ಕೋಶಾಧಿಕಾರಿಯಾಗಿ ರಮೇಶ್ ನಂಬಿಯಾರ್ (ಪದ್ರದಬೆಟ್ಟು) ಆಯ್ಕೆಯಾಗಿದ್ದಾರೆ.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಹರೀಶ್ (ಅಂಗಡಿಬೆಟ್ಟು), ಪ್ರಭಾಕರ (ಬೊಗ್ಗರಿಲಚ್ಚಿಲ್), ಸಂಜೀವ (ಪದ್ರದಬೆಟ್ಟು), ಕಿಟ್ಟು ಕುಮಾರ್ (ಅವರಾಲು ಮಟ್ಟು), ಶಿವಪ್ಪ ಸಾಲ್ಯಾನ್ (ಕೊಂಕನಡ್ಪು), ಬಾಲಕೃಷ್ಣ (ಸಂತೆಕಟ್ಟೆ) ಆಯ್ಕೆಯಾದರು. ಗೌರವ ಸಲಹೆಗಾರರಾಗಿ ದೇಜು ಮುಖಾರಿ, ಬಾಬು ಮುಖಾರಿ, ವಾಮನ್ ಸಾಲ್ಯಾನ್ ರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ಸಾವಿರ ಸೀಮೆಯ ಕೋಡ್ದಬ್ಬು ದೈವಸ್ಥಾನಗಳ ಗುರಿಕಾರರು, ಹತ್ತು ಸಮಸ್ತರು ಉಪಸ್ಥಿತರಿದ್ದರು.

ಮುದರಂಗಡಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಹುಟ್ಟೂರ ಸನ್ಮಾನ

Posted On: 16-06-2024 04:22PM

ಮುದರಂಗಡಿ :ವಿದ್ಯಾರ್ಥಿ ದಿಸೆಯಿಂದ ರಾಜಕೀಯದ ಬಗೆಗೆ ಒಲವು ಹೊಂದಿದ್ದ ಐವನ್ ಡಿಸೋಜರವರು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿರುವುದು ಸ್ವಾಗತಾರ್ಹ. ಓರ್ವ ಜನಪರ ಕಾಳಜಿಯ ನಿಸ್ವಾರ್ಥ ಸೇವಕನಾಗಿ ಸಮಾಜಿಕ ಚಿಂತನೆ ಅವರಲ್ಲಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಮುಂದರಂಗಡಿ ಸಂತ ಫ್ರಾನ್ಸಿಸ್ ಚಚ್೯ ವಠಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಟ್ಟೂರ ಸನ್ಮಾನ : ಎರಡನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಮತ್ತು ಅವರ ಧರ್ಮಪತ್ನಿ ಸ್ತ್ರೀ ರೋಗ ತಜ್ಞೆ ಡಾ.ಕವಿತಾ ಡಿಸೋಜರನ್ನು ಗಣ್ಯರು, ಮುದರಂಗಡಿ ಆಸುಪಾಸಿನ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜರವರು ಹುಟ್ಟಿದ ಊರಿನ ಕಾರ್ಯಮಗಳಲ್ಲಿ ಭಾಗವಹಿಸುವಿದೆಂದರೆ ಸಂತಸ. ಅದರಲ್ಲೂ ಹುಟ್ಟೂರ ಸನ್ಮಾನಕ್ಕೆ ಆಭಾರಿಯಾಗಿದ್ದೇನೆ. ಊರಿನ ಪ್ರಗತಿಯ ಕೆಲಸಕ್ಕಾಗಿ ಶ್ರಮಿಸಲು ಸಿದ್ಧನಿದ್ದೇನೆ. ಅಧಿಕಾರ ಶಾಶ್ವತವಲ್ಲ. ಕಾಲೇಜು, ಮಂಡಲ ಪಂಚಾಯತ್, ಪಂಚಾಯತ್ ಚುನಾವಣೆಗಳಲ್ಲಿಯ ಅನುಭವ ವಿಧಾನಪರಿಷತ್ತಿನವರೆಗೆ ತಲುಪಿದೆ. ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು. ನಮಿತಾ ವಹಿಸಿದ್ದರು. ವೇದಿಕೆಯಲ್ಲಿ ಎಲ್ಲೂರು ಸೀಮೆಯ ಪ್ರಧಾನ ತಂತ್ರಿ ವೇ.ಮೂ.ಕೇಂಜ ಶ್ರೀಧರ ತಂತ್ರಿ, ಧರ್ಮ ಗುರುಗಳಾಗ ಫಾ| ವಿನ್ಸೆಂಟ್‌ ಡಿಸೋಜ, ಫಾ| ಫೆಡ್ರಕ್ ಡಿಸೋಜ, ಫಾ| ಅಬ್ರಹಾಂ ಡಿಸೋಜ, ರೆ| ಸುಧೀರ್, ರೆ| ಶಾಲಿನಿ ಸೋನ್ಸ್, ಮೌಲಾನಾ ಫಯಾಜ್ ರಜ್ವಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಶೇಖಬ್ಬ ಶೇಕ್, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಉಪಸ್ಥಿತರಿದ್ದರು.

ಸುಧಾಕರ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಗ್ಲಾಡಿಸ್ ಐಡಾ ಸಮ್ಮಾನ ಪತ್ರ ವಾಚಿಸಿದರು. ಮೈಕಲ್ ರಮೇಶ್ ಡಿಸೋಜ ವಂದಿಸಿದರು.

ರಂಗ ಸಂಸಾರ ಪಣಿಯೂರು : ತುಳು ಜಾನಪದ ಕಥಾಹಂದರದ ಎರಡು ನಾಟಕಗಳ ಮುಹೂರ್ತ

Posted On: 16-06-2024 04:11PM

ಕುಂಜೂರು : ರಂಗ ಸಂಸಾರ ಪಣಿಯೂರು ತಂಡದ ಈ ವರ್ಷದ ಎರಡು ವಿಭಿನ್ನ ತುಳು ಜಾನಪದ ನಾಟಕಗಳಾದ ಮೈಮೆದ ಬಾಲೆಲು ಕೋಟಿ ಚೆನ್ನಯೆರ್ ಮತ್ತು ಮಾಯಕಾರೆ ಬಬ್ಬುನ ಮಾಯದ ನಡಕೆ ರವಿವಾರ ಕುಂಜೂರು ದುರ್ಗಾ ದೇವಿ ದೇವಳದಲ್ಲಿ ಮುಹೂರ್ತಗೊಂಡಿತು. ಬಳಿಕ ಕುಂಜೂರು ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಿಕ್ಷಕ ಸುದರ್ಶನ್ ರವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಲಾವಿದರ ಕಷ್ಟ, ಕಲಾವಿದರಾಗಿ ಬೆಳೆಯುವ ಹುಮ್ಮಸ್ಸು, ಕಲಾವಿದನಾಗಿ ರೂಪುಗೊಂಡ ಬಳಿಕ ಇರುವುದಿಲ್ಲ. ಪೌರಾಣಿಕ ನಾಟಕಗಳು ನಿತ್ಯ ಸತ್ಯ. ನಿರೀಕ್ಷೆಗಿಂತ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ನಾಟಕ ರಚನೆಕಾರ, ದಿಗ್ಧರ್ಶಕ ರವಿಕುಮಾರ್ ಕಡೆಕಾರು ಮಾತನಾಡಿ, ನಾಟಕ ತಂಡಗಳ ಉಳಿವು ಕಥೆ, ಕಲಾವಿದರ ಬದ್ಧತೆಯ ಮೇಲೆ ನಿಂತಿದೆ. ಉತ್ತಮ ಕಥಾ ಹಂದರವಿದ್ದಾಗ ನಾಟಕ ಗೆಲ್ಲುತ್ತದೆ. ಕಥೆಯ ಹೊರತು ಲಾಭ ಉದ್ದೇಶವಾಗಬಾರದು. ಅದರಲ್ಲೂ ಪೌರಾಣಿಕ ನಾಟಕಗಳು ಸುಲಭ ಸಾಧ್ಯವಲ್ಲ ಎಂದರು ಕಾಂತಾರ ಚಲನಚಿತ್ರ ಖ್ಯಾತಿಯ ಚಂದ್ರಕಲಾ ಮಾತನಾಡಿ ಮಕ್ಕಳಿಗೆ ದೈವ ದೇವರ ಕಾರ್ಣಿಕದ ಹಿರಿಮೆ ತಿಳಿ ಹೇಳುವ ನಾಟಕಗಳು ಮೂಡಿ ಬರಬೇಕಾಗಿದೆ. ಆ ಮೂಲಕ ಸಂಸ್ಕೃತಿಯ ಜೊತೆ ಕಲೆ ಉಳಿಯಲು ಸಾಧ್ಯ ಎಂದರು.

ಈ ಸಂದರ್ಭ ಹಿರಿಯರಾದ ಯಶೋಧರ ಶೆಟ್ಟಿ ನಾಟಕ ತಂಡಕ್ಕೆ ಶುಭ ಹಾರೈಸಿ, ನಾಟಕದ ಪ್ರತಿಯನ್ನು ತಂಡಕ್ಕೆ ಹಸ್ತಾಂತರಿಸಿದರು.

ನಾರಾಯಣ ಶೆಟ್ಟಿ ಅದಮಾರು, ರಂಗಕರ್ಮಿ ಗುರು ಚರಣ್ ಪೊಲಿಪು, ನವೀನ್ ಕುಮಾರ್, ನಾಟಕ ಕಲಾವಿದ ಸುಜಿತ್ ಶೆಟ್ಟಿ, ಗಣೇಶ್ ಪಣಿಯೂರು, ವಿವಿಧ ನಾಟಕ ತಂಡಗಳ ಕಲಾವಿದರು ಉಪಸ್ಥಿತರಿದ್ದರು. ನಾಟಕದ ನಿರ್ದೇಶಕ ಆನಂದ ಕುಂದರ್ ಸ್ವಾಗತಿಸಿ, ವಂದಿಸಿದರು. ರಾಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ಕೆಳಗಿನ ಪೇಟೆ ಕೋಳಿ ಅಂಗಡಿಯಲ್ಲಿ ಕಳ್ಳತನ

Posted On: 16-06-2024 12:00PM

ಪಡುಬಿದ್ರಿ : ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ವೇಳೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಕ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಕ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ.

ಅಂಗಡಿಯ ಒಳ ನುಸುಳಿರುವ ಕಳ್ಳ ನೇರ ಕ್ಯಾಶ್ ಕೌಂಟರ್ ಗೆ ಬಂದಿದ್ದಾನೆ. ಅಲ್ಲೇ ಇರಿಸಲಾಗಿದ್ದ ಸಿಸಿಟಿವಿಯನ್ನು ತಿರುಗಿಸಿ ಅದರ ದಿಕ್ಕು ಬದಲಿಸಿದ್ದಾನೆ. ಈ ವೇಳೆ ಸಿಸಿಟಿವಿಯಲ್ಲಿ ಆತನ ಮುಖ ಸೆರೆಯಾಗಿದ್ದು ಕಳ್ಳನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಲಿದೆ.

ಇದೇ ಅಂಗಡಿಯಲ್ಲಿ ಈ ಮುನ್ನ ಎರಡು ಬಾರಿ ಕಳ್ಳತನ ಗೈಯ್ಯಲಾಗಿದ್ದು ಇದೀಗ ಮೂರನೇ ಬಾರಿ ಕಳ್ಳರು ಕನ್ನ ಹೊಡೆದಿದ್ದಾರೆ. ಸಿಸಿಟಿವಿ ಇರುವ ಬಗ್ಗೆ ತಿಳಿದಿದ್ದರೂ ಕಳ್ಳರು ಯಾವುದೇ ಭಯವಿಲ್ಲದೆ ಕಳ್ಳತನ ನಡೆಸಿದ್ದಾರೆ.

ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಜಮಾಡಿ : ವಿಶ್ವ ತಂಬಾಕು ವಿರೋಧಿ ದಿನಾಚರಣೆ

Posted On: 15-06-2024 03:27PM

ಹೆಜಮಾಡಿ : ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಹೆಜಮಾಡಿ ಇಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜರಗಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಕಾಪು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ದಯಾನಂದ ಹೆಜಮಾಡಿ ಉದ್ಘಾಟಿಸಿದರು. ಈ ಸಂದರ್ಭ ಅವರು ಉತ್ತಮ ಸಂಸ್ಕಾರ ಬೆಳೆಸಿ ಹೆತ್ತವರನ್ನು ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಗಣೇಶ ಆಚಾರ್ಯ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ದುಶ್ಚಟಗಳಿಂದ ಮುಕ್ತರಾಗೋಣ ಎಂಬ ಸಂಕಲ್ಪ ಬೋಧಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ಸುಧಾಕರ ಕರ್ಕೇರ ರವರು ಶೇಕಡಾ 100 ಫಲಿತಾಂಶ ದಾಖಲಿಸಿದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಶುಭ ಹಾರೈಸಿದರು ಹಾಗೂ ಶಿಕ್ಷಕರನ್ನೂ ಅಭಿನಂದಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಳೆದ ಸಾಲಿನ ಹತ್ತನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕರಾದ ಸಂಪಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಒಕ್ಕೂಟದ ಅಧ್ಯಕ್ಷೆ ಪವಿತ್ರಾ ಗಿರೀಶ್, ಯೋಜನಾಧಿಕಾರಿ ಮಮತಾ ಶೆಟ್ಟಿ, ಶಿಕ್ಷಕರು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹಶಿಕ್ಷಕಿ ದೀಪಾ ಎನ್. ಉಡುಪ ಸ್ವಾಗತಿಸಿದರು. ಪಡುಬಿದ್ರಿ ವಲಯದ ಮೇಲ್ವಿಚಾರಕಿ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಅನಿತಾ ವಂದಿಸಿದರು.

ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ : ಬಿಲ್ವ ಪತ್ರ ಗಿಡ ನೆಡುವ ಅಭಿಯಾನಕ್ಕೆ ಕ್ಷೇತ್ರದಲ್ಲಿ ಚಾಲನೆ

Posted On: 15-06-2024 03:22PM

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ಇದರ ಮುಖ್ಯಸ್ಥರಾದ ಶ್ರೀ ಸಾಯಿ ಈಶ್ವರ ಗುರೂಜಿಯವರ ಸಂಕಲ್ಪದಂತೆ 108 ದಿನಗಳಲ್ಲಿ 108 ದೇವಾಲಯಗಳಿಗೆ ಭೇಟಿ ನೀಡಿ ಬಿಲ್ವ ಪತ್ರ ಗಿಡ ನೆಡುವ ಅಭಿಯಾನಕ್ಕೆ ಜೂ.14 ರಂದು ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ದ್ವಾರಕಾಮಯಿ ಮಠ ಇದರ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ 108 ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿ ಹಿಂದೂ ಧರ್ಮದ ರಕ್ಷಣೆ ಸೈನಿಕರಿಗೆ ಬೆಂಬಲ ಮತ್ತು ಮಹಿಳಾ ಜಾಗೃತಿಯ ಬಗ್ಗೆ ಜನ ಅಭಿಪ್ರಾಯ ಮೂಡಿಸಲಾಗುವುದು ಅಲ್ಲವೇ ಪ್ರತಿ ದೇವಸ್ಥಾನದಲ್ಲಿ ಬಿಲ್ವಪತ್ರೆ ಗಿಡವನ್ನು ನೆಡುವ ಕಾರ್ಯ ನಡೆಯಲಿರುವುದು ಎಂದು ತಿಳಿಸಿದರು.

ಜಯಂಟ್ಸ್ ಗ್ರೂಪ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ಮಾತನಾಡಿ ಬಿಲ್ವಪತ್ರೆ ಗಿಡವು ಕೇವಲ ಧಾರ್ಮಿಕ ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಉತ್ತಮವಾಗಿದೆ. ಸಾಕಷ್ಟು ಗಿಡಗಳನ್ನು ಪ್ರಕೃತಿಗೆ ಸಂತಸ ತರುವ ಕಾರ್ಯ ನಾವೆಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಸಾಯಿ ಈಶ್ವರ ಗುರೂಜಿ ಈ ಕಲ್ಪನೆ ಉತ್ತಮವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಲ್ವಪತ್ರೆ ಗಿಡಗಳನ್ನು ಹಸ್ತಾಂತರ ಮಾಡಲಾಯಿತು. ಕಾಯ೯ಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಾಜಿ ಮಹಿಳಾ ಮೋಚಾ೯ ಅಧ್ಯಕ್ಷರಾದ ವೀಣಾ ಶೆಟ್ಟಿ, ವಾರಿಜಾ ಕಲ್ಮಾಡಿ, ಸತೀಶ್ ಮುಂತಾದವರು ಉಪಸ್ಥಿತರಿದ್ದರು. ಗಿಡಗಳನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಸುವಣ೯ ಎಂಟರ್ಪ್ರೈಸ್ ರವರ ವತಿಯಿಂದ ನೀಡಲಾಯಿತು. ರಾಘವೇಂದ್ರ ಕವಾ೯ಲು ನಿರೂಪಿಸಿದರು.