Updated News From Kaup
ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಸಂಸದ, ಶಾಸಕರಿಂದ ವೀಕ್ಷಣೆ

Posted On: 20-06-2025 04:25PM
ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾನಿಯಾಗಿದ್ದು ಈ ಸಂಬಂಧ ಶುಕ್ರವಾರದಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಕ್ಷಣವೇ ಸೇತುವೆ ಇಕ್ಕೆಲಗಳಲ್ಲಿ ನಿಂತ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಜೊತೆಗೆ ಮಳೆ ಕಡಿಮೆಯಾದ ಕೂಡಲೇ ರಸ್ತೆ ದುರಸ್ತಿ ಕಾರ್ಯವನ್ನು ನಿರ್ವಹಿಸಲು ಸಂಭಂದಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಹಾಗೂ ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಗ್ರಾಮದ ಯುವಕ ಆತ್ಮಹತ್ಯೆ

Posted On: 20-06-2025 03:21PM
ಕಾಪು : ಕ್ಯಾಟರಿಂಗ್ ವೃತ್ತಿ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇನ್ನಂಜೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ರಾಕೇಶ್ (32) ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದರು. ಕೆಲವೊಮ್ಮೆ ಕೆಲಸದ ನಿಮಿತ್ತ ಹೊರಗೆ ಹೋದಾಗ 2-3 ದಿನ ಬಿಟ್ಟು ಮನೆಗೆ ಬರುತ್ತಿದ್ದರು. ಎಂದಿನಂತೆ ಕೆಲಸದ ಬಗ್ಗೆ ಹೊರಗೆ ಹೋದವರು ಜೂ.18ರ ರಾತ್ರಿ 9:30 ಗಂಟೆಗೆ ಮನೆಗೆ ಬಂದಿದ್ದು, ಜೂ.19 ರಂದು ಬೆಳಿಗ್ಗೆ 8:30 ಗಂಟೆ ಸಮಯದವರೆಗೂ ರೂಮ್‌ನಿಂದ ಹೊರಗೇ ಬರದೇ ಇರುವುದನ್ನು ನೋಡಿ ಅವರ ತಂದೆ ರಮೇಶ್ ರವರು ಬಾಗಿಲು ಬಡಿದಾಗ ಪ್ರತಿಕ್ರಿಯೆ ಬಾರದಿದ್ದನ್ನು ಕಂಡು ನೆರೆಮನೆಯವರಾದ ವಿಜಯ್ ಹಾಗೂ ಸಂಬಂಧಿಕರಾದ ಉಮೇಶ್ ರವರನ್ನು ಮನೆಗೆ ಕರೆಯಿಸಿ, ರೂಮಿನ ಹಿಂಬದಿಯಲ್ಲಿನ ಕಿಟಕಿ ಗ್ಲಾಸ್ ಅನ್ನು ಹೊಡೆದು ಕೋಲು ಹಾಕಿ ರೂಮ್ ಬಾಗಿಲ ಚಿಲಕವನ್ನು ತೆಗೆದು ರೂಮ್ ಒಳಗೆ ಹೋಗಿ ನೋಡುವಾಗ ರಾಕೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸನ್ ಶೈನ್ ಸೀನಿಯರ್ ಚೇಂಬರ್ ಬಂಟಕಲ್ಲು : ಅಧ್ಯಕ್ಷರಾಗಿ ರಮೇಶ್ ಬಂಟಕಲ್ ಆಯ್ಕೆ

Posted On: 20-06-2025 03:03PM
ಶಿರ್ವ : ಸನ್ ಶೈನ್ ಸೀನಿಯರ್ ಚೇಂಬರ್ ಬಂಟಕಲ್ಲು ಇದರ 2025- 26 ನೇ ಸಾಲಿನ ಅಧ್ಯಕ್ಷರಾಗಿ ಸೀನಿಯರ್ ರಮೇಶ್ ಬಂಟಕಲ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸೀನಿಯರ್ ರವೀಂದ್ರ ಪಾಟ್ಕರ್, ಖಜಾಂಜಿಯಾಗಿ ಸೀನಿಯರ್ ವಿಘ್ನೇಶ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುತ್ಯಾರು : ದಿವಾಕರ್ ಆಚಾರ್ಯರಿಗೆ ಯಕ್ಷಗಾನ ಡಿಪ್ಲೋಮಾದಲ್ಲಿ ಡಿಸ್ಟಿಂಕ್ಷನ್

Posted On: 20-06-2025 02:57PM
ಕಾಪು : ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಮಾರ್ಗದರ್ಶನದಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ ದಿವಾಕರ್ ಆಚಾರ್ಯ ಗೇರುಕಟ್ಟೆ ಇವರು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು 2024-25 ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಇತ್ತೀಚಿಗೆ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸಿತ್ತು.
ಇವರು ಆನೆಗುಂದಿ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಶಾಲೆಯ ಶೈಕ್ಷಣಿಕ ಸಲಹೆಗಾರರಾಗಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿ, ಹವ್ಯಾಸಿ ಕಲಾವಿದರಾಗಿ ಸಂಘಟಕರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಪು : ನರೇಂದ್ರ ಮೋದಿ ನೇತೃತ್ವದ ಸರ್ಕಾರ 11 ವರ್ಷ ಪೂರೈಸಿದ ಸಲುವಾಗಿ ವಿಕಸಿತ ಭಾರತ ಸಂಕಲ್ಪ ಸಭೆ

Posted On: 19-06-2025 06:59PM
ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷ ಪೂರೈಸಿದ ಸಲುವಾಗಿ ವಿಕಸಿತ ಭಾರತ ಸಂಕಲ್ಪ ಸಭೆ ಗುರುವಾರ ಕಾಪುವಿನ ವೀರಭದ್ರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ 11 ವರ್ಷದಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಇಂದು ಸ್ವಾವಲಂಬಿ ಆತ್ಮ ನಿರ್ಭರ ಭಾರತವಾಗಿದೆ. ಇಂದರಿಂದ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದ ಅವರು ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಸುದರ್ಶನ್, ಜಿಲ್ಲಾ ಬಿಜೆಪಿ ನಿಕಟಪೂರ್ವ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಶ ನಾಯಕ್ ಪೆರ್ಣಂಕಿಲ, ನಿಕಟಪೂರ್ವ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ಮತ್ತು ಪ್ರಮುಖರಾದ ಪ್ರಸಾದ್ ಶೆಟ್ಟಿ ಕುತ್ಯಾರು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

Posted On: 17-06-2025 10:50PM
ಉಡುಪಿ :ರಾಜ್ಯ ಸರ್ಕಾರವು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದ್ದು ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಿದ್ದು, ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಗವರ್ನೆನ್ಸ್ ನಿರ್ದೇಶಕರಾಗಿದ್ದ ಸ್ವರೂಪ ಟಿ.ಕೆ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ಜೂ.17 (ನಾಳೆ) : ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Posted On: 16-06-2025 10:41PM
ಉಡುಪಿ : ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೂನ್ 17ರ ಮಂಗಳವಾರ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪದವಿಪೂರ್ವ ಕಾಲೇಜು, ಐ.ಟಿ.ಐ ಗಳಿಗೂ ರಜೆ ಘೋಷಿಸಲಾಗಿದೆ. ದ್ವೀತಿಯ ಪಿಯುಸಿ -3 ಪರೀಕ್ಷೆ ನಡೆಯಲಿದೆ. ಪದವಿ, ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಎಂದಿನಂತೆ ನಡೆಯಲಿದೆ.
ಕಾಪು : ಯುವಕಾಂಗ್ರೆಸ್ ವತಿಯಿಂದ ವನಮಹೋತ್ಸವ

Posted On: 16-06-2025 08:11PM
ಕಾಪು : ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಸಮಿತಿಯ ವತಿಯಿಂದ ವನಮಹೋತ್ಸವವು ಕಾಪು ರಾಜೀವ್ ಭವನ ಮುಂಭಾಗ ಹಾಗೂ ಹಿರಿಯಡ್ಕಗಳಲ್ಲಿ ನಡೆಯಿತು.

ಕಾಪು ವಿಧಾನಸಭಾಕ್ಷೇತ್ರ ದ ಯುವಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ರವರ ನೇತೃತ್ವದಲ್ಲಿ ಗಿಡ ನೆಡುವ ಹಾಗೂ ಗಿಡ ವಿತರಣೆ ಕಾರ್ಯಕ್ರಮವು ಜರಗಿತು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ದಕ್ಷಿಣ ಅಧ್ಯಕ್ಷರಾದ ವೈ ಸುಕುಮಾರ್, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ಮಾಜಿ ಉಪಾಧ್ಯಕ್ಷರಾದ ಸುನೀಲ್ ಡಿ ಬಂಗೇರ, ಯುವಕಾಂಗ್ರೆಸ್ ಅಧ್ಯಕ್ಷರಾದ ಶರತ್ ನಾಯ್ಕ್, ಉತ್ತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾರ್ತಿಕ್, ಕಾಪು ಯುವ ಕಾಂಗ್ರೆಸ್ ಉತ್ತರ ಮಾಜಿ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಕಾಪು ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಯುವ ಕಾಂಗ್ರೆಸ್ ಮುಖಂಡರುಗಳಾದ ಲಿತೇಶ್, ಸನವರ್ ಶೇಕ್, ಅರ್ಫಾಜ್ ಎಂ ಎಸ್, ಕೀರ್ತಿ ಕುಮಾರ್, ಅಶ್ವತ್ ಆಚಾರ್ಯ, ರಿಯಾಮ್, ಸಫೀಕ್, ರಂಜಿತಾ, ರೇಶ್ಮಾ, ಹರ್ಷ ಕಾಮತ್, ಹಕೀಮ್, ರತನ್ ಕುಮಾರ್, ಉಡುಪಿ ಬ್ಲಾಕ್ ಯುವಕಾಂಗ್ರೆಸ್ ನ ಅಧ್ಯಕ್ಷರಾದ ಸಜ್ಜನ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೇಯಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುವೀಜ್ ಅಂಚನ್, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.
ಬಂಟಕಲ್ಲು ಶಾಲಾ ಹಳೆವಿದ್ಯಾರ್ಥಿ ಶಿವಾನಂದ ಪಾಟ್ಕರ್‌ಗೆ ಸಹಪಾಠಿಗಳಿಂದ ಭಾವಪೂರ್ಣ ನುಡಿನಮನ

Posted On: 16-06-2025 06:34PM
ಶಿರ್ವ : ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿ, ಶಾಲೆಯ ನಂಟನ್ನು ಬೆಳಸಿಕೊಂಡು, ಶಾಲಾ ಜೀವನದ ರಜತ ಸಂಭ್ರಮವನ್ನೂ ಅದೇ ಪ್ರಾಥಮಿಕ ಶಾಲೆಯಲ್ಲಿ ಆಚರಿಸಿಕೊಂಡು ವಿದ್ಯಾರ್ಥಿಗಳಿಗೆ, ಶಾಲೆಗೆ ಕೊಡುಗೆಗಳನ್ನು ನೀಡಿ ಕೃತಜ್ಞತಾ ಭಾವವನ್ನು ಬೆಳೆಸಲು ಪ್ರೇರಣಾಕರ್ತರಾದ ಉದ್ಯಮಿ, ಕೊಡುಗೈದಾನಿ ಬಂಟಕಲ್ಲು ಶಿವಾನಂದ ಪಾಟ್ಕರ್ ಮುಂಬಯಿಯಲ್ಲಿ ಇತ್ತೀಚೆಗೆ ತಮ್ಮ 50ರ ಹರೆಯದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸಹಪಾಠಿಗಳು ಸೋಮವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು.
ಅಂದು ಶಿಕ್ಷಕರಾಗಿದ್ದ ಲೀಲಾವತಿ, ಜಯಂತಿ, ಹಿಲ್ಡಾ, ಎನ್.ರಾಧಾಕೃಷ್ಣ ಪ್ರಭು, ಬಿ.ಪುಂಡಲೀಕ ಮರಾಠೆ ಮಾತನಾಡಿ ಹಳೆವಿದ್ಯಾರ್ಥಿ ಶಿವಾನಂದ ಪಾಟ್ಕರ್‌ರವರ ನೇತೃತ್ವದಲ್ಲಿ ಸಹಪಾಠಿ ಪ್ರಭಾಕರ ಜೋಗಿ ಹಿರಿತನದಲ್ಲಿ ಬ್ಯಾಚ್ಮೇಟುಗಳು ಸಂಘಟಿತರಾಗಿ ಶಾಲೆಗೆ ಬೇಕಾದ ಕೊಡುಗೆಗಳನ್ನು ನೀಡುವುದರ ಜೊತೆಗೆ ಶಾಲೆ ಹಾಗೂ ಶಿಕ್ಷಕರೊಂದಿಗೆ ಬೆಸೆದು ಕೊಂಡಿರುವ ಅವಿನಾಭಾವ ಸಂಬಂಧ ಎಲ್ಲೂ ಕಾಣಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಶಾಲೆಗೆ ಹಳೆವಿದ್ಯಾರ್ಥಿಗಳೇ ಆಪದ್ಭಾಂದವರು. ಶಾಲಾ ಶತಮಾನೋತ್ಸವದ ಹೊಸ್ತಿಲಲ್ಲಿಯೇ ಒಬ್ಬ ನಿಷ್ಠಾವಂತ ಹಳೆವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಇದು ಶಾಲೆಗೂ ಸಮಾಜಕ್ಕೂ ತುಂಬಲಾರದ ನಷ್ಟ. ಅವರ ಬ್ಯಾಚ್‌ಮೇಟ್‌ಗಳೇ ಮುಂದೆ ನಿಂತು ಸಂಸ್ಮರಣೆ ಮಾಡುತ್ತಿರುವುದು ಅವರ ಒಡನಾಟ, ಪ್ರೀತಿಯ ಕ್ಷಣಗಳನ್ನು ಸ್ಮರಿಸುವಂತಿದೆ ಎಂದರು. ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸ್ಕೂಲ್ ಬ್ಯಾಗ್‌ಗಳನ್ನು ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್‌ರವರಿಗೆ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರಾಮದಾಸ್ ಪ್ರಭು ವಹಿಸಿದ್ದರು. ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್, ಪ್ರಧಾನಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಶಿಕ್ಷಕ ದೇವದಾಸ್ ಪಾಟ್ಕರ್ ಮೃತರ ಸಾಧನೆ, ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ರವೀಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಆರ್‌ಎಸ್‌ಬಿ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಲಯನ್ಸ್ ವಲಯ ಸಂಯೋಜಕ ವಿಜಯ್ ಧೀರಜ್, ಮೃತರ ಪತ್ನಿ ಸುಮಾ ಪಾಟ್ಕರ್, ಪುತ್ರ ಹೃತ್ವಿಕ್,ಸಹೋದರ ರಾಮದಾಸ್ ಪಾಟ್ಕರ್, ತರಗತಿಯ ಸಹಪಾಠಿಗಳು ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಪ್ರಭಾಕರ ಜೋಗಿ ನಿರೂಪಿಸಿದರು. ಸಹಪಾಠಿ ದಿನೇಶ್ ದೇವಾಡಿಗ ವಂದಿಸಿದರು.
ಕುತ್ಯಾರು : ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಕುತ್ಯಾರು ನವೀನ್ ಶೆಟ್ಟಿಗೆ ಅಭಿನಂದನೆ

Posted On: 16-06-2025 06:10PM
ಶಿರ್ವ : ಶಿರ್ವ ಸಮೀಪದ ಕುತ್ಯಾರು ಗ್ರಾ,ಪಂ.ವ್ಯಾಪ್ತಿಯ 159ನೇ ಕುತ್ಯಾರು ಬೂತ್‌ನ ಸಾಮಾನ್ಯ ಕಾರ್ಯಕರ್ತರಾಗಿ ಹಂತಹಂತವಾಗಿ ಬೆಳೆದು ಗ್ರಾ.ಪಂ.ಅಧ್ಯಕ್ಷರಾಗಿ, ತಾಲೂಕು, ಕಾಪು ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಯಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಮೂರು ಅವಧಿಗೆ ಕರ್ತವ್ಯ ನಿರ್ವಹಿಸಿ ಇದೀಗ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿರುವ ಕುತ್ಯಾರು ನವೀನ್ ಶೆಟ್ಟಿರವರಿಗೆ ಕುತ್ಯಾರು ಬೂತ್ ಕಾರ್ಯಕರ್ತರು ಕುತ್ಯಾರು ಅಶೋಕ್ ಗೌಡ್ರು ನಿವಾಸ ಗಿರಿಜಾದಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಮತಗಟ್ಟೆಯ ಕಾರ್ಯಕರ್ತನಾಗಿ ವಿಶೇಷವಾಗಿ ಸೇವೆ ನೀಡಿದ ನವೀನ್ ರಾಜಕೀಯ ಬದುಕಿನ ಮುನ್ನುಡಿ ಬರೆದವರು. 1993 ರಿಂದಲೇ ಬೂತ್, ಗ್ರಾ.ಪಂ., ತಾ.ಪಂ., ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಈ ಭಾಗದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ದೇಶದಲ್ಲಿ ಮೋದಿಯವರ 11 ವರ್ಷಗಳ ಆಡಳಿತ ಮುಂದುವರಿಯುತ್ತಿದೆ. ಇದೊಂದು ಉತ್ತಮ ಅವಕಾಶ. ಸತ್ವ ಪರೀಕ್ಷೆಯ ಕಾಲ, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ನವೀನ್ ಶೆಟ್ಟಿ ಮಾತನಾಡಿ, ಜವಾಬ್ದಾರಿಗೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವುದೇ ಪ್ರಥಮ ಗುರಿ. "ಬೂತ್ ಗೆದ್ದರೆ ದೇಶ ಗೆದ್ದೀತು" ಇದು ಮೋದಿಯವರ ಮಾತು ನನಸಾಗಿಸುವುದೇ ನಮ್ಮ ಉದ್ದೇಶ. ಡಾ.ಆಚಾರ್ಯ, ಕೊಡ್ಗಿಯವರು ನಮ್ಮ ಮೊದಲ ಹಂತದ ನಾಯಕರು. ನಾವು ಎರಡನೇ ಹಂತದವರು, ಮೂರನೆ ಹಂತದ ನಾಯಕರನ್ನು ತಯಾರು ಮಾಡುವುದೇ ನಮ್ಮ ಗುರಿ. ಜಿಲ್ಲೆಯಾದ್ಯಂತ ಬೂತ್‌ಗೆ ಶಕ್ತಿ ಕೊಡುವ ಕಾರ್ಯ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಕುತ್ಯಾರು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಆಚಾರ್ಯ, ಜಿನೇಶ್ ಬಲ್ಲಾಳ್, ಪೂರ್ಣಚಂದ್ರ, ಸತೀಶ್ ಕುತ್ಯಾರು, ಬೂತ್ ಮಟ್ಟದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಧೀರಜ್ ಕುಲಾಲ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿ, ಗ್ರಾ.ಪಂ.ಸದಸ್ಯೆ ಲತಾ ಆಚಾರ್ಯ ವಂದಿಸಿದರು.