Updated News From Kaup
ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ಹೊಂಗಿರಣ ಯೋಜನೆಗೆ ಅರ್ಜಿ ಆಹ್ವಾನ

Posted On: 12-04-2025 05:57PM
ಉಡುಪಿ : ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.
ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ.ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606474298
ಶಿರ್ವ : ಚಿಣ್ಣರು-2025 ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

Posted On: 11-04-2025 01:11PM
ಶಿರ್ವ : ಶಿರ್ವ ಮಹಿಳಾ ಮಂಡಲದ ವತಿಯಿಂದ ಮಹಿಳಾ ಸೌಧದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ಮೂರು ದಿನಗಳ "ಚಿಣ್ಣರು-2025" ಉಚಿತ ಬೇಸಿಗೆ ಶಿಬಿರವನ್ನು ಗುರುವಾರ ಶಿರ್ವದ ಉದ್ಯಮಿ ಹಾಗೂ ಸಮಾಜಸೇವಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಇಂತಹ ಶಿಬಿರಗಳು ಸ್ಪೂರ್ತಿಯನ್ನು ನೀಡುತ್ತವೆ. ಶಿರ್ವ ಮಹಿಳಾ ಮಂಡಲ ಹಲವು ದಶಕಗಳಿಂದ ಈ ಪರಿಸರದಲ್ಲಿ ಸಂಘಟನೆಯ ಜೊತೆಗೆ ಅತ್ಯುತ್ತಮ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪೀಟರ್ ಕೋರ್ಡ, ಹಸನ್ ಇಬ್ರಾಹಿಂ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಪಿ. ಶೆಟ್ಟಿ ವಹಿಸಿ ಮಹಿಳಾ ಮಂಡಲದ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಠ್ಠಲ್ ಅಂಚನ್, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ವನಿತಾ ಕೆ.ಶೆಣೈ, ಕೋಶಾಧಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ಬಂಟಕಲ್ಲು ಗೀತಾ ವಾಗ್ಲೆ ಸ್ವಾಗತಿಸಿದರು. ಮಾಲತಿ ಅನಂತ ಮೂಡಿತ್ತಾಯ ಪರಿಚಯಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಪಿಂಟೊ ವಂದಿಸಿದರು. ಶಿಬಿರದಲ್ಲಿ 80ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಇಂದಿನಿಂದ(ಎ.11) ಕನ್ನಂಗಾರ್ ಉರೂಸ್

Posted On: 11-04-2025 12:47PM
ಕಾಪು : ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕನ್ನಂಗಾರ್ ಉರೂಸ್ ಸಮಾರಂಭವು ಎ. 11ರಿಂದ 19ರವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ತಿಳಿಸಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉರೂಸ್ ಸಮಾರಂಭಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಹಾಗೂ ಕ್ರಿಶ್ಚಿಯನ್ ಬಾಂಧವರು ಭಾಗವಹಿಸುತ್ತಾರೆ. ಇದೊಂದು ಸೌಹಾರ್ದತೆಯ ಕೇಂದ್ರವೂ ಆಗಿದೆ.

ಎ.11ರಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಧ್ವಜಾರೋಹಣ ನೆರವೇರಲಿದ್ದು, ಅಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ. ಅಂದು ರಾತ್ರಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಅಸಯ್ಯದ್ ಅಬ್ದರ್ರಹ್ಮಾನ್ ಮಸ್ಊದ್ ತಂಙಳ್ ಕೂರತ್ ದುವಾ ನೆರವೇರಿಸಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಉರೂಸ್ ಪ್ರಯುಕ್ತ ವಿವಿಧ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಅಬ್ದರ್ರಹ್ಮಾನ್ ಮದನಿ, ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ, ಅಬ್ದರ್ರಹ್ಮಾನ್ ವಿಪಿಎ ತಂಙಳ್ ದಾರಿಮಿ ಆಟೀರಿ, ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹಂಝ ಮದನಿ ಮಿತ್ತೂರು, ನೌಫಲ್ ಸಖಾಫಿ ಕಳಸ, ನೂರುಸ್ಸಾದಾತ್ ಅಬ್ದರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್, ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್ಹರ್, ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಭಾಗವಹಿಸಲಿದ್ದಾರೆ. ಎ.16ರಂದು ಅಸಯ್ಯದ್ ಕೆ.ಎಸ್. ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ಇವರ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನೆರವೇರಲಿದೆ.
ಎ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರ, ಬದ್ರುಸ್ಸಾದಾತ್ ಅಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವರಾದ ಜಿ. ಪರಮೇಶ್ವರ್, ಝಮೀರ್ ಅಹಮದ್, ಮಂಕಾಳ ವೈದ್ಯ, ದಿನೇಶ್ ಗುಂಡುರಾವ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತಿತರರ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಸರಕಾರದಿಂದ 25ಲಕ್ಷ ರೂ. ಅನುದಾನ: ಕನ್ನಂಗಾರ್ ಉರೂಸ್ಗೆ ಅಲ್ಪಸಂಖ್ಯಾತ ಇಲಾಖೆಯಿಂದ 25ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ವಿಧನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಫಾರಸಿನ ಮೇರೆಗೆ ಮುಖ್ಯಮತ್ರಿ ಸಿದ್ಧರಾಮಯ್ಯ ಅವರ ಆದೇಶದಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹಮದ್ ಬಿಡುಗಡೆ ಮಾಡಿದ್ದಾರೆ. ಎ. 13ರಂದು ಹೈಬಾ ಸಭಾಂಗಣದಲ್ಲಿ ಬೆಳಗ್ಗೆ ಸೌಹಾರ್ದ ಸಂಗಮ ಮತ್ತು ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರವು ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಕಾರ್ಯದರ್ಶಿ ರಕೀಬ್ ಕನ್ನಂಗಾರ್, ಮಸೀದಿ ಅಧ್ಯಕ್ಷರಾದ ಹಮಿದ್ ಹಾಜಿ, ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಉಪಸ್ಥಿತರಿದ್ದರು.
ಸ.ಪ.ಪೂ.ಕಾಲೇಜು ಪಲಿಮಾರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Posted On: 08-04-2025 04:26PM
ಪಲಿಮಾರು : ಮಾ.1 ರಿಂದ 20 ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು ಪಲಿಮಾರು ಶೇ.100 ಫಲಿತಾಂಶ ದಾಖಲಿಸಿದೆ. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು 17 ವಿದ್ಯಾರ್ಥಿಗಳಲ್ಲಿ 4 ಮಂದಿ ವಿಶಿಷ್ಟ ಶ್ರೇಣಿ, 10 ಮಂದಿ ಪ್ರಥಮ ಶ್ರೇಣಿ, 03 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 14 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅನನ್ಯ (570) ಶೇ.95 ಅಂಕ ಪಡೆದು ಪ್ರಥಮ, ಆಯಿಷತುಲ್ ಷಫಾ (567)ಶೇ.94.5 ಪಡೆದು ದ್ವಿತೀಯ, ಭವ್ಯ ಪೂಜಾರ್ತಿ (535) ಶೇ.89.17 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಕಲಾ ವಿಭಾಗದಲ್ಲಿ 3 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ರಕ್ಷಿತಾ (444) ಶೇ.74 ಪ್ರಥಮ, ರೇಷ್ಮಾ (405)ಶೇ. 67.5 ದ್ವಿತೀಯ, ಪ್ರಜ್ವಲ್ ಎಸ್ ಸುವರ್ಣ (359) ಶೇ.60 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಶೇ. 100 ಫಲಿತಾಂಶ ದಾಖಲಿಸಿದ ಕಾಲೇಜಿನ ವಿದ್ಯಾರ್ಥಿ ವೃಂದ, ಪ್ರಾಂಶುಪಾಲರನ್ನು ಮತ್ತು ಪ್ರಾಧ್ಯಾಪಕ ವೃಂದವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದಿಸಿದೆ.
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ 84ನೇ ಪ್ರತಿಷ್ಠಾ ವರ್ಧಂತೋತ್ಸವ ಸಂಪನ್ನ

Posted On: 08-04-2025 11:20AM
ಶಿರ್ವ : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ 84ನೇ ಪ್ರತಿಷ್ಠಾ ವರ್ಧಂತ್ಯೋತ್ಸವ ಸೋಮವಾರ ಸಂಪನ್ನಗೊಂಡಿತು. ಕ್ಷೇತ್ರದ ಪ್ರಧಾನ ವೈದಿಕರಾದ ವೇ.ಮೂ.ಸಂದೇಶ್ ಭಟ್ ನೇತೃತ್ವದಲ್ಲಿ ಸಹವೈದಿಕರ ಸಹಭಾಗಿತ್ವದಲ್ಲಿ ಪೂರ್ವಾಹ್ನ ವಿವಿಧ ಧಾರ್ಮಿಕ ಅನುಷ್ಠಾನಗಳು,ಮಹಾಗಣಪತಿ ಹೋಮ, ಪ್ರಧಾನಹೋಮ, ನವಕ ಕಲಶಾಭಿಷೇಕ, ಪರಿವಾರ ಸಾನಿಧ್ಯಗಳ ಆರಾಧನೆ, ಮಹಾಪೂಜೆ, ಶ್ರೀದೇವಿಯ ಪಲ್ಲಕಿ ಉತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಅಪರಾಹ್ನ ಶ್ರೀದುರ್ಗಾ ಯಕ್ಷಬಳಗದ ಸದಸ್ಯರಿಂದ ಯಕ್ಷಗಾನ ಬಯಲಾಟ, ಸಂಜೆ ಭಜನೆ, ರಾತ್ರಿ ರಂಗಪೂಜೆ, ರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಳದ ನೂತನ ಸಭಾಭವವನ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ, ಖ್ಯಾತ ಜ್ಯೋತಿಷಿಗಳಾದ ಮಾಣ್ಯೂರು ವೈ.ಉಪೇಂದ್ರ ಪ್ರಭು ವಹಿಸಿದ್ದರು. ಕ್ಷೇತ್ರದ ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಧರ್ಮೆಟ್ಟು ಗೋಪಿನಾಥ್ ನಾಯಕ್ ಸಭಾಭವನದ ವಿನ್ಯಾಸ, ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ, ಶ್ರೀದೇವಳದ ಸಂಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ನಾಯಕರು ಹಾಗೂ ಕೊಡುಗೆಗಳು, ನಂತರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಸಮಾಜದ ಪ್ರಮುಖರು, 83 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆದ ಪರಿವರ್ತನೆ, ಸಾನಿಧ್ಯದ ಕಾರಣಿಕದ ಬಗ್ಗೆ ಬೆಳುಕು ಚೆಲ್ಲಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ರಾಜಾಪುರ ಸಾರಸ್ವತ ಸೇವಾವೃಂದದ ಅಧ್ಯಕ್ಷ ಕೆ.ಆರ್. ಪಾಟ್ಕರ್, ಹಂಸಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಸುಧೀಶ್ ಕುಕ್ಕೆಹಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ವಾಮನ ಪಾಟ್ಕರ್ ಜೋಗೇಶ್ವರಿ ಉಪಸ್ಥಿತರಿದ್ದರು. ರಾಮದಾಸ್ ಪ್ರಭು ಸ್ವಾಗತಿಸಿದರು. ರಚಿತಾ ಪಾಟ್ಕರ್ ಪ್ರಾರ್ಥಿಸಿದರು. ಎಳ್ಳಾರೆ ಪಾಂಡುರಂಗ ಕಾಮತ್ ನಿರೂಪಿಸಿ, ಉಮೇಶ್ ನಾಯಕ್ ಪೆರ್ಣಂಕಿಲ ವಂದಿಸಿದರು.
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯ

Posted On: 07-04-2025 01:56PM
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗ ಶಿರ್ವ ಇದರ ವತಿಯಿಂದ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ಪ್ರತಿ ವರ್ಷವೂ ಈ ಕಾರ್ಯಕ್ರಮ ನಡೆಯುತ್ತಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭ ಅಧ್ಯಕ್ಷ ಉಮೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ, ಗೌರವಾಧ್ಯಕ್ಷ ಸುರೇಶ ಆಚಾರ್ಯ, ಕಾರ್ಯದರ್ಶಿ ಮಾಧವ ಆಚಾರ್ಯ ಕೋಶಾಧಿಕಾರಿ ಪ್ರಶಾಂತ ಆಚಾರ್ಯ, ಮಹಿಳಾ ಬಳಗದ ಕಾರ್ಯದರ್ಶಿ ಮಂಜುಳಾ ಉಮೇಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಹೆಜಮಾಡಿ ತೆನ್ನಯಜಾರು ತೋಟ ಪೂವಪ್ಪ ಕೋಟ್ಯಾನ್ ನಿಧನ

Posted On: 04-04-2025 02:24PM
ಹೆಜಮಾಡಿ : ಹೆಜಮಾಡಿ ತೆನ್ನಯ್ಯ ಜಾರು ತೋಟ ನಿವಾಸಿ, ಪ್ರಗತಿಪರ ಕೃಷಿಕ ಪೂವಪ್ಪ ಕೋಟ್ಯಾನ್ (93) ಅಸೌಖ್ಯದಿಂದ ಏ.3ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ , ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.
ಎಂಆರ್ ಪಿಎಲ್ ಗುತ್ತಿಗೆದಾರರಾಗಿದ್ದು, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು .ಹೆಜಮಾಡಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಮಾಜಿ ಗೌರವಾಧ್ಯಕ್ಷರಾಗಿದ್ದರು. ಇವರು ಕುಟುಂಬಿಕರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿಗೆ ವಾಟಾಳ್ ನಾಗರಾಜ್ ಭೇಟಿ

Posted On: 04-04-2025 10:21AM
ಕಾಪು : ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಗುರುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ದರುಶನ ಪಡೆದು ಅಮ್ಮನ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನನಗೆ ಹಿಂತಿರುಗಲು ಫ್ಲೈಟ್ ಗೆ ಸಮಯ ಆಗುತ್ತಿದೆ ಆದರೂ ಇಲ್ಲೇ ಉಳಿಯೋಣ ಅನಿಸುತ್ತಿದೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಕೆಂಬ ಹಂಬಲ ನನಗಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಧಾರಮಣ ಶಾಸ್ತ್ರೀ, ಪ್ರಬಂಧಕ ಗೋವರ್ಧನ್ ಶೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಎ. 8, 9 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹರಕೆ ಮಾರಿಪೂಜೆ

Posted On: 03-04-2025 10:21AM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ, ವಿವಿಧ ಉಪಸಮಿತಿ, ಸಿಬ್ಬಂದಿಗಳು ಮತ್ತು ನೌಕರವೃಂದ ಹಾಗೂ ಭಕ್ತವೃಂದದ ಸಹಕಾರದೊಂದಿಗೆ ಎ. 8 ಮತ್ತು 9 ರಂದು ಮಹಾಸೇವೆ ರೂಪದಲ್ಲಿ ಪ್ರಥಮ ಹರಕೆ ಮಾರಿಪೂಜೆ ನಡೆಯಲಿದ್ದು ಸಮಾಲೋಚನಾ ಸಭೆ ನಡೆಯಿತು.
ಎಪ್ರಿಲ್ 8ರ ಸಂಜೆ 5ಕ್ಕೆ ಹೂ-ಹಿಂಗಾರ ಮೆರವಣಿಗೆ, ರಾತ್ರಿ 8:30ಕ್ಕೆ ಒಡೆಯನ ಸನ್ನಿದಾನದಿಂದ ರಜತ ರಥದಲ್ಲಿ ಅಲಂಕೃತಳಾಗಿ ಮಾರಿಯಮ್ಮನ ಆಗಮನ. ರಾತ್ರಿ 10:30ಕ್ಕೆ ದರ್ಶನ ಸೇವೆ. ಎಪ್ರಿಲ್ 9ರ ಬುಧವಾರ ಮದ್ಯಾಹ್ನ 3ಕ್ಕೆ ದರ್ಶನ ಸೇವೆ. ಸಂಜೆ 7ರಿಂದ 10ಗಂಟೆಯವರೆಗೆ ಮಾರಿಪೂಜೆಯ ಅನ್ನಪ್ರಸಾದ ವಿತರಣೆಯಾಗಲಿದೆ. ಭಕ್ತರು, ಹೂ ಹಿಂಗಾರ ಸಹಿತ ವಿವಿಧ ಸೇವೆಗಳನ್ನು ಹರಕೆ ರೂಪದಲ್ಲಿ ನೀಡಲು ಅವಕಾಶವಿದೆ, ಹೆಚ್ಚಿನ ಮಾಹಿತಿಯನ್ನು ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾಪು ಕ್ಷೇತ್ರದ ಶಾಸಕರು ಮತ್ತು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಗಂಗಾಧರ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಬೀನಾ ವಿ. ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಸಾಲ್ಯಾನ್, ರವೀಂದ್ರ ಮಲ್ಲಾರು, ಮನೋಹರ ರಾವ್ ಕಲ್ಯ, ಚರಿತಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ದೇಶದಲ್ಲಿ ಅಶಾಂತಿ ಉಂಟುಮಾಡಲು ಕೇಂದ್ರದ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಮಂಡನೆ : ಶರ್ಫುದ್ದೀನ್ ಶೇಖ್

Posted On: 02-04-2025 10:55PM
ಕೇಂದ್ರ ಸರ್ಕಾರ ದೇಶದಲ್ಲಿ ಹಿಂದೂ ಮುಸ್ಲಿಂ ಸಮುದಾಯ ವಿಭಜನೆ ಮಾಡಲು ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ವಕ್ಪ್ ಬೋರ್ಡ್ ಹಸರಿನಲ್ಲಿ ದೇಶದ ಜನರಿಗೆ ಶುದ್ದ ಸುಳ್ಳುಗಳನ್ನು ಹೇಳಿ ಇವತ್ತು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ಲನ್ನು ಮಂಡಿಸಿದೆ. ವಕ್ಪ್ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಯಾರಿಗೂ ಅನ್ಯಾಯವಾಗಿರಲಿಲ್ಲ. ಆದರೆ ವಖ್ಫ್ ವಿಚಾರದಲ್ಲಿ ಜನರಿಗೆ ವಾಸ್ತವ ವಿಚಾರವನ್ನು ಮರೆಮಾಚಿ ಸುಳ್ಳು ಹೇಳಿಕೆಗಳನ್ನು ನೀಡಿ ಕೇಂದ್ರ ಸರ್ಕಾರ ತನ್ನ ವೈಪಲ್ಯಗಳನ್ನು ಮರೆಮಾಚಲು ತಯಾರಿ ನಡೆಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಖಂಡಿಸಿದ್ದಾರೆ.
ಈ ದೇಶಕ್ಕೆ ಅಲ್ಪಸಂಖ್ಯಾತರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಜಾತಿಮತ ಭೇದ ಇಲ್ಲದೆ ಎಲ್ಲರೂ ಸೇರಿ ಭಾರತ ದೇಶಕ್ಕೆ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ ಮತ್ತು ಬಲಿದಾನಗೈದಿದ್ದಾರೆ. ಆದರೆ ಇಂದು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ಉಂಟುಮಾಡಲು ತಯಾರಿ ಮಾಡಿದ ಬಿಜೆಪಿ ಮತ್ತು ಸಂಘಪರಿವಾರದ ತ್ಯಾಗ ಏನು ಎಂಬುದು ನಾಡಿನ ಜನರ ಪ್ರಶ್ನೆಯಾಗಿದೆ.
ನಿಜವಾಗಿಯೂ ವಕ್ಫ್ ಭೂಮಿ ಇರುವ ಪ್ರಮಾಣಕ್ಕಿಂತ ಅದೆಷ್ಟೋ ಪ್ರಮಾಣ ಕಡಿಮೆ ಇದೆ. ಭಾಗಶ: ಭೂಮಿ ಕಬಳಿಕೆ ಮಾಡಲಾಗಿದೆ. ಭೂಸುಧಾರಣೆ ಕಾನೂನಿಂದಾಗಿ ಕಳೆದುಕೊಂಡದ್ದು ಮತ್ತು ಸರ್ಕಾರಿ ಕಚೇರಿಗಳಿಗೆ ಕೊಟ್ಟು ಇರುವ ಭೂಮಿಯನ್ನು ಕೂಡ ಕಬಳಿಕೆ ಮಾಡಿ ತಮ್ಮ ಪರವಿರುವ ಉದ್ಯಮಿಗಳಿಗೆ ಹಂಚುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವಿದೆ. ಇದು ಖಂಡನೀಯ. ಧಾರ್ಮಿಕ ವಿಚಾರಗಳನ್ನೇ ಎತ್ತಿಕೊಂಡು ಸಮುದಾಯಗಳ ನಡುವೆ ಸಾಮರಸ್ಯ ಕದಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಇದೆಲ್ಲವನ್ನು ಬಿಟ್ಟು ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕೋಮುವಾದ ನಿರ್ಮೂಲನೆ ಕುರಿತು ಕಾಳಜಿ ವಹಿಸಬೇಕು. ದೇಶದಲ್ಲಿ ಶಾಂತಿ ಕದಡುವುದೇ ದೊಡ್ಡ ದೇಶದ್ರೋಹ. ಈ ಜ್ಞಾನ ಕೇಂದ್ರ ಸರ್ಕಾರ ಬೆಳೆಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.