Updated News From Kaup

ಕಿನ್ನಿಗೋಳಿ : ಸಾಹಿತ್ಯಾಸಕ್ತರಿಗೆ ಶುಭಸುದ್ದಿ ಒಕ್ಕಲುಗೊಂಡಿದೆ ಪುಸ್ತಕದ ಮನೆ

Posted On: 02-02-2021 07:47AM

ಕಿನ್ನಿಗೋಳಿ : ಪುಸ್ತಕದ ಮನೆ ಇಲ್ಲಿ ಕಾದಂಬರಿ,ಕಥಾಸಂಕಲನ , ಧಾರ್ಮಿಕ , ಯಕ್ಷಗಾನ, ಪುರಾಣ, ತುಳುಸಾಹಿತ್ಯ ಹೀಗೆ ಪುಸ್ತಕಗಳ ಸಂಗ್ರಹವಿದೆ . ಇಲ್ಲಿ ಪುಸ್ತಕ ಓದಬಹುದು , ಓದಿ ವಾಪಾಸು ತಂದು ಕೊಡಬಹುದು - ಕೊಂಡುಕೊಳ್ಳಲೂ ಬಹುದು , ಓದುಗರ ಬಳಗ ಸೇರಬಹುದು. ಪುಸ್ತಕ - ಸಾಹಿತ್ಯ ಚರ್ಚೆ ನಡೆಸಬಹುದು. ಸಾಹಿತಿಗಳನ್ನು ಭೇಟಿಮಾಡಬಹುದು. ಹೀಗೆ ಸಾಹಿತ್ಯಾಸಕ್ತರಿಗೆ ,ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕದ ಮನೆ ಜ.28 ರಂದು ಕಿನ್ನಿಗೋಳಿಯಲ್ಲಿ ತೆರೆಯಿತು .

ಕಟೀಲಿನ ಪಾಂಡುರಂಗ ಭಟ್ಟ ಮತ್ತು ಕೆ.ಎಲ್.ಕುಂಡಂತಾಯ ಅವರು 'ಪುಸ್ತಕದ ಮನೆ'ಯನ್ನು ಉದ್ಘಾಟಿಸಿದರು .ಬಾಲಕೃಷ್ಣ ಉಡುಪ ,ದೇವದಾಸ ಮಲ್ಯ , ಪುರುಷೋತ್ತಮ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಕಿನ್ನಿಗೋಳಿಯ ಅನಂತ ಪ್ರಕಾಶದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ 'ಪುಸ್ತಕದ ಮನೆ' ತೆರೆಯಲಾಗಿದೆ ಎಂದು ಸಚ್ಚಿದಾನಂದ ಉಡುಪ ಹೇಳಿದರು .ಗಾಯತ್ರೀ ಉಡುಪ ಸ್ವಾಗತಿಸಿ ,ವಂದಿಸಿದರು .ಮಿಥುನ್ ಉಡುಪ , ರಸನಾ ಉಡುಪ ಉಪಸ್ಥಿತರಿದ್ದರು .ಸಾಹಿತ್ತಾಸಕ್ತರು ಶುಭಹಾರೈಸಿದರು. "ಪುಸ್ತಕದ ಮನೆ" ಅಪೂರ್ವ ಕಲ್ಪನೆಯ ಮೂರ್ತ ಸ್ವರೂಪವಾಗಿ ಲೋಕಾರ್ಪಣೆ ಯಾಗಿದೆ.

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

Posted On: 01-02-2021 11:02PM

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವು ಜರುಗಿತು. ಬಂಟಕಲ್ಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಗಳೊಂದಿಗೆ ಜಾಗೃತಿ ಜಾಥವು ಕಾಲೇಜಿನಿಂದ ಬಂಟಕಲ್ಲು ಪೇಟೆಯವರೆಗೆ ನಡೆಯಿತು. ಶಿರ್ವ ಠಾಣಾಧೀಕಾರಿ ಶ್ರೀ ಶ್ರೀಶೈಲ ಮುರಗೋಡುರವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥದಲ್ಲಿ ವಾಹನ ಜಾಗೃತಿ ಫಲಕಗಳನ್ನು ಪ್ರದರ್ಶಿಸಲಾಯಿತು.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ಕಛೇರಿವರೆಗೆ ಜಾಥ ನಡೆಯಿತು. ನಂತರ ಸಮಿತಿಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ನಾಗರಿಕರ ಭದ್ರತೆ ಹಿತದೃಷ್ಟಿಯಿಂದ ಪೇಟೆಯ ಮುಖ್ಯ ರಸ್ತೆಗೆ ಅಳವಡಿಸಿದ 3 ಸಿ.ಸಿ ಕೆಮಾರಗಳನ್ನು ಠಾಣಾಧಿಕಾರಿಯವರು ಉಧ್ಘಾಟಿಸಿದರು. ನಂತರ ರಸ್ತೆ ಸುರಕ್ಷಾ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಠಾಣಾಧಿಕಾರಿಯವರು ರಸ್ತೆ ಸುರಕ್ಷಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು, ಈ ಮೂಲಕ ನಿಮ್ಮ ಜೀವ ರಕ್ಷಣೆ ಮಾಡಿ, ಹೆಲ್ಮೆಟನ್ನು ಖಡ್ಡಾಯವಾಗಿ ಧರಿಸಿ, ಸಂಚಾರದ ಸಮಯದಲ್ಲಿ ವಾಹನದ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಡುವಂತೆ ತಿಳಿಸಿ ಮುಖ್ಯವಾಗಿ ಯುವಕರು, ಯುವತಿಯರು ಈ ನಿಟ್ಟಿನಲ್ಲಿ ಜಾಗೃತಿವಹಿಸುವಂತೆ ತಿಳಿಸಿದರು. ಇಲಾಖೆ 112 ತುರ್ತು ಕರೆ ಸಂಖ್ಯೆಯ ಮಾಹಿತಿ ನೀಡಿದರು.

ಬಂಟಕಲ್ಲು ನಾಗರೀಕ ಸೇವಾ ಸಮಿತಿಯವರ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿ.ಸಿ. ಕೆಮಾರ ಅಳವಡಿಕೆ ಬಗ್ಗೆ ಕೃತಜ್ಞತೆಯನ್ನು ತಿಳಿಸಿದರು. ಇಂತಹ ಕಾರ್ಯಕ್ರಮವನ್ನು ಸಂಯೋಜಿಸಿದ ನಾಗರಿಕ ಸೇವಾ ಸಮಿತಿಯನ್ನು ಇಲಾಖಾ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಎಸೋಸಿಯೇಶನ್ ನ ಪ್ರಾಧಾನ ಕಾರ್ಯದರ್ಶಿ ಶ್ರೀ ರಮೇಶ್ ಕೊಟ್ಯಾನ್ ರವರು ನಾಗರಿಕ ಸಮಿತಿಯ ಶ್ಲಾಘನೀಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ಎಸೋಸಿಯೇಶನ್ ನ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಗಣೇಶ್ ಶೆಟ್ಟಿ, ಬಂಟಕಲ್ಲು ಕಾರು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಬಂಟಕಲ್ಲು ರಿಕ್ಷಾ ಚಾಲಕ ಮಾಲಕರ ಸಂಘದ ಶ್ರೀ ಸತೀಶ್ ಬಂಟಕಲ್ಲು ಉಫಸ್ಥಿತರಿದ್ದರು.

ಸಮಿತಿಯ ಉಪಾಧ್ಯಕ್ಷ ಶ್ರೀ ಪುಂಡಲೀಕ ಮರಾಠೆ, ಕೋಶಾಧಿಕಾರಿ ಶ್ರೀ ಜಗದೀಶ ಆಚಾರ್ಯ, ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಮಧುಕರ್, ಬಂಟಕಲ್ಲು ದೇವಾಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು, ಬಂಟಕಲ್ಲು ವಿಶ್ವಕರ್ಮ ಸಂಘದ ಶ್ರೀ ದಾಮೋದರ ಆಚಾರ್ಯ, ಬಿ.ಸಿ ರೋಡ್ ರಿಕ್ಷಾ ಚಾಲಕ ಮಾಲಕರ ಸಂಘದ ಶ್ರೀ ಡೇನಿಸ್, ಶಿರ್ವ ಆರಕ್ಷಕರ ಠಾಣೆಯ ಸಿಬ್ಬಂದಿ ವರ್ಗ , ನಾಗರಿಕ ಸೇವಾ ಸಮಿತಿಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಯುವ ನಟ, ಬಹುಮುಖ ಪ್ರತಿಭೆ ರಾಜೇಶ್ ಮುಂಡ್ಕೂರು ಇವರಿಗೆ ಸನ್ಮಾನ

Posted On: 01-02-2021 10:29PM

ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪದಗ್ರಹಣ ಸಮಾರಂಭ ಮತ್ತು ಕುಲಾಲ ಸಮ್ಮಿಲನ ಕಾರ್ಯಕ್ರಮವು ಭಾನುವಾರ ಮಂಗಳೂರು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸುಂದರ ಕಾರ್ಯಕ್ರಮದಲ್ಲಿ ಅನೇಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಗಣ್ಯರ ಉಪಸ್ಥಿತಿಯಲ್ಲಿ ಕುಲಾಲ ಸಮುದಾಯದ ಯುವ ನಟ, ಬಹುಮುಖ ಪ್ರತಿಭೆ ರಾಜೇಶ್ ಮುಂಡ್ಕೂರು ಇವರನ್ನು ಸನ್ಮಾನಿಸಿಲಾಯಿತು.

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕಾರ್ಯಾಗಾರ

Posted On: 01-02-2021 06:00PM

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕುರಿತಾದ ಒಂದು ದಿನದ ಕಾರ್ಯಾಗಾರ ಉಡುಪಿ ಜಿಲ್ಲೆಯ ಪಡುಬಿದ್ರಿ ಸುಜ್ಲೋನ್ ಆರ್ & ಆರ್ ಕೊಲೊನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಹಿರಿಯ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಮಾತನಾಡಿ ಇದೀಗ ಚುನಾಯಿತರಾದ ನೀವುಗಳು ಕಾನೂನಿನ ಯಾವ ಕಾಯಿದೆ ಅಡಿಯಲ್ಲಿ ಆಯ್ಕೆಯಾಗಿದ್ದೀರಿ, ನಿಮ್ಮ ಜವಾಬ್ದಾರಿಗಳು ಏನು? ಜನ ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ನಿಮ್ಮ ಕರ್ತವ್ಯಗಳು ಏನು ? ಗ್ರಾಮದ ಯಾವ ಯಾವ ಕಾರ್ಯಗಳಲ್ಲಿ ತಾವು ತೊಡಗಿಕೊಳ್ಳಬೇಕು ಎಂಬುದರ ಸ್ಪಷ್ಟ ಚಿತ್ರಣ ನಿಮ್ಮಲ್ಲಿ ಇದ್ದಾಗ ಮಾತ್ರ ಒಂದು ಗ್ರಾಮವನ್ನು ಸುಂದರ ಗ್ರಾಮವನ್ನಾಗಿಸ ಬಹುದು ಎಂದು ಹೇಳಿದರು.

ಮುಖ್ಯ ಅತಿಥಿ ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ವಿ. ಗಾಂವ್ಕರ್ ಮಾತನಾಡಿ ಇಲ್ಲಿ ಪಾಲ್ಗೊಂಡ ತಾವುಗಳು ಅದೃಷ್ಟ ಶಾಲಿಗಳು ಭಾಗ್ಯ ಶಾಲಿಗಳು ಯಾಕೆಂದರೆ ಇದೊಂದು ರಾಜ್ಯದಲ್ಲೇ ಪ್ರಥಮ ಮಾಹಿತಿ ಕಾರ್ಯಾಗಾರ ಎಂದು ಅಭಿಪ್ರಾಯ ಪಟ್ಟರು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಸುಜ್ಲೋನ್ ಆರ್ ಆರ್ ಕಾಲೋನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾನಾಥ ಕೆ.ಆರ್. ಉಪಸ್ಥಿತರಿದ್ದರು.

ಬಳಿಕ ಮಕ್ಕಳ ಅಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ ಸದಸ್ಯರ ಪಾತ್ರ ಕುರಿತಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಗ್ರಾಮಪಂಚಾಯತ್ ಸದಸ್ಯರುಗಳ ಕರ್ತವ್ಯ ಮತ್ತು ಅಧಿಕಾರ ಕುರಿತು ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಾನ್ಯತೆಪಡೆದ ಸಂಪನ್ಮೂಲ ಜವವಂತ ರಾವ್ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಪಡುಬಿದ್ರಿ, ಫಲಿಮಾರು, ಹೆಜಮಾಡಿ, ತೆಂಕ ಎರ್ಮಾಳ್ ಮತ್ತು ಬಡ ಎರ್ಮಾಳ್ ಗ್ರಾಮಪಂಚಾಯತ್ ಸದಸ್ಯರು ಭಾಗವಹಿಸಿದ್ದರು.

ಸಂತ ಮೇರಿ ಕಾಲೇಜು ಶಿರ್ವ : ಭವಿಷ್ಯದ ಜೀವನ ಮತ್ತು ಉದ್ಯೋಗ ಕೌಶಲ್ಯಗಳು ಕಾರ್ಯಕ್ರಮ

Posted On: 01-02-2021 04:27PM

ಶಿರ್ವ : ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಅಗತ್ಯವಾಗಿ ಬೇಕಾಗುವ ಸಲಹೆ ಮತ್ತು ಸೂಚನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸುತ್ತಾ ಪದವಿ ವ್ಯಾಸಂಗ ಮಾಡುವ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಭಾವನಾತ್ಮಕ ವಿಚಾರಗಳೊಂದಿಗೆ ಜವಾಬ್ದಾರಿಯುತ ಮೌಲ್ಯ ಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಮುಖ್ಯಅಥಿತಿಯಾಗಿ ಆಗಮಿಸಿದ ಮೈಟ್‍ ಕಾಲೇಜಿನ ಪ್ರಾಧ್ಯಾಪಕರಾದ ಶ್ರಿ ಪ್ರದಿಪ್ ಬಿ.ಆರ್ ರವರು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೈಟ್ ಕಾಲೇಜಿನ ಪ್ರಾದ್ಯಾಪಕರಾದ ಶ್ರಿ ವೆರಿನಾ ಡಿಸೋಜಾ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರ ಉನ್ನತ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳುವುದು ಇಂದು ಅಗತ್ಯವಾಗಿದೆ.ಇದರ ಪ್ರಯುಕ್ತ ಪ್ರಾತ್ಯಕ್ಷಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಎಲ್ಲಾ ಸುಲಭ ಮಾರ್ಗವನ್ನು ತಿಳಿಸಿ ತರಬೇತಿ ನೆರವೇರಿಸಿಕೊಟ್ಟರು.

ಮೂಡಬಿದ್ರೆ-ಮಿಜಾರಿನ ಮೈಟ್‍ಕಾಲೇಜು ಹಾಗೂ ಶಿರ್ವ ಸಂತ ಮೇರಿಕಾಲೇಜು ಪರಸ್ಪರ ಒಡಂಬಡಿಕೆಯ ಅನುಸಾರ ಕಾಲೇಜಿನ ದೃಶ್ಯಶ್ರಾವ್ಯ ಕೊಠಡಿಯಲ್ಲಿ ಭವಿಷ್ಯದ ಜೀವನ ಮತ್ತು ಉದ್ಯೋಗ ಕೌಶಲ್ಯಗಳು ಕಾರ್ಯಾಕ್ರಮವನ್ನುಏರ್ಪಡಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನದ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡಾಗ ಮುಂದೆ ಉದ್ಯೋಗವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರಿ ವಿಠಲ್ ನಾಯಕ್‍ರವರು ಕಿವಿ ಮಾತು ಹೇಳಿದರು.

ಉದ್ಯೋಗ ಕ್ಷೇತ್ರದಲ್ಲಾಗುತ್ತಿರುವ ವಿವಿಧ ಹೊಸ ವೃತ್ತಿಪರ ಕೌಶಲಾಭಿವೃದ್ಧಿಯ ಕಲಿಕೆಯ ಅವಶ್ಯಕತೆಯನ್ನು ವಿದ್ಯಾರ್ಥಿದೆಸೆಯಲ್ಲೇ ರೂಢಿಸಿಕೊಳುವ ಮೂಲಕ ಹೊಸ ಸವಾಲುಗಳನ್ನು ದಿಟ್ಟವಾಗಿ ನಿಭಾಯಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಸುಷ್ಮಾ, ಶ್ರೀಮತಿ ದಿವ್ಯಶ್ರಿ, ಶ್ರೀ ಪ್ರಕಾಶ್ ಹಾಗೂ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.ಕು.ದಾಕ್ಷಾಯನಿ ವಂದಿಸಿದರು, ಕು. ಕೃಪಾ ಬಿ ಆಚಾರ್ಯ ಪ್ರಾರ್ಥಿಸಿ, ಕು.ಸಿಯಾನ ಭಾನು ಸ್ವಾಗತಿಸಿದರು. ಕು. ಶ್ರುತಿ ಸಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ

Posted On: 31-01-2021 04:19PM

ಅಯೋಧ್ಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತ ಮಾತಾ ಪೂಜನಾ ಕಾರ್ಯಕ್ರಮ ಕೇಂಜ ತಂತ್ರಿ ‌ನಿವಾಸದಲ್ಲಿ ಜರಗಿತು.

ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ಜತೆ ಜತೆಯಲ್ಲೇ ದೇಶವಾಸಿಗಳ ಹೃದಯ ಮಂದಿರಗಳಲ್ಲಿ ಶ್ರೀರಾಮನು ತೋರಿದ ಜೀವನ ಮೌಲ್ಯಗಳು ನೆಲೆಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಎಲ್ಲೂರು ಸೀಮೆಯ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳು ಹೇಳಿದರು.

ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ್ಯ ಶಾರೀರಿಕ್ ಸತೀಶ್ ಕುತ್ಯಾರು, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಭಂಡಾರಿ, ಆರೆಸೆಸ್ಸ್ ಮಹಿಳಾ ಪ್ರಮುಖ್ ರಾಜಲಕ್ಷ್ಮಿ ಸತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಗ್ರಾಮದ ಪ್ರಮುಖರಾದ ಭಾರ್ಗವ ತಂತ್ರಿ, ಹರಿಕೃಷ್ಣ ಭಟ್, ಸುಧಾಕರ ಪೂಜಾರಿ ಕೇಂಜ, ಸುಭಾಷ್ ಅಂಚನ್, ಪವನ್ ಶೆಟ್ಟಿ ಕೇಂಜ, ಸುಶಾಂತ್ ಶೆಟ್ಟಿ, ದಿನೇಶ್ ಆಚರ್ಯ, ಗೀತಾ ಬಗ್ಗ ತೋಟ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

Posted On: 31-01-2021 08:16AM

ಉಡುಪಿ : ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಮತ್ತಿತರ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೈಲಟ್ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು 147 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ರಾಜ್ಯದಲ್ಲೇ ಫೆಬ್ರವರಿಯಿಂದ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಪೈಲಟ್ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಗ್ರಾಮಕ್ಕೆ ಅಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಥಮದಲ್ಲಿ ನಾಲ್ಕೂರು ಶಾಲೆಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟ ಅವರು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮ ವಿಶ್ವಾಸ ಮೂಡಿಸಿದರು. ನಂತರ ನಾಲ್ಕೂರಿನ ಸಭಾಭವನದಲ್ಲಿನ ಆಯೋಜಿಸಿದ್ದ ಸಾರ್ವಜನಿಕರ ಅರ್ಜಿ ಸ್ವೀಕಾರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪೂರ್ಣಕುಂಭ ಮತ್ತು ಚಂಡೆ ವಾದನದ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಹಿಂದಿನ ದಿನಕ್ಕೆ ಒಟ್ಟು 53 ಸಾರ್ವಜನಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳದಲ್ಲೇ 94 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ವೀಕ್ಷಿಸಿ, ಅವರೆಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿದರು. ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 94 ಸಿ ಮತ್ತು ಫಾರ್ಮ್ ನಂ. 57 ರಲ್ಲಿನ ಅರ್ಜಿಗಳು ಬಾಕಿ ಉಳಿದಿದ್ದು, ಹೊಸದಾಗಿ ಕಡತಗಳನ್ನು ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ ವಹಿಸಲಾಗುವುದು. ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮವನ್ನು ಸರಕಾರದ ಸೂಚನೆಯಂತೆ ಆಯೋಜಿಸಿದ್ದು, ಇಂದಿನ ಕಾರ್ಯಕ್ರಮದ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದ ರೂಪು ರೇಷೆಗಳನ್ನು ಉತ್ತಮ ಪಡಿಸಲು ಸಾಧ್ಯವಾಗಲಿದೆ. ಸಾರ್ವಜನಿಕರು ವಾಸ್ತವ್ಯ ದಿನದಂದು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಷ್ಟೇ ಸಮಯವಾದರೂ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅದೇ ದಿನ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು. ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಆಸ್ಪತ್ರೆಯ ಪರಿಶೀಲನೆ ಮತ್ತು ಅಗತ್ಯ ಕಡತಗಳನ್ನು ಪರಿಶೀಲಿಸಿದರು. ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸಾಮಾನ್ಯ ಭೋಜನವನ್ನು ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕವಾಗಿಯೇ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರ ಕಜ್ಕೆಯಲ್ಲಿನ ಕುಡುಬಿ ಜನಾಂಗದ ಸಿದ್ದನಾಯ್ಕ ಅವರ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಕುಡುಬಿ ಜನಾಂಗದವರ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ವೀಕ್ಷಿಸಿ, ಸ್ಥಳೀಯರು ಪ್ರೀತಿಯಿಂದ ನೀಡಿದ, ತಾವು ಬೆಳೆದ ತರಕಾರಿಯನ್ನು ಡಿಸಿ ಸ್ವೀಕರಿಸಿದರು.

ನಂತರ ಮಾರಾಳಿಯ ದಲಿತ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದರು. ನಂತರ ನಂಚಾರಿನ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಬ್ರಹ್ಮಾವರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂ, ತಹಸೀಲ್ದಾರ್ ಕಿರಣ ಗೌರಯ್ಯ ಮತ್ತಿತರರು ಉಪಸ್ಥಿತರಿದ್ದರು. ಇಡೀ ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ನಾಲ್ಕೂರು ನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಾವುದೇ ಅಡಚಣೆಗಳಿಗೆ ಆಸ್ಪದ ನೀಡದೇ ಅತ್ಯಂತ ಮುತುವರ್ಜಿಯಿಂದ ಆಯೋಜಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗುವ ಮೂಲಕ ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಪ್ರೇರಣೆ ನೀಡಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಕ್ರಮದ ಯಶಸ್ಸಿಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿತು.

ಮಲ್ಲಾರುಗುತ್ತು ಶ್ರೀ ಸುಬ್ರಹ್ಮಣ್ಯ ಶೆಟ್ಟಿ ನಿಧನ

Posted On: 30-01-2021 10:00PM

ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಭಾಸ್ಕರ್ ಶೆಟ್ಟಿಯವರ ಸುಪುತ್ರ, ಕಾಪು ಪುರಸಭೆಯ ಸದಸ್ಯೆ ಶ್ರೀಮತಿ. ಶಾಂತಲತಾ ಎಸ್. ಶೆಟ್ಟಿ ಯವರ ಪತಿ ಮಲ್ಲಾರುಗುತ್ತು ಶ್ರೀ ಸುಬ್ರಹ್ಮಣ್ಯ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಲ್ಲಾರಿನ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದರು.

ಮೃತರ ಅಂತ್ಯಕ್ರಿಯೆ ಇಂದು ರಾತ್ರಿ 9.00 ಗಂಟೆಗೆ ಮಲ್ಲಾರುಗುತ್ತುವಿನ ಸ್ವಗೃಹದಲ್ಲಿ ನಡೆಯಲಿದೆ.

ಕಟಪಾಡಿಯ ಕೋಟೆ, ಕಂಬೆರ್ಕಳ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಇಂದು ಮತ್ತು ನಾಳೆ ಸಿರಿ ಸಿಂಗಾರದ ನೇಮೋತ್ಸವ

Posted On: 30-01-2021 02:32PM

ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಪುರಾತನ ಕಟಪಾಡಿಯ ಕೋಟೆ, ಕಂಬೆರ್ಕಳ ಬಬ್ಬುಸ್ವಾಮಿ ದೈವಸ್ಥಾನದ ಪ್ರಸಕ್ತ ಸಾಲಿನ ನೇಮೋತ್ಸವವು ಇಂದು ಮತ್ತು ನಾಳೆ ಜರಗಲಿದೆ.

ಇಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಗಜಕಂಬ ಮುಹೂರ್ತ, ಮಧ್ಯಾಹ್ನ 12ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಂಡಾರ ಇಳಿಯುವುದು, ರಾತ್ರಿ 9ರಿಂದ ದೈವರಾಜ ಶ್ರೀ ಬಬ್ಬುಸ್ವಾಮಿ ದೈವದ ನೇಮೋತ್ಸವ, ರಾತ್ರಿ ಗಂಟೆ 12ರಿಂದ ಆದಿಶಕ್ತಿ ಸ್ವರೂಪಿಣಿ ಶ್ರೀ ತನ್ನಿಮಾನಿಗ ದೇವಿಯ ನೆಲೆ.

ನಾಳೆ ಬೆಳಿಗ್ಗೆ 10ರಿಂದ ಶ್ರೀ ಧೂಮಾವತಿ ಬಂಟ ದೈವದ ನೇಮೋತ್ಸವ, ಮಧ್ಯಾಹ್ನ 3ರಿಂದ ಜೋಡು ಗುಳಿಗ ನೇಮೋತ್ಸವ, ಸಂಜೆ 6 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಮ್ ಆರ್ ಜಿ ಗ್ರೂಪಿನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಟಿಯ ನಾಯಕ 2020 ಪ್ರಶಸ್ತಿ

Posted On: 30-01-2021 10:06AM

ನೆಟ್ ವಕ್೯ ಮೀಡಿಯಾ ಗ್ರೂಪ್ ಇದರ ಪ್ರಧಾನ ಸಂಪಾದಕ ಹಾಗೂ 11 ನೇ ವಾರ್ಷಿಕ ಭಾರತ ನಾಯಕತ್ವ ಕಾನ್ಕ್ಲೇವ್ ಮತ್ತು ಭಾರತೀಯ ವ್ಯವಹಾರಗಳ ನಾಯಕತ್ವ ಪ್ರಶಸ್ತಿಗಳ ತೀರ್ಪುಗಾರರ- ಅಧ್ಯಕ್ಷರಾದ ಸತ್ಯ ಬ್ರಹ್ಮ ಅವರು ಉಧ್ಯಮಿ ಎಂ.ಆರ್.ಜಿ. ಸಮೂಹದ ಕಾರ್ಯಾಧ್ಯಕ್ಷ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿರವರಿಗೆ ಭಾರತೀಯ ವ್ಯವಹಾರಗಳ ದೂರದೃಷ್ಷಿಯ ನಾಯಕ 2020 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತೀರ್ಪುಗಾರರಾದ ಸತ್ಯ ಬ್ರಹ್ಮ ಮತ್ತು ಗೂಗಲ್ ಹುಡುಕಾಟದಿಂದ ಇದು ಪ್ರತಿಷ್ಠಿತ ಪ್ರಶಸ್ತಿ ಎಂದು ಸ್ಪಷ್ಟವಾಗಿದೆ. ಸಾರ್ವಜನಿಕ ಮತದಾನ ಮತ್ತು ಮುಖ್ಯವಾಗಿ ತೀರ್ಪುಗಾರರ ಮತದಾನದ ನಂತರ ಅವರು ಈ ಪ್ರಶಸ್ತಿಯನ್ನು ತನ್ನದಾಗಿರಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯದೆ, ಈ ಪ್ರಶಸ್ತಿಯನ್ನು ಅವರ ಕಚೇರಿಗೆ ಕಳುಹಿಸಲಿದ್ದಾರೆ. ಪ್ರಶಸ್ತಿ ಪಡೆದ ನಂತರ ಅವರು ಪ್ರಶಸ್ತಿ ಮತ್ತು 40 ಸೆಕೆಂಡ್ ಭಾಷಣದೊಂದಿಗೆ ಅವರ ಫೋಟೋವನ್ನು ಕೋರಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಟಿವಿ ಚಾನೆಲ್‌ಗಳು ಮತ್ತು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರು ಭಾರತದಲ್ಲಿ ೧೯೯೩ ರಿಂದ ರಿಯಲ್ ಎಸ್ಟೇಟ್ ಮತ್ತು ಹೊಸ್ಪಿಟಾಲಿಟಿ ಉದ್ಯಮದಲ್ಲಿ ಒರ್ವ ಉನ್ನತಮಟ್ಟದ ಯಶಸ್ವೀ ಉದ್ಯಮಿಯಾಗಿ ಗುರುತಿಸಲ್ಪಟ್ಟಿದ್ದು ಹಲವೆಡೆ ಶಾಖೆಗಳನ್ನು ಹೊಂದಿರುವ ಗೋಲ್ಡ್ ಪಿಂಚ್ ಹೋಟೇಲ್ಸ್, ಅಂತರಾಷ್ಟ್ರೀಯ ಮಟ್ಟದ ಕೋರ್ಟ್ ಯಾರ್ಡ್ ಬೈ ಮಾರಿಯೋಟ್ ಹೋಟೇಲು, ಡಬ್ಬಲ್ ಟ್ರೀ ಬೈ ಹಿಲ್ಟನ್ ಮಾತ್ರವಲ್ಲದೆ ಮುಂದೆ ಹಲವಾರು ಹೋಟೇಲುಗಳು, ಕಟ್ಟಡಗಳು, ಕಮರ್ಶಿಯಲ್ ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿ ಅನೇಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಯೋಜಗೆ ಇವರದ್ದಾಗಿದೆ.

ದೇಶದ ಇತರ ಐದು ಕಂಪೆನಿಗಳ ಪ್ರಮುಖರಾದ ಆರ್. ಜೆ. ಕಾರ್ಪೊರೇಶನಿನ ರವಿ ಜಯಪುರಿಯಾ, ಸಮವರ್ಧನ್, ಮದರ್ ಸನ್ ಗ್ರೂಪ್ ನ ಕಾರ್ಯಾಧ್ಯಕ್ಷ ವಿವೇಕ್ ಚಾಂದ್ ಸೆಹಗಲ್, ಆರ್. ಜಿ. ಗ್ರೂಪ್ ನ್ ಡಾ. ರವೊ ಪಿಳ್ಳೆ, ಹೆವೆಲ್ಸ್ ಇಂಡಿಯಾದ ಅನಿಲ್ ರಾಯ್ ಗುಪ್ತಾ, ಹರಪ್ಪ ಅಜ್ಯುಕೇಶನಿನ ಪ್ರಮಥ್ ರಾಜ್ ಸಿನ್ಹಾ ಈ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿದ್ದು ಕೆ. ಪ್ರಕಾಶ್ ಶೆಟ್ಟಿಯವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಈ ಪ್ರಶಸ್ತಿಯು ಹಲವು ಪ್ರಸಿದ್ದ ಉದ್ಯಮಿಗಳಿಗೆ ದೊರಕಿದ್ದು ಅದರಲ್ಲಿ ರತನ್ ಟಾಟ, ನಾರಾಯಣ ಮೂರ್ತಿ, ಮುಕೇಶ್ ಅಂಬಾನಿ, ಕಿರಣ್ ಮುಜುಮ್ ದಾರ್ , ಪ್ರಿಯಾಂಕ ಚೋಪ್ರಾ ಮೊದಲಾದವರು ಸೇರಿದ್ದಾರೆ.