Updated News From Kaup

ಟೆಕ್ ನ್ಯೂಸ್ ಲೋಗೋ ಲೋಕಾರ್ಪಣೆ

Posted On: 07-02-2021 08:19PM

ಯೂಟ್ಯೂಬ್ ನಲ್ಲಿ ಹೊಸ Tech channel ಬರುತ್ತಿದ್ದು ಇದರ ಹೊಸ ಲೋಗೊವನ್ನು ಇಂದು ಸಂಸ್ಕೃತ ಸಿರಿ ಪೇಜ್ ನಲ್ಲಿ ಬಿಡುಗಡೆ ಮಾಡಲಾಯಿತು. ಉದ್ಘಾಟನೆಯನ್ನು ಅಂತರಾಷ್ಟೀಯ ಸೈಮಾ ಪ್ರಶಸ್ತಿ ಪುರಸ್ಕೃತೆ ಶ್ಲಾಘ ಸಾಲಿಗ್ರಾಮ ರವರು ಮಾಡಿದ್ದು ವಿಶೇಷವಾಗಿತ್ತು.

ಇಂದು ಲೋಕಾರ್ಪಣೆಗೊಂಡ ಟೆಕ್ ನ್ಯೂಸ್ ಇನ್ನು ಮುಂದೆ ಪ್ರತೀ ಭಾನುವಾರ ಬೆಳಗ್ಗೆ 9 ಘಂಟೆಗೆ ವಾರದ ಪ್ರಮುಖ ಹತ್ತು ಸುದ್ದಿಗಳನ್ನು ನೀಡಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಗೇಮಿಂಗ್ , Unbox , ಹಾಗೂ ಸಮಾಜಕ್ಕೆ ಡಿಜಿಟಲ್ ಮಾಧ್ಯಮದ ಮೂಲಕ ಅವಶ್ಯಕ ಸೇವೆಗಳನ್ನೂ ಒದಗಿಸಲಿದೆ.

ಈ ಹೊಸ ಚಾನೆಲ್ಗೆ ಶುಭಹಾರೈಕೆ ಇರಲಿ ಚಾನೆಲ್ Subscribe ಮಾಡಲು ಮರೆಯಬೇಡಿ Youtube Link :-
Click here
Click here

ಕಾಪು : ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣೆ

Posted On: 07-02-2021 04:03PM

ಶ್ರೀರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನ ದ ಕಾಪು ಕೋತಲ್ ಕಟ್ಟೆ ವಾರ್ಡ್ ನ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಶ್ರೀರಾಮ ಜನ್ಮ ಭೂಮಿಗೆ ಭಕ್ತಿಯಿಂದ ನೀಡಿದ ದೇಣಿಗೆಯನ್ನು ಇಂದು ಕಾಪು ವಲಯದ ರಾಮಜನ್ಮಭೂಮಿ ನಿಧಿ ಸಮರ್ಪಣಾ ಸಂಘಟಕರಿಗೆ ಇಂದು ಹಸ್ತಾಂತರಿಸಲಾಯಿತು.

ಯುವವಾಹಿನಿ (ರಿ.) ಪಡುಬಿದ್ರಿ ಘಟಕ : ವಿದ್ಯಾರ್ಥಿ ವೇತನ ವಿತರಣೆ

Posted On: 07-02-2021 01:34PM

ಮಕ್ಕಳಿಗೆ ಹೆತ್ತವರು ಅಂಕದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಜೊತೆಗೆ ಸಂಸ್ಕೃತಿಯನ್ನು ತಿಳಿಸಿ, ಬೆಳೆಸಬೇಕಾದ ಅನಿವಾರ್ಯತೆಯಿದೆ. ಯುವವಾಹಿನಿ ಪಡುಬಿದ್ರಿ ಘಟಕವು ಯುವವಾಹಿನಿಯ ಧ್ಯೇಯವಾದ ವಿದ್ಯೆಗೆ ಮಹತ್ವ ನೀಡುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಒಂದನೆಯ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಜರಗಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ಪಡುಬಿದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಲಕ್ಷ್ಮಣ ಡಿ. ಪೂಜಾರಿ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಪೂರ್ತಿ ನೀಡುವ ಇಂತಹ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವಿದ್ಯಾರ್ಥಿ ವೇತನ ವಿತರಣೆ :ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದ ಹಿತಾಕ್ಷಿ, ಎಸ್ಸೆಸ್ಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಶ್ರಾವ್ಯ ಆರ್. ಅಂಚನ್, ಸ್ಫೂರ್ತಿ ವೈ. ಕೋಟ್ಯಾನ್, ಶ್ರೇಯಸ್ ಪೂಜಾರಿ, ಶ್ರವಣ್ ಕುಮಾರ್, ವೃಶಾಲಿ ಎ. ಪೂಜಾರಿ, ಗೌರಿಕಾ ಜಿ. ಕುಕ್ಯಾನ್ ರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ವಹಿಸಿದ್ದರು. ವಿದ್ಯಾರ್ಥಿವೇತನದ ಮಹಾ ಪೋಷಕರಾದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸದಸ್ಯರಾದ ರಮೇಶ್ ಪಿ.ಬಿ ಯವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಯೋಗೇಶ್ ಪೂಜಾರಿ ಮಾದುಮನೆ, ಘಟಕದ ಮಾಜಿ‌ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ಸ್ವಾಗತಿಸಿ, ಘಟಕದ ವಿದ್ಯಾನಿಧಿ ಸಂಚಾಲಕರಾದ ಡಾ. ಐಶ್ವರ್ಯ ಸಿ. ಅಂಚನ್ ಮತ್ತು ನಿಶ್ಮಿತ ಪಿ.ಎಚ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಶಾಶ್ವತ್ ಎಸ್. ವಂದಿಸಿದರು.

ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ : ಪುಸ್ತಕಕ್ಕೆ ವಿದ್ವಾಂಸರ ಪ್ರತಿಕ್ರಿಯೆಗಳು

Posted On: 07-02-2021 01:04PM

ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು.ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ.ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ ಎಂಬುದಕ್ಕೆ ಮಿತ್ರರಾದ ಕೆ.ಎಲ್.ಕುಂಡಂತಾಯರಂಥ ಅನೇಕ ಕಲಾಸಕ್ತರು ಅಧ್ಯಯನಶೀಲರಾಗಿ ರಂಗದ ಒಳ - ಹೊರಗನ್ನು ಆಳವಾಗಿ ತಿಳಿದು ಪ್ರವರ್ತಿಸಿದರೆಂಬುದೇ ಪುರಾವೆ , ಇದಕ್ಕೆ ಇನ್ನಷ್ಟು ಬಲವಾದ ಸಾಕ್ಷ್ಯ ಈ ಹೊತ್ತಿಗೆ - ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ. ಪ್ರಸ್ತುತ ಪುಸ್ತಕ - ಆರು ಸಂದರ್ಶನಾಧಾರಿತ ಲೇಖನಗಳು ,ರಂಗ ಸಮೀಕ್ಷೆಗೆ ಸಂಬಧಿಸಿದ ಹನ್ನೊಂದು ಲೇಖನಗಳು ಮತ್ತು ಮುಂಬಯಿಯ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಕುಂಡಂತಾಯರು ಮಾಡಿದ ಅಧ್ಯಕ್ಷ ಭಾಷಣ ಹೀಗೆ ಹದಿನೆಂಟು ಲೇಖನಗಳ ಸಮಾಹಾರವಿದೆ. ಯಕ್ಷಗಾನದ ಸಮಕಾಲೀನ ಸ್ಥಿತಿಗತಿಯ ಕುರಿತ ಒಂದು ಕಿರಿದಾದರೂ ಮಹತ್ವದ ದಾಖಲಾತಿ ಇದು. ಬಾಯಾರಿದವನಿಗೆ ಎಳನೀರಿನ ಹಾಗೆ ಅರಿವಿನಿಂದ ತೃಪ್ತಿಕೊಡುವ ಕೃತಿಯಿದು.ಇದನ್ನು ಜನತೆ ಭಾವನಾತ್ಮಕವಾಗಿ ಓದಿ ಅರ್ಥಮಾಡಿಕೊಂಡು ತಮ್ಮ ಪಾಲಿನ ಕೊಡುಗೆ ನೀಡಲಿ .ಆ ಮೂಲಕ ಯಕ್ಷಗಾನ ಇನ್ನಷ್ಟು ಕೀರ್ತಿಶಾಲಿ ಆಗಬೇಕೆಂದು ಹಾರಯಿಸುತ್ತೇನೆ. ( ಮುನ್ನುಡಿಯಲ್ಲಿ) ಡಾ.ಕೆ.ಎಂ. ರಾಘವ ನಂಬಿಯಾರ್ (ಯಕ್ಷಗಾನ ವಿದ್ವಾಂಸರು - ಸಂಶೋಧಕರು)

•"ಯಕ್ಷಗಾನದ ಅಂತರಂಗ ಬಹಿರಂಗ" ಒಂದು ವಿಶಿಷ್ಟ ಸಂಕಲನ. ಯಕ್ಷಗಾನದ ಕುರಿತು ಹಲವು ಕೃತಿಗಳು ಹೊರಬರುತ್ತಿದ್ದರೂ ಈ ಪುಸ್ತಕಕ್ಕೆ ಪ್ರತ್ಯೇಕತೆ ಇದೆ. ಕಲೆಯ ಇತಿಹಾಸ,ವಿದ್ಯಮಾನ, ವಿಶಿಷ್ಟ ಸಂಗತಿಗಳ ಬಗೆಗೆ ಮಾಹಿತಿ - ಅಭಿಮತ - ವಿಶ್ಲೇಷಣೆಗಳು ಒಟ್ಟಾಗಿದೆ . ಸಂದರ್ಶನಗಳು ಪ್ರಸ್ತಾವಗಳ ದಾಖಲಾತಿಗಳು ಅಪೂರ್ವ.ಇತಿಹಾಸದ ಮಾಹಿತಿ ಸಂಶೋಧನೆಗೆ ದ್ರವ್ಯ ನೀಡಿವೆ . ಪುನಾರಚನೆ ,ಪರಿಷ್ಕಾರ,ವಿಸ್ತಾರ ಕುರಿತಾದ ತೂಕದ ಅಭಿಮತಗಳಿವೆ .ವಿಶಿಷ್ಟರೆನಿಸದ ಮಹಾನ್ ಸಾಧಕ ಎರ್ಮಾಳು ವಾಸುದೇವ ರಾಯರ ಪರಿಚಯ ಪುಣ್ಯದ ಕಾರ್ಯ . ಡಾ.ರಾಘವ ನಂಬಿಯಾರ್ ಅವರ ಮುನ್ನುಡಿ ಪುಸ್ತಕಕ್ಕೆ ನ್ಯಾಯ ಒದಗಿಸಿದೆ. ಚೊಕ್ಕ ,ಸರಳ ನಿರೂಪಣೆ ಇತ್ಯಾತ್ಮಕ ಆಸಕ್ತಿ ಪ್ರೇರಕ ಗ್ರಂಥ.ಮುಖಚಿತ್ರದಲ್ಲೂ ಹೊಸತನದ ದಾರಿ ಇದೆ.ಕೆಲವು ವಿವರಣೆಗಳು ಇನ್ನಷ್ಟು‌ ಬೇಕಿತ್ತು. ಡಾ.ಎಂ.ಪ್ರಭಾಕರ ಜೋಷಿ. (ಯಕ್ಷಗಾನ ವಿದ್ವಾಂಸರು, ಸಂಶೋಧಕರು )

• ಶ್ರೀ ಕೆ.ಎಲ್.ಕುಂಡಂತಾಯರ ಹೊಸಕೃತಿ 'ಯಕ್ಷಗಾನದ ಅಂತರಂಗ- ಬಹಿರಂಗ' ಓದಿ ಆನಂದವಾಯಿತು. ಅದರ ಮೊದಲ ಭಾಗ ಕಲಾಭಿಜ್ಞರ ಸಂದರ್ಶನಕ್ಕೆ ಮೀಸಲು. ಅದರ ಒಟ್ಟು ಸಾರ ಯಕ್ಷಗಾನದ. ಮೂಲಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂಬುದೇ ಆಗಿದೆ. ಎರಡನೆಯ ಭಾಗವಂತೂ ಲೇಖಕರ ಬಹುಕಾಲದ ಚಿಂತನೆಯಾದ 'ಯಕ್ಷಗಾನ ರಂಗದ ಪುನಾರಚನೆ'ಯ ಕುರಿತ ಗಹನ ವಿಚಾರಗಳನ್ನು ಕುರಿತಾಗಿದೆ. ದೀವಟಿಗೆ ಬೆಳಕಿನ ಆಟ, ಪತ್ರಿಕೆಗಳಲ್ಲಿ ಯಕ್ಷಗಾನ, ಶೇಣಿಯವರ ಅರ್ಥಶ್ರೇಣಿ, ಯಕ್ಷಗಾನದಲ್ಲಿ ಪರಿಷ್ಕರಣ, ರಾಗವಿಸ್ತಾರ ಮುಂತಾದ ಶಿರೋನಾಮೆಗಳಲ್ಲಿ ಕಿರಿದಾದರೂ ಹಿರಿದಾದ ವಿಷಯಗಳನ್ನು ಅಡಕಗೊಳಿಸಿದ್ದಾರೆ. ಕಟೀಲು ಮೇಳಗಳು ಹೊರಡುವ ಸಡಗರ ದಾಖಲಾತಿಯ ದೃಷ್ಟಿಯಿಂದ ಮಹತ್ವಪಡೆಯುತ್ತದೆ. ಪ್ರಸಂಗಪಠ್ಯದ ಅವಲಂಬನೆ ಎಷ್ಟು ಮತ್ತು ಹೇಗೆ ಎಂಬುದು ತೀರ್ಮಾನವಾಗದ ಜಟಿಲ ಸಮಸ್ಯೆ. ಆ ಲೇಖನ ನನ್ನನ್ನು ಸದಾ ಕಾಡುತ್ತಿದೆ. ಒಂದು ಒಳ್ಳೆಯ ಕೃತಿಯ ಲಕ್ಷಣ ಇದೇ ತಾನೆ? ಪುಟಗಳು ಮುಗಿದರೂ ವಿಚಾರಗಳು ಪುಟಗೊಳ್ಳುವ ಹಾಗೆ ಮಾಡುವ ಕೃತಿಯೇ ಸತ್ಕೃತಿ. ಕುಂಡಂತಾಯರ ಕೃತಿ ಈ ತೆರನಾದುದು ಎನ್ನಬೇಕು. ಡಾ. ವಸನ್ತ ಭಾರದ್ವಾಜ ,ಕಬ್ಬಿನಾಲೆ. ( ಯಕ್ಷಗಾನ ವಿದ್ವಾಂಸರು , ಸಂಶೋಧಕರು)

• ಪುಸ್ತಕ ಓದಲು ಖುಷಿ ಆಗುತ್ತದೆ. ಯಕ್ಷಗಾನ ಕ್ಷೇತ್ರಕ್ಕೆ ಪತ್ರಕರ್ತರು ಬಂದರೆ ಅಪರೂಪದ ಅನುಭವಗಳ ಕ್ರೋಢೀಕರಣ ಆಗುತ್ತದೆ ಎನ್ನುವುದಕ್ಕೆ ನೀವು ಸಾಕ್ಷಿ. ಮತ್ತೊಬ್ಬರು ನಮ್ಮ ರಾ.ನಂ. ನಿಮ್ಮ ಮನೆಯಲ್ಲೇ ಆ ಕಲೆ ಬೆಳೆದುಕೊಂಡು ಬಂದಿತ್ತೆಂದು ಈಗಲೇ ಗೊತ್ತಾದದ್ದು.‌ ನಿಮ್ಮ ಪಿಜ್ಜ ಘೋರಶೂರ್ಪನಖೆಯಾಗಿ ತಾಳಮದ್ದಳೆಗೆ ಬಂದು ಕೂರುವ ದೃಶ್ಯವನ್ನು ಕಲ್ಪಿಸಿ ಮುದಗೊಂಡೆನು.ನಿಮ್ಮ ಸ್ವಂತ ವಿಚಾರಗಳು ಆನುಭಾವಿಕ ನೆಲೆಯಿಂದ ದಾಖಲಾಗಿವೆ. ಅವೂ ಮುಖ್ಯ. ಪುಸ್ತಕಕ್ಕೆ ಶುಭಕೋರುವೆ. ಇದರ ಯೋಗ್ಯತೆ ಗುರುತಿಸಲ್ಪಡಲಿ.‌ - ಡಾ.ಬಿ .ಜನಾರ್ದನ ಭಟ್ (ವಿಮರ್ಶಕ ,ಸಾಹಿತಿ, ಕವಿ)

ಮೇರಮಜಲು ಗ್ರಾಮದಲ್ಲಿ ಜೆ.ಜೆ.ಎಂ ಕಾರ್ಯಚಟುವಟಿಕೆ

Posted On: 06-02-2021 11:13PM

ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ ಶನಿವಾರದಂದು ಜೀವನ್ ಮಿಷನ್ ಕಾರ್ಯಚಟುವಟಿಕೆಯಾದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಚಟುವಟಿಕೆಯನ್ನು ದ.ಕ ಜಿಲ್ಲಾ ಪಂಚಾಯತ್ , ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸಮುದಾಯ ಸಂಸ್ಥೆ ತುಮಕೂರು ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೇರಮಜಲು ಪಂಚಾಯತ್ ನಲ್ಲಿ ಜಲ ಜೀವನ್ ಮಿಷನ್ ನ ಉದ್ದೇಶ, ಗ್ರಾಮದಲ್ಲಿ ಈ ಯೋಜನೆಯ ಅನುಷ್ಠಾನ ಅಂತರ್ಜಲ ಪುನಶ್ಚೇತನ ಹಾಗೂ ಜಲಮೂಲಗಳ ಸಂರಕ್ಷಣೆ ಕುರಿತು ಜನಜೀವನ್ ಮಿಷನ್ ನ ಜಿಲ್ಲಾ ಯೋಜನಾ ಅಧಿಕಾರಿ ಪ್ರಸಾದ್ ರವರು ತಿಳಿಸಲಾಯಿತು. ದ.ಕ. ಜಿಲ್ಲಾ ಐಇಸಿ ಹೆಚ್ಆರ್ ಡಿ ವಿಭಾಗದ ಮುಖ್ಯಸ್ಥರಾದ ಶಿವರಾಮ್ ಪಿ ಬಿ ಜಲ ಜೀವನ ಮಿಷನ್ ಗ್ರಾಮೀಣ ಸಹಭಾಗಿತ್ವ ಸಮೀಕ್ಷೆ ಚಟುವಟಿಕೆಯನ್ನು ನಿರ್ವಹಿಸಿದರು.

ಸಮುದಾಯ ಸಹಭಾಗಿತ್ವದ ಮಹತ್ವದೊಂದಿಗೆ ವಂತಿಗೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಮೇರಮಜಲು ಗ್ರಾಮ ಪಂಚಾಯತ್ ನ ಎರಡು ಗ್ರಾಮಗಳಾದ ಕೊಡ್ಮನು ಹಾಗೂ ಮೇರಮಜಲು ಗ್ರಾಮದ ನಕ್ಷೆ ಬಿಡಿಸಿ ಪ್ರಸುತ್ತ ಮತ್ತು ನೂತನ ಕುಡಿಯುವ ನೀರಿನ ಯೋಜನಾ ಅನುಷ್ಠನಾದ ಬಗ್ಗೆ ವಿವರಿಸಿದರು.ಚರಣ್ ರಾಜ್ ಹಾಗೂ ಮಹಂತೇಶ್ ಕಾರ್ಯಕ್ರಮ ಸಂಯೋಜಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮೀ ಆರ್.ಕಿಲ್ಲೆ ಕಾರ್ಯಕ್ರಮ ನಿರೂಪಿಸಿದರು. ನೂತನವಾಗಿ ಆಯ್ಕೆಯಾದ ಪಂಚಾತ್ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಅಂಗನವಾಡಿ,ಇಲಾಖಾ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಗೆ ಅದ್ದೂರಿ ಮುಹೂರ್ತ

Posted On: 06-02-2021 11:08PM

ಶಿವಾನಂದ ಶೆಟ್ಟಿ ಮಂಗಲ್ಪಾಡಿ ನಿರ್ಮಾಣದ ಅಮ್ಮ ಕಲಾವಿದರು ಕುಡ್ಲ ಅಭಿನಯದ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚನೆಯ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಯ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ 10.30 ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪಳ ದಲ್ಲಿ ಅದ್ದೂರಿಯಾಗಿ ನೆರವೇರಿತು.

ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ತುಳುರಂಗಭೂಮಿ ಹಾಗು ಚಲನಚಿತ್ರ ನಿರ್ದೇಶಕರು ಆದ ವಿಜಯ್ ಕುಮಾರ್ ಕೊಡಿಯಾಲಬೈಲ್, ರಂಗಭೂಮಿ ಕಲಾವಿದರಾದ ಅರುಣ್ ಪೇಜಾವರ, ರಾಜೇಶ್ ಕಣ್ಣೂರ್, ಸುದ್ದಿಬಿಡುಗಡೆ ಚಾನೆಲ್ ನ ಹಮೀದ್ ಪುತ್ತೂರು, ಯಕ್ಷಗಾನ ನಾಟ್ಯಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ಉದ್ಯಮಿ ಕಲಾ ಪೋಷಕರಾದ ವಾಸು ಬಾಯಾರ್, ಶ್ರೀಧರ ಶೆಟ್ಟಿ ಮುಟ್ಟಂ ಹಾಗು ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದರು.

ಪ್ರಮುಖ ಕೇಂದ್ರಬಿಂದು ಸುಂದರ್ ರೈ ಮಂದಾರ ಮಾತನಾಡಿ ತಮ್ಮ ರಂಗ ಪಯಣ ಅಮ್ಮ ಕಲಾವಿದರು ಕುಡ್ಲ ತಂಡದಲ್ಲಿ ಮುಂದುವರಿಯಲಿದೆ, ಪ್ರಬುದ್ಧ ರಂಗಭೂಮಿ ಕಲಾವಿದರು ತಮ್ಮ ಜೊತೆ ಕೈಜೋಡಿಸಲಿದ್ದಾರೆ. ಉತ್ತಮ ಗುಣಮಟ್ಟದ ನಾಟಕವನ್ನು ಈ ತಂಡ ರಂಗಭೂಮಿಗೆ ನೀಡಲಿದೆ ಎಂದು ನುಡಿದರು.

ನೆರೆದ ಎಲ್ಲ ಗಣ್ಯ ಅತಿಥಿಗಳು ಹೊಸ ನಾಟಕ ಪರಕೆ ಪೂವಕ್ಕೆ ಭರ್ಜರಿ ಯಶಸ್ಸು ಕಾಣಲೆಂದು ಹಾರೈಸಿದರು. ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಸಂತ ಮೇರಿ ಕಾಲೇಜು, ಶಿರ್ವ: ಫೆಬ್ರವರಿ 11 ರಂದು ಕ್ಯಾಂಪಸ್ ಸಂದರ್ಶನ

Posted On: 06-02-2021 02:25PM

ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿ ಫೆಬ್ರವರಿ 11 ರಂದು ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ.

ಈಗಾಗಲೇ ಬಿ.ಸಿ.ಎ. (ಸಿ.ಎಸ್.), ಬಿ.ಎಸ್.ಸಿ (ಸಿ.ಎಸ್.), ಬಿ.ಇ. (ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಎಂ.ಎಸ್.ಸಿ, ಎಂ.ಸಿ.ಎ. ಸ್ನಾತಕೋತ್ತರ ಪದವಿ, ಡಿಪ್ಲೋಮಾ (ಸಿ.ಎಸ್.) ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ತಲೀನೊ ಆಡಿಟೋರಿಯಂನಲ್ಲಿ ಸಂದರ್ಶನ ನಡೆಯಲಿದೆ. ಅಭ್ಯಾರ್ಥಿಗಳು ಆಧಾರ್ ಕಾರ್ಡ್, ಮೂಲ ಅಂಕಪಟ್ಟಿ, ಪದವಿ ಪ್ರಮಾಣ ಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 7975230201 ಸಂಪರ್ಕಿಸಬಹುದು.

ಬಬ್ಬು ಸ್ವಾಮಿ ದೈವಸ್ಥಾನ ಜೋಡುಕಟ್ಟೆ ಉಡುಪಿ ಹರಕೆಯ ನೇಮೋತ್ಸವ

Posted On: 05-02-2021 05:37PM

ನಾಳೆ ಶನಿವಾರ 6 ರಂದು ಮತ್ತು ಭಾನುವಾರ 7ನೇ ತಾರೀಖಿನಂದು ಬೆಳಿಗ್ಗೆ 10:00 ಗಂಟೆಗೆ ದೈವ ದರ್ಶನ ಮಧ್ಯಾಹ್ನ 12. 30ರಿಂದ ಮಹಾ ಅನ್ನಸಂತರ್ಪಣೆ 6:00 ಗಂಟೆಗೆ ಸರಿಯಾಗಿ ದೈವಸ್ಥಾನದಿಂದ ಭಂಡಾರ ಇಳಿಯುವುದು, ರಾತ್ರಿ 9 ರಿಂದ ಬಬ್ಬು ಸ್ವಾಮಿ ದೈವದ ನೇಮೋತ್ಸವ ಬೆಳಿಗ್ಗೆ ಮೂರು ಗಂಟೆಗೆ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಜುಮಾದಿ ಬಂಟ ದೈವಗಳ ನೇಮೋತ್ಸವ ಮಧ್ಯಾಹ್ನ 1:00 ಗಂಟೆಗೆ ಸರಿಯಾಗಿ ಗುಳಿಗ ದೈವದ ನೇಮೋತ್ಸವ ಸಂಜೆ 5 ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆಯೆಂದು ಸೇವಾಕರ್ತರಾದ ಶ್ರೀಮತಿ ಜಲಜ ಆನಂದ ಶೆಟ್ಟಿ ದೊಡ್ಡಮನೆ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

ದೈವದ ನೇಮೋತ್ಸವ ನ್ಯೂ ಸುದ್ದಿ ಕನ್ನಡ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ.

ಶ್ರೇಯಸ್ ಮೂಲ್ಯರ ಚಿಕಿತ್ಸೆಗಾಗಿ ಸಹಾಯದ ನಿರೀಕ್ಷೆಯಲ್ಲಿದೆ‌ ಈ ಕುಟುಂಬ

Posted On: 05-02-2021 04:06PM

ಸಂಧ್ಯಾ ಮೂಲ್ಯರ ಮಗ ಶ್ರೇಯಸ್ ಮೂಲ್ಯ ಅಕ್ಯುಟ್ ಮೈಲೊಯ್ಡ್ ಲುಕೆಮಿಯ ರೋಗದಿಂದ ಬಳಲುತ್ತಿದ್ದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಂಪೂರ್ಣ ಚಿಕಿತ್ಸೆಗಾಗಿ 15 ಲಕ್ಷಕ್ಕಿಂತ ಅಧಿಕ ಹಣದ ಅವಶ್ಯಕತೆ ಇದೆ. ಇದೀಗ ಈ ಕುಟುಂಬ ಮಗನ ಚಿಕಿತ್ಸೆಗಾಗಿ‌‌ ಹಣದ ನಿರೀಕ್ಷೆಯಲ್ಲಿದೆ.

ಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಈ ಕೆಳಗಿನ‌ ಲಿಂಕ್ ಮೂಲಕ ಸಹಕರಿಸಬಹುದು
Read More

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರೋಟರಿ ಸದಸ್ಯರ ಬಾಂಧವ್ಯ ವೃದ್ಧಿಗೆ ಸಹಕಾರಿ: ಡಾ| ಭರತೇಶ್ ಆದಿರಾಜ್

Posted On: 05-02-2021 11:29AM

ರೋಟರಿ ವಲಯ ೫ರ ಕ್ರೀಡಾಕೂಟ ಗೊಬ್ಬು ಗಮ್ಮತ್ತ್ ಬೆಳ್ಮಣ್ ರೋಟರಿಯ ಆತಿಥ್ಯದಲ್ಲಿ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ್ದು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅವಿಭಜಿತ ರೋಟರಿ ಜಿಲ್ಲೆ ೩೧೮೨ರ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ| ಭರತೇಶ್ ಆದಿರಾಜ್ ಕ್ರೀಡಾಕೂಟ ಉದ್ಘಾಟಿಸಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ರಿಂದ ರೋಟರಿ ಸದಸ್ಯರ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನುಡಿಯುತ್ತ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಮಾಡ ರೋಟರಿ ಬೆಳ್ಮಣ್ಣಿನ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ೫ರ ಸಾಹಯಕ ಗವರ್ನರ್ ರೋ| ನವೀನ್ ಅಮಿನ್ ಕ್ರೀಡಾಕೂಟದ ನಿಯಮಗಳ ಬಗ್ಗೆ ವಿವರಿಸಿದರು.

ವಲಯ ಸೇನಾನಿ ರೋ| ಸುರೇಶ್ ರಾವ್ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾರ್ಮಿಕವಾಗಿ ನುಡಿದರು. ವಲಯ ೫ರ ಕ್ರೀಡಾ ಸಂಯೋಜಕ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕ್ರೀಡಾಕೂಟದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಬೆಳ್ಮಣ್ಣಿನ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೋ| ವಿಘ್ನೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.