Updated News From Kaup
ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆ

Posted On: 26-07-2025 08:11PM
ಕಾಪು : ಅಮೆರಿಕಾದ ಬೋಸ್ಟನ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ (NLC) ಆಶ್ರಯದಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರ (ಸ್ಪೀಕರ್) ನೇತೃತ್ವದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅವಕಾಶ ಪಡೆದಿದ್ದಾರೆ.
ಕರ್ನಾಟಕದ ವಿಧಾನಸಭೆಯ 224 ಸದಸ್ಯರುಗಳಲ್ಲಿ 14 ಶಾಸಕರು ಆಯ್ಕೆಯಾಗಿದ್ದು ಅದರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕೂಡ ಓರ್ವರಾಗಿರುತ್ತಾರೆ.
ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನೀತಿ ನಿರೂಪಕರು ಪಾಲ್ಗೊಳಲಿದ್ದು, ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗೋಷ್ಠಿಗಳಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಆಟಗಾರ ತನುಷ್ ಕೋಟ್ಯಾನ್ ಕಾಪು ಶ್ರೀ ಹೊಸ ಮಾರಿಗುಡಿ ಭೇಟಿ

Posted On: 26-07-2025 08:05PM
ಕಾಪು : ಭಾರತೀಯ ಕ್ರಿಕೆಟ್ ಆಟಗಾರ, ಮುಂಬೈ ತಂಡದಲ್ಲಿ ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಟಗಾರನಾಗಿ ಗುರುತಿಸಿಕೊಂಡಿದ್ದ ಕಾಪುವಿನ ಪಾಂಗಾಳ ಮೂಲದ ತನುಷ್ ಕೋಟ್ಯಾನ್ ಇಂದು ಕಾಪು ಮಾರಿಯಮ್ಮನ ದರುಶನ ಪಡೆದರು.
ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಬಾಲ್ಯದಿಂದಲೂ ಇಲ್ಲಿಗೆ ಬರುತ್ತಿದ್ದೇನೆ, ಭಾರತೀಯ ತಂಡದಲ್ಲಿ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ, ದೇವಳದ ನವನಿರ್ಮಾಣ ಬಹಳಷ್ಟು ಸುಂದರವಾಗಿ ಮೂಡಿಬಂದಿದೆ, ದೇವಳದ ಕೆತ್ತನೆಗಳು ಮನಸೂರೆಗೊಳ್ಳುತ್ತವೆ, ಮುಂಬರುವ ಟೆಸ್ಟ್ ಪಂದ್ಯಾಟದಲ್ಲಿ 14 ಆಟಗಾರರಲ್ಲಿ ನಾನು ಕೂಡ ಒಬ್ಬ, ಈ ಪಂದ್ಯಾಟದಲ್ಲಿ ನನಗೂ ಕೂಡ ಅವಕಾಶ ಸಿಗಬೇಕೆಂದು ಶ್ರೀದೇವಿಯಲ್ಲಿ ಪ್ರಾರ್ಥಿಸಿದೆ ಎಂದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು ದಂಡತೀರ್ಥ ಪ.ಪೂ. ಕಾಲೇಜು : ಪ್ರತಿಭಾನ್ವೇಷಣ ಕಾರ್ಯಕ್ರಮ

Posted On: 26-07-2025 04:45PM
ಕಾಪು : ಇಲ್ಲಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣ ಕಾರ್ಯಕ್ರಮವು ಶನಿವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ರಂಗಭೂಮಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸಬೇಕು. ಪ್ರಸ್ತುತ ವಿದ್ಯಾರ್ಥಿ ಸಮೂಹ ದುಶ್ಚಟಗಳಲ್ಲಿ ತೊಡಗಿ ತಮ್ಮ ಸುಂದರ ಭವಿಷ್ಯವನ್ನು ನಾಶಪಡಿಸುತ್ತಿರುವುದು ದುಃಖಕರ. ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನದ ಪರಿಪೂರ್ಣತೆಯ ಕಡೆಗೆ ಸಾಗಬೇಕೆಂಬ ಸಂದೇಶವನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಾಗ ನೈಜ ಪ್ರತಿಭೆ ಅರಳುತ್ತದೆ. ಶಾಲಾ-ಕಾಲೇಜುಗಳಲ್ಲಿ ಮೂಡಿಬಂದ ಉತ್ತಮ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ವ್ಯಕ್ತವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್ ಮಾತನಾಡಿದರು.
ಸಮಾರಂಭದಲ್ಲಿ ಆಡಳಿತಮಂಡಳಿಯ ಸದಸ್ಯೆ ಪನ್ನಾ ಪಿ. ಶೆಟ್ಟಿ, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ಉಪಸ್ಥಿತರಿದ್ದರು. ಕಾಲೇಜು ನಾಯಕ ಚಿರಾಗ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ನುವೈಮಾ ಮತ್ತು ಮಂತಸಾ ನಿರೂಪಿಸಿದರು. ವಿದ್ಯಾರ್ಥಿ ಸಫ್ವಾನ್ ವಂದಿಸಿದರು.
ಇನ್ನಂಜೆ ಎಸ್ ವಿ ಎಚ್ ಪ.ಪೂ.ಕಾಲೇಜಿನ ನವೀಕೃತ ಭೌತಶಾಸ್ತ್ರ ಪ್ರಯೋಗಾಲಯ ಉದ್ಘಾಟನೆ

Posted On: 26-07-2025 01:51PM
ಕಾಪು : ಎಸ್.ವಿ.ಹೆಚ್ ಪದವಿ ಪೂರ್ವ ಕಾಲೇಜು ಇನ್ನಂಜೆಯ ನವೀಕೃತ ಭೌತಶಾಸ್ತ್ರ ಪ್ರಯೋಗಾಲಯವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿ ಡಾ||ಲಕ್ಷೀಕಾಂತ್ ಭಟ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಭಾರತ ಎಲ್ಲಾ ಕ್ಷೇತ್ರಗಳಲ್ಲೂ ವೇಗವಾಗಿ ಬೆಳೆಯುತ್ತಿದ್ದು ಇದಕ್ಕೆ ಪೂರಕವಾಗಿ ಕೌಶಲ್ಯಗಳನ್ನು ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಜೊತೆಗೆ ರೂಢಿಸಿಕೊಳ್ಳಬೇಕು, ಅಂಕಗಳ ಜೊತೆಗೆ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬಳಸಿದಾಗ ಮಾತ್ರ ಅತ್ಯುತ್ತಮ ಅವಕಾಶಗಳನ್ನು ಪಡೆದುಕೊಳ್ಳಬಹುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜೀವನದಲ್ಲಿ ಸ್ವಷ್ಟವಾದ ಗುರಿಯನ್ನು ಇಟ್ಟು ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸೋದೆ ವಾದಿರಾಜ ಪ್ರತಿಷ್ಠಾನ ಶಿಕ್ಷಣ ಸಂಸ್ಥೆಗಳು ಉಡುಪಿ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ||ರಾಧಕೃಷ್ಣ ಎಸ್. ಐತಾಳ್ ಮಾತನಾಡಿ, ಉಳಿದ ಎಲ್ಲಾ ಪ್ರಯೋಗಲಾಯಗಳನ್ನು ಕೂಡ ನವೀಕರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕಲಿಕೆಯ ಪೂರಕ ವಾತಾವರಣವನ್ನು ಸೃಷ್ಠಿಸುವುದು ಮಾತ್ರವಲ್ಲದೇ ಹೊಸತನವನ್ನು ಮೈಗೂಡಿಸಿಕೊಳ್ಳುವ ಅಟಲ್ ಟಿಂಕರಿಂಗ್ ಲ್ಯಾಬನ್ನು ಕೂಡ ಸದ್ಯದಲ್ಲಿಯೇ ಪ್ರಾರಂಭಿಸುವ ಯೇಜನೆ ಇದೆ. ಜೊತೆಗೆ ಹೊಸ ಲೈಬ್ರೆರಿ, ಆಧುನಿಕ ಸೌಕರ್ಯಗಳಿರುವ ತರಗತಿ ಕೊಠಡಿಗಳು, ನವೀಕೃತ ಆಟದ ಮೈದಾನ ಮಂತಾದ ಹಲವಾರು ಯೋಜನೆಗಳನ್ನು ಅನುಷ್ಠುನಗೊಳಿಸಲು ಕ್ರಿಯಯೋಜನೆ ಸಿದ್ದವಾಗುತ್ತಿದೆ. ಇದನ್ನು ಅನುಷ್ಠಾನಗೊಳಿಸಲು ಹಳೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದರು.
ಸಂಸ್ಥೆಯ ಪ್ರಾಚಾರ್ಯ ರಾಜೇಂದ್ರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಭೌತಶಾಸ್ತ್ರ ಉಪನ್ಯಾಸಕಿ ರಾಯ್ಲನ್ ಕ್ಯಾಸ್ತಲಿನೊ ಸಹಕರಿಸಿದರು. ಕುಮಾರಿ ಚೈತ್ರಾ ನಿರೂಪಿಸಿದರು. ಗೌರಿಶಂಕರ್ ಸ್ವಾಗತಿಸಿದರು. ಕುಮಾರಿ ದೀಕ್ಷಾ ವಂದಿಸಿದರು.
ಜುಲೈ 27ರಂದು ಅಯೋಜಿಸಿರುವ ಗಾನ ಕೋಗಿಲೆ - 2025 ಮುಂದೂಡಿಕೆ

Posted On: 25-07-2025 05:42PM
ಕಾಪು : ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ವತಿಯಿಂದ ಜುಲೈ 27ರಂದು ಅಯೋಜಿಸಿರುವ "ಗಾನ ಕೋಗಿಲೆ - 2025" ದ.ಕ.ಮತ್ತು ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವಾಗಿ ಪ್ರಕಟಿಸಲಾಗುವುದು ಎಂದು ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಆಡಳಿತ ನಿರ್ದೇಶಕರಾದ ಸುಶ್ಮಿತಾ ಎರ್ಮಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಹಲಸು ಮೇಳಕ್ಕೆ ಚಾಲನೆ

Posted On: 25-07-2025 05:32PM
ಕಾಪು : ಸಂಸ್ಕೃತಿ ಈವೆಂಟ್ಸ್ ಪಸ್ತುತಿಯಲ್ಲಿ ಅನಿಲ್ ಕುಮಾರ್ ಸಾರಥ್ಯದಲ್ಲಿ ಶುಕ್ರವಾರ ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಜರಗಿದ ಬೃಹತ್ ಹಲಸು ಮೇಳವನ್ನು ಕಾಪು ತಾಲ್ಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಮೇಳಗಳ ಆಯೋಜನೆಯಿಂದ ನಮ್ಮ ಊರಿನ ವ್ಯಾಪಾರಿಗಳ ವ್ಯಾಪಾರಕ್ಕೆ ಪ್ರೋತ್ಸಾಹಕವಾಗುವುದರ ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಲಿದೆ. ಕಾಪು ಹಲಸು ಮೇಳದ ಉದ್ದೇಶ ಪ್ರಶಂಸನೀಯ ಎಂದು ಹೇಳಿದರು.
ಕಾಪು ಶ್ರೀ ಹಳೆ ಮಾರಿಗುಡಿ ಮೊಕ್ತೇಸರ ಪ್ರಸಾದ್ ಶೆಣೈ, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಪ್ರಗತಿಪರ ಕೃಷಿಕ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿದರು.
ಈ ಸಂದರ್ಭ ಉದ್ಯಮಿ ಪ್ರಭಾಕರ ಪೂಜಾರಿ, ಯೋಗೀಶ್ ಶೆಟ್ಟಿ ಬಾಲಾಜಿ, ವೈ ಸುಕುಮಾರ್, ಉದಯ ಶೆಟ್ಟಿ ಇನ್ನಾ, ಹಳೆ ಮಾರಿಗುಡಿ ಟ್ರಸ್ಟಿ ರಾಮ ನಾಯಕ್, ಜೆಸಿಐ ಕಾಪು ಅಧ್ಯಕ್ಷೆ ಅನಿತಾ ಹೆಗ್ಡೆ ಉಪಸ್ಥಿತರಿದ್ದರು. ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು.
ಕುಂತಳನಗರ : ಬೃಹತ್ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Posted On: 25-07-2025 11:07AM
ಕಟಪಾಡಿ : ರೋಟರಿ ಕ್ಲಬ್ ಮಣಿಪುರ,ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ರೆಡ್ ಕ್ರಾಸ್ ಕುಂದಾಪುರ, ಬ್ಲಡ್ ಬ್ಯಾಂಕ್ ಮಿಷನ್ ಆಸ್ಪತ್ರೆ (ಲೋಂಬಾಡ್೯ ಮೆಮೋರಿಯಲ್) ಮತ್ತು ಕುಂತಳನಗರ ಸಂತ ಅಂತೋನಿ ಚರ್ಚ್ ಇದರ ಸಂಯುಕ್ತ ಆಶ್ರಯದಲ್ಲಿ ಚರ್ಚಿನ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚರ್ಚಿನ ಧರ್ಮಗುರು ಸ್ಟ್ಯಾನ್ಲಿ ಲೋಬೋ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಉತ್ತಮವಾದ ಆಹಾರ ಮತ್ತು ಜೀವನ ಶೈಲಿಯಿಂದ ರೋಗ ಬರುದನ್ನು ದೂರ ಮಾಡಬಹುದು. ಈ ನಿಟ್ಟಿನಲ್ಲಿ ಈ ರೀತಿ ಶಿಬಿರಗಳಿಂದ ನಮ್ಮ ಆರೋಗ್ಯ ತಪಾಸಣಿ ಮಾಡಲು ಅನುಕೂಲವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಜಯಕರ ಶೆಟ್ಟಿ, ಚರ್ಚಿನ ಉಪಾಧ್ಯಕ್ಷ ಸ್ಕ್ಯಾನಿ ಡಿಸೋಜಾ, ರೋಟರಿ ಕ್ಲಬ್ ಮಣಿಪುರ ಅಧ್ಯಕ್ಷ ರಾಜೇಶ್ ನಾಯ್ಕ, ಕಾಯ೯ದಶಿ೯ ಎ.ಜಿ. ಡಿಸೋಜ, ವೈದ್ಯರುಗಳಾದ ಡಾ. ಅಜು೯ನ್ ಬಲ್ಲಾಳ, ಡಾ.ಪವಿತ್ರಾ, ಡಾ. ವೈಭವ್ ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಮುಂತಾದವರಿದ್ದರು.
ರೋಟರಿ ಮಾಜಿ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ಆಶಾ ಸಿಕ್ವೇರಾ ವಂದಿಸಿದರು.
ಜುಲೈ 27 : ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ವತಿಯಿಂದ ಕೋಟಿ ಚೆನ್ನೆಯೆರ್ ನಾಟಕ ಪ್ರದರ್ಶನ

Posted On: 25-07-2025 11:02AM
ಉಡುಪಿ : ಕಲಿಯುಗದ ಕಾರ್ಣಿಕ ಪುರುಷರಾದ ಕೋಟಿ ಚೆನ್ನಯ್ಯರ ಇತಿಹಾಸ ಸಾರುವ ಬಹು ನಿರೀಕ್ಷಿತ ಮತ್ತು ಉಚಿತ ಪ್ರವೇಶವಿರುವ 'ಕೋಟಿ ಚೆನ್ನಯೆರ್' ನಾಟಕವು ಜುಲೈ 27ರ ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಉದ್ಯಾವರದ ಕ್ಸೇವಿಯರ್ ಸಭಾಭವನದಲ್ಲಿ ಜರುಗಲಿದೆ ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆಯ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಧರ್ಮ ಚಾವಡಿ ಚಿತ್ರ ನಿರ್ದೇಶಕರ ಸಾರಥ್ಯದ ಕೋಟಿ ಚೆನ್ನಯೆರ್ ನಾಟಕವು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನ ಖ್ಯಾತ ನಾಟಕ ತಂಡ ಪ್ರಕೃತಿ ಕಲಾವಿದೆರ್ ಕುಡ್ಲ ಇವರ ಅಭಿನಯದಲ್ಲಿ ಜರುಗಲಿದ್ದು, ಕಲಾಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.
ಬಹಳಷ್ಟು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜಕತ್ವ ವಹಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊoಡಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ, ಈ ಸಂಘಟನೆಯು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಂದಿದೆ. ಶೂದ್ರ ಶಿವ, ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ, ಶಂಭು ಕಲ್ಲು ಕ್ಷೇತ್ರ ಮಹಾತ್ಮೆ ಮುಂತಾದ ಇತಿಹಾಸ ಹಿನ್ನೆಲೆಯ ಕಾರ್ಯಕ್ರಮ ಮಾತ್ರವಲ್ಲದೆ, ತುಳು ನಾಟಕ, ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶವನ್ನು ಪ್ರತಿ ಕಾರ್ಯಕ್ರದಲ್ಲಿ ಸಂಬಂಧಪಟ್ಟ ಸಂಪನ್ಮೂಲ ಅತಿಥಿಗಳ ಮೂಲಕ ಗುರು ಸಂದೇಶ ಎಂಬ ಹೆಸರಿನಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿದೆ.
2025ನೇ ಸಾಲಿನಲ್ಲಿ, ಕಳೆದ 7 ತಿಂಗಳಲ್ಲಿ ಮೂರನೇ ಬಾರಿಗೆ ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವ ಯುವ ವೇದಿಕೆಯು, ಇದೀಗ 'ಬಿರ್ಧ್ ದ ಬೀರೆರ್ ಕೋಟಿ ಚೆನ್ನಯೆರ್' ಎಂಬ ನಾಟಕ ಪ್ರದರ್ಶನಕ್ಕೆ ಸಿದ್ದಗೊಂಡಿದೆ. ಪ್ರಖ್ಯಾತ ಕಲಾವಿದರಿಂದ ಕೂಡಿದ, ಭಕ್ತಿ ಪ್ರಧಾನ ನಾಟಕಕ್ಕೆ ಗಣ್ಯಾತಿ ಗಣ್ಯರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಕಲಾಭಿಮಾನಿಗಳು ಬಹು ನಿರೀಕ್ಷೆಯ ಈ ನಾಟಕದ ಪ್ರಯೋಜನವನ್ನು ಪಡೆಯಲು ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಕಾಪು ಯುವವಾಹಿನಿ ಘಟಕದ ವತಿಯಿಂದ ಆಟಿಡೊಂಜಿ ದಿನ -2025 ಕಾರ್ಯಕ್ರಮ

Posted On: 24-07-2025 01:08PM
ಕಾಪು : ಆಟಿ ಆಚರಣೆಗಳು ಕರಾವಳಿಯ ಗತ ಅಸ್ತಿತ್ವದ ಜೊತೆಗೆ ಆರೋಗ್ಯದ ಬಗೆಗೂ ಗಮನ ನೀಡುವಂತೆ ನಮಗೆ ಪ್ರೇರೇಪಿಸುತ್ತದೆ. ಆಟಿಯ ಬಗ್ಗೆ ಕಿರಿಯರಿಗೆ ಹಿರಿಯರು ತಿಳಿ ಹೇಳುವ ಮೂಲಕ ನಾವು ಆಟಿ ಆಚರಣೆಗೆ ಮಹತ್ವ ನೀಡಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಹೇಳಿದರು. ಅವರು ಕಾಪು ಯುವವಾಹಿನಿ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ -2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರಭಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಸುನೀಲ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸಮಾಜದ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಪು ಘಟಕದ ಅಧ್ಯಕ್ಷ ಸೂರ್ಯನಾರಾಯಣ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಸೂರ್ಯನಾರಾಯಣ ಸುವರ್ಣ ಸ್ವಾಗತಿಸಿದರು. ದೀಪಕ್ ಕುಮಾರ್ ಎರ್ಮಾಳು ಪ್ರಸ್ತಾವಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ವಂದಿಸಿದರು.
ಮೂಳೂರು : 10ನೇ ವರ್ಷದ ಆಟಿ ಕಷಾಯ ವಿತರಣಾ ಕಾರ್ಯಕ್ರಮ

Posted On: 24-07-2025 11:55AM
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು ಹಾಗೂ ಸಂಜೀವ ಆರ್ ಅಮೀನ್ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 10ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಉಚಿತ ಕಷಾಯ ವಿತರಣಾ ಕಾರ್ಯಕ್ರಮ ಗುರುವಾರ ಮೂಳೂರು ಸರಕಾರಿ ಸಂಯುಕ್ತ ಶಾಲಾ ಆವರಣದಲ್ಲಿ ಜರಗಿತು.
ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ ಮಾತನಾಡಿ, ತುಳುನಾಡಿನ ಆಚರಣೆ, ಆಹಾರ ಪದ್ಧತಿಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದೆ. ಆಟಿ ಅಮವಾಸ್ಯೆಯಂದು ಸೇವಿಸುವ ಆಟಿ ಕಷಾಯವು ಇದರಲ್ಲಿ ಒಂದಾಗಿದೆ. 16 ಯುವಕರು ಸೇರಿ ಈ ಬಾರಿ 50 ಲೀಟರ್ ಕಷಾಯ ತಯಾರಿಸಿ ಸುಮಾರು 850 ಜನರು ಇದರ ಸದುಪಯೋಗ ಪಡೆಯಲು ಅನುಕೂಲವಾಗಿದೆ. ಮೂಳೂರು ಸೇರಿದಂತೆ ಎರ್ಮಾಳಿನಿಂದ ಕೈಪುಂಜಾಲುವರೆಗೆ ಜನರು ಆಗಮಿಸುತ್ತಾರೆ ಎಂದರು.
ಈ ಸಂದರ್ಭ ಟ್ರಸ್ಟಿ ಪ್ರತೀಕ್ ಸುವರ್ಣ, ನಾಗೇಶ್ ಅಮೀನ್, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಹವ್ಯಾಸ್ ಪೂಜಾರಿ, ಅವೀಶ್ ಅಂಚನ್, ಶಲಿನ್ ಅಂಚನ್, ತನೀಶ್ ಎಸ್ ಪೂಜಾರಿ, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.