Updated News From Kaup

ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿದೆ : ಪ್ರಸನ್ನ ಎಮ್.ಎಸ್

Posted On: 14-04-2025 07:26AM

ಮುಲ್ಕಿ : ವಿವಿಧ ರೀತಿಯ ಮಾದಕ ವಸ್ತುಗಳು ಬಳಕೆಯಾಗುತ್ತಿದ್ದು, ಮಾದಕ ವಸ್ತುಗಳಿಗೆ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತಿದ್ದಾರೆ. ಅದರಲ್ಲಿಯೂ ಇಂಜಿನಿಯರ್ ಹಾಗೂ ವ್ಯೆದ್ಯಕೀಯ ವಿದ್ಯಾರ್ಥಿಗಳನ್ನು ಮಾದಕ ಮಾರಾಟಗಾರರು ಗುರಿಯಾಗಿಸಿದ್ದಾರೆ. ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿರುವುದು ಆಘಾತಕಾರಿದೆ. ನಮ್ಮ ರಾಜ್ಯ ಮಾದಕ ಮುಕ್ತ ರಾಜ್ಯವಾಗಲು ಎಲ್ಲರೂ ಸಹಕರಿಸಬೇಕು. ತಲಪಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗುವ ಅಪಘಾತದಿಂದ ಒಂದು ವರ್ಷಕ್ಕೆ ಆರುನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಬೇರೆ ಬೇರೆ ಕಾರಣದಿಂದ ಸಾವನ್ನಪ್ಪುವರ ಸಂಖ್ಯೆಗಿಂತ ದುಪ್ಪಟ್ಟು ಆಗಿದೆ. ಆದ್ದರಿಂದ ರಸ್ತೆ ನಿಯಮಗಳನ್ನು ತಮ್ಮ ಜೀವದ ರಕ್ಷಣೆಗಾಗಿ ಪಾಲಿಸಿ ಯಾವುದೇ ಅಧಿಕಾರಿಗಳ ಹೆದರಿಕೆಗೆ ಅಲ್ಲ ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ವಿಜಯ ಕಾಲೇಜು ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ.,ರೆಡ್ ಕ್ರಾಸ್ , ರೋವಸ್೯ & ರೇಂಜರ್ ಸಂಯುಕ್ತಾಶ್ರಯದಲ್ಲಿ ರಚನ್ ಸಾಲ್ಯಾನ್ ನೇತೃತ್ವದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಮುಲ್ಕಿ ಠಾಣಾಧಿಕಾರಿ ಅನಿತಾರವರು ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ, ವಾಹನ ಚಲಿಸುವುದು ಕಂಡು ಬರುತ್ತಿದೆ. ಇದರಿಂದ ಪ್ರತಿದಿನ ರಸ್ತೆ ಅಪಘಾತಗಳು ಜಾಸ್ತಿಯಾಗುತ್ತಿದೆ. ರಸ್ತೆ ದಾಟುವಾಗ ಕೂಡಾ ನಿಯಮಗಳನ್ನು ಪಾಲಿಸದಿರುವುದು, ಮಾದಕ ವಸ್ತುಗಳನ್ನು ಮತ್ತು ಮದ್ಯಪಾನ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಜಾಸ್ತಿ ಯಾಗಿದೆ. ಇಂತಹ ಚಟಗಳಿಗೆ ಬಲಿಯಾಗದೆ, ಶಿಸ್ತುಬದ್ಧವಾಗಿ ಬಾಳಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು.

ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಸಂಸ್ಥಾಪಕ ಡಾ.ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ರೋಟರಿ ಪೂರ್ವಾಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಪದಾಧಿಕಾರಿಗಳಾದ ಶಶಾಂಕ್ ಸುವರ್ಣ, ಸೌಮಿಕ್ ಶ್ರೀಯಾನ್, ವಿಜೇತ್ ಆಚಾರ್ಯ, ಸಚಿನ್ ಕುಂದರ್, ಪ್ರತೀಕ್ ಶೆಟ್ಟಿ ಕಾರ್ಕಳ, ಶಶಾಂಕ್ ಆಚಾರ್ಯ, ಸುಜನ್ ಕೋಟ್ಯಾನ್ ಹೆಜ್ಮಾಡಿ, ಯಶ್ ಅಮೀನ್ ಹೆಜ್ಮಾಡಿ, ಅದಿತ್ಯ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಕುಮಾರಿ ಸ್ವಾಗತಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕ ಅಭಿಷೇಕ್ ವಂದಿಸಿದರು. ಲಾವಣ್ಯ ನಿರೂಪಿಸಿದರು.

ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ ಒಂತಿಬೆಟ್ಟು ಹಿರಿಯಡ್ಕ : ಪ್ರಥಮ ವಾರ್ಷಿಕೋತ್ಸವ

Posted On: 14-04-2025 07:11AM

ಬಂಟಕಲ್ಲು : ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ (ರಿ.) ಒಂತಿಬೆಟ್ಟು ಹಿರಿಯಡ್ಕ ಇದರ ಪ್ರಥಮ ವಾರ್ಷಿಕೋತ್ಸವ ಜರಗಿತು.

ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವಲ್ಲಿ ಮಾತೆಯರು ಮಹತ್ವದ ಪಾತ್ರವನ್ನು ವಹಿಸಬೇಕು. ರಾಮಾಯಣ, ಮಹಾಭಾರತ ನಮ್ಮ ಜೀವನದ ಉಸಿರಾಗಬೇಕು ಎಂದರು.

ಗೀತಾ ನೃತ್ಯ ರೂಪಕ ಕಾರ್ಯಕ್ರಮ ನೀಡಿದ ಶ್ರೀ ಯತಿಗುರುರಾಯ ರೂಪಕ ತಂಡ 92ನೇ ಹೇರೂರು ಇದರ ನಿರ್ದೇಶಕಿಯಾಗಿರುವ ಅನಿತಾ ಉಮೇಶ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿವಿಧ ಸಾಧಕರು ಉಪಸ್ಥಿತರಿದ್ದರು. ಹೇರೂರು ಮಾಧವಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗಿರಬೇಕು : ರಾಘವೇಂದ್ರ ಪ್ರಭು ಕವಾ೯ಲು

Posted On: 14-04-2025 07:04AM

ಉಡುಪಿ : ಒಬ್ಬ ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗುವುದು ಅಷ್ಟೇ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು. ಅವರು ಅಜ್ಜರಕಾಡು ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ಶಿಬಿರದಲ್ಲಿ ಮಾತನಾಡಿದರು.

ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂದು ಉತ್ತಮ ಭಾಷಣಕಾರರಿಗೆ ಸಮಾಜದಲ್ಲಿ ಬೇಡಿಕೆ ಇದೆ. ನಾವೆಲ್ಲರೂ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾಥಿ೯ಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುದ ರೊಂದಿಗೆ ವಿವಿಧ ರೀತಿಯ ಉತ್ತಮ ಹವ್ಯಾಸಗಳನ್ನು ರೂಢಿಸಬೇಕು ಎಂದರು.

ಈ ಸಂದಭ೯ದಲ್ಲಿ ಬಿ.ಕೆ ಸುಮಾ ಮತ್ತು ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ಆಯ್ಕೆ

Posted On: 14-04-2025 07:00AM

ಉಡುಪಿ : ಕೋಟಾದ "ಕಾರಂತ ಥೀಮ್ ಪಾರ್ಕ್"ನಲ್ಲಿ ಮೇ 4 ರಂದು ನಡೆಯಲಿರುವ 5 ನೇ ವರ್ಷದ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಉಳ್ತೂರು ಅಣ್ಣಯ್ಯ ಕುಲಾಲ್ ರವರು ಆಯ್ಕೆಯಾಗಿದ್ದಾರೆ.

ತೆಕ್ಕಟ್ಟೆ ಸಮೀಪದ, ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಮಂಗಳೂರಿನ ಪ್ರತಿಷ್ಠಿತ ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಐಎಮ್ಎ ಕರ್ನಾಟಕದ ನಿಯೋಜಿತ ರಾಜ್ಯ ಅಧ್ಯಕ್ಷರು. ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು.ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮನಪಾ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಮಂಗಳಾದೇವಿ ಹಾಗೂ ಪಡೀಲ್ ಪರಿಸರದಲ್ಲಿ ಕಳೆದ 3 ದಶಕಗಳಿಂದ "ಕುಲಾಲ್ ಹೆಲ್ತ್ ಕೇರ್ ಸೆಂಟರ್" ಮತ್ತು "ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್" ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ "ಕನ್ನಡಿಕಟ್ಟೆ"ಗೆ ಇವರದೇ ನೇತೃತ್ವ. ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರಕವಿ "ಗೋವಿಂದ ಪೈ ವೃತ್ತ", ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ ಇವರಾಗಿದ್ದಾರೆ. ಮಂಗಳೂರಲ್ಲಿ "ಕುಡ್ಲಂಗಿಪ್ಪ ಕುಂದಾಪ್ರ" ಬಳಗದ ಕ್ರಿಯಾ ಶೀಲ ವ್ಯಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದಾರೆ. ಪ್ರತಿಷ್ಠಿತ "ದೇವರಾಜು ಅರಸು" ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವ್ಯಕ್ತಿ.

ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ. ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಲೇಖನಗಳುಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.

ಪಡುಬಿದ್ರಿ : ರಜಾ-ಮಜಾ -2025 ಶಿಬಿರದ ಉದ್ಘಾಟನೆ

Posted On: 14-04-2025 06:45AM

ಪಡುಬಿದ್ರಿ : ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ರಜಾ ಮಜಾ ಶಿಬಿರಗಳು ಪೂರಕವಾಗಿದೆ. ಮಕ್ಕಳನ್ನು ಸಮಾಧಾನಪಡಿಸಲು ಭಯ ಮೂಡಿಸುವ ಕಾರ್ಯವನ್ನು ಮಾಡಿದರೆ ಮಕ್ಕಳ ಮನಸ್ಸಿಗೆ ತೊಂದರೆಯುಂಟಾಗಿ ಕ್ರಮೇಣ ಜೀವನದಲ್ಲಿ ಭಯವನ್ನು ಎದುರಿಸಲು ಅಶಕ್ತರಾಗಿರುತ್ತಾರೆ. ಆದ್ದರಿಂದ ಮಕ್ಕಳನ್ನು ಸದಾ ಕ್ರಿಯಾಶೀಲ ರಾಗುವಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ಓಂಕಾರ ಕಲಾ ಸಂಗಮದ ವತಿಯಿಂದ ಅಯೋಜಿಸಿರುವ 4 ನೇ ವರ್ಷದ "ರಜಾ ಮಜಾ-2025" ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳ ಕೆಟ್ಟ ಆಹಾರ ಪದ್ದತಿಯಿಂದ ವಯೋ ಸಹಜವಾಗಿ ಬರುವ ಕಾಯಿಲೆಗಳು ಇವತ್ತು ಚಿಕ್ಕ ಮಕ್ಕಳಲ್ಲಿ ಕಾಣಿಸುತ್ತಿದೆ. ಆದ್ದರಿಂದ ಮಕ್ಕಳು ಆರೋಗ್ಯ ಯುಕ್ತ ಆಹಾರವನ್ನು ಮಾತ್ರ ಉಪಯೋಗಿಸ ಬೇಕು. ಮನಸ್ಸಿಗೆ ಜಾಸ್ತಿ ಒತ್ತಡ ಹೇರದೆ ಮಕ್ಕಳನ್ನು ಮಕ್ಕಳಂತೆ ಪೋಷಕರು ನೋಡಿಕೂಳ್ಳಬೇಕು ಎಂದು ಪ್ರಾಥಮಿಕ ಅರೋಗ್ಯ ಕೇಂದ್ರದ ವೃೆದ್ಯಾಧಿಕಾರಿ ಡಾ. ರಾಜಶ್ರಿ ಕಿಣಿ ಹೇಳಿದರು.

ಸನ್ಮಾನ : ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್. ಎಸ್ ರವರನ್ನು ಸನ್ಮಾನಿಸಲಾಯಿತು.

ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.‌ ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ರಾಮಾಂಜಿ ಉಡುಪಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದೆ ಬೇಬಿ ಸಾಂಚಿ, ಸಂಸ್ಥೆಯ ಪಾಲುದಾರರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಅದ್ವಿತ್ ಕುಮಾರ್, ಉಪಸ್ಥಿತರಿದ್ದರು. ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ದೀಪಾಶ್ರಿ ಕರ್ಕೇರ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೌಡರಿನ ಹೊಸ ಬೆಳಕು ಆಶ್ರಮಕ್ಕೆ ಪಡುಬಿದ್ರಿ ನಟರಾಜ್ ಪಿ.ಎಸ್ ನೇತೃತ್ವದಲ್ಲಿ ಭಜನೆ, ದಿನಸಿ ವಸ್ತುಗಳ ಹಸ್ತಾಂತರ

Posted On: 13-04-2025 03:04PM

ಪಡುಬಿದ್ರಿ : ಭಜನೆಯಿಂದ ಸಾಕ್ಷತ್ ಭಗವದ್ ಸಾಕ್ಷಾತ್ಕಾರವಾಗುವುದು.‌ ಮನ: ಶಾಂತಿ ದೊರಕುವುದು. ಇಂದಿನ ಯುವ ಪೀಳಿಗೆ ಭಜನೆಯಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮನೆ ಮನೆಗಳಲ್ಲಿ ನಡೆಯುತಿದ್ದ ಭಜನೆಗಳು ನಶಿಸಿ ಹೋಗಿದೆ‌‌‌‌. ನಮ್ಮ ಸಂಸ್ಕೃತಿ, ಸಂಸ್ಕಾರಗಳು ಬೆಳೆಯ ಬೇಕಾದರೆ ಯುವ ಜನತೆ ಭಜನೆಯತ್ತ ಒಲವು ತೋರಬೇಕಾಗಿದೆ ಎಂದು ನಿವೃತ್ತ ಭಾರತೀಯ ನೌಕಾದಳ ಸೇನಾಧಿಕಾರಿ ನಟರಾಜ್ ಪಿ.ಎಸ್ ಹೇಳಿದರು.‌ ಅವರು ಕೌಡರಿನ ಹೊಸ ಬೆಳಕು ಆಶ್ರಮದಲ್ಲಿ ರಾಮ ನವಮಿಯ ಅಂಗವಾಗಿ ನಡೆಸಿದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಂತರ ನಟರಾಜ್ ಪಿ.ಎಸ್ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. 50 ಕೆ.ಜಿ ಅಕ್ಕಿ , 10 ಕೆ.ಜಿ. ಬೆಲ್ಲ , 10 ಕೆ.ಜಿ ಅವಲಕ್ಕಿ ಮತ್ತು 10 ಕೆ.ಜಿ. ಶಾವಿಗೆಯನ್ನು ಅಶ್ರಮಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದರಾದ ಸುಶ್ಮಿತಾ ಎರ್ಮಾಳು, ಸುಪ್ರೀತಾ ಕೋಟ್ಯಾನ್ ಪಾಂಗಾಳ, ಶ್ವೇತಾ ಪಾಲನ್ ಪಾಂಗಾಳ ಮತ್ತು ಹಾರ್ಮೋನಿಯಂ ವಾದಕ ಸುನಿಲ್ ಉಚ್ಚಿಲ, ತಬಲ ವಾದಕ ಸತೀಶ್ ಎರ್ಮಾಳು, ಸಕ್ಷನ್ ಸಾಲ್ಯಾನ್, ಹೊಸ ಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್ ಉಪಸ್ಥಿತರಿದ್ದರು.

ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ, ಜೆ ಸಿ ಐ ಉಪ್ಪುಂದ : ಉಚಿತ ಯೋಗ ಶಿಬಿರ ಸಂಪನ್ನ

Posted On: 13-04-2025 02:55PM

ಉಡುಪಿ : ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ ಹಾಗೂ ಜೆ ಸಿ ಐ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಎ.3ರಿಂದ 12ರವರೆಗೆ ಜರಗಿದ ಎರಡನೇ ವರ್ಷದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಜರಗಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಜೋಗಿ ಸಮಾಜದ ಅಧ್ಯಕ್ಷರು ಆಗಿರುವ ಎಚ್ಎಸ್ ರಮೇಶ್ ಜೋಗಿ ಹಾಗೂ ಸರಕಾರಿ ಆಯುಷ್ಕ ಹೆಚ್ಚಿಗೆ ಸಲಹೆದ ವೈದ್ಯಾಧಿಕಾರಿ ಆಗಿರುವಂತ ಡಾ. ವೀಣಾ ಕಾರನ್ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋವಿಂದ ಬಿ ಹಾಗೂ ಶಿಕ್ಷಕರಾಗಿರುವ ಹರೀಶ್ ಜೋಗಿ ಹಾಗೂ ಜೋಗಿಮನೆ ಟ್ರಸ್ಟ್ ಇದರ ಅಧ್ಯಕ್ಷರಾದ ವಸಂತ್ ಜೋಗಿ ಕಾರ್ಯಕ್ರಮದ ಸಭಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವ ಯೋಗ ಶಿಕ್ಷಕರಾಗಿರುವ ಮಂಜುನಾಥ್ ದೇವಾಡಿಗ ಇವರಿಗೆ ಟ್ರಸ್ಟ್ ಪರವಾಗಿ ಗುರುವಂದನೆ ಸಲ್ಲಿಸಲಾಯಿತು ಅಂತರಾಷ್ಟ್ರೀಯ ಯೋಗ ಪಟು ಧನ್ವಿ ಪೂಜಾರಿ ಮರವಂತೆ ಯೋಗ ಪ್ರದರ್ಶನ ನೀಡಿದರು. ಇವರನ್ನೂ ಕೂಡ ಟ್ರಸ್ಟ್ ಪರವಾಗಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಸಂತೋಷ ನಾಗುರು ನಿರೂಪಿಸಿದರು. ಶ್ವೇತ ಜೋಗಿ ಸ್ವಾಗತಿಸಿ, ಸುರೇಶ್ ವಂದಿಸಿದರು.

ಮಣಿಪಾಲದಲ್ಲಿ ವಿಷುಕಣಿ-ಕವಿದನಿ ಬಹು ಭಾಷಾ ಕವಿಗೋಷ್ಠಿ ಸಂಪನ್ನ

Posted On: 13-04-2025 02:42PM

ಉಡುಪಿ : ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗ ದೊಂದಿಗೆ "ವಿಷುಕಣಿ-ಕವಿದನಿ" ಬಹು ಭಾಷಾ ಕವಿಗೋಷ್ಠಿ ರೇಡಿಯೊ ಮಣಿಪಾಲ್, ಎಂ.ಐ.ಸಿ ಕ್ಯಾಂಪಸ್ ಮಣಿಪಾಲದಲ್ಲಿ ನಡೆಯಿತು. ಸಭಾ ಕ್ರಾಯಕ್ರಮ ಉದ್ಘಾಟನೆಯನ್ನು ಡಾ. ಶುಭ ಹೆಚ್. ಎಸ್‌. ನಿರ್ದೇಶಕರು, ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಮಾಹೆ ಮಣಿಪಾಲ ಇವರು ನೆರವೇರಿಸಿ ಮಾತನಾಡಿ, ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ, ಹೀಗಾಗಿ ಕವಿತೆಗಳಿಗೆ ವಿಮಶೆ೯ಯ ಅವಶ್ಯಕತೆ ಎದುರಾಗುವುದಿಲ್ಲ, ಯುಗಾದಿ ಹಬ್ಬದ ಕುರಿತು ನಮ್ಮಲ್ಲಿರುವ ಸಂಸ್ಕೃತಿ ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸುವ ಈ ಅಪೂವ೯ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಅಭಿನಂದನೀಯ ವಿಚಾರ ಎಂದರು.

ಸಭಾಧ್ಯಕ್ಷತೆಯನ್ನು ಭಾಷಾ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿ, ಮಾತನಾಡಿ ಭಾಷೆಗಳನ್ನು ಉಳಿಸಿ ಬೆಳೆಸಬೇಕು ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂವ೯ ಸಂಸ್ಕೃತಿ ಕೂಡ ಅವನತಿಯಾಗುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿರುವ ಹಲವಾರು ಭಾಷೆಗಳು ಅವನತಿಯ ಹಾದಿಯಲ್ಲಿರುವುದು ದುಃಖದ ವಿಷಯ ಎಂದರು. ಮುಖ್ಯ ಅತಿಥಿ ಪೂರ್ಣಿಮಾ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ಯು ಉಡುಪಿ ಕಸಾಪ ಉಡುಪಿ ತಾಲೂಕು ಈ ರೀತಿಯ ವಿನೂತನ ಕಾಯ೯ಕ್ರಮಗಳ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು. ರವಿರಾಜ್ ಎಚ್‌. ಪಿ.ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಮಾಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಶುಭ ಹಾರೈಸಿದರು. ಕವಿಗೋಷ್ಠಿಯ ಸಮನ್ವಯಕಾರರಾಗಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಿ'ಕವನಗಳು ಹುಟ್ಟುವ ಬಗ್ಗೆ ಅದೇ ರೀತಿ ಕವನಗಳನ್ನು ಮತ್ತಷ್ಟು ಆಕಷ೯ಕವಾಗಿ ಬರೆಯುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕವಿಗಳಾದ ಕವಿತಾ ಎಸ್ ಮಣಿಪಾಲ (ಹವ್ಯಕ ಕನ್ನಡ), ವೈಷ್ಣವಿ ಸುಧೀಂದ್ರ ರಾವ್ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಅಶೋಕ್ ಐತಾಳ್ (ತೆಲುಗು), ಪ್ರಣತಿ ಪಿ. ಭಟ್ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್. ಕಾಮತ್ (ಕೊಂಕಣಿ), ಮನೋಹರ ಶೆಟ್ಟಿ ಬಿಟ್ಕಲ್ ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ ನೀಲಾವರ (ಕನ್ನಡ), ಲಲಿತ ಪ್ರದೀಪ್ ಭಟ್ (ಕನ್ನಡ) ಮಂಜುನಾಥ ಮರವ೦ತೆ (ಕುಂದಾಪ್ರ ಕನ್ನಡ), ಸುಲೋಚನ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ), ಪುಂಡಲೀಕ ನಾಯಕ್ ಬೈಂದೂರು ಇವರೆಲ್ಲರು ಸ್ವರಚಿತ ಕವನ ವಾಚಿಸಿದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಡಾ. ಡಾ. ಅಮ್ಮೆಂಬಳ, ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು, ರೇಡಿಯೊ ಮಣಿ ಪಾಲ್ ಇವರು ಪ್ರಸ್ತಾಪಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ವಂದಿಸಿದರು. ಸುಲೋಚನಾ ಪಚ್ಚಿನಡ್ಕ ಹಾಗು ವಸುಧಾ ಅಡಿಗ ನೀಲಾವರ ನಿರೂಪಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿಗೆ ‌ದ.ಕ ಜಿಲ್ಲಾ ನ್ಯಾಯಾಧೀಶರ ಭೇಟಿ

Posted On: 13-04-2025 02:36PM

ಕಾಪು : ದ.ಕ ಜಿಲ್ಲಾ ನ್ಯಾಯದೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಭಾನುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕುಟುಂಬ ವರ್ಗದೊಂದಿಗೆ ಭೇಟಿ ನೀಡಿದರು.

ಮಾರಿಯಮ್ಮ ಸಹಿತ ಉಚ್ಚಂಗಿ ಅಮ್ಮನವರ ಅನುಗ್ರಹ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಸಂಚಾಲಕ ಜಯರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಹೊಸ ರಸಗೊಬ್ಬರ, ರಾಸಾಯನಿಕ ಕಾರ್ಖಾನೆಯ ಸ್ಥಾಪನೆಗೆ ಸಾಮಾಜಿಕ ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಒತ್ತಾಯ

Posted On: 13-04-2025 02:30PM

ಉಡುಪಿ : ಉಡುಪಿ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆಯ ಸ್ಥಾಪನೆ ಕುರಿತಂತೆ ಸಾಮಾಜಿಕ ‌ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪತ್ರಮುಖೇನ ಒತ್ತಾಯಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಸಗೊಬ್ಬರ ಮತ್ತು ಕೆಮಿಕಲ್ ಫ್ಯಾಕ್ಟರಿ ಸ್ಥಾಪನೆಗೆ ನಿಮ್ಮ ಮಧ್ಯಸ್ಥಿಕೆಗೆ ಗೌರವಪೂರ್ವಕವಾಗಿ ವಿನಂತಿಸಲು ನಾನು ಬರೆಯುತ್ತಿದ್ದೇನೆ. ಒಂದು ಘಟಕವಾಗಿ ಅಂತಹ ಕಾರ್ಖಾನೆಯು ಭಾರತ ಮತ್ತು ಕರ್ನಾಟಕ ಕೃಷಿ ಕ್ಷೇತ್ರ ಮತ್ತು ಆರ್ಥಿಕತೆಗೆ ಗಮನಾರ್ಹವಾದ ಉತ್ಕರ್ಷವಾಗಲಿದೆ ಎಂದು ನಾನು ನಂಬುತ್ತೇನೆ. ಪ್ರಸ್ತುತ ನಮ್ಮ ರೈತರು ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಸೋರ್ಸಿಂಗ್ ಮಾಡುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಇದು ಬೆಳೆ ಇಳುವರಿ ಮತ್ತು ಲಾಭದಾಯಕತೆಯ ಮೇಲೆ ಪರಿಣಾಮ ಬೀರುತ್ತದೆ. ಕಾರ್ಖಾನೆಯನ್ನು ಸ್ಥಾಪಿಸುವುದು ಈ ಸಮಸ್ಯೆಯನ್ನು ಪರಿಹರಿಸುತ್ತದೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು ಸ್ಥಳೀಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇನ್ನೂ ಹೆಚ್ಚಿನದಾಗಿ, ಒಂದು ಕೆಮಿಕಲ್ ಫ್ಯಾಕ್ಟರಿ ಕೂಡ ಇದಕ್ಕೆ ಕೊಡುಗೆ ನೀಡಬಹುದು.

ನಮ್ಮ ಪ್ರದೇಶದ ಕೈಗಾರಿಕಾ ಅಭಿವೃದ್ಧಿಯು ಇತರ ಕೈಗಾರಿಕೆಗಳನ್ನು ಬೆಂಬಲಿಸಬಹುದು, ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ನಾವೀನ್ಯತೆ ಮತ್ತು ಬೆಳವಣಿಗೆಗೆ ವೇದಿಕೆಯನ್ನು ಒದಗಿಸಬಹುದು. ನಿಮ್ಮ ಅಧಿಕಾರಾವಧಿಯಲ್ಲಿಯಾದರೂ ಈ ನಿರ್ಣಾಯಕ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಸಂಸತ್ತಿನ ಸದಸ್ಯರಾಗಿ ನಿಮ್ಮ ಸ್ಥಾನವನ್ನು ಬಳಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.

ಸೌಲಭ್ಯದ ಸ್ಥಾಪನೆಗಾಗಿ ನಿಮ್ಮ ಬೆಂಬಲವನ್ನು ಪ್ರಶಂಸಿಸಲಾಗುತ್ತದೆ ಮತ್ತು ನಮ್ಮ ಜಿಲ್ಲೆ ಮತ್ತು ಕರ್ನಾಟಕದ ಜೀವನದ ಮೇಲೆ ಶಾಶ್ವತವಾದ ಧನಾತ್ಮಕ ಪರಿಣಾಮವನ್ನು ಹೊಂದುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಪತ್ರಮುಖೇನ ಮತ್ತು ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಿದ್ದಾರೆ.