Updated News From Kaup
ಮೇ 17 (ನಾಳೆ) : ಪಡುಬಿದ್ರಿ ದೇವಳದಲ್ಲಿ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮ
Posted On: 16 May 2026, 02:50 PM
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ ಇಲ್ಲಿಯ ಸಮಗ್ರ ಜೀರ್ಣೋದ್ಧಾರ - ಪುನಃ ಪ್ರತಿಷ್ಠೆ - ಬ್ರಹ್ಮಕಲಶೋತ್ಸವದ ಸಂಕಲ್ಪದೊಂದಿಗೆ ಹಮ್ಮಿಕೊಂಡ ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ದೀಪಾರಾಧನೆಯೊಂದಿಗೆ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮವು ಮೇ 17, ಆದಿತ್ಯವಾರ ಪ್ರಾತ:ಕಾಲ ಘಂಟೆ 5-45ಕ್ಕೆ
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ದೊರೆಯಲಿದೆ.
ಈ ಸಂದರ್ಭ ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಶ್ರೀ ಭವಾನಿಶಂಕರ ಹೆಗ್ಡೆ, ಶ್ರೀಪತಿ ಕೊರ್ನಾಯ, ಕಾರ್ಯನಿರ್ವಹಣಾಧಿಕಾರಿ ರಾಜ್ ಗೋಪಾಲ್ ಉಪಾಧ್ಯಾಯ, ಪ್ರಧಾನ ಅರ್ಚಕರುಗಳಾದ ಎಚ್. ಪದ್ಮನಾಭ ಭಟ್,
ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರವೀಂದ್ರನಾಥ್ ಜಿ. ಹೆಗ್ಡೆ,
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ,
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ
ಪ್ರಶಾಂತ್ ಶೆಣೈ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ ಘಂಟೆ 6ರಿಂದ ಸಂಜೆ ಘಂಟೆ 6ರ ವರೆಗೆ ಸ್ಥಳೀಯ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಘಂಟೆ 6-15ಕ್ಕೆ ದೀಪಾರಾಧನೆಗೆ ಅದಮಾರು ಮಠದ
ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಸಂಜೆ ಘಂಟೆ 7ಕ್ಕೆ ವೇದಮೂರ್ತಿ ಅಚ್ಚಡ ಶ್ರೀನಿವಾಸ ಆಚಾರ್ ಇವರಿಗೆ ಅಭಿನಂದನೆ,
ಸಂಜೆ 7-30ರಿಂದ 9 ರವರೆಗೆ ಗಾಯಕಿ ಶಾಂತೇರಿ ಲಿಖಿತ್ ಪ್ರಭು, ಮಂಜೇಶ್ವರ ಮತ್ತು ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರಗಲಿದ್ದು ಸದ್ಭಕ್ತ ಬಾಂಧವರೆಲ್ಲ ಭಾಗವಹಿಸಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಮತ್ತು ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಬಿ.ಜೆ.ಎಂ ಮಲ್ಲಾರು-ಮಜೂರು ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊ
Posted On: 16 May 2026, 02:04 PM
ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಡಳಿತ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಡಾ.ಫಾರೂಕ್ ಚಂದ್ರನಗರ, ಅಬ್ದುಲ್ ರಝಕ್ ಮಲ್ಲಾರು, ಕಾಸಿಂ ಗುಡ್ಡೆಕೇರಿ ಹಾಗೂ ರಿಯಾಜ್ ಉಸ್ತಾದ್ ರವರು ನಮ್ಮ ಜಮಾತಿಗರಾಗಿದ್ದು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದವರು. ಇದೀಗ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದು, ಅವರ ಯಾತ್ರೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಸ್ಜಿದ್ ಕತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್-ಖಾಮಿಲ್ ದುವಾ ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ಪ್ರ.ಕಾರ್ಯದರ್ಶಿ ಅಶ್ರಫ್ ಮೂಸಾ,ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ, ರಜಬ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಸದಸ್ಯರಾದ ಅಬ್ದುಲ್ಲ ಚಂದ್ರನಗರ, ಹಸನಬ್ಬ ಗುಡ್ಡೆಕೇರಿ, ಅಬ್ದುಲ್ ರಝಕ್ ಕೊಪ್ಪಲ್ತೋಟ ಅಬ್ದುಲ್ ರೆಹಮಾನ್ ಕೊಂಬಗುಡ್ಡೆ, ನೆಹಮತ್ ಅಚ್ಚಲ್ ಹಸನಬ್ಬ ಪಕೀರಣಕಟ್ಟೆ, ಸಮೀರ್ ಕೆ.ಪಿ ಹಾಗೂ ಜಮಾತ್ ಬಾಂದವರು ಉಪಸ್ಥಿತರಿದ್ದರು.
ಕಾಪು : ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ-ಪ್ರಶಿಕ್ಷಣ ಮಹಾಭಿಯಾನ -2026 ಚಾಲನೆ
Posted On: 16 May 2026, 08:21 AM
ಕಾಪು : ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶಿರ್ವ ಸಮೀಪದ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಎರಡು ದಿನಗಳ ಪರ್ಯಂತ ಜರುಗುವ ಕಾಪು ಮಂಡಲ ಪ್ರಶಿಕ್ಷಣ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.
ವೇದಿಕೆಯಲ್ಲಿರುವ ಗಣ್ಯರು ಭಾರತಮಾತೆ, ಪಂ.ದೀನದಯಾಳ್ ಉಪಾಧ್ಯಾಯ,ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.
ಉದ್ಘಾಟಕರಾದ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ವ್ಯಕ್ತಿ ನಿರ್ಮಾಣ ದಿಂದ ಸಂಘಟನೆ, ಸಂಘಟನೆಯಿಂದ ರಾಷ್ಟ್ರ ನಿರ್ಮಾಣ ತತ್ವದಡಿಯಲ್ಲಿ ಪ್ರತೀ ಬೂತ್ ಮಟ್ಟದ ಪ್ರಮುಖರಿಗೆ ವೈಚಾರಿಕ ಬದ್ಧತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಶಿಕ್ಷಣ ನೀಡುವ ಮೂಲಕ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 300ಕ್ಕೂ ಅಧಿಕ ಪ್ರಶಿಕ್ಷಣ ವರ್ಗಗಳು ನಡೆಯುತ್ತಿವೆ ಎಂದರು.
ಕಾಪು ಕ್ಷೇತ್ರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇತ್ತೀಚೆಗೆ ನಡೆದ ಚುನಾವಣಾ ಗೆಲುವು ಕಾರ್ಯಕರ್ತರ ಬಲ ದಿಂದ ಆಗಿದೆ. ಜನಸಂಘದ ಕಾಲದಿಂದಲೂ ಪ್ರಮುಖ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಬಿಜೆಪಿಯಲ್ಲೂ ಮೇಲ್ಮಟ್ಟದ ನಾಯಕರಿಗೆ,ಕಾರ್ಯಕರ್ತರಿಗೆ ಈ ಕಾರ್ಯಕ್ರಮ ನಡೆಯುತ್ತಿತ್ತು. ಪಕ್ಷ ತಾಯಿ ಇದ್ದಂತೆ. ಈಗ ತಳಮಟ್ಟದ ಕಾರ್ಯಕರ್ತರಿಗೂ ಆತ್ಮವಿಶ್ವಾಸ,ಬದ್ಧತೆ ಬೆಳೆಸುವ ಕಾರ್ಯ ನಡೆಯುತ್ತದೆ. ಜಗತ್ತಿನಲ್ಲಿ ಒಳ್ಳೆಯ ಚರಿತ್ರೆ ಇರುವ ಪಕ್ಷದಲ್ಲಿ ನಾವಿದ್ದೇವೆ ಎಂದರು.
ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶರಣ್ ಕುಮಾರ್ ಮಟ್ಟು, ಉಪಸ್ಥಿತರಿದ್ದರು. ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿದರು. ಪಾಣೇಶ್ ಹೆಜಮಾಡಿ ವಂದೇಮಾತರಮ್ ಗೀತೆ ಹಾಡಿದರು.ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ವಂದಿಸಿದರು.
ಇಂದು (ಮೇ 16) : ಕಾಪು ಪಿಲಿ ಕೋಲ
Posted On: 16 May 2026, 08:09 AM
ಕಾಪು : ದ್ವೈವಾರ್ಷಿಕವಾಗಿ ಕಾಪು ಶ್ರೀ ಮುಗ್ಗೇರ್ಕಳ ಹುಲಿ ಚಂಡಿ ದೈವಸ್ಥಾನದಲ್ಲಿ ಜರಗಲಿರುವ "ಪಿಲಿ ಕೋಲ" ಮೇ 16, ಶನಿವಾರ ಜರುಗಲಿದೆ.
ನಲ್ವತ್ತು ವರ್ಷಗಳಿಗೂ ಅಧಿಕ ಕಾಲ ಪಿಲಿ ಕೋಲ ಕಟ್ಟಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಮೂಳೂರು ಗುಡ್ಡ ಪಾಣಾರ ಅವರ ಪುತ್ರ ಸುಧಾಕರ ಪಾಣಾರ ಈ ಬಾರಿ ಅಭಯ ದೊರೆತು ಪಿಲಿ ಕೋಲ ಕಟ್ಟಲಿದ್ದಾರೆ.
ಜನರು ಹುಲಿಯನ್ನು ನೋಡಿ ಹುಲಿಯಿಂದ ತಪ್ಪಿಸಿಕೊಳ್ಳುವ ದೃಶ್ಯ ರೋಚಕವಾಗಿರುತ್ತದೆ. ಹುಲಿಯನ್ನು ಹಗ್ಗದ ಮೂಲಕ ನಿಯಂತ್ರಿಸುವವರೂ ಇರುತ್ತಾರೆ. ಬೇಟೆಯ ವೇಳೆ ಯಾರನ್ನಾದರು ಮುಟ್ಟಿದರೆ ಅವರಿಗೆ ಕಂಟಕವಿದೆ ಎಂಬ ನಂಬಿಕೆಯಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆವ ಕೋಲವನ್ನು ವೀಕ್ಷಿಸಲು ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ.
ಮೇ 22 : ತ್ರಿಶಾ ಶಿಕ್ಷಣ ಸಂಸ್ಥೆಯಿಂದ ಕಟಪಾಡಿಯಲ್ಲಿ ಅಭ್ಯುದಯ - ಉದ್ಯೋಗ ಮೇಳ
Posted On: 16 May 2026, 07:55 AM
ಕಾಪು : ಕರಾವಳಿ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ತ್ರಿಶಾ ಸಮೂಹ ಸಂಸ್ಥೆಗಳು ಇದರ ಅಂಗ ಸಂಸ್ಥೆಯಾದ ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಟಪಾಡಿ ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ವಿಭಾಗ ಮೊತ್ತ ಮೊದಲ ಬಾರಿಗೆ ಕಟಪಾಡಿಯಲ್ಲಿ ಮೇ 22 ರಂದು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಅಭ್ಯುದಯ - ಉದ್ಯೋಗ ಮೇಳ ಆಯೋಜಿಸುತ್ತಿದೆ ಎಂದು ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೆಣೈ ಹೇಳಿದರು.
ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕದ ಪ್ರತಿಷ್ಠಿತ 40ಕ್ಕೂ ಹೆಚ್ಚಿನ ಸಂಸ್ಥೆಗಳಿಂದ ಉದ್ಯೋಗಿಗಳನ್ನ ಆರಿಸಿಕೊಳ್ಳುವುದಕ್ಕೆ ಸಂದರ್ಶನ ಲಭ್ಯವಿರುತ್ತದೆ. ಇಲ್ಲಿ ಪದವಿ, ಸ್ನಾತಕೋತ್ತರ ಪದವಿ, ಐಟಿ, ಬಿಫಾರ್ಮಾ, ನರ್ಸಿಂಗ್ ಹೀಗೆ ವಿವಿದ ವಿದ್ಯಾಭ್ಯಾಸಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸಂಧರ್ಶನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗ ಆಕಾಂಕ್ಷಿಗಳಿಗೆ ಮೇ 19 ಮತ್ತು 20 ರಂದು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇಲ್ಲಿ ಸಂದರ್ಶನವನ್ನು ಎದುರಿಸುವ ರೀತಿ, ಸಿವಿಗಳನ್ನು ಬರೆಯುವುದು ಹೇಗೆ, ತಮ್ಮನ್ನು ತಾವು ವಿವಿಧ ಕಂಪನಿಗಳ ಹೆಚ್ ಆರ್ ಗಳ ಮುಂದೆ ಹೇಗೆ ನಿರೂಪಿಸಿಕೊಳ್ಳುವ ಬಗ್ಗೆ ತಿಳಿಸಿಕೊಡಲಾಗುತ್ತದೆ. ಸುಮಾರು 600ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉದ್ಯೋಗ ಮೇಳಕ್ಕೆ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್, ಗೌರವ ಅತಿಥಿಗಳಾಗಿ ಕೆ ಸತ್ಯೇಂದ್ರ ಪೈ, ಪ್ರೀತಮ್ ಪ್ರಸಾದ್ ಎಸ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೆಣೈ, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲದೀಪ್ ವೈ ಯು, ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥರಾದ ಆಲ್ಬನ್ ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 6364872304 ಸಂಪರ್ಕಿಸಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲದೀಪ್ ವೈ ಯು, ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥರಾದ ಆಲ್ಬನ್ ಆಂಥೋನಿ ಪಿರೆರಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅನಸೂಯ ಶೆಟ್ಟಿ ನೇಮಕ
Posted On: 16 May 2026, 07:48 AM
ಉಡುಪಿ : ಜಿಲ್ಲಾ ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅನಸೂಯ ಶೆಟ್ಟಿ ನೇಮಕ ಗೊಂಡಿದ್ದಾರೆ.
ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಅನಸೂಯ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾಧ್ಯಕ್ಷರಾದ ಯೋಗಿಶ್. ವಿ. ಶೆಟ್ಟಿ ಯವರು ಜಾರಿಗೆ ಬರುವಂತೆ ನೇಮಕಾತಿ ಆದೇಶ ಪತ್ರವನ್ನು ನೀಡಿದರು.
ಅನಸೂಯ ಶೆಟ್ಟಿ ಅವರು ಸಾಮಾಜಿಕ ಕಾರ್ಯಕರ್ತರಾಗಿ ವಿವಿಧ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜನತಾದಳ (ಜಾತ್ಯತೀತ) ಮಹಿಳಾ ಘಟಕವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ ಎಂದು ಯೋಗಿಶ್ ವಿ ಶೆಟ್ಟಿಯವರು ತಿಳಿಸಿರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಸಂಘಟಿಸಿ, ಮಹಿಳಾ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ತಿಳಿಸಿದರು.
ಈ ನೇಮಕಾತಿಯಿಂದ ಪಕ್ಷದ ಮಹಿಳಾ ಘಟಕಕ್ಕೆ ಹೊಸ ಚೈತನ್ಯ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ಜಿಲ್ಲಾಧ್ಯಕ್ಷ ಯೋಗಿಶ್. ವಿ. ಶೆಟ್ಟಿ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಅಚಾರ್ಯ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು,ಉಪಸ್ಥಿತರಿದ್ದರು.
ಮೇ 16 –ಮೇ 22 : ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರ
Posted On: 15 May 2026, 01:43 PM
ಕಾಪು : ಸುಜ್ಞಾನ ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಮತ್ತು ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಇವರ ಸಂಯುಕ್ತ ಆಶ್ರಯದಲ್ಲಿ
ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರ (ಎಲ್ಲಾ ವಯಸ್ಸಿನ ಎಲ್ಲಾ ವರ್ಗದ ಮಕ್ಕಳು, ಸ್ತ್ರೀಯರು ಹಾಗೂ ಪುರುಷರಿಗೆ) ಮೇ 16 ರಿಂದ ಮೇ 22 ರವರೆಗೆ ಸುಧಾಮ ಸಭಾಭವನ, ಕಲ್ಯ, ಕಾಪು ಇಲ್ಲಿ ಪ್ರತಿದಿನ ಅಪರಾಹ್ನ ಗಂಟೆ 3 ರಿಂದ 6:30ರವರೆಗೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ನೋಂದಣಿಗಾಗಿ 6362023002 ವಾಟ್ಸಾಪ್ ಸಂದೇಶ ಕಳುಹಿಸಿ
ಕಾಪು : ಅಪಘಾತದಿಂದ ಗಾಯಗೊಂಡ ಮಹಿಳೆ ಸಹಾಯ ಹಸ್ತದ ನಿರೀಕ್ಷೆಯಲ್ಲಿ
Posted On: 15 May 2026, 09:25 AM
ಕಾಪು : ಇತ್ತೀಚಿಗೆ ಸಂಭವಿಸಿದ ಅಪಘಾತದಲ್ಲಿ ಇನ್ನಂಜೆ ಗ್ರಾ.ಪಂ.ಸಿಬ್ಬಂದಿ ಪ್ರೀತಿ ಶೆಟ್ಟಿಯವರಿಗೆ ಕೈ ಮತ್ತು ಕಾಲಿಗೆ ತೀವ್ರ ಏಟು ಬಿದ್ದು, ಸರಿಸುಮಾರು 5 ಲಕ್ಷಕ್ಕೂ ಹೆಚ್ಚು ಚಿಕಿತ್ಸೆ ಮತ್ತು ಆಸ್ಪತ್ರೆ ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಅದರಂತೆ ಎಲ್ಲಾ ಸಹೃದಯಿ ನೌಕರರು, ಅಥಿಕಾರಿಗಳು ಮತ್ತು ಸಾರ್ವಜನಿಕರು ಅರ್ಥಿಕ ನೆರವು ನೀಡಿ ಅವರ ಚಿಕಿತ್ಸೆಗೆ ಸಹಾಯ ಮಾಡಲು ವಿನಂತಿಸಿದ್ದಾರೆ.
ಪಡುಬಿದ್ರಿ ದೇವಳದ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಅಶೋಕ್ ಸಾಲ್ಯಾನ್, ಸಂತೋಷ್ ಪಡುಬಿದ್ರಿಯವರಿಗೆ ಸನ್ಮಾನ
Posted On: 14 May 2026, 10:07 AM
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾವು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ದೇವಳದ ಜೀಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಸಹಿತ ಗಣ್ಯರು ಉಪಸ್ಥಿತರಿದ್ದರು.
ಬಿ.ಜೆ.ಎಂ ಮಜೂರು ಮಸ್ಜಿದ್ ಆವರಣದಲ್ಲಿ ರೈಲ್ವೆ ಇಲಾಖೆಯಿಂದ ಜನಜಾಗೃತಿ ಮಾಹಿತಿ
Posted On: 14 May 2026, 09:57 AM
ಕಾಪು : ಕೊಂಕಣ್ ರೈಲ್ವೆ ಚೀಫ್ ಕಮಿಷನರ್ ಅಭಿಷೇಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಉಡುಪಿ ರೈಲ್ವೆ ಸ್ಟೇಷನ್‌ನ ಇನ್ಸ್‌ಪೆಕ್ಟರ್ ಸಂಜಯ್ ವಾತ್ಸ್ ಹಾಗೂ ಅವರ ಸಿಬ್ಬಂದಿಗಳು ಬದ್ರಿಯಾ ಜುಮ್ಮಾ ಮಸ್ಜಿದ್, ಮಜೂರು ಭೇಟಿ ನೀಡಿ ರೈಲುಗಳ ಮೇಲೆ ಕಲ್ಲು ತೂರಾಟ ತಡೆಯುವ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ, ಮಸ್ಜಿದ್‌ನ ಸದಸ್ಯರು ಹಾಗೂ ಧಾರ್ಮಿಕ ಕೇಂದ್ರದ ನಿರ್ವಹಣಾ ಸಮಿತಿಯವರು ಉಪಸ್ಥಿತರಿದ್ದರು.
