Updated News From Kaup
ಶಿರ್ವ ಮಾರಿಗುಡಿ ಶ್ರೀ ಮಹಮ್ಮಾಯಿ ಸಾನ್ನಿಧ್ಯದಲ್ಲಿ ಚಪ್ಪರ ಮೂಹೂರ್ತ

Posted On: 23-04-2025 12:31PM
ಶಿರ್ವ : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಶಿರ್ವ ಮಾರಿಗುಡಿ ಶ್ರೀ ಮಹಮ್ಮಾಯೀ ಅಮ್ಮನವರ ಸಾನ್ನಿಧ್ಯದಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬುಧವಾರ ಬೆಳಿಗ್ಗೆ ಆಗಮ ಪಂಡಿತ ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವೆಂಕಟರಮಣ ಭಟ್ ಪೌರಾಹಿತ್ಯದಲ್ಲಿ ಚಪ್ಪರ ಮೂಹೂರ್ತ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಡಿಬೆಟ್ಟು ರತ್ನವರ್ಮ ಹೆಗ್ಡೆ, ಸೋರ್ಕಲ ಸಚ್ಚಿದಾನಂದ ಹೆಗ್ಡೆ, ರಾಜೇಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಆನಂದ ಶೆಟ್ಟಿ, ರತ್ನಾಕರ ಆಚಾರ್ಯ, ಹರೀಶ್ ಪೂಜಾರಿ, ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರು, ಜೀರ್ಣೋದ್ಧಾರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಪತ್ರಕರ್ತ ಕಿರಣ್ ಪೂಜಾರಿ ಮುದ್ದುಗುಡ್ಡೆಯವರಿಂದ ಅರೆಬೆತ್ತಲೆ ಪ್ರತಿಭಟನೆ

Posted On: 22-04-2025 04:56PM
ಕುಂದಾಪುರ : ಅನವಶ್ಯಕ ಕೇಸು ದಾಖಲಿಸಿ ಕಿರುಕುಳ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಇಲ್ಲಿನ ತಾಲೂಕು ಕಚೇರಿ ಎದುರು ಬಿಲ್ಲವ ಹೋರಾಟಗಾರ, ಪತ್ರಕರ್ತ ಕಿರಣ್ ಪೂಜಾರಿ ಮುದ್ದುಗುಡ್ಡೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವವರ ಪರ ನಿಂತು ದಲಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ನ್ಯಾಯಕ್ಕಾಗಿ ಹೋರಾಟ ನಡೆಸಿದ ತನ್ನ ಮೇಲೆ ಪೊಲೀಸರು, ವಕೀಲರು, ಗ್ರಾಪಂ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಸ್ಥಳಕ್ಕೆ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ತಹಸೀಲ್ದಾರ್ ಪ್ರದೀಪ ಕುರುಡೇಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ಸಜ್ಜಾದ ಮೂಳೂರು ಗ್ರಾಮಸ್ಥರು

Posted On: 22-04-2025 02:25PM
ಕಾಪು : ತಾಲೂಕಿನ ಮೂಳೂರು ಗ್ರಾಮದಲ್ಲಿ ಪುರಸಭೆಯು ಸುಮಾರು 1.78 ಎಕರೆ ಜಾಗದಲ್ಲಿ ಕಾಪು ಪೇಟೆಯ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಿಸುವ ಬಗ್ಗೆ ಸ್ಥಳೀಯರು ಹೋರಾಟಕ್ಕೆ ಸಜ್ಜಾಗಿದ್ದು ಪೂರ್ವಭಾವಿಯಾಗಿ ಎ.24 ರಂದು ಅಧಿಕಾರಿವರ್ಗ ಮತ್ತು ಜನಪ್ರತಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥ ಪುರುಷೋತ್ತಮ ಸಾಲ್ಯಾನ್ ಕಾಪು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೂಳೂರಿನ ಗ್ರಾಮಸ್ಥರು ಒಟ್ಟಾಗಿ ಎ.24 ರಂದು ಗುರುವಾರ ಬೆಳಿಗ್ಗೆ 8.30 ಕ್ಕೆ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಬಳಿ ಸೇರಿ ಕಾಪು ಪುರಸಭೆಗೆ,ತಾಲೂಕು ಕಚೇರಿಗೆ, ಶಾಸಕರಿಗೆ, ಮಾಜಿ ಸಚಿವರಿಗೆ ಪ್ರತಿಭಟನೆಯೊಂದಿಗೆ ತೆರಳಿ ಮನವಿ ಪತ್ರ ನೀಡಲು ಉದ್ದೇಶಿಸಲಾಗಿದೆ. ಪುರಸಭಾ ಸದಸ್ಯರಿಗೆ ಮಾಹಿತಿ ನೀಡದೆ ಕೆಲವು ದಿನಗಳ ಹಿಂದೆ ಸುಮಾರು 1.78 ಎಕರೆ ಸರಕಾರಿ ಜಮೀನನ್ನು ತಾಲೂಕು ಆಡಳಿತ ಕಾಪು ಪುರಸಭೆಗೆ ಮಂಜೂರು ಮಾಡಿದೆ. ಮೂಳೂರಿನ ಸೂಜಿಮೊನೆಯಷ್ಟು ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು.
ಗ್ರಾಮಸ್ಥರಾದ ಪ್ರಭಾತ್ ಶೆಟ್ಟಿ ಬಿಕ್ರಿಗುತ್ತು ಮಾತನಾಡಿ, ಕಾಪು ಪೇಟೆಯನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಅವೈಜ್ಞಾನಿಕ ಯೋಜನೆಯನ್ನು ನಮ್ಮ ಊರಿಗೆ ತಂದು ಹಾಳು ಮಾಡಲೆತ್ನಿಸುವುದು ದುರಂತ. ಸದ್ರಿ ಜಮೀನು ನಂಜ ಜಮೀನು ಆಗಿದ್ದು, ಮೇಲ್ಮಟ್ಟದ ಅಂತರ್ಜಲದ ಜೊತೆಗೆ 60-70 ಮೀ. ಅಂತರದಲ್ಲಿ ಮನೆ, ಕೃಷಿ ಭೂಮಿ, ತೋಟ, ನಾಗಬನ, ದೈವರಾಧನೆ ಸ್ಥಳಗಳು ಹಾಗೂ ಕುಡಿಯುವ ನೀರಿನ ಬಾವಿಗಳಿದ್ದು ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಭಾವಿ ಕಲುಷಿತಗೊಳ್ಳುತ್ತದೆ ಹಾಗೂ ಇದರಿಂದ ಹೊರ ಸೂಸುವ ದುರ್ನಾತ ವಾಸನೆ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್, ಮಲೇರಿಯಾ, ಡೆಂಗ್ಯೂನಂತಹ ಮಾರಕಾ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಸತೀಶ್ಚಂದ್ರ, ಮೊಹಮ್ಮದ್ ಆಸೀಫ್, ಚಿತ್ತನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಜನಿವಾರ ಪ್ರಕರಣ : ವಿಶ್ವಕರ್ಮ ಒಕ್ಕೂಟದಿಂದ ಖಂಡನೆ

Posted On: 21-04-2025 03:31PM
ಕಾಪು : ಇತ್ತೀಚೆಗೆ ಸರಕಾರದ ವತಿಯಿಂದ ನಡೆಸಲಾದ ಸಿ.ಇ.ಟಿ. ಪರೀಕ್ಷೆಯ ವೇಳೆ ರಾಜ್ಯದ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಕಳಚಿದ ಹಾಗೂ ಕತ್ತರಿಸಿದ ಘಟನೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮಾಡಿದ ಅಪಮಾನವಲ್ಲ, ಸಮಸ್ತ ಜನಿವಾರಧಾರಣೆ ಮಾಡುವ ಹಿಂದೂ ಸಮುದಾಯಗಳಿಗೆ ಮಾಡಿರುವ ಅವಮಾನವಾಗಿರುತ್ತದೆ. ಈ ಘಟನೆಯನ್ನು ಅವಿಭಜಿತ ದ. ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಮಧು ಆಚಾರ್ಯ, ಮೂಲ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕಿರಣ್ ಪೂಜಾರಿಯವರಿಂದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ

Posted On: 20-04-2025 02:47PM
ಉಡುಪಿ : ಪೋಲೀಸ್ ಹಾಗೂ ಪಂಚಾಯತ್ ಅಧಿಕಾರಿಯೊಬ್ಬರು ಕರ್ತವ್ಯಲೋಪ ಎಸಗಿ ತಮ್ಮ ಮೇಲೆ ದೌರ್ಜನ್ಯ ವೆಸಗಿದ್ದಾರೆ ಮತ್ತು ನ್ಯಾಯವಾದಿಯೊಬ್ಬರು ತಮಗೆ ಹಾಗೂ ತಮ್ಮ ಸಮಾಜಕ್ಕೆ ಅವಮಾನಿಸಿ ತಮ್ಮ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುವಂತೆ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ. ಈ ಮೂವರ ವಿರುದ್ದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಬಿಲ್ಲವರ ಬಗ್ಗೆ ಲಘುವಾಗಿ ಮಾತನಾಡಿದ ಹಾಗೂ ತನಗೆ ನಿಂದನೆ ಮಾಡಿದ ತನ್ನ ಸಮಾಜದ ಬಗ್ಗೆ ಅವಮಾನಕರ ವಾಗಿ ನಿಂದಿಸಿ ಸುಳ್ಳು ಪ್ರಕರಣಗಳನ್ನು ಧಾಖಲಿಸುವಂತೆ ಒತ್ತಡ ಹೇರಿದ ಹಾಗೂ ಪ್ರಕರಣ ಒಂದರಲ್ಲಿ ತಹಸೀಲ್ದಾರ್ ಯಥಾ ಸ್ಥಿತಿ ಕಾಪಾಡಬೇಕು ಎಂದು 8 ಸಲ ಆದೇಶ ಮಾಡಿದರು ಅವರಿಗೂ ಅಗೌರವ ತೋರಿದ ಅಲ್ಲದೇ ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಮಾಡಿಸಿ ನ್ಯಾಯವಾದಿಯೊಬ್ಬರು ವಕೀಲ ವೃತ್ತಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ತವ್ಯಕ್ಕೆ ಕಪ್ಪು ಚುಕ್ಕೆ ಮಾಡಿದ ನ್ಯಾಯವಾದಿಯೊಬ್ಬರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಬೇಕು ಹಾಗೂ ಬಿಲ್ಲವ, ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಮೇಲೆ ಕುಂದಾಪುರದಲ್ಲಿ 2 ಮತ್ತು ಕೊಲ್ಲೂರನಲ್ಲಿ 1 ಸುಳ್ಳು ಕಂಪ್ಲೇಂಟ್ ಮಾಡಿಸಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದೆ. ಕೇಸು ದಾಖಲಿಸಿದವರ ಪರವಾಗಿ ಸತ್ಯ ಅಸತ್ಯೆಯನ್ನು ಅವಲೋಕಿಸದೆ, ದಲಿತ ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿ, ಅವರು ನೀಡಿದ ದೂರನ್ನು ದಾಖಲಿಸದೇ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಿ, ಇವರ ವಿರುದ್ಧ ಇಲಾಖಾ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು.
ಗ್ರಾಮ ಆಡಳಿತ ಅಧಿಕಾರಿಯೊಬ್ಬರು ಸರಕಾರಿ ಜಾಗವನ್ನು ಒತ್ತುವರಿ ಮಾಡಿದ ಕೆಲವರ ಕೈಗೊಂಬೆ ಆಗಿ ಬಹುಪರಾಕ್ ಹೇಳುತ್ತಿದ್ದಾರೆ 8 ಬಾರಿ ತಹಸೀಲ್ದಾರ್ ಆದೇಶ ಉಲ್ಲಂಘನೆ ಮಾಡಿದರು ಸರಿಯಾದ ವರದಿ ನೀಡದೆ, ಪತ್ರಕರ್ತರು ಮಾಹಿತಿ ಕೇಳಿದಾಗ ಏನು ಮಾಡಲಿಕ್ಕೆ ಆಗುತ್ತೆ ಎಂದು ಅಗೌರವ ತೋರಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಬಗ್ಗೆ ಅರಿವು ಮೂಡಿಸದೆ ಸೂಕ್ತ ಕ್ರಮ ಕೈಗೊಳ್ಳದೆ, ಕರ್ತವ್ಯದಲ್ಲಿ ಲೋಪ, ಕರ್ತವ್ಯ ನಿರ್ಲಕ್ಷತನ, ಕರ್ತವ್ಯ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತು ಮಾಡಬೇಕಾಗಿ ಅಗ್ರಹಿಸಿದ್ದಾರೆ. ಇವರೆಲ್ಲರ ವಿರುದ್ಧ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಕಿರಣ ಪೂಜಾರಿಯವರಂತಹ ಅನೇಕ ಹೋರಾಟಗಾರರು ಸುಳ್ಳು ದೂರು ದಾಖಲಿಸಿಕೊಂಡು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾಮಾಜಿಕ ಹೋರಾಟಗಾರರಿಗೆ, ಪತ್ರಕರ್ತರಿಗೆ, ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ.
ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು : ಕಟ್ಟಿಂಗೇರಿ ಹೆಬ್ಬಾರ್

Posted On: 19-04-2025 05:38PM
ಕಾಪು : ಕೃಷಿ ಹಾಗೂ ಅಂತರ್ಜಲ ವೃದ್ಧಿಗೆ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಶೇಖರಣೆಗೆ ಕೆರಗಳು ಅತೀ ಮುಖ್ಯ. ಜೀವಜಲ ಉಳಿಸುವುದು ಪುಣ್ಯದ ಕಾರ್ಯ. ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು ಎಂದು ರಾಜ್ಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿದರು. ಅವರು ಶನಿವಾರ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಸಮೀಪ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಲ್ಲಿ ಕುರುಡಾಯಿ ಕೆರೆಯ ಹೂಳೆತ್ತುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಹುಟ್ಟಿನಿಂದ ಸಾಯುವವರೆಗೆ ಮನುಷ್ಯರಿಗೆ ಏನೆಲ್ಲಾ ಅಗತ್ಯ ಇದೆಯೋ ಅದನ್ನೆಲ್ಲಾ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಈಗಾಗಲೇ 800ಕ್ಕೂ ಅಧಿಕ ಕೆರಗಳ ಜೀರ್ಣೋದ್ದಾರ ಮಾಡಲಾಗಿದೆ ಎಂದರು.
ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಎಲ್ಲಾ ಜೀವರಾಶಿಗಳಿಗೂ ನೀರು ಅತ್ಯಂತ ಅಮೂಲ್ಯವಾಗಿದ್ದು ಅದನ್ನು ಪೂಜ್ಯರು ಮನಗಂಡು ಈ ಕಾರ್ಯವನ್ನು ಕೈಗೊಂಡಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಶೆಟ್ಟಿ ಗ್ರಾ.ಪಂ.ಸದಸ್ಯ ಹಾಗೂ ಕುರುಡಾಯಿ ಕೆರೆ ಸಮಿತಿ ಬೆಳ್ಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಜನಜಾಗೃತಿ ಸಮಿತಿ ಸದಸ್ಯೆ ಸುಜಾತಾ ಸುವರ್ಣ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಸ್ಯಾಮ್ಸನ್, ಶ್ರೀನಿಧಿ ಪ್ರಭು, ಗ್ರಾ.ಪಂ.ಸದಸ್ಯರಾದ ಸಂತೋಷ್, ಪ್ರೇಮಾ, ವೆಂಕಟೇಶ್, ಅಮಿತಾ ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಗೀತಾ ನಿರೂಪಿಸಿದರು. ದೇವೇಂದ್ರ ನಾಯಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿಗಳಾದ ದಿವ್ಯಾ, ಮಲ್ಲಿಕಾ, ಲಕ್ಷ್ಮಿ, ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಏ.17, 18 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ದೃಢ ಸಂಪ್ರೋಕ್ಷಣೆ

Posted On: 15-04-2025 07:29PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ವಿದ್ವಾನ್ ಕೆ. ಜಿ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ಕಲ್ಯಾ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಏ.17, ಗುರುವಾರ ಮತ್ತು ಏ.18, ಶುಕ್ರವಾರ ಕಾಪು ಮಾರಿಯಮ್ಮನ ದೃಢ ಸಂಪ್ರೋಕ್ಷಣೆ ನಡೆಯಲಿದೆ.
ಏ.17, ಗುರುವಾರ ಬೆಳಿಗ್ಗೆ ಗಂಟೆ 9 ಕ್ಕೆ ಪ್ರಾರ್ಥನೆ, ಪುಣ್ಯಾಹ, ನಾಂದಿ ಸಮಾರಾಧನೆ, ಮಾತೃಕಾ ಪೂಜೆ, ಗಣಯಾಗ, ನವಗ್ರಹ ಯಾಗ. ಸಂಜೆ ಗಂಟೆ 5 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 6.00ರಿಂದ ಸಪ್ತಶತಿ ಪಾರಾಯಣ, ದುರ್ಗಾ ನಮಸ್ಕಾರ ಪೂಜೆ, ಅಷ್ಟಾವಧಾನ ರಾತ್ರಿ 6.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 7.30 ಹಾಸ್ಯಮಯ ತುಳು ನಾಟಕ 'ಅಮ್ಮು.. ಅಮುಂಡರಾ...?' ಪ್ರದರ್ಶನಗೊಳ್ಳಲಿದೆ.
ಏ.18, ಶುಕ್ರವಾರ ಬೆಳಿಗ್ಗೆ ಗಂಟೆ 7.30ರಿಂದ ಚತುಃಷಷ್ಠಿ, ಯೋಗಿನೀ ಮಂಡಲ ಪೂಜಾ, ಚತು:ಷಷ್ಠಿ ಯೋಗಿನೀ ಬಲಿ, ಚತುಃಷಷ್ಠಿ ಯೋಗಿನಿ ದೇವತಾ ಪಾಯಸಯಾಗ. ಪೂರ್ವಾಹ್ನ ಗಂಟೆ 11 ಕ್ಕೆ ಪೂರ್ಣಾಹುತಿ, ಪಂಚವಿಂಶತಿ ಕಲಶ ಆರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜಾ ಪೂರ್ವಾಹ್ನ ಗಂಟೆ 11.30 ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ಇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟಕಲ್ಲು ಉಮಾನಾಥ ನಾಯಕ್ ನಿಧನ

Posted On: 15-04-2025 07:19PM
ಶಿರ್ವ : ಬಂಟಕಲ್ಲು ಪೊದಮಲೆ ನಿವೃತ್ತ ಶಿಕ್ಷಕ ದಿ.ರಾಮಚಂದ್ರ ನಾಯಕ್ರವರ ಪುತ್ರ ಉಮಾನಾಥ ನಾಯಕ್(62) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಬಯಿ ದಹೀಸಾರ್ನಲ್ಲಿ ನಿಧನರಾದರು. ಸ್ವಂತ ಉದ್ಯಮ ನಡೆಸುತ್ತಿದ್ದ ಇವರು ಜನಾನುರಾಗಿಯಾಗಿದ್ದರು. ತಾಯಿ, ಪತ್ನಿ, ಮಗಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಪಲಿಮಾರು ಗ್ರಾಮ ಪಂಚಾಯತ್ : ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Posted On: 14-04-2025 10:27PM
ಪಲಿಮಾರು : ಪಲಿಮಾರು ಗ್ರಾಮ ಪಂಚಾಯತ್, ಶ್ರೀ ಮಹದೇಶ್ವರ ಭಜನ ಮಂಡಳಿ ಮತ್ತು ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜನ್ಮದಿನಾಚರಣೆಯನ್ನು ಪಲಿಮಾರು ಗ್ರಾಮ ಪಂಚಾಯತ್ ನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಶೇ.100 ಶೈಕ್ಷಣಿಕ ಸಾಧನೆ ಮಾಡಿದ ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಹಿತ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ , ಪಿಡಿಓ ಶಶಿಧರ್, ಮಹದೇಶ್ವರ ಮಂಡಳಿ ಸುಧಾಕರ್,ವಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್ ಕರ್ಕೇರ್, ಗ್ರಾ.ಪಂ ಸದಸ್ಯರು, ಸಂಘದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Posted On: 14-04-2025 09:55PM
ಪಡುಬಿದ್ರಿ : ಪಡುಬಿದ್ರಿಯ ಓಂಕಾರ್ ಕಲಾ ಸಂಗಮದಲ್ಲಿ ನಡೆಯುತ್ತಿರುವ ರಜಾ-ಮಜಾ ಶಿಬಿರದಲ್ಲಿ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕರಾದ ಶೇಖರ್ ಹೆಜ್ಮಾಡಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಚಿಂತನೆಗಳು ಮತ್ತು ಭಾರತದ ಸಂವಿಧಾನ ಬಗ್ಗೆ ರಜಾ- ಮಜಾ ಶಿಬಿರದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಲಾ ಸಂಗಮದ ಮುಖ್ಯಸ್ಥರಾದ ಗೀತಾ ಅರುಣ್ ದೀಪ ಪ್ರಜ್ವಲನೆ ಮಾಡಿದರು. ಶಿಬಿರಾರ್ಥಿ ಪುಟಾಣಿ ಜೃೆಷ್ಣವಿರವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಸುಪ್ರೀತಾ ಕೋಟ್ಯಾನ್ ಪಾಂಗಳ, ಶ್ವೇತಾ ಪಾಂಗಳ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿ, ದೀಪಾ ಕರ್ಕೇರ ವಂದಿಸಿದರು.