Updated News From Kaup

ತೊಕ್ಕೊಟ್ಟು ಅಕ್ರಮ ಗೋ ಮಾಂಸ‌ ಸ್ಟಾಲ್ ವಿರುದ್ಧ ದೂರು

Posted On: 07-01-2021 03:01PM

ತೊಕ್ಕೊಟ್ಟು ಒಳಪೇಟೆ ಮೀನುಮಾರುಕಟ್ಟೆ ಹತ್ತಿರ ರೈಲ್ವೆಗೆ ಸೇರಿದ ಸ್ಥಳದಲ್ಲಿ ಅಕ್ರಮವಾಗಿ ದನದ ಮಾಂಸದ ಸ್ಟಾಲ್ ತೆರೆದಿದ್ದು,ಇದರ ವಿರುದ್ಧ ಉಳ್ಳಾಲ ನಗರಸಭೆಯ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ರವರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳದ ಉಳ್ಳಾಲ ನಗರ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು.

ಉಳ್ಳಾಲ ನಗರ ಪ್ರಖಂಡದ ಸಂಚಾಲಕ್ ಅರ್ಜುನ್ ಮಾಡೂರು ಜಿಲ್ಲಾ ಸಹಗೋರಕ್ಷ ಪ್ರಮುಖ್ ಪವಿತ್ರ್ ಕೆರೆಬೈಲ್,ಪ್ರಖಂಡ ಗೋರಕ್ಷ ಪ್ರಮುಖ್ ರಕ್ಷಿತ್ ತೊಕ್ಕೊಟ್ಟು, ಸಾಪ್ತಾಹಿಕ ಪ್ರಮುಖ್ ಕೌಶಿಕ್ ಉಳ್ಳಾಲ ಬೈಲ್ ಉಪಸ್ಥಿತರಿದ್ದರು.

ಪಣಿಯೂರು : ಪಡುಬಿದ್ರಿ ರೈಲು ನಿಲ್ದಾಣದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾಲೋಚನಾ ಸಭೆ

Posted On: 07-01-2021 10:55AM

ಕಾಪು : ಬೆಳಪು ಗ್ರಾಮದ ಪಣಿಯೂರಿನಲ್ಲಿ ಇರುವ ಪಡುಬಿದ್ರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ, ಬೆಳಪು ರೈಲು ನಿಲ್ದಾಣ ಎಂದು ಪುನರ್ ನಾಮಕರಣ ಮಾಡುವಂತೆ ಹಾಗೂ ರೈಲ್ವೇ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಜೋಡಿಸಿ ಮುಂಬಯಿ - ಬೆಂಗಳೂರು ರೈಲುಗಳಿಗೆ ನಿಲುಗಡೆಗೆ ಒತ್ತಾಯಿಸಿ ಸುತ್ತಲಿನ ಗ್ರಾಮದ ಜನರನ್ನು ಸೇರಿಸಿಕೊಂಡು ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಸಲಾಯಿತು.

ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಬೆಳಪು ಗ್ರಾ.ಪಂ. ಮಾಜಿ ಸದಸ್ಯ ಕರುಣಾಕರ ಶೆಟ್ಟಿ ಪಣಿಯೂರು ಮಾತನಾಡಿ, ಬೆಳಪು ಗ್ರಾಮದಲ್ಲಿ ಇರುವ ರೈಲು ನಿಲ್ದಾಣವು ಪಡುಬಿದ್ರಿ ನಿಲ್ದಾಣ ಎಂಬ  ಹೆಸರಿನೊಂದಿಗೆ ಕರೆಯಲ್ಪಡುತ್ತಿದ್ದು ಇದರೊಂದಿಗೆ ವಿವಿಧ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಮುಂಬಯಿಗೆ ಹೋಗುವ ರೈಲು ಆದರೂ ನಿಲುಗಡೆಯಾಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಬಗ್ಗೆ ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ನಾವೆಲ್ಲರೂ ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಇದ್ದ ರೈಲುಗಳ ನಿಲುಗಡೆಯ ಅವಕಾಶದಿಂದಲೂ ವಂಚಿತರಾಗಬೇಕಾದೀತು ಎಂದರು. ಪತ್ರಕರ್ತ ರಾಕೇಶ್ ಕುಂಜೂರು ಬೆಳಪು ರೈಲು ನಿಲ್ದಾಣ, ರೈಲ್ವೇ ಟ್ರಾಕ್ ನ್ನು ದಾಟಿಕೊಂಡು ಹತ್ತಾರು ಕುಟುಂಬಗಳು ನಡೆದಾಡುತ್ತಿದ್ದು, ಕೃಷಿ ಕೆಲಸ ಕಾರ್ಯಗಳಿಗೂ ತೊಂದರೆಯುಂಟಾಗುತ್ತಿದೆ. ಕೊಂಕಣ ರೈಲು ಮಾರ್ಗಕ್ಕಾಗಿ ಹಲವಾರು ಕುಟುಂಬಗಳು ಭೂಮಿಯನ್ನು ಕಳೆದುಕೊಂಡಿದ್ದು, ಅವರಿಗೆ ಸರಿಯಾಗಿ ಉದ್ಯೋಗವೂ ಸಿಕ್ಕಿಲ್ಲ. ಕನಿಷ್ಟ ಪಕ್ಷ ಸ್ಥಳೀಯ ಜನರ ಬೇಡಿಕೆಯಂತೆ ಮುಂಬಯಿ - ಬೆಂಗಳೂರು ರೈಲುಗಳ ನಿಲುಗಡೆಯ ಬೇಡಿಕೆಯಾದರೂ ಈಡೇರಲಿ ಎಂಬ ಆಶಯದೊಂದಿಗೆ ನಾವು ಹೋರಾಟ ನಡೆಸಬೇಕಿದೆ ಎಂದರು.

ಬಿಜೆಪಿ ಮುಖಂಡ ಸುರೇಂದ್ರ ಪಣಿಯೂರು ಮಾತನಾಡಿ, ಬೆಳಪು ಮಾತ್ರವಲ್ಲದೇ ಸುತ್ತಲಿನ ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಎಲ್ಲೂರು, ಮುದರಂಗಡಿ, ಮಜೂರು, ಕುತ್ಯಾರು, ಶಿರ್ವ ಆಸುಪಾಸಿನ ಗ್ರಾಮಗಳ ಜನತೆಯ ಅನುಕೂಲಕ್ಕಾಗಿ ಬೆಳಪು ರೈಲು ನಿಲ್ದಾಣ ಮೇಲ್ದರ್ಜೆಗೇರಬೇಕಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆಗೆ ಮಾತುಕತೆ ನಡೆಸಲು, ವಿವಿಧ ಜನಪ್ರತಿನಿಧಿಗಳ ಬಳಿಗೆ ನಿಯೋಗ ತೆರಳುವ ಅಗತ್ಯತೆಯಿದೆ. ರೈಲು ನಿಲ್ದಾಣ ಮೇಲ್ದರ್ಜೆಗೇರುವ ಮತ್ತು ರೈಲು ನಿಲುಗಡೆಯ ಹೋರಾಟಕ್ಕೆ ನಾವೆಲ್ಲರೂ ಜೊತೆಗೂಡಿ ಕೈ ಜೋಡಸಿಸಬೇಕಿದೆ ಎಂದರು.   ಬೆಳಪು ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮತ್ತು ಮುಂಬಯಿ-ಬೆಂಗಳೂರು ರೈಲು ನಿಲುಗಡೆಗೆ ಹಕ್ಕೊತ್ತಾಯ ಮಂಡಿಸಲು ಮುಂದಿನ ದಿನಗಳಲ್ಲಿ ಬೆಳಪು ಸುತ್ತಲಿನ ಪ್ರತೀ ಗ್ರಾಮಗಳಲ್ಲಿ ಮತ್ತು ಮುಂಬಯಿ ಮಹಾನಗರದಲ್ಲೂ ಸಭೆ ನಡೆಸಲು ತೀರ್ಮಾನಿಸಲಾಯಿತು. ಅಂಚೆ ಕಾರ್ಡ್ ಮೂಲಕ ಹಕ್ಕೊತ್ತಾಯ ಮಂಡಿಸಲು ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಕ್ಕೊತ್ತಾಯ ಮಂಡನೆಗೆ ಪ್ರಮುಖರನ್ನು ಸೇರಿಸಿಕೊಂಡು ಕಾರ್ಯಕಾರಿ ಸಮಿತಿ ರಚಿಸಲು ನಿರ್ಧರಿಸಲಾಯಿತು.

ಬೆಳಪು ಗ್ರಾಮದ ಪ್ರಮುಖರಾದ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ನಿರಂಜನ್ ಶೆಟ್ಟಿ ಪಣಿಯೂರು, ಆನಂದ ಶೆಟ್ಟಿ ಕಬೇರಗುತ್ತು, ಸುಕುಮಾರ ಶೆಟ್ಟಿ ನಡಿಮನೆ, ವಸುಂಧರ್ ಶೆಟ್ಟಿ ಬುಳಿಬೆಟ್ಟುಗುತ್ತು, ದಿವಾಕರ ಶೆಟ್ಟಿ, ಶಿವ ಕುಮಾರ್, ವಸಂತ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಕರುಣಾಕರ ಶೆಟ್ಟಿ ಪಣಿಯೂರುಗುತ್ತು ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.

ಬಂಟಕಲ್ಲು : ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ ಸಿಸಿ ಟಿವಿ ಕೊಡುಗೆ ಹಾಗೂ ಪೊಲೀಸ್ ಜನ ಸಂಪರ್ಕ ಸಭೆ

Posted On: 06-01-2021 09:14PM

ಬಂಟಕಲ್ಲು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದವರು ಬಂಟಕಲ್ಲು ಆಸುಪಾಸು ನಡೆಯಬಹುದಾದ ಅಪರಾಧ ಕೃತ್ಯ, ಕಳ್ಳತನ , ದರೋಡೆಯಂತಹ ಅಪರಾಧಗಳ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಬಂಟಕಲ್ಲು ಪೇಟೆಯಲ್ಲಿ ಅಳವಡಿಸಿದ ಸಿ.ಸಿ ಕೆಮಾರ ವ್ಯವಸ್ಥೆಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶ್ರೀಶೈಲರವರು ಉದ್ಘಾಟಿಸಿದರು.

ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಠಾಣಾಧಿಕಾರಿಯವರು ಇಲಾಖಾಮಾಹಿತಿಯನ್ನು ನೀಡಿ ರಸ್ತೆ ಸುರಕ್ಷತೆ, ಚಾಲನಾ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುಣಾವಣೆಯಲ್ಲಿ ವಿಜಯಶಾಲಿಯಾದ ಸಂಘದ ಸದಸ್ಯ ಶ್ರೀ ಸತೀಶ್ ರವರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು.

ವೇದಿಕೆಯಲ್ಲಿದ್ದ ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಇದರ ಅಧ್ಯಕ್ಷ ಶ್ರೀ ಕೆ. ಆರ್. ಪಾಟ್ಕರ್ ರವರು ರಿಕ್ಷಾ ಚಾಲಕ ಮಾಲಕರ ಸಂಘದವರು ನೀಡಿದ ಸಿ.ಸಿ ಕೆಮಾರ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಬಂಟಕಲ್ಲು ಸಾರ್ವಜನಿಕ ಗಣೆಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ಮಾಧವ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾ.ಪಂ ಸದಸ್ಯೆ ಶ್ರೀಮತಿ ವೈಲೆಟ್ ಕ್ಯಾಸ್ತಲಿನೊ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀ ಉಮೇಶ್ ರಾವ್ , ಶ್ರೀ ಉಮೇಶ್ ಪ್ರಭು, ಲಯನ್ಸ್ ಕ್ಲಬ್ ಉಡುಪಿ ಕರಾವಳಿ ಅಧ್ಯಕ್ಷ ಲ. ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ವಿನ್ಸಂಟ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನವೀನ್ ಸನಿಲ್ ರವರು ಸ್ವಾಗತಿಸಿ, ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಶ್ರೀ ಗೋಪಾಲ ದೇವಾಡಿಗ ರವರು ವಂದಿಸಿದರು.

ದೇರಳಕಟ್ಟೆ ಸೇವಾಶ್ರಮದಲ್ಲಿ ವೃದ್ಧರೊಂದಿಗೆ ನಗು ನಲಿವು, ಆರೋಗ್ಯ ಮಾಹಿತಿ ಶಿಬಿರ

Posted On: 05-01-2021 07:20PM

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ (ರಿ) ಬಾಳ್ತಿಲ ಮತ್ತು ಸೇವಾಶ್ರಮ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಸೇವಾಶ್ರಮ ದೇರಳಕಟ್ಟೆ ಇಲ್ಲಿ ಉಚಿತ ರಕ್ತಪರೀಕ್ಷೆ , ಮಧುಮೇಹ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಾಗೂ ವೃದ್ಧರೊಂದಿಗೆ ನಗು ನಲಿವು ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ಇಂಜಿನಿಯರ್ ಶ್ರೀ ನಿತೇಶ್ ಕುಮಾರ್ ನೆರವೇರಿಸಿ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಹೇಳಿ ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು. ಟ್ರಸ್ಟಿ ಹಾಗೂ ಖ್ಯಾತ ವೈದ್ಯರಾದ ಶ್ರೀ ಡಾ.ರಾಜೇಶ್ ಪೂಜಾರಿ ಆರೋಗ್ಯ ಮಾಹಿತಿ ನೀಡಿ ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದರು.

ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ(ರಿ). ಬಾಳ್ತಿಲ. ಇದರ ಸಂಸ್ಥಾಪಕಿಯಾಗಿರುವ ವಕೀಲರಾದ ಶ್ರೀಮತಿ ಶ್ಯೆಲಜಾ ರಾಜೇಶ್ ರವರು ಮಾತಾನಾಡಿ ಅಮ್ಮಂದಿರು ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾರೆ. ಆದರೆ ಅವರನ್ನು ಆಶ್ರಮಕ್ಕೆ ಬಿಟ್ಟು ಪ್ರೀತಿಯಿಂದ ವಂಚಿತಗೊಳಿಸುವುದು ಎಷ್ಟು ಸರಿ. ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಮಗುವಾಗಿರುವಾಗ ಒಬ್ಬ ತಾಯಿ ನಮಗೋಸ್ಕರವಾಗಿಯೇ ಜೀವಿಸುತ್ತಾಳೆ. ಆಕೆಗೆ ವಯಸ್ಸಾದಾಗ ಅವಳನ್ನು ನಮ್ಮ ಮಗುವಂತೆ ಪ್ರೀತಿಸಿ ಎಂದು ಹೇಳಿದರು.

ಆಶ್ರಮವಾಸಿಗಳಿಗೆ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಆಶ್ರಮದ ಎಲ್ಲರಿಗೂ ಅವಶ್ಯಕ ದಿನ ಬಳಕೆ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿ ಶ್ರೀಮತಿ ಅನ್ನಪೂರ್ಣ ರಾಜೇಶ್ ಬಿ. ಸೇವಾಶ್ರಮದ ಮೇಲ್ವಿಚಾರಕ ಶ್ರೀ ಬಾಲಕೃಷ್ಣ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಮಾರಣಕಟ್ಟೆ : ಸರಳ ಮಕರ ಸಂಕ್ರಾಂತಿ ಉತ್ಸವ

Posted On: 05-01-2021 04:49PM

ಕುಂದಾಪುರ ತಾಲೂಕಿನ ಚಿತ್ತೂರು ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವವು ಜನವರಿ 14ರಿಂದ 16ರವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು. ಸಾರ್ವಜನಿಕರಿಗೆ ಗೆಂಡ ಸೇವೆಗೆ ಅವಕಾಶವಿಲ್ಲ. ಉಳಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು. ಮಹಾಮಂಗಳಾರತಿ ಜನವರಿ 14ರಂದು ಪೂರ್ವಾಹ್ನ 8:30 ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೇ ವರ್ಧಂತಿ ಉತ್ಸವ ಸಂಪನ್ನ

Posted On: 05-01-2021 04:27PM

ಕಾಪು ಶ್ರೀ ಹಳೇ ಮಾರಿಗುಡಿ ದೇವಳದಲ್ಲಿ ಇಂದು ದೇವಿಯ ಸನ್ನಿಧಾನದಲ್ಲಿ ಕಾಪುವಿನ ಇತಿಹಾಸದಲ್ಲೇ ಮೊದಲೆಂಬಂತೆ ಲಕ್ಷಾಂತರ ಭಕ್ತಾದಿಗಳ ಕೂಡುವಿಕೆಯಿಂದ ಒಂಬತ್ತು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗಿದ ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೆಯ ವರ್ಧಂತಿ ಉತ್ಸವ ಜರಗಿತು.

ಈ ಪ್ರಯುಕ್ತ ಶ್ರೀ ದೇವಿಯ ಸನ್ನಿಧಿಯಲ್ಲಿ ಪಂಚದುರ್ಗಾ ಹವನ ಪೂರ್ಣಾಹುತಿ, ಅನ್ನಸಂತರ್ಪಣೆ, ವಿಶೇಷ ಪೂಜೆ ಇತ್ಯಾದಿಗಳು ಜರುಗಿದವು.

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Posted On: 05-01-2021 02:36PM

ಬೈರುಗುತ್ತು, ದೊರೆಗಳ ಗುತ್ತು, ಪಿಲಿಚಂಡಿ ಮನೆ, ಸಾನದ ಮನೆ, ಗರಡಿ ಮನೆ ಇತ್ಯಾದಿ ಒಟ್ಟು 16 ಕಾಣಿಕೆಯ ಮನೆಗಳ ಸೇರುವಿಕೆಯಲ್ಲಿ ಇಂದು ಕಾಪು ಮಾರಿಗುಡಿಯಲ್ಲಿ ದೇವಿಯ ನುಡಿಯಂತೆ ಸರಕಾರದ ನಿಯಮಾವಳಿಗಳ ಪ್ರಕಾರ ಮೇ 18ರಿಂದ ಪ್ರಾರಂಭವಾಗಿ 22 ರಂದು ಇತಿಹಾಸ ಪ್ರಸಿದ್ಧ ಪಿಲಿ ಕೋಲ ನಡೆಸುವುದೆಂದು ದಿನ ನಿಗದಿಪಡಿಸಲಾಯಿತು. ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಬಂಟಕಲ್ : ಝಿಝೋ ಎಜುಕೇಷನ್ ಸೆಂಟರ್ ಉದ್ಘಾಟನೆ

Posted On: 04-01-2021 07:00PM

ಕಾಪು ತಾಲೂಕಿನ ಬಂಟಕಲ್ ಮುಖ್ಯರಸ್ತೆಯ ಮೈತ್ರಿ 3 ಕಾಂಪ್ಲೆಕ್ಸಿನ ಝಿಝೋ ಎಜುಕೇಷನ್ ಸಂಸ್ಥೆಯನ್ನು ಝಿಝೋ ಸಿಸ್ಟರ್ಸ್ ಝಿಯಾ ಮತ್ತು ಝೋ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಶಿಯಸ್ ಕಾಲೇಜ್ ಮಂಗಳೂರಿನ ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ಪಾಂಬೂರು ಹೋಲಿ ಚರ್ಚಿನ ಧರ್ಮಗುರುಗಳಾದ ರೆ. ಫಾ. ಹೆನ್ರಿ ಮಸ್ಕರೇನಸ್ ಉಪಸ್ಥಿತರಿದ್ದರು.

ವಿಜಯ್ ಧೀರಜ್ ಸ್ವಾಗತಿಸಿದರು , ರಿಚಿ ವಂದಿಸಿದರು. ವಿದ್ಯಾಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ : ವಾರ್ಷಿಕ ಸಮ್ಮಿಲನ ಮಿನದನ

Posted On: 04-01-2021 06:30PM

ಗರಡಿಯ ಧಾರ್ಮಿಕತೆಯಲ್ಲಿ ಹಿರಿಯರು ಕಿರಿಯರನ್ನು ಜೊತೆಗೂಡಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದು ಓಟ್ಲ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಹೇಳಿದರು. ಪಾಂಗಾಳ ಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ ಇದರ ನಾಲ್ಕನೇ ವರ್ಷದ ವಾರ್ಷಿಕ ಸಮ್ಮಿಲನ ಮಿನದನ 2020- 21 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಣಿ ಅಬ್ಬಕ್ಕ ಪ್ರಾಚ್ಯವಸ್ತು ಸಂಗ್ರಹಾಲಯದ ಅಧ್ಯಕ್ಷರಾದ ಪ್ರೊ. ತುಕಾರಾಮ ಪೂಜಾರಿ ಯುವಜನರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವಲ್ಲಿ ಮಾಧ್ಯಮದ ಪಾತ್ರ, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ ಗರಡಿಗಳಲ್ಲಿ ಮಾಯಂದಾಲ್ ಆಚರಣೆ, ಪಾಂಗಾಳ ಗುಡ್ಡೆ ಗರಡಿ ಸುಧಾಕರ ಡಿ. ಅಮೀನ್ ಗರೋಡಿ ಮತ್ತು ಸಮುದಾಯದ ನಡುವೆ ಸಾಮರಸ್ಯ ಮೂಡಿಸುವಲ್ಲಿ ಗುರಿಕಾರರ ಪಾತ್ರದ ಬಗ್ಗೆ ವಿಚಾರ ಮಂಡಿಸಿದರು.

ಸನ್ಮಾನ : ಹಿರಿಯ ಬೈದರ್ಕಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ, ಚಂದ್ರಕಾಂತ ಯಾನೆ ಕಾಂತು ಪೂಜಾರಿ ಕಲ್ಲುಗುಡ್ಡೆ, ಬೈದರ್ಕಳ ಪೂಜಾ ಪೂಜಾರಿ ವಿಶ್ವನಾಥ್ ಅಮೀನ್ ಕಳತ್ತೂರು, ಸಾಧಕ ಸುರೇಂದ್ರ ಮೋಹನ್ ರನ್ನು ಸನ್ಮಾನಿಸಲಾಯಿತು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಂಗಾಳ ಗುಡ್ಡೆ ಗರಡಿಯ ಆಡಳಿತ ಮೊಕ್ತೇಸರ ಶೇಖರ ಜಿ. ಅಮೀನ್, ಗರಡಿ ಗುರಿಕಾರ ಜಯ ಡಿ. ಅಮೀನ್, ವಿವಿಧ ಗರಡಿಗಳ ಪ್ರಮುಖರು ಉಪಸ್ಥಿತರಿದ್ದರು. ಸಂಘಟಕ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸ್ವಾಗತಿಸಿ, ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಪ್ರಸ್ತಾವನೆಗೈದರು. ಯಶ್ ಅಮೀನ್ ಪಾಂಗಾಳ ಗುಡ್ಡೆ ಗರಡಿ ವಂದಿಸಿ, ಪಾಂಡು ಕೋಟ್ಯಾನ್ ಮತ್ತು ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಶಂಕರಪುರದಲ್ಲಿ ಆರಂಭವಾಗಲಿದೆ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್

Posted On: 03-01-2021 03:32PM

2010ರಿಂದ ಉತ್ತಮ ಫಲಿತಾಂಶ ನೀಡಿರುವ ಅನುಭವದೊಂದಿಗೆ ಇದೀಗ ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್ ಕರ್ನಾಟಕ ಬೋರ್ಡ್ ಮತ್ತು ಸಿಬಿಎಸ್ಇಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಕ್ಲಾಸಸ್ ಮೂಲಕ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ ಕೋಚಿಂಗ್ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Mrs. Nevia D'costa M.Sc (Physics) Ph.No.: 6366218099