Updated News From Kaup
ಮೇ.29 - 30 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ - ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ; ನಿಧಿಕುಂಭ ಸ್ಥಾಪನೆ

Posted On: 19-05-2025 12:51PM
ಪಡುಬಿದ್ರಿ : ಸುಮಾರು 30 ಕೋಟಿ ವೆಚ್ಚದಲ್ಲಿ ಶಾಸ್ತ್ರೀಯ ನೆಲೆಗಟ್ಟಿನಲ್ಲಿ, ಶಿಲ್ಪ ವಿನ್ಯಾಸಗಳೊಂದಿಗೆ ಪರಿಷ್ಕೃತಗೊಳಿಸಿ ಪುನರಚಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ಸಂಕಲ್ಪಿಸಲಾಗಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಮೇ.29 ರಂದು ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ಹಾಗೂ ಮೇ.30ರಂದು ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ನಿಧಿಕುಂಭ ಸ್ಥಾಪನೆಯು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಸೋಮವಾರ ಪಡುಬಿದ್ರಿಯಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಕಳ - ಹೆಬ್ರಿ ಪರಿಸರದಲ್ಲಿ ಶ್ರೀ ದೇಗುಲದ ಧ್ವಜಸ್ತಂಭಕ್ಕಾಗಿ ದಾನಿಗಳ ಸಹಕಾರದಿಂದ ಈಗಾಗಲೇ ಸುಮಾರು 65 ಅಡಿ ಎತ್ತರದ ಬೋಗಿಯ ಮರವೊಂದನ್ನು ಆರಿಸಲಾಗಿದೆ. ಮೇ. 29ರಂದು ಅಜೆಕಾರು, ಕಾರ್ಕಳ, ಜೋಡುರಸ್ತೆ, ಬೆಳ್ಮಣ್ ಮಾರ್ಗವಾಗಿ ಈ ನೂತನ ಧ್ವಜಸ್ತಂಭದ ಮರವು ಆಗಮಿಸಲಿದ್ದು ಭಕ್ತರು ಇದು ಸಾಗಿ ಬರುವ ಹಾದಿಯಲ್ಲಿ ಅಲ್ಲಲ್ಲಿ ಸ್ವಾಗತಿಸಿ ಬೀಳ್ಕೊಡಲಿರುವರು. ಅಂದು ಸಂಜೆಯ ವೇಳೆಗೆ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಅದನ್ನು ಸ್ವಾಗತಿಸಿ ವೈಭವದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪಡುಬಿದ್ರಿಗೆ ತರಲಾಗುವುದು. ಮೇ 30ರಂದು ಶ್ರೀ ಕ್ಷೇತ್ರದಲ್ಲಿನ ಉಪಸ್ಥಾನ ಸಾನ್ನಿಧ್ಯ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಭಕ್ತರ ಭಕ್ತಿಯ ಸಂಕೇತವಾಗಿ ನಿಧಿ ಕುಂಭ ಸ್ಥಾಪನೆಯ ಕಾರ್ಯವು ಬೆಳಿಗ್ಗೆ ಗಂಟೆ 7:12ರ ಮುಹೂರ್ತದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯುವ ಆಗಮೋಕ್ತ ವಿಧಿ ವಿಧಾನಗಳ ಸಂದರ್ಭದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಲಿರುವರು.
ಈ ನಿಧಿಕುಂಭದಲ್ಲಿ ಭಕ್ತರಿಗೆ ಶುದ್ಧ ಚಿನ್ನ, ಬೆಳ್ಳಿ, ನವರತ್ನಗಳನ್ನು ಅರ್ಪಿಸುವ ಸದವಕಾಶಗಳಿದ್ದು ವಾರದ ಮುಂಚಿತವಾಗಿಯೇ ಈ ಚಿನ್ನ, ಬೆಳ್ಳಿಯ ನಾಣ್ಯಗಳನ್ನು ಶ್ರೀ ದೇವಸ್ಥಾನದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಭಕ್ತರು ಮನೆಯಿಂದ ತರುವ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಶ್ರೀ ದೇಗುಲದ ಕಚೇರಿಗೆ ತೋರಿಸಿ ಅರ್ಪಿಸಬಹುದು. ಕಾರ್ಕಳದ ಗುತ್ತಿಗೆದಾರರಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖಾ ನಿಬಂಧನೆಗಳ ಅನುಸಾರವಾಗಿ ಲೋಕೋಪಯೋಗಿ ಇಲಾಖಾ ಅನುಮತಿ ಸಹಿತವಾಗಿ ಈಗಾಗಲೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿದ್ದು ಸಾಮಾನ್ಯ ನೆಲಮಟ್ಟದಲ್ಲಿಯವರೆಗೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರವೀಂದ್ರನಾಥ ಜಿ.ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ ನಡ್ಸಾಲು ಗುತ್ತು, ಶ್ರೀ ದೇವಳದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಗುರುರಾಜ್ ಭಟ್, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಕುಕ್ಕುಂಜ, ಮಲಂಗೋಳಿ ರಸ್ತೆ ದುರಸ್ತಿಗೊಳಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಶಾಸಕರಿಗೆ ಮನವಿ

Posted On: 18-05-2025 04:58PM
ಕಾಪು : ತಾಲೂಕಿನ ಕುತ್ಯಾರು ಗ್ತಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಜ, ಮಲಂಗೋಳಿ ಭಾಗದ ರಸ್ತೆ ದುರಸ್ತಿ ಸೇರಿದಂತೆ ಊರಿನ ಹಲವು ಬೇಡಿಕೆಗಳ ಕುರಿತು ಬಿಜೆಪಿ ಪಕ್ಷದ ಹಿರಿಯರಾದ ಪ್ರಭಾಕರ್ ಶೆಟ್ಟಿ ಪಡುಮನೆ ಕಳತ್ತೂರು ಮುಂದಾಳತ್ವದಲ್ಲಿ ಭಾನುವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿದ ಶಾಸಕರು ಶೀಘ್ರದಲ್ಲಿ ಎಲ್ಲಾ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಉದಯ ಕುಲಾಲ್, ಪ್ರದೀಶ್ ಶೆಟ್ಟಿ, ಪ್ರಥ್ವಿರಾಜ್ ಆರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವಲ್ಲಿ ಅಯ್ಯಪ್ಪ ವೃತವು ಕಾರಣ : ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು

Posted On: 18-05-2025 04:15PM
ಕಟಪಾಡಿ : ಅನೇಕ ದೇವಸ್ಥಾನಗಳಿರುವ ಉಡುಪಿ, ದ.ಕ ಜಿಲ್ಲೆಯನ್ನು ದೇವರನಾಡೆಂದು ಹೇಳಬಹುದು. ಪಾಜಕ ಕ್ಷೇತ್ರ, ದುರ್ಗಾದೇವಿ ಸನ್ನಿಧಾನ, ಪರಶುರಾಮ ಸನ್ನಿಧಾನವನ್ನು ಸುತ್ತುವರಿಯುವ ಮೂಲಕ ಕಟಪಾಡಿ ಏಣಗುಡ್ಡೆಯ ಪಂಪಾ ಕ್ಷೇತ್ರದ ಅಯ್ಯಪ್ಪ ಸನ್ನಿಧಾನವು ಪಾವಿತ್ರ್ಯ ತರುವ ಕಾರ್ಯವಾಗಿದೆ. ಹಿಂದು ಧರ್ಮದ ಉಳಿವಿನೊಂದಿಗೆ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವಲ್ಲಿ ಅಯ್ಯಪ್ಪ ವೃತವು ಕಾರಣವಾಗಿದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಹೇಳಿದರು. ಅವರು ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ವತಿಯಿಂದ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಕಾರ್ಯಕ್ರಮ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕಟಪಾಡಿಯ ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ 40 ವರ್ಷಗಳ ನಂತರ ಸುಮಾರು 5 ಕೋಟಿ ವೆಚ್ಚದ ದೇವಳ ನಿರ್ಮಾಣದ ಕನಸು ಕಂಡಿದ್ದಾರೆ. ನನಸಾಗಲಿ ಎಂದರು.

ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಿಸಲು 30 ಸೆಂಟ್ಸ್ ನಿವೇಶನವನ್ನು ದಾನವಾಗಿ ನೀಡಿರುವ ಯುವ ಉದ್ಯಮಿ ರಿಶಾನ್ ಟಿ ಮತ್ತು ಪ್ರಮೀಳಾ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಚಂದ್ರಹಾಸ ಗುರುಸ್ವಾಮಿ ಮುಂಬೈ, ರಾಘು ಪೂಜಾರಿ ಕಲ್ಮಂಜೆ, ದಯಾನಂದ ವಿ ಬಂಗೇರ, ಪಲ್ಲಿ ಲಕ್ಮೀನಾರಾಯಣ ಹೆಗ್ಡೆ, ಶಶಿಧರ ವಾಗ್ಳೆ, ಶಶಿಧರ ಶೆಟ್ಟಿ ಮುಂಬೈ, ಯೋಧ ಸಚಿನ್ ಕರ್ಕೇರ, ನವೀನ್ ಅಮೀನ್ ಶಂಕರಪುರ, ಶಿವಪ್ರಸಾದ್ ಕಟಪಾಡಿ, ಸಂತೋಷ್ ಸುವರ್ಣ ಬೊಳ್ಜೆ, ರಾಧಾಕೃಷ್ಣ ಮೆಂಡನ್, ರಾಜೇಶ್ ಮಸ್ಕತ್, ಭುವನ್, ಗುರುಸ್ವಾಮಿ ಸುರೇಶ್ ಜತ್ತನ್ ಕಟಪಾಡಿ, ಅಧ್ಯಕ್ಷ ರಿಯಾನ್ ಟಿ ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ.ಸನಿಲ್ ಅಚ್ಚಡ ಕಟಪಾಡಿ ಉಪಸ್ಥಿತರಿದ್ದರು.
ಕ್ಷೇತ್ರದ ತಂತ್ರಿಗಳಾದ ವೆ| ಬ್ರ| ಶ್ರೀ| ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಚಿನ್ ಕರ್ಕೇರ ಪ್ರಾರ್ಥಿಸಿ, ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ನಿರೂಪಿಸಿದರು.
ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

Posted On: 18-05-2025 03:56PM
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ 15ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರ್ ವಿದ್ಯಾ ಮಂದಿರ ಶಾಲೆಯ ಸಾಗರ ದರ್ಶಿನಿ ವೇದಿಕೆಯಲ್ಲಿ ನೆರವೇರಿತು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಲೀಲಾಧರ್ ಸಾಲಿಯಾನ್, ವಿದ್ಯಾಶ್ರೀ, ನೀತಾಗುರುರಾಜ್, ಚಂದ್ರಶೇಖರ್, ಅಶೋಕ್ ಸಾಲಿಯಾನ್, ಗಂಗಾಧರ ಕರ್ಕೇರ, ಅಜಿತ್ ಶೆಟ್ಟಿ, ಮಿಥುನ್ ಆರ್ ಹೆಗ್ಡೆ, ವಿಶ್ವಾಸ್ ಅಮೀನ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.
ವರ್ಷಿಣಿ ಎಲ್ ಕರ್ಕೇರ ಪ್ರಾರ್ಥಿಸಿದರು. ಕಿರಣ್ ರಾಜ್ ಕರ್ಕೇರ ಸ್ವಾಗತಿಸಿದರು. ಸಂತೋಷ್ ಎಚ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ದಿಶನ್ ಪುತ್ರನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಅರ್ಬುದ

Posted On: 18-05-2025 03:43PM
ಯಾರು ಬಲ್ಲರು ನಿನ್ನ ಮಾಯಕಾರತನವ ??? ಸುದ್ಧಿಯಿಲ್ಲದೆ ಸ್ವಯಂಭು ಮೂರ್ತಿವೆತ್ತು ಬಲಿತು ಮದ್ದಿಗೂ ಬಗ್ಗದೆ ಬುದ್ಧಿಗೆ ಒಗ್ಗದೆ ಸಿದ್ಧಿಗೂ ಸಿಗದೆ ತಂದೊಡ್ಡುವೆ ಬದುಕಿಗೂ ಸಾವಿಗೂ ನರಕ ಯಾತನೆ ಬಂದೊದಗುವೆ ಬಾಳಿಗೆ ನಿತ್ಯ ಕಂಠಕನಾಗಿ ಬಡವನೋ ಬಲ್ಲಿದನೋ ಬಾಲ್ಯ ಯೌವ್ವನ ವೃದ್ಧಾಪ್ಯ ನಿನಗಿಲ್ಲ ಬೇಧ ಅರ್ಬುದರಾಯ ಕಡು ಸಮಾನತೆಯ ಜೀವ ಭಕ್ಷಕ ಹರಿಕಾರ ಮಡುವಿಕೊಳ್ಳುತಿ ದಶಪಾದಗಳಲಿ ಏಡಿರಾಯ
ನಿನ್ನ ಆಗಮ ಉಗಮ ಜಂಗಮತನ ಮೌನದ ಮುಸುಕಿನಲಿ ಮತ್ತೆ ಮತ್ತೆ ಉಲ್ಬಣ ಎಣಿಸಲಾರದ ಪರಮ ಸೋಜಿಗವದು ಬಣ್ಣಿಸಲಾರದ ನಿನ್ನ ಪರಮ ನೀಚತನವದು ರಸಹೀರಿ ಕಸವಾಗಿಸಿ ಬಸವಳಿಸಿ ಕಸುವ ಬಳಲಿಸಿ ಬರಿದಾಗಿಸಿ ಅಸುವ ಅಪರಿಸುವ ಓ! ಅರ್ಬುದ ಅಸುರ ತನದ ನಿನ್ನ ನಡೆ ಅದಕ್ಕಿಂತ ಕಡೆ
ಶ್ವೇತ ರಕುತ ಕಣಗಳು ಮರಣಿಸದಿರಲು ನಿನ್ನ ಜನನ ನಿತ್ಯ ಬಲಗೊಳ್ಳುತ ಅಂಗದಿಂದ ಅಂಗಕೆ ಪಯಣ ಮರ್ತ್ಯರ ಜೀವ ಜೀವನದಲಿ ಅತಿಕ್ರಮಣ ಸತ್ವವ ಕಸಿದು ಚೈತನ್ಯ ಬಸಿದು ಕಬಳಿಸುತಿ ನೀ ಪ್ರಾಣ ಶಿರಡಿ ಸಾಯಿನಾಥರ ಗುರು ಪರಮಹಂಸರ ಪರಮ ಯೋಗಿ ರಮಣರ ವಿಶ್ವಕವಿ ರವೀಂದ್ರರ ವರಕವಿ ಬೇಂದ್ರೆಯವರ ಮೇಹರಬಾಯಿ ಟಾಟಾರವರ ಹರಣ ಕಸಿದ ನಿನಗೆ ಸಾಮಾನ್ಯರೇನು ಮಹತ್ತರ ??
ಕರಾಳ ಕಂಬಂಧ ಬಾಹುಗಳ ಚಾಚಿ ನಿರಂತರ ಹಸಿ ರಕುತವ ಬಸಿವ ಪಿಶಾಚಿ ಕರುಣೆಯಿರಲಿ ಕಡು ಬಡವರ ಮೇಲೆ ಸೈರಣೆಯಿಂದಲಿ ತಗ್ಗಿಸು ನಿನ್ನ ಲೀಲೆ ಯಾರು ಬಲ್ಲರು ನಿನ್ನ ಮಾಯಕಾರ ತನವ ??? ಉದಯ ಬಿ. ಶೆಟ್ಟಿ, ಪಂಜಿಮಾರು
ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು : ಡಾ. ನಿಕೇತನ

Posted On: 18-05-2025 03:35PM
ಉಡುಪಿ : ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆಯಾಗಿದೆ. ನಮ್ಮ ಸಾಹಿತ್ಯ ವಿವಿಧ ಮಜಲುಗಳನ್ನು ಸ್ಪರ್ಶಿಸಿ ವಿವಿಧ ರಂಗಕ್ಕೆ ಕಾಲಿಟ್ಟರೂ ಕೂಡ ಅದರ ಮೌಲ್ಯವನ್ನು ಕಳೆದುಕೊಳ್ಳದೆ ಇನ್ನಷ್ಟು ಎತ್ತರಕ್ಕೆ ಏರಿದೆ ಎಂದು ಪ್ರಾಧ್ಯಾಪಕಿ, ಸಾಹಿತಿ ಡಾ. ನಿಕೇತನ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ನಡೆದ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ಕಲಾಯತನ ಸಾಹಿತ್ಯ ಯಕ್ಷ ಸಂಭ್ರಮ' ದಲ್ಲಿ ಸಮಾರೋಪ ಭಾಷಣ ಮಾಡಿದರು. ಸಾಮಗರವರ ದೈತ್ಯ ಪ್ರತಿಭೆ ಅವರ ಮಾನವೀಯತೆಯ ನಡೆ ಅಭಿನಂದನಾಹ೯ ಕನ್ನಡ ಮತ್ತು ಆಂಗ್ಲ ಭಾಷೆಯ ಅವರ ಪ್ರೌಢಿಮೆ ಅವರು ನಾಡಿಗೆ ಕೊಟ್ಟಂತ ಶ್ರೇಷ್ಠ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿದೆ. ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು. ಈ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಚರ್ಚೆಗಳು ವಿಚಾರಗೋಷ್ಠಿ ಯಕ್ಷ ಕವಿಗೋಷ್ಠಿ ಸೇರಿದಂತೆ ಬಹಳಷ್ಟು ಉತ್ತಮವಾದ ಕಾರ್ಯಕ್ರಮಗಳು ನಡೆದಿದೆ ಎಂದರು.
ಸಮ್ಮೇಳನದ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಮಾತನಾಡಿ, ಮಲ್ಪೆ ಎಂದರೆ ಎಲ್ಲರಿಗೂ ನೆನಪಾಗುವುದು ಶಂಕರನಾರಾಯಣ ಸಾಮಗ ಅಂತ ಶ್ರೇಷ್ಠ ವ್ಯಕ್ತಿ ಅವರು ಕೊಟ್ಟಂತಹ ಕೊಡುಗೆಗಳು ನಮ್ಮನ್ನು ಈ ಎತ್ತರಕ್ಕೆ ಏರಿಸುತ್ತಿದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನದ ಕಲಾವಿದರನ್ನು ಸಮ್ಮೇಳನ ಅಧ್ಯಕ್ಷ ಮಾಡಿರೋದು ಯಕ್ಷಗಾನಕ್ಕೆ ನೀಡಿದ ದೊಡ್ಡ ಅಭಿನಂದನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಮನೆ ಮಾತಾಗಿದೆ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ವೆಂಕಟ್ರಮಣ ಐತಾಳ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣಿೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್, ಕಾರ್ಯದರ್ಶಿ ಸತೀಶ್ ಕೊಡವೂರು, ತಾಲೂಕು ಪದಾಧಿಕಾರಿಗಳಾದ ಜನಾರ್ಧನ ಕೊಡವೂರು, ರಾಜೇಶ್ ಭಟ್ ಪಣಿಯಾಡಿ, ರಂಜಿನಿ ವಸಂತ್ ಮುಂತಾದವರು ಉಪಸ್ಥಿತರಿದ್ದರು.
ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಮ್ಮೇಳನದ ಅಧ್ಯಕ್ಷ ದಂಪತಿಗಳಿಗೆ ಗೌರವಿಸಲಾಯಿತು. ಪ್ರಭಾಕರ್ ತುಮರಿ ಮತ್ತು ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು ರಂಜನಿ ವಸಂತ್ ವಂದಿಸಿದರು. ನಂತರ ಯಕ್ಷ ರಂಗಾಯಣ ಇವರಿಂದ ಕುಮಾರವ್ಯಾಸ ಭಾರತ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ಕಾರ್ಯಕ್ರಮ ನಡೆಯಿತು.
ಮೇ.18 : ಕಟಪಾಡಿಯಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ

Posted On: 17-05-2025 08:34PM
ಕಟಪಾಡಿ : ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.) ವತಿಯಿಂದ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಮೇ.18, ಆದಿತ್ಯವಾರ ಬೆಳಗ್ಗೆ 9.47ಕ್ಕೆ ನಡೆಯಲಿದೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮತ್ತು ಗಣ್ಯರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಸ್ಥಾಪನೆ, ಮುಷ್ಠಿಕಾಣಿಕೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ನೆರವೇರಿಸಲಿರುವರು.
ಈ ದೇವಳದಲ್ಲಿ ಅಯೋಧ್ಯೆಯ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಲ್ಲಿ ಕೆತ್ತಿದ ಅಯ್ಯಪ್ಪಸ್ವಾಮಿ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುವುದು.
ಕ್ಷೇತ್ರದ ಪ್ರಧಾನ ತಂತ್ರಿ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗುರುಸ್ವಾಮಿ ಸುರೇಶ್ ಜತ್ತನ್ ಕಟಪಾಡಿ, ಅಧ್ಯಕ್ಷ ರಿಯಾನ್ ಟಿ ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ.ಸನಿಲ್ ಅಚ್ಚಡ ಕಟಪಾಡಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪುವಿನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್ಶಿಪ್ 2025

Posted On: 15-05-2025 04:46PM
ಕಾಪು : ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ ವತಿಯಿಂದ ಎಐಸಿಎಫ್ ದೆಹಲಿ, ಕೆಎಸ್ಸಿಎ ಬೆಂಗಳೂರು ಮತ್ತು ಯುಡಿಸಿಎ ಉಡುಪಿ ಮೇರೆಗೆ ಕಾಪುವಿನಲ್ಲಿ ಪ್ರಥಮ ಬಾರಿಗೆ ಮೇ.23 ರಿಂದ ಮೇ.25ರವರೆಗೆ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್ಶಿಪ್ 2025 ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ ಜರಗಲಿದೆ ಎಂದು ಸಂಸ್ಥೆಯ ಸ್ಥಾಪಕ ಮಾ| ಸಾಕ್ಷಾತ್ ಯು.ಕೆ.ಕಾಪು ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
3 ವರ್ಷದಿಂದ 15 ವರ್ಷದೊಳಗಿನ ಬಾಲಕ ಬಾಲಕಿಯರು, ಅಂದಾಜು 300 ಚೆಸ್ ಕ್ರೀಡಾಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 100 ಟ್ರೋಪಿ ಹಾಗೂ ರೂ.50,000/- ನಗದು ಬಹುಮಾನವನ್ನು ನೀಡಲಾಗುವುದು. ವಯೋಮಿತಿ 15 ಬಾಲಕ ಬಾಲಕಿಯರಿಗೆ 10 ರಂತೆ 20 ಟ್ರೋಪಿ ಹಾಗೂ ರೂ.50,000/- ನಗದು ಹಾಗೂ ಚೆಸ್ ಕ್ರೀಡಾಕೂಟಗಳನ್ನು ಪ್ರೋತ್ಸಾಹಿಸಲು ವಯೋಮಿತಿ 7,9,11,13 ರ ಬಾಲಕರಿಗೆ 10, ಬಾಲಕಿಯರಿಗೆ 10 ರಂತೆ 4 ವಿಭಾಗದಲ್ಲಿ 80 ಟ್ರೋಪಿ ಮತ್ತು ವಯೋಮಿತಿ 7 ರಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಟ್ರೋಪಿಯನ್ನು ನೀಡಲಾಗುವುದು.
ವಯೋಮಿತಿ 15ರಲ್ಲಿ ಪ್ರಥಮ ಬಾಲಕರು 4 ಹಾಗೂ ಬಾಲಕಿಯರು 4 ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಷ್ಟ್ರಮಟ್ಟದ ಪಂದ್ಯದ ನೊಂದಣಿ ಶುಲ್ಕವನ್ನು ನಮ್ಮ ಸಂಸ್ಥೆಯಿಂದ ಭರಿಸಲಾಗುವುದು. ನಮ್ಮ ಸಂಸ್ಥೆಯ 26ನೇ ಚೆಸ್ ಸ್ಪರ್ಧೆಯಲ್ಲಿ ವಯೋಮಿತಿ 15ರ ಒಳಗಿನ ಎಲ್ಲಾ ಕ್ರೀಡಾಳುಗಳು ಭಾಗವಹಿಸಬೇಕಾಗಿ ಕೋರಲಾಗಿದೆ.
ಮೇ.23ರಂದು ಬೆಳಿಗ್ಗೆ ಗಂಟೆ 9ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಕರಾಗಿ, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರು ಪ್ರಸಾದ್ ಜಿ. ಶೆಣೈ ಕಾಪು ಇವರ ಅಧ್ಯಕ್ಷತೆಯಲ್ಲಿ, ಶ್ರೀಧರ್ ಶೆಣೈ ಕಾಪು, ರಾಮ ನಾಯಕ್, ಪ್ರಭಾಕರ ಪೂಜಾರಿ, ವಿಕ್ರಮ್ ಕಾಪು, ಡಾ. ವ್ಯಾಸರಾಜ ತಂತ್ರಿ, ಡಾ. ಕಲ್ಯಾ ರಾಜ್ಗೋಪಾಲ್ ಶೆಣೈ, ಅವಿನಾಶ್ ಶೆಟ್ಟಿ, ಸೀತಾರಾಂ ಭಟ್, ರಾಘವೇಂದ್ರ ವೈ.ಟಿ., ದಿವಾಕರ ಶೆಟ್ಟಿ ಕಾಪು, ಅಶೋಕ್ ಕುಮಾರ್ ಶೆಟ್ಟಿ, ಸುನಿಲ್ ಪೂಜಾರಿ, ಸುಧಾಕರ ಸಾಲ್ಯಾನ್, ಟಿ.ಎನ್. ಮಧುಕರ್ ತುಮಕೂರು, ರಮೇಶ್ ಕೋಟೆ ಭಾಗವಹಿಸಲಿದ್ದಾರೆ. ಸಮಾರೋಪವು ಮೇ.25ರಂದು ಸಂಜೆ ಗಂಟೆ 5ಕ್ಕೆ ನೆರವೇರಲಿದೆ. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು 9341111024 ಕ್ಕೆ ತಿಳಿಸಬಹುದು ಎಂದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಉಮಾನಾಥ ಕಾಪು, ನಿರ್ದೇಶಕಿ ಶ್ರೀಮತಿ ಸೌಂದರ್ಯ ಯು.ಕೆ. ಕಾಪು, ಸಂಸ್ಥೆಯ ಸಲಹೆಗಾರರಾದ ಪೆನ್ವಿಲ್ ಸೋನ್ಸ್, ನಾಗೇಶ ಕಾರಂತ್ ಪಾಂಗಾಳ ಉಪಸ್ಥಿತಿಯಿದ್ದರು.
ಮೇ. 16 : ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ 15ನೇ ವರ್ಷದ ವಾರ್ಷಿಕೋತ್ಸವ

Posted On: 15-05-2025 04:40PM
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ, ಕರಾವಳಿ ಸ್ಟಾರ್ಸ್ ನಡಿಪಟ್ಟ ಇವರಿಂದ ನೃತ್ಯ ವೈವಿಧ್ಯ, ಅರುಣ್ ಕಾಪು ಇವರಿಂದ ಸಂಗೀತ ಸಂಜೆ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ತುಳು ಚಾರಿತ್ರಿಕ ನಾಟಕ ಛತ್ರಪತಿ ಶಿವಾಜಿ ಮೇ.16, ಶುಕ್ರವಾರ ಸಂಜೆ 5ಗಂಟೆಯಿಂದ ಸಾಗರ್ ವಿದ್ಯಾ ಮಂದಿರ ಶಾಲಾ ವಠಾರದಲ್ಲಿ ಜರಗಲಿದೆ ಎಂದು ಕರಾವಳಿ ಸ್ಟಾರ್ಸ್ ನಡಿಪಟ್ನ, ಪಡುಬಿದ್ರಿ ಇದರ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಯೋಟೋರಿಯಂ ಕಂಪನಿ : ಆರೋಗ್ಯ ಮಾಹಿತಿ ಶಿಬಿರ ; ಸಾಧಕರ ಸನ್ಮಾನ

Posted On: 14-05-2025 05:45PM
ಶಿರ್ವ : ಈ ಬಯೋಟೋರಿಯಂ ಕಂಪನಿಯ ಆರೋಗ್ಯ ಮಾಹಿತಿ ಶಿಬಿರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಶಾಮ್ಸ್ ಸ್ವೇರ್ ಜಾಸ್ಮಿನ್ ಮಿನಿ ಹಾಲ್ ನಲ್ಲಿ ನಡೆಯಿತು.
ಶಿರ್ವ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ವಿಠಲ್ ಬಿ ಅಂಚನ್ ಹಾಗೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ವಿಷ್ಣುಮೂರ್ತಿ ಸರಳಾಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಆರೋಗ್ಯದ ಮಾಹಿತಿಯನ್ನು ಸಂತೋಷ್ ಶೆಟ್ಟಿ ಮೂಡಬಿದ್ರೆ ನೆರವೇರಿಸಿದರು. ಕಂಪನಿಯ ಸಿಬ್ಬಂದಿ ಸುಧಾಕರ ಆಚಾರ್ಯ ಕುತ್ಯಾರು ಇವರಿಗೆ ವೈದ್ಯಕೀಯ ನೆರವು ರೂ. 25,500 ನೀಡಲಾಯಿತು.
ಗಿರೀಶ್ ನಾಯಕ್ ಅಲೆವೂರು, ಪ್ರಶಾಂತ್ ಆಚಾರ್ಯ ಶಿರ್ವ, ನವೀನ್ ಪೂಜಾರಿ ಬ್ರಹ್ಮಾವರ, ತ್ರಿಶೂಲ್ ಆಚಾರ್ಯ ಉಡುಪಿ, ಸಂತೋಷ ಶೆಟ್ಟಿ ಮೂಡಬಿದ್ರೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತಿಯಿದ್ದರು. ಮಲ್ಲಿಕಾ ಆಚಾರ್ಯ ಕಿನ್ನಿಗೊಳಿ ಸ್ವಾಗತಿಸಿ, ವಂದಿಸಿದರು.